ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜುಲೈ 6ರಂದು ಮಧ್ಯಾಹ್ನ 1 ಗಂಟೆಯಿಂದ ಜುಲೈ 7ರಂದು ಬೆಳಗ್ಗೆ 8.30ರವರೆಗೆ ರೆಡ್ ಅಲರ್ಟ್ ಹಾಗೂ ಜುಲೈ 7ರ ಬೆಳಗ್ಗೆ 8.30ರಿಂದ ಜುಲೈ 9ರಂದು ಬೆಳಗ್ಗೆ 8.30ರವರೆಗೆ ಆರೇಂಜ್ ಅಲರ್ಟ್ ಅನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಘೋಷಿಸಿದೆ.
ಭಾರಿ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಸಾರ್ವಜನಿಕರು, ಪ್ರವಾಸಿಗರು ಹಾಗೂ ಮೀನುಗಾರರು ಮುನ್ನೆಚ್ಚರಿಕೆ ವಹಿಸುವಂತೆ ಉತ್ತರ ಕನ್ನಡ ಜಿಲ್ಲಾಡಳಿತ ಸೂಚಿಸಿದೆ. ಉಡುಪಿಯಲ್ಲಿ 204 ಮಿ.ಮೀ. ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರೆಡ್ ಅಲರ್ಟ್ ಘೋಷಿಸಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಮೀನುಗಾರರು ನದಿ ಮತ್ತು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಜುಲೈ 11ರ ವರೆಗೂ ಭಾರಿ ಮಳೆಯಾಗುವ ನಿರೀಕ್ಷೆ ಇದೆ.
ರಾಜ್ಯಾದ್ಯಂತ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುತ್ತಿದ್ದು, ಇನ್ನೆರಡು ದಿನ ವ್ಯಾಪಕ ಮಳೆಯಾಗುವ ಮನ್ಸೂಚನೆಯನ್ನು ಹವಾಮಾನ ತಜ್ಞರು ನೀಡಿದ್ದು, ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಜಿಲ್ಲೆಗಳಲ್ಲಿ ಸಾಧಾರಣದಿಂದ ಅತಿಯಾದ ಮಳೆಯಾಗಲಿದೆ.
ದಕ್ಷಿಣ ಒಳನಾಡಿನಲ್ಲಿ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗಕ್ಕೆ ಆರೇಂಜ್ ಅಲರ್ಟ್ ಮುಂದುವರಿದಿದ್ದು, ಹಾಸನದ ಕೆಲವು ಭಾಗದಲ್ಲಿ ಮಾತ್ರ ಭಾರಿ ಮಳೆಯಾಗಲಿರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಸಾಧಾರಣದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಈ ಭಾಗದಲ್ಲಿ ಯಾವುದೇ ಅಲರ್ಟ್ ಅನ್ನು ಘೋಷಣೆ ಮಾಡಿಲ್ಲ.
ಉತ್ತರ ಕನ್ನಡದಲ್ಲಿ ಶಾಲೆಗಳ ರಜೆ ಮುಂದುವರಿಕೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆ ಸುರಿಯುವ ಮುನ್ಸೂಚನೆ ಹಿನ್ನೆಲೆಯಲ್ಲಿ ಜುಲೈ 6ರಂದು ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಮಳೆ ಮುಂದುವರಿಯುವ ಸೂಚನೆ ಹಿನ್ನೆಲೆಯಲ್ಲಿ ಜುಲೈ 7ರಂದು ಸಹ ಎಲ್ಲ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ ಮುಂದುವರಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿಯಿಂದ ಮಳೆ ಪ್ರಮಾಣ ಕಡಿಮೆಯಾಗಿತ್ತು. ಎರಡು ದಿನ ಭಾರೀ ಮಳೆಯಿಂದ ಜನತೆ ಕಂಗಾಲಾಗಿದ್ದರು. ಆದರೆ, ಜುಲೈ 8ರ ವರೆಗೆ ಹವಾಮಾನ ಇಲಾಖೆ ಭಾರೀ ಮಳೆ ಮುನ್ಸೂಚನೆಯನ್ನು ನೀಡಿದೆ. ಜಿಲ್ಲೆಯ ಮಳೆಯಿಂದ ಅಲ್ಲಲ್ಲಿ ಸ್ವಲ್ಪ ಪ್ರಮಾಣದ ಗುಡ್ಡ ಕುಸಿತ ಉಂಟಾಗಿದ್ದು, ಗೋಕರ್ಣದ ಮಾದನಗೇರಿಯಲ್ಲಿ ಹೆದ್ದಾರಿಯಂಚಿಗೆ ಗುಡ್ಡ ಕುಸಿದಿದೆ. ಐಆರ್‌ಬಿ ಸಿಬ್ಬಂದಿಯಿಂದ ತೆರವು ಕಾರ್ಯಾಚರಣೆ ನಡೆಸಲಾಯಿತು.
ಇದನ್ನೂ ಓದಿ | Skin care | ಮಳೆಗಾಲದಲ್ಲಿ ನಿಮ್ಮ ಚರ್ಮದ ಮೇಲೆ ಈ ಐದು ತಪ್ಪುಗಳನ್ನು ಮಾಡಲೇಬೇಡಿ!
