Site icon Vistara News

FDA SDA Recruitment : ಎಫ್‌ಡಿಎ, ಎಸ್‌ಡಿಎ ನೇಮಕಾತಿಗೆ ಅರ್ಜಿ ಯಾವಾಗ? ಕಾಯುತ್ತಿರುವ ಲಕ್ಷಾಂತರ ಆಕಾಂಕ್ಷಿಗಳು!

FDA SDA Recruitment in Karnataka

ಬೆಂಗಳೂರು: ಸರ್ಕಾರಿ ನೌಕರಿಯ (Government Job) ಕನಸು ಹೊತ್ತ ಲಕ್ಷಾಂತರ ಮಂದಿ ಈಗ ಪ್ರಥಮ ದರ್ಜೆ ಸಹಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ, ಎಫ್‌ಡಿಎ – FDA SDA Recruitment) ಹುದ್ದೆಗಳತ್ತ ಕಣ್ಣಿಟ್ಟಿದ್ದಾರೆ. ಕೆಪಿಎಸ್‌ಸಿ ನೇಮಕಾತಿಗೆ (KPSC Recruitment) ಸಂಬಂಧಪಟ್ಟಂತೆ ಈ ಹುದ್ದೆಗಳಿಗೆ ಯಾವಾಗ ಅರ್ಜಿ ಕರೆಯುತ್ತಾರೆ ಎಂದು ಕಾಯುತ್ತಾ ಕುಳಿತಿದ್ದಾರೆ. ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ನಾಲ್ಕೂವರೆ ವರ್ಷಗಳೇ ಕಳೆದಿವೆ. 2019ರಲ್ಲಿ ಆಹ್ವಾನಿಸಿದ್ದೇ ಕೊನೇ. ಇಲ್ಲಿಯವರೆಗೂ ಹೊಸ ಅಧಿಸೂಚನೆಯನ್ನು (New Notification) ಪ್ರಕಟಿಸಿಲ್ಲ. ಹೀಗಾಗಿ ಈ ಬಾರಿ ಉದ್ಯೋಗಾಂಕ್ಷಿಗಳಲ್ಲಿ ನಿರೀಕ್ಷೆ ನೂರು ಪಟ್ಟು ಹೆಚ್ಚಾಗಿದೆ.

ಸರ್ಕಾರದ ವಿವಿಧ ಇಲಾಖೆಗಳಿಂದ ಸುಮಾರು 150 ಎಫ್‌ಡಿಎ, ಎಸ್‌ಡಿಎ ಹುದ್ದೆಗಳ ನೇಮಕಕ್ಕೆ ಪ್ರಸ್ತಾವನೆ ಬಂದಿವೆ ಎಂದು ಹೇಳಲಾಗಿದೆ. ಆದರೆ, ಇಷ್ಟಕ್ಕೋಸ್ಕರ ಅರ್ಜಿ ಆಹ್ವಾನ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿ ಈಗ ಕೆಪಿಎಸ್‌ಸಿ ಇದೆ. ಕಾರಣ ಕನಿಷ್ಠ 500ರಿಂದ 1 ಸಾವಿರ ಹುದ್ದೆಗಳಿಗಾದರೆ ಅರ್ಜಿ ಆಹ್ವಾನಿಸಿದರೆ ಎಲ್ಲ ರೀತಿಯಲ್ಲಿಯೂ ಸಮಂಜಸವಾಗಲಿದೆ. ಅಂದರೆ, ಎಷ್ಟೇ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಸಲು ಅರ್ಜಿ ಆಹ್ವಾನಿಸಿದರೂ ಸುಮಾರು 5 ಲಕ್ಷ ಅರ್ಜಿಗಳು ಬಂದೇ ಬರುತ್ತವೆ ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಇದಕ್ಕೆ ಪರೀಕ್ಷೆ ನಡೆಸಬೇಕಾದಲ್ಲಿ ಸಿದ್ಧತೆಯನ್ನು ಸಹ ಆ ಮಟ್ಟಿಗೆ ಮಾಡಿಕೊಳ್ಳಬೇಕು. ಹೀಗಾಗಿ ಯಾವೆಲ್ಲ ಇಲಾಖೆಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ. ಅವಶ್ಯಕತೆಗಳು ಇವೆ ಎಂಬ ವಿವರ ಸಹಿತ ಖಾಲಿ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಸ್ತಾವನೆ ಸಲ್ಲಿಸಲು ವಿವಿಧ ಇಲಾಖೆಗಳಿಗೆ ಕೆಪಿಎಸ್‌ಸಿ ಕೋರಿದೆ.

ಎಸ್‌ಡಿಎ, ಎಫ್‌ಡಿಎಗೆ ಏಕೆ ಹೆಚ್ಚು ಆಸಕ್ತಿ?

