ಮೈಸೂರು: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಸಂಸದ ಪ್ರತಾಪ್ ಸಿಂಹ ಅವರು ಹೆಸರು ಬದಲಿಸಿಕೊಂಡಿರುವುದು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಪ್ರತಾಪ್ ಸಿಂಹ ಅವರು ಸಂಖ್ಯಾಶಾಸ್ತ್ರದ ಮೊರೆ ಹೋಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೀಗ ಈ ಬಗ್ಗೆ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ (Prathap Simha) ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಪ್ರತಾಪ್ ಸಿಂಹ ಅವರು, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಹೆಸರು ಬರೆಯುವಾಗ ಸಮಸ್ಯೆಯಾಗುತ್ತಿತ್ತು. ಹೀಗಾಗಿ ಕನ್ನಡದಲ್ಲಿ ಹೆಸರು ಇರುವಂತೆ ಯಥಾವತ್ತಾಗಿ ಇಂಗ್ಲಿಷ್‌ನಲ್ಲಿ ಬದಲಾವಣೆ ಮಾಡಿಕೊಂಡಿದ್ದೇನೆ. ಈ ಬದಲಾವಣೆಗೂ ಚುನಾವಣೆಗೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.
ಅದೇ ಹೆಸರಿನಿಂದಲೇ ನಾನು ಎರಡು ಬಾರಿ ಗೆದ್ದಿದ್ದೇನೆ. ಮೈಸೂರೇ ಗೊತ್ತಿಲ್ಲದ ನನ್ನನ್ನು ಮೊದಲ ಬಾರಿ ಮೈಸೂರಿನ ಜನ ಗೆಲ್ಲಿಸಿದ್ದಾರೆ. ಹೀಗಾಗಿ ಚುನಾವಣೆಗೂ ಹೆಸರು ತಿದ್ದುಪಡಿಗೂ ಸಂಬಂಧ ಇಲ್ಲ. ಅದು ಸಂಖ್ಯಾಶಾಸ್ತ್ರ ಅಂತೇನೂ ಅಲ್ಲ. ನೀವು ಸಂಖ್ಯಾಶಾಸ್ತ್ರ ಅಂದರೆ ಅದು ಸಂಖ್ಯಾಶಾಸ್ತ್ರವಾಗುತ್ತದೆ ಎಂದು ತಿಳಿಸಿದ್ದಾರೆ.
ನನ್ನ ವಿರುದ್ಧ ಚುನಾವಣೆಯಲ್ಲಿ ಕಾಂಗ್ರೆಸ್‌ನ ಯಾವುದೇ ಅಭ್ಯರ್ಥಿ ನಿಂತರೂ 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ. ನಾನು ಒಂಥರ ಎಲ್ಲಾ ಪಕ್ಷಗಳ ಮತದಾರರ ಅಭ್ಯರ್ಥಿ ಇದ್ದಂತೆ. ಎಲ್ಲಾ ಪಕ್ಷದಲ್ಲೂ ಮೋದಿ ಅಭಿಮಾನಿಗಳಿದ್ದಾರೆ. ಅವರೆಲ್ಲ ನನಗೆ ಮತ ಹಾಕುತ್ತಾರೆ. ಈಗ ಜೆ.ಡಿ.ಎಸ್. ಕೂಡ ನಮ್ಮ ಜತೆ ಮೈತ್ರಿ ಮಾಡಿಕೊಂಡಿರುವುದರಿಂದ ನಮಗೆ ಹೆಚ್ಚಿನ ಬಲ ಬಂದಿದೆ ಎಂದು ತಿಳಿದಿದರು.
ಹೆಸರಿನಲ್ಲಿ ಬದಲಾವಣೆ ಏನು?
Prathap Simha ಎಂಬ ಹೆಸರನ್ನು Pratap Simmha ಎಂದು ಬದಲಿಸಿಕೊಂಡು ಅಫಿಡವಿಟ್ ಮೂಲಕ ಸಂಸದ ಪ್ರತಾಪ್ ಸಿಂಹ ಇತ್ತೀಚೆಗೆ ಘೋಷಿಸಿಕೊಂಡಿದ್ದರು. Prathap ಪದದಲ್ಲಿ h ತೆಗೆಯಲಾಗಿದ್ದು, Simha ಪದಕ್ಕೆ ಹೆಚ್ಚುವರಿ M ಸೇರ್ಪಡೆ ಮಾಡಿರುವುದು ಕಂಡುಬಂದಿದೆ. ಸಂಸದರು ಸಂಖ್ಯಾಶಾಸ್ತ್ರದ ಪ್ರಕಾರ ಇಂಗ್ಲಿಷ್ ಹೆಸರಿನಲ್ಲಿ ಅಲ್ಪ ತಿದ್ದುಪಡಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | DK Shivakumar : ಕೋರ್ಟ್‌ಗೆ ಹೋಗಲು ಎಲ್ಲರಿಗೂ ಹಕ್ಕಿದೆ: ಯತ್ನಾಳ್‌ಗೆ ಸಿದ್ದರಾಮಯ್ಯ ತಿರುಗೇಟು
ರಾಜಕೀಯ ನಾಯಕರು ಹೆಸರಿನಲ್ಲಿ ಬದಲಾವಣೆ ಮಾಡಿಕೊಂಡಿರುವುದು ಇದೇ ಮೊದಲೇನಲ್ಲ. ಇದೇ ರೀತಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕೂಡ ಇಂಗ್ಲಿಷ್ ಹೆಸರನ್ನು ಬದಲಿಸಿಕೊಂಡಿದ್ದರು. ಎಂಎಲ್‌ಸಿ ಎಚ್. ವಿಶ್ವನಾಥ್ ಕೂಡ ತಮ್ಮ ಹೆಸರಿನ ಹಿಂದೆ ಅಡಗೂರು ಎಂದು ಸೇರಿಸಿಕೊಂಡಿದ್ದರು. ತಮಿಳುನಾಡು ಸಿಎಂ ಆಗಿದ್ದ ಜಯಲಲಿತಾ ಅವರು ಕೂಡ ಇದೇ ರೀತಿ ತಮ್ಮ ಹೆಸರು ಬದಲಿಸಿಕೊಂಡಿದ್ದರು. ಇದೀಗ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕೂಡ ತಮ್ಮ ಹೆಸರನ್ನು ಇಂಗ್ಲಿಷ್‌ನಲ್ಲಿ ಸಂಖ್ಯಾಶಾಸ್ತ್ರದ ಪ್ರಕಾರ ಬದಲಿಸಿಕೊಂಡಿದ್ದಾರೆ.