ಮಲೆನಾಡಲ್ಲಿ ಮುಂದುವರಿದ ಮಳೆ
ಶಿವಮೊಗ್ಗ: ಎಡಬಿಡದೆ ಸುರಿಯುತ್ತಿರುವ ಮಳೆಗೆ ಆಗುಂಬೆ ಘಾಟಿ ಸೂರ್ಯಸ್ತಮಾನ ವೀಕ್ಷಣಾ ಸ್ಥಳದ ಬಳಿ ಗುಡ್ಡ ಕುಸಿದಿದೆ. ರಸ್ತೆಗೆ ಮಣ್ಣು ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಕೊಂಚ ಅಡಚಣೆಯಾಯಿತು, ಘಾಟಿ ರಸ್ತೆಯ ನಾಲ್ಕನೇ ತಿರುವಿನಲ್ಲೂ ಗುಡ್ಡ ಕುಸಿತಿದ್ದು, ಅಪಾರ ಪ್ರಮಾಣ ನೀರು ರಸ್ತೆಯಲ್ಲಿ ಹರಿಯುತ್ತಿದೆ.
ಚಿಕ್ಕಮಗಳೂರಲ್ಲೂ ಮಳೆ ಅಬ್ಬರ
ಚಿಕ್ಕಮಗಳೂರು: ಜಿಲ್ಲೆಯಲ್ಲೂ ಮಳೆ ಅಬ್ಬರ ಮುಂದುವರಿದಿದ್ದು, 4 ದಿನಗಳ ಕಾಲ ಮಲೆನಾಡಿನ 5 ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜು.6ರಿಂದ 9 ರವರೆಗೂ ಮೂಡಿಗೆರೆ, ಕಳಸ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಕಾಫಿನಾಡಿನಲ್ಲಿ ಮಳೆ ಆರ್ಭಟಕ್ಕೆ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ. ತುಂಗಾ, ಭದ್ರಾ, ಹೇಮಾವತಿ ನದಿ ನೀರಿನ ಮಟ್ಟದಲ್ಲಿ ದಿಢೀರ್ ಏರಿಕೆಯಾಗಿದೆ. ಅಪಾಯದ ಮಟ್ಟ ಮೀರಿ ತುಂಗಾ ನದಿಯಲ್ಲಿ ನೀರು ಹರಿಯುತ್ತಿದೆ. ಶೃಂಗೇರಿ ಪಟ್ಟಣದ ನದಿ ಪಾತ್ರದ ಕಳಸ-ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಶೃಂಗೇರಿ ಹಾಗೂ ಕೊಪ್ಪ ತಾಲೂಕಿನ ಹಲವು ಗ್ರಾಮಗಳಲ್ಲಿ ವಿದ್ಯುತ್ ಕಡಿತ ಉಂಟಾಗಿದೆ.
ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಕಾವೇರಿ
ಕೊಡಗು: ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಮುಂದುವರಿದ ಹಿನ್ನೆಲೆಯಲ್ಲಿ ಎಲ್ಲ ಶಾಲಾ ಕಾಲೇಜುಗಳುಗೆ ಬುಧವಾರ ರಜೆ ಘೋಷಣೆ ಮಾಡಲಾಗಿತ್ತು. ಭೂಮಿ ಕಂಪಿಸಿದ ಭಾಗಮಂಡಲ ವ್ಯಾಪ್ತಿಯಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಜನರಲ್ಲಿ ಆತಂಕ ಉಂಟಾಗಿದೆ. ನಾಪೋಕ್ಲು ಭಾಗಮಂಡಲ ರಸ್ತೆಮೇಲೆ ಒಂದೂವರೆ ಅಡಿ ನೀರು ಹರಿಯುತ್ತಿದೆ. ಮಳೆಯ ರಭಸಕ್ಕೆ ಮನೆಗಳ ಮೇಲೆ ಮರಗಳು ಬಿದ್ದು ಹಾನಿಯಾಗುತ್ತಿದೆ. ಸತತ ಮಳೆಗೆ ಕಾವೇರಿ ನದಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹಾರಂಗಿ ಡ್ಯಾಂಗೂ ಹೆಚ್ಚಿನ ನೀರು ಹರಿದು ಬರುತ್ತಿದೆ.
ಹೇಮಾವತಿ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆ
ಹಾಸನ: ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಸಕಲೇಶಪುರ, ಆಲೂರು, ಬೇಲೂರು, ಹಾಸನ, ಅರಕಲಗೂಡನಲ್ಲಿ ಭಾರಿ ಮಳೆಯಾಗಿರುವುದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹೇಮಾವತಿ ನದಿಗೆ 11969 ಕ್ಯೂಸೆಕ್ ಒಳಹರಿವು ಇದೆ. ಹೇಮಾವತಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2922 ಅಡಿ ಇದ್ದು, ಜಲಾಶಯದಲ್ಲಿನ ನೀರಿನ ಮಟ್ಟ 2911.85 ಅಡಿ ಇದೆ. ಜಲಾಶಯದ ನೀರಿನ ಸಂಗ್ರಹ ಪ್ರಮಾಣ 37.103 ಟಿಎಂಸಿ ಇದ್ದು, ಜಲಾಶಯದಲ್ಲಿರುವ ನೀರಿನ ಪ್ರಮಾಣ 28.099 ಟಿಎಂಸಿ ಇದೆ.
ಇದನ್ನೂ ಓದಿ | Rain News | ಶಿವಮೊಗ್ಗದಲ್ಲಿ ಮಳೆ ಅಬ್ಬರ: ಆಗುಂಬೆ ಘಾಟ್‌ನಲ್ಲಿ ಗುಡ್ಡ ಕುಸಿತ, ಸಾಗರದಲ್ಲಿ ಸೀಳು ಬಿಟ್ಟ ಭೂಮಿ