ಬೆಂಗಳೂರು: ರಾಜ್ಯದಲ್ಲಿ ನೈರುತ್ಯ ಮುಂಗಾರು ಇನ್ನಷ್ಟು ಚುರುಕಾಗಿದ್ದು, ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಮಳೆ ಸುರಿಯುತ್ತಿದೆ. ಕಳೆದ ೨೪ ಗಂಟೆಗಳಲ್ಲಿ ಕ್ಯಾಸಲ್ ರಾಕ್ (ಉತ್ತರ ಕನ್ನಡ ಜಿಲ್ಲೆ), ಕೊಪ್ಪ (ಚಿಕ್ಕಮಗಳೂರು ಜಿಲ್ಲೆ) ಹಾಗೂ ಸುಬ್ರಹ್ಮಣ್ಯ (ದಕ್ಷಿಣ ಕನ್ನಡ ಜಿಲ್ಲೆ), ಲಿಂಗನಮಕ್ಕಿ (ಶಿವಮೊಗ್ಗ ಜಿಲ್ಲೆ), ಸಿದ್ದಾಪುರ (ಉಡುಪಿ ಜಿಲ್ಲೆ) ಮತ್ತು ಸೋಮವಾರಪೇಟೆ(ಕೊಡಗು ಜಿಲ್ಲೆ)ಯಲ್ಲಿ ಭಾರಿ ಮಳೆಯಾಗಿದೆ.
ಜುಲೈ 13ರ ಬುಧವಾರ ಮತ್ತು 14ರ ಗುರುವಾರ ಹೀಗೆಯೇ ಮಳೆ ಮುಂದುವರಿಯಲಿದೆ. ರಾಜ್ಯಾ ದ್ಯಂತ ಬಹುತೇಕ ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ 24 ಗಂಟೆಯಲ್ಲಿ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿಯಿಂದ ಅತಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರ್ಗಿ, ವಿಜಯಪುರ, ಯಾದಗಿರಿ ಜಿಲ್ಲೆಗಳ ಹಾಗೂ ದಕ್ಷಿಣ ಒಳನಾಡಿನ ಹಾಸನ ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ | Rain News | ರಾಜ್ಯಾದ್ಯಂತ ಭಾರಿ ಮಳೆ: ಕೊಡಗಲ್ಲಿ ಮನೆ ಕುಸಿತ, ಭೂಕುಸಿತ ಪ್ರದೇಶಗಳೆಡೆ ಸಚಿವರ ಜಂಟಿ ಭೇಟಿ
ಮೀನುಗಾರರಿಗೆ ಎಚ್ಚರಿಕೆ
ಮುಂದಿನ 48 ಗಂಟೆಗಳಲ್ಲಿ ಕರಾವಳಿ ತೀರದಲ್ಲಿ ಗಾಳಿಯ ವೇಗವು ಪ್ರತಿ ಗಂಟೆಗೆ 40-50 ಕಿ.ಮೀ ಇರಲಿದ್ದು, 60 ಕಿ.ಮೀ.ವರೆಗೂ ತಲುಪುವ ಸಾಧ್ಯತೆ ಇದೆ. ಹೀಗಾಗಿ ಮೀನುಗಾರರು ಈ ಅವಧಿಯಲ್ಲಿ ಸಮುದ್ರಕ್ಕೆ ತೆರಳದಂತೆ ಸೂಚಿಸಲಾಗಿದೆ. ಕರ್ನಾಟಕದ ಕರಾವಳಿಯ ಮಂಗಳೂರಿನಿಂದ ಕಾರವಾರದವರೆಗಿನ 3.5 – 4.0 ಮೀಟರ್ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳನ್ನು ಮುನ್ಸೂಚಿಸಲಾಗಿದೆ. ಪ್ರಸ್ತುತ ವೇಗವು 47-66 ಸೆಂ.ಮೀ/ಸೆಕೆಂಡಿನ ನಡುವೆ ಬದಲಾಗುತ್ತಿದೆ.
ಬೆಂಗಳೂರಿನಲ್ಲಿ ಹಗುರ ಮಳೆ
ಮುಂದಿನ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಕೆಲವು ಸಲ ಹಗುರ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 27 ಮತ್ತು 20 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಇದನ್ನೂ ಓದಿ | Rain News | ಮನೆ ಗೋಡೆ ಕುಸಿತ, ನಿದ್ರಿಸುತ್ತಿದ್ದ ತಾಯಿ-ಮಗಳ ಸಾವು