ಬೆಂಗಳೂರು: 2022ರ ಏಪ್ರಿಲ್ 16ರಂದು ನಡೆದ ಹಳೇ ಹುಬ್ಬಳ್ಳಿ ಗಲಭೆ (Hubballi Riots) ಪ್ರಕರಣವನ್ನು ಮರು ಪರಿಶೀಲನೆ ಮಾಡುವ ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಈಗ ಪ್ರತಿಪಕ್ಷಗಳು ಆಕ್ಷೇಪವನ್ನು ವ್ಯಕ್ತಪಡಿಸಿವೆ. ಈ ಸಂಬಂಧ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (Deputy Chief Minister DK Shivakumar) ಬರೆದಿರುವ ಪತ್ರ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. ಇದಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ (Home Minister Dr G Parameshwara) ಪ್ರತಿಕ್ರಿಯೆ ನೀಡಿದ್ದು, ಅವರು ಬರೆದಿರುವ ಪತ್ರವನ್ನು ನಾನಿನ್ನೂ ನೋಡಿಲ್ಲ. ಒಂದು ವೇಳೆ ಪತ್ರ ಬರೆದರೂ ಏನು ತಪ್ಪಿದೆ? ಒಂದು ಪತ್ರ ಬರೆದರು ಎಂದು ಬೊಬ್ಬೆ ಹೊಡೆದರೆ ಅದಕ್ಕೆ ನಾವು ಏನು ಮಾಡಬೇಕು? ಎಂದು ಪ್ರಶ್ನೆ ಮಾಡಿದ್ದಾರೆ.
ವಾಟ್ಸ್‌ಆ್ಯಪ್ ಸ್ಟೇಟಸ್ (Whatsapp Status) ಮುಂದಿಟ್ಟುಕೊಂಡು ಮುಸ್ಲಿಂ ಗುಂಪುಗಳು (Muslim groups) 2022ರ ಏಪ್ರಿಲ್ 16ರಂದು ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆ ಮೇಲೆ ದಾಳಿ (Muslims attack on Hale hubballi police station) ಮಾಡಿದ್ದವು. ಈ ಪ್ರಕರಣದಲ್ಲಿ ಸುಮಾರು 40 ಮಂದಿಯನ್ನು ಬಂಧಿಸಲಾಗಿತ್ತು. ಅಲ್ಲದೆ, ಇದರ ಸಂಬಂಧ 1400 ಪುಟಗಳ ಚಾರ್ಜ್‌ಶೀಟ್ ಅನ್ನು ಸಹ ಹಾಕಲಾಗಿದೆ. ಇದೀಗ ಈ ಪ್ರಕರಣವನ್ನು ಮರು ಪರಿಶೀಲನೆ ಮಾಡಬೇಕೆಂದು ಬರೆಯಲಾಗಿರುವ ಪತ್ರದ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿವೆ.
ಇದನ್ನೂ ಓದಿ: Fraud Case : ಗ್ಯಾಸ್ ಡೀಲರ್‌ಷಿಪ್ ಹೆಸರಲ್ಲಿ ನಿವೃತ್ತ ಪ್ರಿನ್ಸಿಪಾಲ್‌ಗೆ 45 ಲಕ್ಷ ರೂ. ವಂಚನೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಾ. ಜಿ. ಪರಮೇಶ್ವರ್, ಯಾವುದೇ ಪ್ರಕರಣಗಳು ಇರಲಿ ಶಾಸಕರಿಗೆ, ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರೆ, ಅದನ್ನು ನಮಗೆ ಕಳಿಸಿಕೊಡುವುದು ಒಂದು ಪ್ರಕ್ರಿಯೆ. ಆ ಪತ್ರ ನೇರವಾಗಿ ನನಗೆ ಬರುತ್ತದೆ. ಇಲ್ಲವಾದಲ್ಲಿ ನಮ್ಮ ಇಲಾಖೆಯ ಡಿಜಿಗಳಿಗೆ ಕಳಿಸಿಕೊಡುತ್ತಾರೆ. ಆ ಪತ್ರದ ವಿಚಾರವನ್ನು ನಾವು ಕ್ಯಾಬಿನೆಟ್ ಸಬ್ ಕಮಿಟಿ ಮುಂದಿಟ್ಟು ಚರ್ಚೆ ಮಾಡುತ್ತೇವೆ. ಸಾಧಕ- ಬಾಧಕಗಳನ್ನು ಚರ್ಚೆ ಮಾಡಿ ಕಾನೂನು ಪ್ರಕಾರ ಆ ಪ್ರಕರಣವನ್ನು ಕೈ ಬಿಡಬಹುದಾ? ಇಲ್ಲವೇ ಮುಂದುವರಿಸಬೇಕಾ? ಎಂಬುದನ್ನು ಗಮನಿಸುತ್ತೇವೆ. ಏನೇನು ಸೆಕ್ಷನ್ ಹಾಕಿರುತ್ತಾರೆಯೋ ಎಲ್ಲವನ್ನೂ ಪರಿಶೀಲನೆ ಮಾಡುತ್ತೇವೆ. ಇದಾದ ಮೇಲೆ ನಾವು ಒಂದು ತೀರ್ಮಾನಕ್ಕೆ ಬರುತ್ತೇವೆ. ಪ್ರಕರಣದಲ್ಲಿರುವವರು ಅಮಾಯಕರು, ಇವರಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಹಾಗಾಗಿ ಪ್ರಕರಣವನ್ನು ಕೈಬಿಡಬಹುದು ಎಂಬ ಅಭಿಪ್ರಾಯ ಬಂದರೆ ಅಂತಹ ಪ್ರಕರಣವನ್ನು ನಾವು ಪ್ರೊಸೀಡಿಂಕ್ಸ್ ಮಾಡಿ ಕ್ಯಾಬಿನೆಟ್‌ಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದರು.
