ಬೆಂಗಳೂರು: ಮೋಚಾ ಚಂಡಮಾರುತ (Weather Update) ಪ್ರಭಾವದಿಂದಾಗಿ ರಾಜ್ಯದಲ್ಲಿ ಒಂದು ವಾರ ವರುಣನ ಅಬ್ಬರ (Karnataka Rains) ಇರಲಿದೆ. ರಾಜ್ಯದ ಐದು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜ್ಯಾದ್ಯಂತ ಮಳೆಯಾಗಲಿದ್ದು, ಚಿಕ್ಕಮಗಳೂರು, ಮೈಸೂರು, ಶಿವಮೊಗ್ಗ ಸೇರಿ ಕೊಡಗು, ಚಾಮರಾಜನಗರದಲ್ಲಿ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ (Weather Update) ನೀಡಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ, ಕಲಬುರಗಿ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ ವರುಣನ ಅಬ್ಬರ ಇರಲಿದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ಚಿತ್ರದುರ್ಗ, ಬಳ್ಳಾರಿ ಸೇರಿದಂತೆ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ಇದನ್ನೂ ಓದಿ: Karnataka Election 2023: ಲವ್ ಯು ಎಂದವಳಿಗೆ ಕೈ ಕೊಟ್ಟ ರಾಹುಲ್ ಗಾಂಧಿ; ಹೇಗಿತ್ತು ಗೊತ್ತಾ ಬೆಂಗಳೂರು ರೌಂಡ್ಸ್
ಭಾನುವಾರವೂ ಅಬ್ಬರಿಸಿದ್ದ ವರುಣ
ರಾಜ್ಯದಲ್ಲಿ ಭಾನುವಾರ (ಮೇ 7) ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಕಡೆಗಳಲ್ಲಿ ಮಳೆಯಾಗಿದೆ. ಕರಾವಳಿಯಲ್ಲಿ ಒಣ ಹವೆ ಇತ್ತು. ವಿಜಯಪುರದ ಸಿಂದಗಿ, ಬಾಗಲಕೋಟೆಯ ಬಾದಾಮಿ, ಕಲಬುರಗಿಯ ಆಳಂದ, ಚಿಕ್ಕಮಗಳೂರಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ. ಹುಕ್ಕೇರಿ, ಚಿಂತಾಮಣಿಗಳಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಬಿಳಗಿ, ಗೋಕಾಕ, ಕೋಲಾರ, ದೇವನಹಳ್ಳಿ, ಟಿ.ನರಸೀಪುರ ತಲಾ 1 ಸೆಂ.ಮೀ ಮಳೆಯಾಗಿದೆ. ಗರಿಷ್ಠ ಉಷ್ಣಾಂಶ 38.1 ಡಿಗ್ರಿ ಸೆಲ್ಸಿಯಸ್ ಕಲಬುರಗಿಯಲ್ಲಿ ದಾಖಲಾಗಿದೆ.