ಮಡಿಕೇರಿ: ತೋಟದ ಕೆಲಸಕ್ಕೆಂದು ಕಾರ್ಮಿಕರನ್ನು ಕರೆದೊಯ್ಯುವಾಗ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ನಾಪೋಕ್ಲು ಪಾರಾಣೆ ಮುಖ್ಯ ರಸ್ತೆಯ ಬೇತು ಗ್ರಾಮದ ತಿರುವಿನಲ್ಲಿ ಪಿಕ್ಅಪ್ ವಾಹನದ ಚಕ್ರವೊಂದು ಚಲಿಸುತ್ತಿರುವಾಗಲೇ ಕಳಚಿದೆ. ಚಾಲಕನ ಸಮಯಪ್ರಜ್ಞೆಯಿಂದ ಕಾರ್ಮಿಕರು ಪಾರಾಗಿದ್ದಾರೆ. ಭೀಕರ ರಸ್ತೆ ಅಪಘಾತವೊಂದು (Road Accident) ತಪ್ಪಿದಂತಾಗಿದೆ.
ನಾಪೋಕ್ಲು ಸಮೀಪದ ಎಮ್ಮೆಮಾಡು ಕೂರುಳಿ ಗ್ರಾಮದಿಂದ ತೋಟದ ಮಾಲೀಕರೊಬ್ಬರು ಕೆಲಸಕ್ಕೆಂದು ಕಾರ್ಮಿಕರನ್ನು ಪಿಕ್ಅಪ್ ವಾಹನದಲ್ಲಿ ಕರೆದೊಯ್ಯುತ್ತಿದ್ದಾಗ ವಾಹನದ ಆ್ಯಕ್ಸಲ್ ತುಂಡಾದ ಪರಿಣಾಮ ಚಕ್ರ ಕಳಚಿಕೊಂಡುಹೋಗಿದೆ.
ವಾಹನದಲ್ಲಿ ಕಾರ್ಮಿಕರನ್ನು ಇದ್ದಾಗಲೇ ಚಕ್ರ ಕಳಚಿರುವ ದೃಶ್ಯ ನಾಪೋಕ್ಲುವಿನ ಆಟೋ ಚಾಲಕರೊಬ್ಬರ ಮೊಬೈಲ್‌ನಲ್ಲಿ ಸೆರೆಸಿಕ್ಕಿದೆ. ಸುಮಾರು 20 ಮೀಟರ್‌ನಷ್ಟು ದೂರ ಚಲಿಸಿದ ವಾಹನವನ್ನು ಪಲ್ಟಿಯಾಗದಂತೆ ಚಾಲಕ ಸಮಯಪ್ರಜ್ಞೆ ಮೆರೆದು ನಿಯಂತ್ರಿಸಿದ್ದಾನೆ. ಇದರಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ವಾಹನದಲ್ಲಿ ಸಣ್ಣ ಮಕ್ಕಳು ಸೇರಿದಂತೆ 15ಕ್ಕೂ ಅಧಿಕ ಕಾರ್ಮಿಕರಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಾಪೋಕ್ಲು ವ್ಯಾಪ್ತಿಯಲ್ಲಿ ಕಾಫಿ, ಕಾಳುಮೆಣಸು ಕೊಯ್ಲು ಕಾರ್ಯ ಬಿರುಸಿನಿಂದ ಸಾಗುತ್ತಿದ್ದು, ಇದಕ್ಕೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಕಾರ್ಮಿಕರು ಆಗಮಿಸಿದ್ದು, ತೋಟದ ಮಾಲೀಕರು ಹಾಗೂ ಗೂಡ್ಸ್ ವಾಹನ ಸವಾರರು ತಮ್ಮ ವಾಹನಗಳಲ್ಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದಾರೆ. ಗೂಡ್ಸ್ ವಾಹನಗಳಲ್ಲಿ ಜನರನ್ನು ಕರೆದೊಯ್ಯುವುದು ಕಾನೂನು ಬಾಹಿರವಾಗಿದ್ದರೂ ನಿರಂತರವಾಗಿ ಇದು ನಡೆಯುತ್ತಿದೆ.
ಇದನ್ನೂ ಓದಿ: Pathaan Movie: ಪಠಾಣ್‌ಗೆ ಕೊನೆಗೂ ಜಯ; ʻಬೇಷರಮ್ ರಂಗ್ʼ ಹಾಡಿನ ನಿರ್ಬಂಧಕ್ಕೆ ಸಲ್ಲಿಸಿದ್ದ ಅರ್ಜಿ ವಜಾ
ಗೂಡ್ಸ್ ವಾಹನದಲ್ಲಿ ಜನರನ್ನು ಕರೆದೊಯ್ಯುತ್ತಿರುವುದರಿಂದ ಇಂತಹ ಅನಾಹುತಗಳು ಸಂಭವಿಸುವಂತಾಗಿದೆ. ಈ ಹಿಂದೆ ಇದರ ಬಗ್ಗೆ ಪೊಲೀಸ್ ಇಲಾಖೆಯವರಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಪೊಲೀಸರು ಎಚ್ಚೆತ್ತುಕೊಂಡು ಗೂಡ್ಸ್ ವಾಹನಗಳಲ್ಲಿ ಜನರನ್ನು ಕರೆದೊಯ್ಯುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾಪೋಕ್ಲು ವಾಹನ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್ ಮತ್ತು ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.