ಕೋಲಾರ: ನಾನು ಸರ್ಕಾರ ನಡೆಸಿದ 12 ತಿಂಗಳ ಅವಧಿಯಲ್ಲಿ ರೈತರಿಗೆ ಕೊಟ್ಟ ಕೊಡುಗೆಗಳು ಸಾಕಷ್ಟಿವೆ. ಆದರೆ, ಈ ಕೊಡುಗೆಗಳನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಕೇಂದ್ರ ಸರ್ಕಾರವು ಹತ್ತು ವರ್ಷಗಳಲ್ಲಿ ರೈತರಿಗೆ ನೀಡಲು ಆಗಲಿಲ್ಲ. ಈಗ ಈ ಚುನಾವಣೆಯಲ್ಲಿ (Karnataka Election 2023) ಯಾವ ಸಾಧನೆಯನ್ನು ಮುಂದೆ ಇಟ್ಟುಕೊಂಡು ಮತ ಕೇಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಕಿಡಿಕಾರಿದ್ದಾರೆ.
ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ನಾನು 12 ತಿಂಗಳು ಅಧಿಕಾರ ನಡೆಸಿದರೂ ಸಹ ರಾಜ್ಯದಲ್ಲಿ ರೈತರ ಅಭ್ಯುದಯಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಆದರೆ, ನರೇಂದ್ರ ಮೋದಿಯವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಇಷ್ಟು ವರ್ಷವಾಗಿದ್ದರೂ ನಾನು ಕೊಟ್ಟಂತಹ ಯೋಜನೆಗಳನ್ನು ಜಾರಿಗೆ ಕೊಡಲು ಸಾಧ್ಯವಾಗಿಲ್ಲ ಹೇಳಿದರು.
ಫಸಲ್ ಭೀಮಾ ಯೋಜನೆಯಲ್ಲಿ ರೈತರನ್ನು ವಂಚಿಸಿರುವುದು ಇಡೀ ರಾಜ್ಯಕ್ಕೆ ತಿಳಿದಿದೆ. ಅಧಿಕಾರದಲ್ಲಿ ಇದ್ದಷ್ಟು ದಿನ ಬಿಜೆಪಿಯವರು ರಾಜ್ಯವನ್ನು ಲೂಟಿ ಹೊಡೆದಿದ್ದೇ ಅವರ ಸಾಧನೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕುಟುಕಿದರು.
ಟಾಟಾ ಮಾಡಿ ಹೋಗುವ ಮೋದಿ
ಬಿಜೆಪಿಯವರು ಯಾವ ಸಾಧನೆಗಳನ್ನು ಮುಂದಿಟ್ಟು ಜನರ ಮುಂದೆ ಹೋಗಿ ಮತ ಕೇಳುತ್ತಾರೆ? ನರೇಂದ್ರ ಮೋದಿಯವರು ರಾಜ್ಯಕ್ಕೆ ಬಂದು ಟಾಟಾ ಮಾಡಿ ಹೋಗುತ್ತಾರೆ ಅಷ್ಟೇ. ನರೇಂದ್ರ ಮೋದಿ ರಾಜ್ಯಕ್ಕೆ ಬರುವುದರಿಂದ ಚುನಾವಣೆಯಲ್ಲಿ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ಇದನ್ನೂ ಓದಿ: Karnataka Election 2023: ಸಿದ್ದರಾಮಯ್ಯಗೆ ಸನ್‌ಸ್ಟ್ರೋಕ್; ಕಾರಲ್ಲಿ ನಿಂತು ಕೈಬೀಸುವಾಗಲೇ ಕುಸಿದುಬಿದ್ದರು
ಜೆಡಿಎಸ್ ಕಾರ್ಯಕರ್ತರ ಮೇಲೆ ದೌರ್ಜನ್ಯಕ್ಕೆ ಯಾರೂ ಬೆದರುವುದಿಲ್ಲ, ನಮ್ಮ ಕಾರ್ಯಕರ್ತರು ಸದೃಢವಾಗಿದ್ದಾರೆ. ಯಾರು ದಾಳಿ ಮಾಡಿದರೂ ಏನೂ ಮಾಡಲು ಆಗುವುದಿಲ್ಲ. ಈ ಬಾರಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ. ಜನರು 123 ಕ್ಷೇತ್ರಗಳಲ್ಲಿ ನಮ್ಮ ಪಕ್ಷವನ್ನು ಗೆಲ್ಲಿಸಲಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.