ಬೆಂಗಳೂರು: ಮುಖ್ಯಮಂತ್ರಿಯಾಗಿದ್ದ ವೇಳೆ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಕುಟುಂಬಿಕರು ಅಧಿಕಾರ ದುರ್ಬಳಕೆ ಮಾಡಿಕೊಂಡು ಬಿಡಿಎ ವಸತಿ ಯೋಜನೆ ಗುತ್ತಿಗೆ ನೀಡುವ ಸಲುವಾಗಿ ಲಂಚ ಸ್ವೀಕರಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಲೋಕಾಯುಕ್ತ ಸಂಸ್ಥೆ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಈ ಪ್ರಕರಣ ಮುಂದೆ ಯಾವ ಕಡೆಗೆ ಸಾಗಲಿದೆ ಎಂಬುದು ಕುತೂಹಲಕಾರಿಯಾಗಿದೆ.
ಬಿಎಸ್‌ವೈ ಮತ್ತು ಕುಟುಂಬ ಹಾಗೂ ಇತರರ ಮೇಲಿರುವ ಪ್ರಕರಣದ ತನಿಖೆ ನಡೆಸಬೇಕು ಎಂದು ಅರ್ಜಿದಾರರು ಕೇಳಿಕೊಂಡಿದ್ದಾಗ ಜನಪ್ರತಿನಿಧಿ ನ್ಯಾಯಾಲಯ ರಾಜ್ಯಪಾಲರ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಅರ್ಜಿಯನ್ನು ತಿರಸ್ಕರಿಸಿತ್ತು. ಅರ್ಜಿದಾರರು ಹೈಕೋರ್ಟ್ ಮೊರೆ ಹೊಕ್ಕಾಗ ಉಚ್ಚ ನ್ಯಾಯಾಲಯ ತನಿಖೆಗೆ ಹಸಿರು ನಿಶಾನೆ ತೋರಿತ್ತು. ಈ ನಡುವೆ ಜನಪ್ರತಿನಿಧಿ ನ್ಯಾಯಾಲಯ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಆದೇಶ ನೀಡಿತ್ತು. ಜತೆಗೆ ನವೆಂಬರ್ ೨ರೊಳಗೆ ವರದಿ ನೀಡುವಂತೆ ಸೂಚಿಸಿತ್ತು. ಇದೀಗ ಲೋಕಾಯುಕ್ತರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.
ಈಗ ಒಂದು ಪ್ರಮುಖ ಪ್ರಶ್ನೆ ಎದುರಾಗಿದೆ. ಈಗ ಲೋಕಾಯುಕ್ತ ತನಿಖೆಗೆ ಕೈಗೆತ್ತಿಕೊಂಡಿರುವ ಇದೇ ಪ್ರಕರಣವನ್ನು ಈ ಹಿಂದೆ ಎಸಿಬಿಗೂ ನೀಡಲಾಗಿತ್ತು. ಹಾಗಿದ್ದರೆ ಎಸಿಬಿ ಅಂದು ಯಾಕೆ ಎಫ್‌ಐಆರ್ ದಾಖಲು ಮಾಡಿಕೊಂಡಿರಲಿಲ್ಲ ಎಂಬ ಪ್ರಶ್ನೆ ಎದುರಾಗಿದೆ. ರಾಜ್ಯಪಾಲರ ಅನುಮತಿ ಕಡ್ಡಾಯ ಎನ್ನುವುದೇ ಆದರೆ, ರಾಜ್ಯಪಾಲರ ಅನುಮತಿ ಯಾಕೆ ಪಡೆದಿರಲಿಲ್ಲ? ಅನುಮತಿ ಪಡೆಯಲು ಅಡ್ಡಿಯಾದ ಅಂಶ ಯಾವುದು ಎನ್ನುವುದು ಕೂಡಾ ಗಮನ ಸೆಳೆಯುವ ಅಂಶ.
ಅನುಮತಿ ಕಡ್ಡಾಯ ಯಾಕೆ?
ಭ್ರಷ್ಟಾಚಾರ ನಿರ್ಮೂಲನ ಕಾಯಿದೆ (ಪಿಸಿ ಕಾಯಿದೆ) 17ಎ ಅಡಿಯಲ್ಲಿ ಒಬ್ಬ ಜನಪ್ರತಿನಿಧಿಯ ವಿರುದ್ಧ ಕ್ರಮ ಕೈಗೊಳ್ಳಬೇಕಾದರೆ ಸಂಬಂಧಪಟ್ಟ ಪ್ರಾಧಿಕಾರದ ಅನುಮತಿ ಪಡೆಯಬೇಕು. ರೆಡ್ ಹ್ಯಾಂಡ್ ಆಗಿ ಟ್ರ್ಯಾಪ್ ಆದಾಗ ಮತ್ತು ಆದಾಯಕ್ಕೂ ಮೀರಿ ಹೆಚ್ಚಿನ ಗಳಿಕೆ ಮಾಡಿದ ಪ್ರಕರಣಗಳು ಮಾತ್ರ ಇದಕ್ಕೆ ಅಪವಾದ.
ಸರ್ಕಾರಿ ಸೇವಕ ಇಲ್ಲವೇ ಅಧಿಕಾರಿಯನ್ನ ವಜಾ ಮಾಡುವ ಅಧಿಕಾರವನ್ನು ಸಂಬಂಧಪಟ್ಟ ಪ್ರಾಧಿಕಾರ ಹೊಂದಿರುತ್ತದೆ. ಹೀಗಾಗಿ ಅಂಥವರ ಮೇಲೆ ಎಫ್‌ಐಆರ್ ದಾಖಲಿಸಲು ವಿಚಾರಣೆ ನಡೆಸಲು, ಬಂಧಿಸಲು, ತನಿಖೆ ನಡೆಸಲು ಪ್ರಾಧಿಕಾರದ ಅನುಮತಿ ಬೇಕಾಗುತ್ತದೆ.
