Site icon Vistara News

Weather Report: ಮುಂದಿನ 24 ಗಂಟೆಯಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆ ಸಾಧ್ಯತೆ; ಈ ಜಿಲ್ಲೆಗಳಿಗೆ ಅಲರ್ಟ್‌

rain

rain

ಬೆಂಗಳೂರು: ರಾಜ್ಯದಲ್ಲಿ ಮೋಚಾ ಚಂಡಮಾರುತ ತೀವ್ರತೆ ಕಡಿಮೆ ಆದರೂ ರಾಜ್ಯದಲ್ಲಿ ಮಳೆ (Karnataka rains) ಅಬ್ಬರ ಮುಂದುವರಿಯಲಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ವ್ಯಾಪಕ ಮಳೆಯಾಗುವ (Rain alert) ಸಾಧ್ಯತೆ ಇದೆ.

ಈ ಕುರಿತು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದ್ದು, ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ವರುಣನ ಅಬ್ಬರ ಇರಲಿದೆ.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಸೇರಿ ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಕೋಲಾರ, ಮಂಡ್ಯದಲ್ಲೂ ಮಳೆಯಾಗಲಿದೆ. ಜತೆಗೆ ರಾಮನಗರ, ತುಮಕೂರು, ಮೈಸೂರು, ದಾವಣಗೆರೆಯಲ್ಲೂ ಗುಡುಗು ಸಹಿತ ಮಳೆಯಾಗಲಿದೆ.

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗುಸಹಿತ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ. ಬೆಂಗಳೂರು ನಗರದಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ/ರಾತ್ರಿಯ ಸಮಯದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 34 ಮತ್ತು ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

ರಾಜ್ಯದಲ್ಲಿ ಬುಧವಾರ ಕರಾವಳಿಯ ಕೆಲವು ಕಡೆಗಳಲ್ಲಿ ಮತ್ತು ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಧರ್ಮಸ್ಥಳ, ಕಾರವಾರ, ಬಿ ಬಾಗೇವಾಡಿ, ಯಡವಾಡ, ದಾವಣಗೆರೆಯಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ. ಹಳಿಯಾಳ, ಕುಂದಾಪುರ, ಪುತ್ತೂರು ಎಚ್‌ಎಂಎಸ್, ಕಾರ್ಕಳ, ಗೋಕಾಕ, ಸುತಗಟ್ಟಿ ಮತ್ತಿಕೊಪ್ಪ, ಮುಂಡರಗಿ, ಭಾಗಮಂಡಲ ತಲಾ 2 ಸೆಂ.ಮೀ ಮಳೆಯಾಗಿದೆ. ಕದ್ರಾ, ಕಿರವತ್ತಿ, ಸಿದ್ದಾಪುರ, ಅಕ್ಕಿಆಲೂರು, ಹಿಡಕಲ್ ಹಾಗೂ ಅಣೆಕಟ್ಟು, ಗದಗ, ಇಂಡಿ, ಕೊಟ್ಟಿಗೆಹಾರ, ಪೊನ್ನಂಪೇಟೆ, ಮೂರ್ನಾಡು, ಸರಗೂರಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ರಾಜ್ಯದಲ್ಲಿ ಬುಧವಾರ ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಧಾರಾಕಾರ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು

ಬೆಳಗಾವಿ ತಾಲೂಕಿನ ಕುರಿಹಾಳ ಗ್ರಾಮದಲ್ಲಿ ಗುರುವಾರ ನಸುಕಿನ ಜಾವ ಸುರಿದ ಧಾರಾಕಾರ ಮಳೆಗೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಕುರಿಹಾಳ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಬಳಿ ಈ ಘಟನೆ ನಡೆದಿದ್ದು, ಭಕ್ತರಿಗೆ ನೆರಳಿನ ಸಲುವಾಗಿ ಹಾಕಿದ್ದ ಶೆಡ್ ಮೇಲೆ ವಿದ್ಯುತ್ ಕಂಬ ಉರುಳಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಿದ್ಯುತ್‌ ಕಂಬ ಬಿದ್ದಿದ್ದರಿಂದ ತಗಡಿನ ಶೆಡ್ ಕೂಡ ಜಖಂಗೊಂಡಿದೆ.

ನೆಲ ಕಚ್ಚಿದ ಬಾಳೆಗಿಡ

ನೆಲ ಕಚ್ಚಿದ ಬಾಳೆ ಬೆಳೆ

ಮೈಸೂರಿನ ತಿ.ನರಸೀಪುರ ತಾಲೂಕಿನ ಕುಪ್ಯಾ ಗ್ರಾಮದಲ್ಲಿ ಗಾಳಿ ಮಳೆಗೆ ಬಾಳೆ ಬೆಳೆ ಎಲ್ಲವೂ ಧರೆಗುರುಳಿವೆ. ರೈತ ಪುಟ್ಟಮಾದು ಸುಮಾರು ಎರಡೂವರೆ ಎಕರೆ ಪ್ರದೇಶದಲ್ಲಿ ಬಾಳೆ ಬೆಳೆದಿದ್ದರು. ಸುಮಾರು 4 ಲಕ್ಷ ರೂ. ಸಾಲ ಮಾಡಿ ಬೆಳೆದಿದ್ದ ಬೆಳೆಯು ಮಳೆಗೆ ನೆಲಕಚ್ಚಿದೆ. ಫಸಲು ಕೈ ಸೇರುವ ಮುನ್ನ ಬಾಳೆ ಮಣ್ಣು ಪಾಲಾಗಿದ್ದು, ನಷ್ಟದಿಂದ ಕಂಗಲಾಗಿರುವ ರೈತ ಪುಟ್ಟಮಾದು ಅವರು ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Vistara News Poll of Polls: ಅತಂತ್ರ ವಿಧಾನಸಭೆ ಪಕ್ಕಾ; ಕಾಂಗ್ರೆಸ್ ದೊಡ್ಡ ಪಕ್ಷ, ಜೆಡಿಎಸ್‌‌ಗೆ ಶುಕ್ರದೆಸೆ

ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತ

ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಸುರಿದ ಮಳೆಗೆ ಭಾರಿ ಹಾನಿಯಾಗಿದೆ. ಕೋಡೂರು ಪಂಚಾಯ್ತಿ ಕರಿಗೆರಸುವಿನಲ್ಲಿ ಗಾಳಿ ಮಳೆಗೆ ಹಲವು ಮನೆಗಳಿಗೆ ಹಾಗೂ ರಸ್ತೆ ಹಾನಿಯಾಗಿದೆ. ವಿದ್ಯುತ್ ಸಂಪರ್ಕ ಸಂಪೂರ್ಣವೂ ಕಡಿತವಾಗಿದ್ದು, ಹಾನಿ ಪ್ರದೇಶಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಚರ್ಚಿಸಿದರು.

Exit mobile version