ಸರ್ಕಾರಿ ನೌಕರಿಯಲ್ಲಿ ಎಸ್‌ಡಿಎ, ಎಫ್‌ಡಿಎ ಹುದ್ದೆಗಳು ಎಂದರೆ ಹೆಚ್ಚಿನವರಿಗೆ ಆಸಕ್ತಿ ಜಾಸ್ತಿ. ಇದಕ್ಕೆ ಕಾರಣ ಇಷ್ಟೇ, ಎಸ್‌ಡಿಎ ಹುದ್ದೆಗೆ ನೇಮಕವಾಗಬೇಕಾದಲ್ಲಿ ಯಾವುದೇ ವಿಭಾಗದಲ್ಲಿ ಪಿಯು ವ್ಯಾಸಂಗ ಮಾಡಿದ್ದರೆ ಸಾಕು. ಅದೇ ಎಫ್‌ಡಿಎ ಹುದ್ದೆಗಾದರೆ ಯಾವುದೇ ಪದವಿಯನ್ನು ಪಡೆದವರೂ ಸಹ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೆ, ಈ ಹುದ್ದೆಗಳಿಗೆ ಇಂಥದ್ದೇ ವಿಷಯ, ಭಾಷೆಯಲ್ಲಿ ವ್ಯಾಸಂಗ ಮಾಡಿರಬೇಕು ಎಂಬ ನಿಯಮವಾಲೀ, ಷರತ್ತುಗಳಾಗಲೀ ಇಲ್ಲ. ಹೀಗಾಗಿ, ಆಯಾ ಹುದ್ದೆಗಳ ಲಕ್ಷಾಂತರ ಆಕಾಂಕ್ಷಿಗಳು ಅರ್ಜಿ ಸಲ್ಲಿಸುತ್ತಾರೆ.

ಎಸ್‌ಡಿಎ ಮತ್ತು ಎಫ್‌ಡಿಎ ಹುದ್ದೆಗಳ ಆಕಾಂಕ್ಷಿಗಳಿಗೆ ನಿರಾಸೆ?

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಸ್‌ಡಿಎ ಮತ್ತು ಎಫ್‌ಡಿಎ ಹುದ್ದೆಗಳನ್ನು ಮುಂದುವರಿಸುವ ಅಗತ್ಯವಿಲ್ಲ. ಹಾಲಿ ಇರುವ ಹುದ್ದೆಗಳನ್ನು ಪುನಾರಚನೆ ಮಾಡಬಹುದು ಅಥವಾ ತಾಂತ್ರಿಕ ಹುದ್ದೆಗಳಿಗೆ ಪರಿವರ್ತಿಸಬಹುದು ಎಂದು ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ನೇತೃತ್ವದ ಆಡಳಿತ ಸುಧಾರಣಾ ಆಯೋಗ ತನ್ನ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಇದರಿಂದ ಈ ಹುದ್ದೆಗಳ ನೇಮಕಾತಿ ಬಗ್ಗೆ ಅಷ್ಟಾಗಿ ಒಲವು ತೋರುವುದು ಬೇಡ ಎಂದು ವರದಿಯಲ್ಲಿ ಉಲ್ಲೇಖಿಸಿದಂತೆ ಆಗಿದೆ. ಒಂದು ವೇಳೆ ಸರ್ಕಾರ ಈ ಶಿಫಾರಸನ್ನು ಗಂಭೀರವಾಗಿ ಪರಿಗಣಿಸಿದರೆ ಲಕ್ಷಾಂತರ ಆಕಾಂಕ್ಷಿಗಳಿಗೆ ನಿರಾಸೆಯಾಗಲಿದೆ.

ಭರವಸೆ ನೀಡಿದ್ದ ಕಾಂಗ್ರೆಸ್‌!

ಎಸ್‌ಡಿಎ, ಎಫ್‌ಡಿಎ ಹುದ್ದೆಗಳಿಗೆ 2019ರಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. 78ಕ್ಕೂ ಹೆಚ್ಚು ಇಲಾಖೆಗಳ 1,050 ಎಫ್‌ಡಿಎ, ಎಸ್‌ಡಿಎ ಹುದ್ದೆಗಳ ನೇಮಕಕ್ಕೆ ಮುಂದಾಗಲಾಗಿತ್ತು. ಆಗ ಇದಕ್ಕೆ ಮೂರೂವರೆ ಲಕ್ಷ ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಬಳಿಕ ಎರಡು ಬಾರಿ ಸರ್ಕಾರ ಬದಲಾಯಿತು. ಆದರೆ, ಈ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನಿಸಿಲ್ಲ.

ಇದನ್ನೂ ಓದಿ: HSRP Number Plate : ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಹಾಕಿಸಿಲ್ವಾ? ಕೂಡಲೇ ಈ ಕೆಲಸ ಮಾಡಿ!

ನಾವು ಅಧಿಕಾರಕ್ಕೆ ಬಂದರೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಲಕ್ಷಾಂತರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿತ್ತು. ಹೀಗಾಗಿ ಈಗ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಿದೆ ಎಂಬ ನಿರೀಕ್ಷೆಯಲ್ಲಿ ಉದ್ಯೋಗಾಕಾಂಕ್ಷಿಗಳು ಇದ್ದಾರೆ.

Exit mobile version