ಬೆಂಗಳೂರು: ಇತ್ತೀಚೆಗಂತೂ ಹವಾಮಾನ (Weather Report) ಕ್ಷಣಕ್ಷಣಕ್ಕೂ ಬದಲಾಗುತ್ತಿದೆ. ಕಳೆದ ಎರಡು ವಾರಗಳಿಂದ ಸುರಿದ ಮಳೆಗೆ ಜನರು ಸಾಕಪ್ಪಾ ಸಾಕು ಈ ಮಳೆ ಸಹವಾಸ ಎಂದಿದ್ದರು. ಈಗ ಮಳೆಗಾಲ ಬಹುತೇಕ ಮುಗಿದಂತೆ ಕಾಣುತ್ತಿದ್ದು, ಚಳಿಗಾಲಕ್ಕೆ ಕಾಲಿಟ್ಟಿದೆ. ಕಳೆದ ಮೂರು ದಿನಗಳಿಂದ ರಾಜ್ಯದ ಬಹುತೇಕ ಕಡೆ ಜನರನ್ನು ಚಳಿಯು ನಡುಗಿಸುತ್ತಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕಳೆದ 14 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಅಕ್ಟೋಬರ್ ತಿಂಗಳಲ್ಲಿಯೇ ಅತಿ ಹೆಚ್ಚು ಚಳಿ ದಾಖಲಾಗಿದೆ. ಬೆಂಗಳೂರಿನಲ್ಲಿ ಅಕ್ಟೋಬರ್ 25ರಂದು ಕಡಿಮೆ ಉಷ್ಣಾಂಶ 15.4 ಡಿಗ್ರಿ ಸೆಲ್ಸಿಯಸ್ ಇದ್ದರೆ ಗರಿಷ್ಠ ಉಷ್ಣಾಂಶ 29.0 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಈ ಮೂಲಕ ಹಿಂದಿನ ವರ್ಷದಲ್ಲಿ ದಾಖಲಾಗಿದ್ದ 15.5 ಡಿಗ್ರಿ ಸೆಲ್ಸಿಯಸ್‌ನ ದಾಖಲೆಯನ್ನು ಮುರಿದಿದೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಅಕ್ಟೋಬರ್‌ನಲ್ಲಿ ಕನಿಷ್ಠ ತಾಪಮಾನವು 19ರಿಂದ 20 ಡಿಗ್ರಿ ಸೆಲ್ಸಿಯಸ್ ಇರುತ್ತಿತ್ತು. ಆದರೆ, ಈ ಬಾರಿ ಸಾಮಾನ್ಯಕ್ಕಿಂತ ನಾಲ್ಕು ಡಿಗ್ರಿ ಕಡಿಮೆ ಇದೆ.
ರಾಜ್ಯದ ಈ ಜಿಲ್ಲೆಯಲ್ಲೂ ಜನ ಗಡ ಗಡ
ಇತ್ತ ಬೆಂಗಳೂರು ಮಾತ್ರವಲ್ಲದೆ, ರಾಜ್ಯದ ಹಲವು ಕಡೆಗಳಲ್ಲಿ ಚಳಿಯ ಪ್ರಭಾವ ಶುರುವಾಗಿದೆ. ಬೀದರ್‌ನಲ್ಲಿ 12.4 ಡಿಗ್ರಿ ಸೆಲ್ಸಿಯಸ್, ಬಾದಮಿಯಲ್ಲಿ 12.6 ಡಿಗ್ರಿ ಸೆಲ್ಸಿಯಸ್, ವಿಜಯಪುರದಲ್ಲಿ 13.0 ಹಾಗೂ ಬೆಳಗಾವಿಯಲ್ಲಿ 13.8, ಮಡಿಕೇರಿಯಲ್ಲಿ 13.9, ಬಳ್ಳಾರಿಯಲ್ಲಿ 15.9 ಡಿಗ್ರಿ ಸೆಲ್ಸಿಯಸ್ ಸೇರಿದಂತೆ ಧಾರವಾಡ, ಚಿತ್ರದುರ್ಗ, ಗದಗದಲ್ಲಿ ತಲಾ 14 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ರಾಜ್ಯಾದ್ಯಂತ ಬುಧವಾರ ಒಣ ಹವೆ ಮುಂದುವರಿದಿದ್ದು, ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 33.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಬೀದರ್‌ನಲ್ಲಿ ಕಡಿಮೆ ಉಷ್ಣಾಂಶ 12. 4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಗುರುವಾರ ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು ನಗರದಲ್ಲಿ ಗುರುವಾರ ಸಾಮಾನ್ಯವಾಗಿ ನೀಲಾಕಾಶ ಇರಲಿದ್ದು, ರಾಜ್ಯದ ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕಿನ ವಾತಾವರಣ ಇರಲಿದೆ.