ಯಾವುದೇ ಪ್ರಕರಣವನ್ನು ಕೈಬಿಡುವ ಮುಂಚೆ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುತ್ತೇವೆ. ಅಷ್ಟಕ್ಕೆ ಅದು ಮುಗಿಯುವುದಿಲ್ಲ, ಕ್ಯಾಬಿನೆಟ್ ಒಪ್ಪಬೇಕಾಗುತ್ತದೆ. ಕಾನೂನು ಪ್ರಕಾರ ಸರಿ ಮಾಡಿಲ್ಲ ಎಂದು ಕ್ಯಾಬಿನೆಟ್‌ನಲ್ಲಿ ಯಾರಾದರೂ ತಕರಾರು ಮಾಡಿದರೆ ಮತ್ತೆ ಅದು ವಾಪಸ್ ಹೋಗುತ್ತದೆ. ಒಂದೇ ಬಾರಿಗೆ ಒಪ್ಪುವುದಿಲ್ಲ, ಕ್ಯಾಬಿನೆಟ್ ಸಬ್ ಕಮಿಟಿ ಪ್ರೊಸೀಡಿಂಕ್ಸ್ ಅನ್ನು ಒಪ್ಪಬೇಕು ಎಂದಿಲ್ಲ. ಒಟ್ಟಾರೆಯಾಗಿ ಕ್ಯಾಬಿನೆಟ್ ತೀರ್ಮಾನ ಮಾಡುತ್ತದೆ. ಇಷ್ಟು ಪ್ರಕ್ರಿಯೆ ನಡೆಯುವಾಗ ಒಂದು ಪತ್ರ ಬರೆದರು ಎಂದು ಬೊಬ್ಬೆ ಹೊಡೆದರೆ ನಾವು ಏನು ಮಾಡಬೇಕು? ಎಂದು ಡಾ. ಜಿ. ಪರಮೇಶ್ವರ್ ಪ್ರಶ್ನೆ ಮಾಡಿದ್ದಾರೆ.
ಡಿಕೆಶಿ ಪತ್ರ ಬರೆದಿದ್ದರೂ ತಪ್ಪು ಇಲ್ಲ
ಯಾವುದೇ ಆದರೂ ಪ್ರಕ್ರಿಯೆ ನಡೆಯಲಿದೆ. ಸಿಎಂಗೆ ರೆಪ್ರೆಸೆಂಟೇಷನ್ ಕೊಟ್ಟಾಗ ನಮಗೆ ಕಳಿಸುತ್ತಾರೆ. ನಾವು ಅದನ್ನು ಪರಿಶೀಲನೆ ನಡೆಸಿ ಕ್ಯಾಬಿನೆಟ್‌ಗೆ ತೆಗೆದುಕೊಂಡು ಹೋಗುತ್ತೇವೆ. ಅದೇ ರೀತಿಯಲ್ಲಿ ಡಿಸಿಎಂ ಶಿವಕುಮಾರ್ ಅವರಿಗೆ ರೆಪ್ರೆಸೆಂಟೇಟೆಷನ್ ಕೊಟ್ಟಿದ್ದಾರೆ. ಅದನ್ನು ಇಟ್ಟುಕೊಂಡು ಅವರು ಪತ್ರ ಬರೆದಿರಬಹುದು. ನಾನು ಇನ್ನೂ ಆ ಪತ್ರವನ್ನು ನೋಡಿಲ್ಲ, ಒಂದು ವೇಳೆ ಪತ್ರ ಬರೆದಿದ್ದರೂ ತಪ್ಪೇನು ಇಲ್ಲ ಎಂದು ಡಿ.ಕೆ. ಶಿವಕುಮಾರ್ ಪತ್ರವನ್ನು ಡಾ. ಜಿ. ಪರಮೇಶ್ವರ್ ಸಮರ್ಥನೆ ಮಾಡಿಕೊಂಡಿದ್ದಾರೆ.
ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆಯುವ ಪ್ರಕ್ರಿಯೆಗೆ ಸರ್ಕಾರದ ವಿರುದ್ಧ ಬಿಜೆಪಿ ಮುಗಿಬಿದ್ದಿರುವ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಾ. ಜಿ. ಪರಮೇಶ್ವರ್, ಅವರ ಕಾಲದಲ್ಲಿ ಎಷ್ಟು ಕೇಸ್ ವಾಪಸ್ ಪಡೆದರು ಎಂದು ನಾನು ತೋರಿಸಲೇ? ಅವರು ಸರ್ಕಾರದ ಗೃಹ ಮಂತ್ರಿಗಳು, ಸಿಎಂ ಎಷ್ಟು ಕೇಸ್ ವಾಪಸ್ ಪಡೆದಿದ್ದಾರೆ ಎಂದು ಅಂಕಿ ಅಂಶಗಳನ್ನು ನಾನು ಕೊಡಲೇ? ಎಂದು ತಿರುಗೇಟು ನೀಡಿದರು.
ಆ ದಿನ ಏನಾಗಿತ್ತು ಹಳೆ ಹುಬ್ಬಳ್ಳಿಯಲ್ಲಿ?
ಯುವಕನೊಬ್ಬ ಮಸೀದಿಯ ಮೇಲೆ ಭಗವಾಧ್ವಜ ಹಾರಿಸಿ ಚಿತ್ರವೊಂದನ್ನು ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದ ಎಂಬ ವಿವಾದದೊಂದಿಗೆ ಇಲ್ಲಿ ಗಲಭೆ ಶುರುವಾಗಿತ್ತು. ಪೊಲೀಸರು ಆರೋಪಿತ ಯುವಕನನ್ನು ಬಂಧಿಸಿದ್ದರು. ಯುವಕನ ಬಂಧನವಾಗಿದೆ ಎಂದು ತಿಳಿದ ಹಳೇ ಹುಬ್ಬಳ್ಳಿಯ ಮುಸ್ಲಿಮರು 2022ರ ಏಪ್ರಿಲ್ 16ರಂದು ರಾತ್ರಿ ಹಳೇ ಹುಬ್ಬಳ್ಳಿ ಠಾಣೆ ಎದುರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ ಯುವಕನನ್ನು ತಮಗೆ ಒಪ್ಪಿಸುವಂತೆ ಕೂಗಿ ಕಿರುಚಾಡಿದ್ದರು. ಠಾಣೆ ಮೇಲೆ ಕಲ್ಲಿನ ಸುರಿಮಳೆಗೈದಿದ್ದರು. ಆಸ್ಪತ್ರೆ, ದೇವಸ್ಥಾನ, ಮನೆಗಳ ಮೇಲೂ ಕಲ್ಲು ಎಸೆದು ಗಲಭೆ ಉಂಟು ಮಾಡಿದ್ದರು. ಈ ಘಟನೆಯಲ್ಲಿ ಪೊಲೀಸ್ ಅಧಿಕಾರಿ ಸೇರಿ ಎಂಟು ಪೊಲೀಸರಿಗೆ ಗಾಯಗಳಾಗಿದ್ದವು. ಹತ್ತಕ್ಕೂ ಹೆಚ್ಚು ಪೊಲೀಸ್ ವಾಹನಗಳು ಜಖಂಗೊಂಡಿದ್ದವು. ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಬೇಕಾಗಿ ಬಂದಿತ್ತು.
ಇದನ್ನೂ ಓದಿ: karnataka weather forecast : ರಾಜ್ಯದ ಬಹುತೇಕ ಕಡೆ ಬಿಸಿಲೇ ಹೆಚ್ಚು; ಸದ್ಯ ಮಳೆ ಸುರಿದರೂ ಬೊಗಸೆಯಷ್ಟು!
ಈ ಕುರಿತು ಪೊಲೀಸರು 12 ಪ್ರಕರಣ ದಾಖಲಿಸಿ 158 ಆರೋಪಿಗಳನ್ನು ಬಂಧಿಸಿದ್ದರು. ಆ ಆರೋಪಿಗಳು ಬಳ್ಳಾರಿ ಹಾಗೂ ಕಲಬುರಗಿ ಜೈಲಿನಲ್ಲಿದ್ದಾರೆ. ಎಸಿಪಿ ಆರ್.ಕೆ. ಪಾಟೀಲ, ಹಳೇ ಹುಬ್ಬಳ್ಳಿ ಠಾಣೆ ಇನ್ಸ್‌ಪೆಕ್ಟರ್ ಅಶೋಕ ಚವ್ಹಾಣ ತಂಡದಿಂದ ಬೆಂಗಳೂರಿನಲ್ಲಿ ನಾಲ್ಕು ಸಾವಿರ ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ.