ಬೆಂಗಳೂರು: ರಾಜ್ಯದ ಹಲವೆಡೆ ಮಳೆ ಸುರಿಯುತ್ತಿದ್ದು, ಜುಲೈ 8ರ ವರೆಗೆ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗಲಿದೆ. ಕರಾವಳಿ, ದಕ್ಷಿಣ ಒಳನಾಡಿನಲ್ಲಿ ನೈರುತ್ಯ ಮುಂಗಾರು ಚುರುಕಾಗಿವೆ. ಜತೆಗೆ ಅರಬ್ಬೀ ಸಮುದ್ರದಲ್ಲಿ ಗಾಳಿ ವೇಗವು ಹೆಚ್ಚಿದ್ದು, ಇದರಿಂದಾಗಿ ಕರಾವಳಿಯಲ್ಲಿ ಭಾರಿಯಿಂದ ಅತೀ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ | ರಾಜ್ಯದಲ್ಲಿ ಮಳೆ ಅಬ್ಬರ: ವಿವಿಧೆಡೆ ರಸ್ತೆ, ಸೇತುವೆಗಳು ಜಲಾವೃತ
ಕರಾವಳಿ ಜಿಲ್ಲೆಗಳಿಗೆ ಮೊದಲ ಮೂರು ದಿನ ಆರೆಂಜ್ ಅಲರ್ಟ್ ನೀಡಲಾಗಿದ್ದು, ನಂತರ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉತ್ತರ ಒಳನಾಡಿನಲ್ಲಿ ಜುಲೈ 4ರಿಂದ 6ರ ವರೆಗೆ ಬೆಳಗಾವಿ, ಬೀದರ್, ಬಿಜಾಪುರ, ಕಲಬುರಗಿ, ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನಲ್ಲಿ ಹಲವು ಕಡೆ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ.
ಪಶ್ಚಿಮ ಘಟ್ಟದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಜುಲೈ 5ರ ವರೆಗೂ ಗುಡುಗು ಸಹಿತ ಭಾರಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಜಿಟಿಜಿಟಿ ಮಳೆಯಾಗಲಿದೆ.
ಮೀನುಗಾರರಿಗೆ ಎಚ್ಚರಿಕೆ
ಕರಾವಳಿ ಜನತೆಗೆ ಜುಲೈ 5ರಿಂದ 8ರ ವರೆಗೆ ಮೀನುಗಾರಿಕೆಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಸಮುದ್ರ ಮಟ್ಟದಲ್ಲಿ ಗಾಳಿ ವೇಗವು ಹೆಚ್ಚಿರಲಿದೆ ಎಂದು ಇಲಾಖೆ ಹೇಳಿದೆ.
ವಾಡಿಕೆಗಿಂತ ಕಡಿಮೆ ಮಳೆ
ರಾಜ್ಯದಲ್ಲಿ ಈಗ ಮಳೆಯಾಗುತ್ತಿದ್ದರೂ ವಾಡಿಕೆಗಿಂತ ಶೇ.20 ರಷ್ಟು ಕಡಿಮೆ ಆಗಿದೆ. ನೈರುತ್ಯ ಮುಂಗಾರು ಮಳೆ ಶುರುವಾಗಿ ತಿಂಗಳು ಕಳೆದಿದ್ದರೂ ವಾಡಿಕೆ ಮಳೆ ಆಗಿಲ್ಲ. ಜೂನ್ ತಿಂಗಳಲ್ಲಿ ವಾಡಿಕೆಯಂತೆ ಸರಾಸರಿ 208 ಮಿ.ಮೀ ಮಳೆ ಆಗಬೇಕಿತ್ತು, ಆದರೆ ಕೇವಲ 167 ಮಿ.ಮೀ ಮಳೆ ಆಗಿದೆ.
ಕರಾವಳಿ ಭಾಗದಲ್ಲಿ ಶೇ.33ರಷ್ಟು, ಮಲೆನಾಡಿನಲ್ಲಿ ಶೇ.46 ರಷ್ಟು ಮಳೆ ಕೊರತೆ ಉಂಟಾಗಿದೆ. ಕೊಡಗು ಜಿಲ್ಲೆಯೊಂದನ್ನು ಪರಿಗಣಿಸಿದರೆ ಶೇ. 53ರಷ್ಟು ಮಳೆ ಕೊರತೆ ಇದ್ದು, ಬೆಂಗಳೂರು ಗ್ರಾಮಾಂತರದಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. 69 ಮಿ.ಮೀ ಮಳೆ ಆಗಬೇಕಿದ್ದ ಕಡೆ 198 ಮಿ.ಮೀ ಮಳೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ವಾಡಿಕೆ 73 ಮಿ.ಮೀ ಮಳೆ ಆಗಬೇಕಿತ್ತುಆದರೆ 166 ಮಿ.ಮೀ ಮಳೆಯಾಗಿರುವ ವರದಿಯಾಗಿದೆ.
ಇದನ್ನೂ ಓದಿ | ರಾಜ್ಯಾದ್ಯಂತ ಭಾರಿ ಮಳೆ; ಕೊಡಗಿನ ವಿವಿಧೆಡೆ ಭೂಕುಸಿತ, ರಸ್ತೆ ಸಂಪರ್ಕ ಕಡಿತ