Site icon Vistara News

Weather Report : ವಾರಾಂತ್ಯದಲ್ಲಿ ಇಲ್ಲೆಲ್ಲ ವ್ಯಾಪಕ ಮಳೆ; ನಿಮ್ಮ ಊರು ಇದೆಯಾ ನೋಡಿ

Rain image

ಬೆಂಗಳೂರು: ವಾರಾಂತ್ಯದಲ್ಲಿ ಕರಾವಳಿಯ ಬಹುತೇಕ ಕಡೆಗಳಲ್ಲಿ ಮತ್ತು ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ (Weather report) ಸಾಧ್ಯತೆ ಇದೆ. ಮಳೆಯೊಂದಿಗೆ (Rain News) ಮುಂದಿನ 48 ಗಂಟೆಯಲ್ಲಿ ರಾಜ್ಯಾದ್ಯಂತ ಒಂದೆರಡು ಕಡೆಗಳಲ್ಲಿ ಬಿರುಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ವ್ಯಾಪ್ತಿಯಲ್ಲಿ ಇರಲಿದೆ.

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹಗುರ ಮಳೆಯಾಗಲಿದೆ.

ಆಗಸ್ಟ್‌ 5-6ರಂದು ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡಿನ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾದರೆ, ಉತ್ತರ ಒಳನಾಡಿನ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ.

ಇದನ್ನೂ ಓದಿ: Assault case : ಯಾವನೋ ಅವನು ಬಾಸ್‌ ಅಂದಿದ್ದಕ್ಕೆ ಲಾಂಗ್‌ನಿಂದ ಹಲ್ಲೆ

ದಕ್ಷಿಣ ಒಳನಾಡಿನ ಜಿಲ್ಲೆಯಾದ ದಾವಣಗೆರೆ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಮಂಡ್ಯ ಮತ್ತು ಕೋಲಾರ ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗಲಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಕೆಲವೊಮ್ಮೆ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಕ್ಯಾಸಲ್‌ ರಾಕ್‌ನಲ್ಲಿ ಅಧಿಕ ಮಳೆ ದಾಖಲು

ರಾಜ್ಯದಲ್ಲಿ ಶುಕ್ರವಾರ ನೈರುತ್ಯ ಮುಂಗಾರು ಕರಾವಳಿಯಲ್ಲಿ ಸಾಮಾನ್ಯವಾಗಿದರೆ ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿಯ ಬಹುತೇಕ ಕಡೆಗಳಲ್ಲಿ ಮತ್ತು ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್‌ ರಾಕ್‌ನಲ್ಲಿ 8 ಸೆಂ.ಮೀ ಮಳೆಯಾಗಿದೆ.

ಗೇರುಸೊಪ್ಪಾ 5 ಸೆಂ.ಮೀ ಹಾಗೂ ಜಗಲಬೆಟ್, ಕೊಲ್ಲೂರಿನಲ್ಲಿ ತಲಾ 4ಸೆಂ.ಮೀ ಮಳೆಯಾಗಿದೆ. ಹೊನ್ನಾವರ, ಕದ್ರಾ, ಶಿರಾಲಿ, ಜೋಯಿಡಾ, ಮಂಕಿ, ಅಂಕೋಲಾ , ಸಿದ್ದಾಪುರದಲ್ಲಿ ತಲಾ 3 ಸೆಂ.ಮೀ ಹಾಗೂ ಬೇಲಿಕೇರಿ, ಸಿದ್ದಾಪುರ, ಧರ್ಮಸ್ಥಳ, ಲೋಂಡಾ, ತಾಳಗುಪ್ಪ, ಅಗ್ರಹಾರ ಕೋಣಂದೂರು, ಲಿಂಗನಮಕ್ಕಿ, ಕೊಟ್ಟಿಗೆಹಾರ, ಶೃಂಗೇರಿಯಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ.

ಪಣಂಬೂರು, ಸುಳ್ಯ, ಉಪ್ಪಿನಂಗಡಿ, ಪುತ್ತೂರು, ಕಾರ್ಕಳ, ಕೋಟ, ಕಾರವಾರ, ಹಾಗೂ ಗೋಕರ್ಣ, ಕುಮಟಾ, ಮಂಚಿಕೆರೆ, ಯಲ್ಲಾಪುರ, ಬನವಾಸಿ ಸೇರಿದಂತೆ ಗುಂಜಿ, ಕಮ್ಮರಡಿ, ಕೊಪ್ಪ, ಶನಿವಾರಸಂತೆ, ಸೋಮವಾರಪೇಟೆ , ಮಂಡಗದ್ದೆ, ಹುಂಚದಕಟ್ಟೆಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿರುವ ವರದಿ ಆಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version