ಬೆಳಗಾವಿ/ತುಮಕೂರು: ಚುನಾವಣೆಗೆ ಮೊದಲು ಕಾಂಗ್ರೆಸ್ ಹೊರಡಿಸಿದ್ದ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿಗಳನ್ನು ಘೋಷಣೆ ಮಾಡಲಾಗಿತ್ತು. ಅವುಗಳನ್ನು ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್‌ನಲ್ಲಿಯೇ ಜಾರಿಗೊಳಿಸುವುದಾಗಿಯೂ ಹೇಳಿತ್ತು. ಈಗ ಅಧಿಕಾರಕ್ಕೆ ಬಂದಿದ್ದು, ಇನ್ನೂ ಜಾರಿಯಾಗದಿರುವ ಬಗ್ಗೆ ಸಾರ್ವಜನಿಕವಾಗಿ ಮತ್ತು ಪ್ರತಿಪಕ್ಷಗಳಿಂದ ತೀವ್ರ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಸಚಿವರಿಬ್ಬರಾದ ಸತೀಶ್ ಜಾರಕಿಹೊಳಿ ಹಾಗೂ ಕೆ.ಎನ್. ರಾಜಣ್ಣ, ಗ್ಯಾರಂಟಿ ಬಗ್ಗೆ ಮಾತನಾಡಿದ್ದು, ಚುನಾವಣೆ ಸಂದರ್ಭದಲ್ಲಿ ಮನೆ ಮನೆಗೆ ಗ್ಯಾರಂಟಿ ಕಾರ್ಡ್ (congress guarantee card) ಎಸೆದ ಹಾಗೆ ನಾವು ಎಲ್ಲರಿಗೂ ಗ್ಯಾರಂಟಿ ಯೋಜನೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಬೆಳಗಾವಿಯ ಕಿತ್ತೂರು ತಾಲೂಕಿನ ಬೈಲೂರು ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ (Satish Jarkiholi), ಚುನಾವಣೆ ಸಂದರ್ಭದಲ್ಲಿ ಮನೆ ಮನೆಗೆ ಗ್ಯಾರಂಟಿ ಕಾರ್ಡ್ ಎಸೆದ ಹಾಗೆ ನಾವು ಎಲ್ಲರಿಗೂ ಗ್ಯಾರಂಟಿ ಯೋಜನೆ ಕೊಡಲು ಸಾಧ್ಯವಿಲ್ಲ. ನಿರ್ಗತಿಕರು, ಬಡವರು ಯಾರಿದ್ದಾರೋ ಅವರನ್ನು ಗುರುತಿಸಿ ಗ್ಯಾರಂಟಿ ಯೋಜನೆಯನ್ನು ತಲುಪಿಸುತ್ತೇವೆ ಎಂದು ಹೇಳಿದರು.
ರಾಜ್ಯದ ಜನರು ಬಹಳಷ್ಟು ನಿರೀಕ್ಷೆಗಳನ್ನು ನಮ್ಮ ಸರ್ಕಾರದ ಮೇಲೆ ಇಟ್ಟುಕೊಂಡಿದ್ದಾರೆ. ಚುನಾವಣೆಯಲ್ಲಿ ನಾವು ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಹೇಳಿದರು.