ಒಂದು ಪ್ರಾಧಿಕಾರದ ಅನುಮತಿಯನ್ನು ಕೇಳಿದ ಬಳಿಕ ಅದು ನಿರ್ದಿಷ್ಟ ಅವಧಿಯೊಳಗೆ ಅನುಮತಿ ನೀಡಬೇಕು ಅಥವಾ ಅನುಮತಿ ಯಾಕೆ ನೀಡುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು. ವಿನೀತ್ ನಾರಾಯಣ್ ಪ್ರಕರಣದಲ್ಲಿ ಮೂರು ತಿಂಗಳ ಒಳಗೆ ಮನವಿ ಪತ್ರಕ್ಕೆ ಉತ್ತರ ನೀಡಬೇಕು ಎಂದು ತಿಳಿಸಲಾಗಿದೆ. ಸುಪ್ರೀಂಕೋರ್ಟ್‌ನಲ್ಲೂ ಇಂಥ ಹಲವು ವಿದ್ಯಮಾನಗಳು ನಡೆದಿವೆ. ಸುಬ್ರಮಣ್ಯಸ್ವಾಮಿ ಮತ್ತು ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆಯಲಾಗಿತ್ತು. ಬಹುಕಾಲ ಉತ್ತರ ಕೊಡದೆ ಇದ್ದಾಗ ಉತ್ತರ ನೀಡುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಅನುಮತಿ ನೀಡುವ ವಿಚಾರದಲ್ಲಿ ಅರ್ಜಿದಾರರನ್ನು ಆರು ತಿಂಗಳು, ಒಂದು ವರ್ಷ ಕಾಯಿಸಬಾರದು ಎಂದಿತ್ತು.
ಮುಂದೇನಾಗಲಿದೆ?
ಈಗ ಹೈಕೋರ್ಟ್ ಆದೇಶದಂತೆ, ಜನಪ್ರತಿನಿಧಿ ನ್ಯಾಯಾಲಯದ ಸೂಚನೆಯಂತೆ ಎಫ್‌ಐಆರ್ ದಾಖಲಿಸಿಕೊಂಡಿರುವ ಲೋಕಾಯುಕ್ತ ಮುಂದೆ ಹಲವು ಪ್ರಕ್ರಿಯೆಗಳನ್ನು ನಡೆಸಬೇಕಾಗಿದೆ.
ಪ್ರಕರಣ ದಾಖಲಾದ ಬಳಿಕ ತನಿಕಾಧಿಕಾರಿಯನ್ನು ನೇಮಕ ಮಾಡಬೇಕು, ಪ್ರಭಾವಿ ವ್ಯಕ್ತಿಯ ಮೇಲೆ ಏಕಾಏಕಿ ಇಂಥ ಆರೋಪ ಮಾಡಲಾಗುವುದಿಲ್ಲ. ಹಾಗಾಗಿ ದೂರುದಾರ ನೀಡಿದ ಸಾಕ್ಷ್ಯಾಧಾರಗಳನ್ನು ಇಟ್ಟುಕೊಂಡು ತನಿಖೆ ನಡೆಸಬೇಕು, ಒಂದು ವೇಳೆ ಅವಶ್ಯಕತೆ ಬಿದ್ದಿದ್ದೇ ಆದಲ್ಲಿ ಸಮಿತಿಯೊಂದನ್ನು ರಚನೆ ಮಾಡಬಹುದು, ಕಮಿಟಿ ರಚನೆ ಮಾಡಿ ಅದರ ಕಣ್ಗಾವಲಲ್ಲಿ ಪ್ರಕರಣದ ತನಿಖೆ ನಡೆಸಬಹುದು.
ಹೀಗೆ ಪ್ರಕರಣದ ತನಿಖೆ ನಡೆಸಿದರೆ ಯಾವುದೇ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಕಡಿಮೆ, ಪ್ರಕರಣ ತನಿಖೆ ಪಾರದರ್ಶಕವಾಗಿ ಇರುತ್ತದೆ ಹಾಗೂ ಹಳ್ಳ ಹಿಡಿಯದಂತೆ ಕಾಪಾಡಬಹುದು, ಇದರಿಂದ ಪ್ರಕರಣ ತನಿಖೆಯನ್ನ ಒಂದು ತಾರ್ಕಿಕ ಅಂತ್ಯಕ್ಕೆ ತೆಗದುಕೊಂಡು ಹೋಗಬಹುದು ಎನ್ನಲಾಗಿದೆ.
ಒಂದೊಮ್ಮೆ ಈ ರೀತಿ ತನಿಖೆ ನಡೆಸಿ ಆರೋಪ ಸಾಬೀತಾದರೆ ಆರೋಪಿತರಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆಯಾಗುತ್ತದೆ. ಒಂದು ವೇಳೆ ಆರೋಪದಲ್ಲಿ ಹುರುಳಿಲ್ಲ ಎಂದಾದರೆ ಆರೋಪಮುಕ್ತರಾಗುತ್ತಾರೆ. ನಂತರ ತನಿಖಾಧಿಕಾರಿ ಬಿ ರಿಪೂರ್ಟ್ ಸಲ್ಲಿಕೆ ಮಾಡಿ ಪ್ರಕರಣ ಕ್ಲೋಸ್ ಮಾಡುತ್ತಾರೆ.