ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ಮೋಚಾ ಚಂಡಮಾರುತದ (Mocha cyclone) ಪರಿಣಾಮ ರಾಜ್ಯದಲ್ಲೂ ಜೋರಾಗಿ ಇರಲಿದೆ. ಮೇ 11, 12ರಂದು ದಕ್ಷಿಣ ಒಳನಾಡಿನಲ್ಲಿ ವರುಣ ಅಬ್ಬರಿಸಲಿದ್ದಾನೆ. ಚಿಕ್ಕಮಗಳೂರು ಮತ್ತು ಕೊಡಗು, ಚಾಮರಾಜನಗರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಗುರುವಾರದಂದು ಭಾರಿ ಮಳೆಯಾಗುವ (Karnataka rains) ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ.
ಜತೆಗೆ ರಾಜ್ಯಾದ್ಯಂತ ಗುಡುಗು ಮಿಂಚಿನ ಕೂಡಿದ ಮಳೆಯಾಗಲಿದ್ದು, ಬಿರುಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ಇರಲಿದೆ. ಕೆಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ (Weather Report) ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ (Karnataka Rains) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಲ್ಲಿ ಸಂಜೆ ಅಥವಾ ರಾತ್ರಿ ಸಮಯದಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಇನ್ನು ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದಿಂದ ಮೋಚಾ ಚಂಡಮಾರುತವು ತೀವ್ರಗೊಂಡಿತು. ಇದೀಗ ಮೋಚಾ ಚಂಡಮಾರುತವು ಬಾಂಗ್ಲಾದೇಶದ ಕಾಕ್ಸ್ ಬಜಾರ್ ಮತ್ತು ಸಿಟ್ವೆ (ಮ್ಯಾನ್ಮಾರ್) ನ ನೈಋತ್ಯಕ್ಕೆ 1,120 ಕಿ.ಮೀನಲ್ಲಿ ಚಲಿಸುತ್ತಿದೆ. ಇದು ಉತ್ತರ-ವಾಯುವ್ಯದ ಕಡೆಗೆ ಚಲಿಸುವ ಸಾಧ್ಯತೆ ಇದ್ದು, ಕ್ರಮೇಣ ಮೇ 11ರ ಮಧ್ಯರಾತ್ರಿಯಲ್ಲಿ ತೀವ್ರವಾದ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ: Karnataka Election : ಯಾರ ಹೆಂಡ್ತಿ ಪತಿವ್ರತೆನೋ ಅವರೆಲ್ಲ ಬಿಜೆಪಿಗೆ ವೋಟ್ ಹಾಕಿ ಎಂದವನ ಮೇಲೆ ಕೆಂಡಾಮಂಡಲ
ಮೇ 12ರ ಬೆಳಗ್ಗೆಯಿಂದ ಉತ್ತರ ಈಶಾನ್ಯದ ಕಡೆಗೆ ಚಲಿಸುವ ಸಾಧ್ಯತೆಯಿದ್ದು, ಮಧ್ಯ ಬಂಗಾಳ ಕೊಲ್ಲಿಯಲ್ಲಿ ಅತ್ಯಂತ ತೀವ್ರವಾದ ಚಂಡಮಾರುತವಾಗಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ಮೇ 14ರ ಬೆಳಗ್ಗೆಯಿಂದ ಮೋಚಾ ಚಂಡಮಾರುತವು ದುರ್ಬಲಗೊಳ್ಳುವ ಸಾಧ್ಯತೆಯಿದೆ. ಆಗ್ನೇಯ ಬಾಂಗ್ಲಾದೇಶ ಮತ್ತು ಉತ್ತರ ಮ್ಯಾನ್ಮಾರ್ ಕರಾವಳಿಯನ್ನು ಕಾಕ್ಸ್ ಬಜಾರ್ (ಬಾಂಗ್ಲಾದೇಶ) ಮತ್ತು ಕ್ಯಾಕ್ಪ್ಯು (ಮ್ಯಾನ್ಮಾರ್) ನಡುವೆ ಮೇ 14ರ ಮುಂಜಾನೆ ದಾಟುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.