ನಾವು ಗ್ಯಾರಂಟಿ ಈಡೇರಿಸಲು ಸಿದ್ಧರಿದ್ದೇವೆ. ಆದರೆ, ಪ್ರತಿಪಕ್ಷಗಳು ಗೊಂದಲ ಸೃಷ್ಟಿಸುತ್ತಿವೆ. ಗ್ಯಾರಂಟಿ ನೀಡಿದ್ದು ನಾವು, ಅವರಲ್ಲ. ಗ್ಯಾರಂಟಿ ಯೋಜನೆ ಈಡೇರಿಸಲು ಸಮಯ ಬೇಕು. ಯೋಜನೆ ಜಾರಿಗಾಗಿ ಈಗಾಗಲೇ ಸಿದ್ಧತೆಗಳು ನಡೆದಿವೆ, ನಾವು ಜಾರಿಗೊಳಿಸುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: New Parliament Building: ಪಂಚಾಯ್ತಿಯಿಂದ ಸಂಸತ್ತಿನ ತನಕ ಒಂದೇ ನಿಷ್ಠೆ; 9 ವರ್ಷದ ಸಾಧನೆಗಳಿಂದಲೇ ಹೆಚ್ಚು ಖುಷಿ ಎಂದ ಮೋದಿ
ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಕೆಲಸ
ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಇಬ್ಬರು ಸಚಿವರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಜಿಲ್ಲೆಯಲ್ಲಿ ಅಸಮಾಧಾನ ಇದೆ. ಆದರೆ ಬೇರೆ ಬೇರೆ ಹುದ್ದೆ ಕೊಟ್ಟು ಅವರೆಲ್ಲರನ್ನೂ ಸಮಾಧಾನ ಮಾಡುತ್ತೇವೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಬಂದ್ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಅದು ಸ್ವಾಭಾವಿಕ ಮತ್ತು ಸಹಜ ಕೂಡಾ. ಹೊಸ ಸರ್ಕಾರ ಬಂದ ಮೇಲೆ ಹೀಗೆ ಮಾಡುವ ವಾಡಿಕೆ ಇದೆ. ಸಂಬಂಧಪಟ್ಟ ಮಂತ್ರಿಗಳು ಬಂದು ಗಮನಹರಿಸುತ್ತಾರೆ. ಜನಪರವಾಗಿರುವ ಯೋಜನೆಗಳನ್ನು ಮುಂದುವರಿಸುತ್ತೇವೆ. ಅನಾವಶ್ಯಕ ಇರುವ ಕೆಲಸಗಳನ್ನು ಬಂದ್ ಮಾಡುತ್ತೇವೆ ಎಂದು ಸತೀಶ ಜಾರಕಿಹೊಳಿ ಹೇಳಿದರು.
ಬಜರಂಗದಳ ಹಾಗೂ ಆರ್‌ಎಸ್ಎಸ್ ಬ್ಯಾನ್ ವಿಚಾರದ ಬಗ್ಗೆ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಪ್ರಶ್ನಿಸಿದಾಗ, ಅಂತಹ ತರಾತುರಿ ಏನಿಲ್ಲ, ಉದಾಹರಣೆ ಕೊಟ್ಟಿದ್ದೇವೆ ಎಂದು ಸತೀಶ್ ಜಾರಕಿಹೊಳಿ ಹೇಳುತ್ತಿದ್ದಂತೆ ಮಧ್ಯ ಪ್ರವೇಶ ಮಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಪ್ರಣಾಳಿಕೆಯಲ್ಲಿ ಬ್ಯಾನ್ ಮಾಡುತ್ತೇವೆ ಎಂದು ಹೇಳಿಲ್ಲ. ಗದ್ದಲ ಮಾಡಿದರೆ ಮಾತ್ರ ಬ್ಯಾನ್ ಮಾಡುವ ಬಗ್ಗೆ ಪ್ರಸ್ತಾಪ ಮಾಡಲಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಐದು ವರ್ಷ ಆಡಳಿತ ನಡೆಸುತ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ, ಯಾರೇ ಇದ್ದರೂ ಕಾಂಗ್ರೆಸ್‌ನವರೇ ಇರುತ್ತಾರೆ. ಈ ಬಗ್ಗೆ ಫಾರ್ಮುಲಾ ಏನಾಗಿದೆಯೋ ಗೊತ್ತಿಲ್ಲ ಎಂದು ಹೇಳಿದರು.