ಆರೋಗ್ಯದ ಬಗ್ಗೆ ಇರಲಿ ಕಾಳಜಿ
ಮನೆಯಿಂದ ಹೊರಬಂದರೆ ಸಾಕು ರಭಸವಾಗಿ ಬೀಸುವ ಗಾಳಿಯಿಂದ ಆರೋಗ್ಯದಲ್ಲಿ ಏರುಪೇರು ಆಗುವುದು ಸಹಜ. ನಿರಂತರವಾಗಿ ಸುರಿದ ಮಳೆಯಿಂದಾಗಿ ಡೆಂಘಿ, ಚಿಕೂನ್‌ಗ್ಯೂನಾ ಪ್ರಕರಣಗಳು ಏರಿಕೆ ಆಗಿದ್ದವು. ಇದರ ಹಿಂದೆ ಈಗ ಚಳಿಗಾಲದಲ್ಲಿ ಬರುವ ಸಾಮಾನ್ಯ ಕೆಮ್ಮು, ನೆಗಡಿ, ತಲೆನೋವು, ಮೈಗ್ರೇನ್ ಸೇರಿದಂತೆ ವೈರಲ್ ಫೀವರ್ ಹೆಚ್ಚು ಬರುತ್ತದೆ.
ಅಸ್ತಮಾ ಇರುವವರಿಗೆ ಉಸಿರಾಟಕ್ಕೂ ಹೆಚ್ಚು ತೊಂದರೆ ಉಂಟುಮಾಡುತ್ತದೆ. ಸೈನಸ್ ಸಮಸ್ಯೆ ಇರುವವರಿಗೆ ಮೂಗು ಕಟ್ಟುವಿಕೆ, ಅರ್ಧ ತಲೆನೋವು, ಶೀತದಿಂದ ಕಿವಿನೋವು, ಗಂಟಲು ನೋವು ಕಾಡುತ್ತದೆ. ಈ ಸಮಯದಲ್ಲಿ ತಲೆಕೂದಲು ಉದುರುವುದು ಹಾಗೂ ತ್ವಚೆಯ ಚರ್ಮ ಬಿರುಕು ಬಿಡುವ ಸಾಧ್ಯತೆಯು ಇರಲಿದೆ.
ಹೀಗಾಗಿ ವೈದ್ಯರು ಸಲಹೆ ನೀಡುವ ಪ್ರಕಾರ ಚಳಿಗಾಲದಲ್ಲಿ ಹೆಚ್ಚು ಕಾಯಿಸಿದ ಬಿಸಿನೀರು ಕುಡಿಯುವುದು ಉತ್ತಮ ಎಂಬ ಹೇಳಲಾಗಿದೆ. ತಾಜಾ ಆಹಾರದ ಸೇವನೆಯಿಂದ ರೋಗಗಳಿಂದ ದೂರ ಉಳಿಯಬಹುದಾಗಿದ್ದು, ಜೇನುತುಪ್ಪು ಸೇವಿಸುವುದರಿಂದ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಬಹುದಾಗಿದೆ. ಆದಷ್ಟು ಈ ಸಮಯದಲ್ಲಿ ಫ್ರಿಜ್‌ನಲ್ಲಿ ಶೇಖರಿಸಿದ ಆಹಾರವನ್ನು ಸೇವಿಸದೇ ಇರುವುದು ಉಳಿತು. ಚಳಿಗಾಲದಲ್ಲಿ ಮಸಾಲ ಪದಾರ್ಥಗಳು, ಕರಿದ ತಿನಿಸುಗಳನ್ನು ಸೇವಿಸುವುದನ್ನು ನಿಯಂತ್ರಿಸುವುದರ ಜತೆಗೆ ಆದಷ್ಟು ಬೆಚ್ಚನೆಯ ಉಡುಪು ಧರಿಸಿ, ಮೈಕೈ ಬೆಚ್ಚಗಿಟ್ಟುಕೊಳ್ಳಬೇಕೆಂಬ ಸಲಹೆಗಳು ಕೇಳಿಬಂದಿವೆ.
ಇದನ್ನೂ ಓದಿ | ಆರೋಗ್ಯ ಜಾಗ್ರತೆ, ತಿಥಿ ಊಟಕ್ಕೆ ಹೋಗ್ಬೇಡಿ, ದಾನ ಧರ್ಮ ಮಾಡ್ಬೇಡಿ: ಸಿ.ಟಿ. ರವಿಗೆ ಹೀಗೆ ಬುದ್ಧಿವಾದ ಹೇಳಿದ್ದು ಯಾರು?