ಭವಿಷ್ಯದಲ್ಲಿ ಮತ್ತೊಂದು ಸಚಿವ ಸ್ಥಾನ ಜಿಲ್ಲೆಗೆ ಸಿಗುವ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಈಗಂತೂ ಎಲ್ಲವೂ ಭರ್ತಿಯಾಗಿದೆ. ನೀವು ನಮಗೆ ಟೇಕಾಫ್ ಆಗಿಲ್ಲ ಅಂತಿದ್ದಿರಿ. ಹೀಗಾಗಿ ನಾವು ಫುಲ್ ಟೇಕಾಫ್ ಆಗಿದ್ದೇವೆ. ಗ್ಯಾರಂಟಿ ಯೋಜನೆಗಳ ಜಾರಿಗೆ ಬಿಜೆಪಿಯವರು ನಮಗೆ ಟೈಂ ಕೊಡಬೇಕು. ಈಗಾಗಲೇ ಎಲ್ಲ ರೀತಿಯ ಕೆಲಸ ಪ್ರಾರಂಭ ಆಗಿದೆ. ಎಲ್ಲ ಭರವಸೆ ಈಡೇರಿಸಲು ನಮಗೆ ಟೈಂ ಕೊಡಬೇಕು ಎಂದು ಹೇಳಿದರು.
ಎಲೆಕ್ಷನ್ ರೀತಿ ಮನೆ ಮನೆಗೆ ಹಂಚಲಾಗುವುದಿಲ್ಲ: ಕೆ.ಎನ್. ರಾಜಣ್ಣ
ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಜಾರಿ ಮಾಡಿಯೇ ತೀರುತ್ತೇವೆ. ಅರ್ಹರನ್ನು ಗುರುತಿಸಬೇಕು, ಚುನಾವಣೆಯಂತೆ ಮನೆ ಮನೆಗೆ ಹಂಚಲಾಗುವುದಿಲ್ಲ. ಜೂನ್ 1ರಂದು ಎಲ್ಲ ಸಿದ್ಧತೆಗಳೊಂದಿಗೆ ಕ್ಯಾಬಿನೆಟ್‌ಗೆ ಬರಲು ಅಧಿಕಾರಿಗಳಿಗೆ ತಿಳಿಸಿಲಾಗಿದೆ ಎಂದು ಕೆ.ಎನ್. ರಾಜಣ್ಣ ತುಮಕೂರಿನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Bandipur National Park: ಬಂಡೀಪುರವೀಗ ಫುಲ್ ರಶ್, ದಿನಕ್ಕೆ 8 ಲಕ್ಷ ರೂ. ಆದಾಯ; ಇದು ಮೋದಿ ಎಫೆಕ್ಟ್!
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಒಬ್ಬ ವಚನ ಭ್ರಷ್ಟ, ಅವರ ಮಾತಿಗೆ ಮಹತ್ವ ಬೇಡ. ಸ್ಪಷ್ಟ ಬಹುಮತ ಬರದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದಿದ್ದರು. ಆ ಮಾತುಗಳನ್ನು ಉಳಿಸಿಕೊಳ್ಳಲಿ. ಬಡವರ ಪಾಲಿನ ಸೌಲಭ್ಯಗಳು ದೊರಕುತ್ತವೆ. 200 ಯೂನಿಟ್ ವಿದ್ಯುತ್ ನೀಡುತ್ತೇವೆ. ಜನರು ಮುಗ್ದರಿದ್ದಾರೆ, ಅವರನ್ನು ಎತ್ತಿಕಟ್ಟುವ ಕೆಲಸ ಮಾಡಬಾರದು. ಸಾಧಕ ಬಾಧಕಗಳನ್ನು ಚರ್ಚೆ ಮಾಡಿ ಕಾಂಗ್ರೆಸ್ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ನಿಯಮ ಬಾಹಿರವಾಗಿ ಜಾರಿಯಾಗಿರುವ ಕಾಮಗಾರಿಗಳನ್ನು ತಡೆಯಲಾಗುವುದು ಎಂದು ರಾಜಣ್ಣ ಹೇಳಿದ್ದಾರೆ.