ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ (Congress Guarantee Scheme) ಒಂದಾಗಿರುವ ಗೃಹ ಲಕ್ಷ್ಮಿ ಯೋಜನೆ (Gruha lakshmi scheme)ಯ ನೋಂದಣಿ ಭರ್ಜರಿ ಯಶಸ್ಸು ಪಡೆಯುತ್ತಿದೆ. ಸರ್ಕಾರದ ಲೆಕ್ಕಾಚಾರದ ಪ್ರಕಾರ ನೋಂದಣಿಯಾಗಬೇಕಾದ ಒಟ್ಟು ಯಜಮಾನಿಯರ ಸಂಖ್ಯೆ 1.28 ಕೋಟಿ. ಕಳೆದ ಜುಲೈ 20ರಿಂದ ಈ ಯೋಜನೆಗೆ ಚಾಲನೆ ನೀಡಲಾಗಿದ್ದು, ಬುಧವಾರದವರೆಗೆ ಯೋಜನೆಗೆ 3,83,505 ಮಹಿಳೆಯರಿಂದ ನೋಂದಣಿ ಮಾಡಿಸಿಕೊಂಡಿದ್ದಾರೆ. ಇದುವರೆಗೆ ಒಟ್ಟಾರೆಯಾಗಿ 94,64,914 ಮಹಿಳೆಯರಿಂದ ಅರ್ಜಿ ಸಲ್ಲಿಕೆಯಾಗಿದೆ. ಹಾಗಾದರೆ, 2 ಸಾವಿರ ರೂಪಾಯಿ ಯಾವ ಖಾತೆಗೆ ಬರಲಿದೆ ಎಂಬ ಕಾತುರತೆ ಇದ್ದೇ ಇದೆ. ಇದು ಸೇರಿದಂತೆ ಹಲವಾರು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ನೋಂದಣಿಗೆ ಕೊನೇ ದಿನಾಂಕ ಇದೆಯೇ?
ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಲು ಯಾವುದೇ ಕಾಲ ಮಿತಿಯನ್ನು ಈವರೆಗೆ ನಿಗದಿ ಮಾಡಿಲ್ಲ. ಇದಕ್ಕೆ ಯಾವಾಗ ಬೇಕಾದರೂ ನೀವು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಆದರೆ, ನೋಂದಣಿ ವಿಳಂಬ ಆದಷ್ಟು ನಿಮಗೆ ಹಣ ಬರುವುದು ಸಹ ವಿಳಂಬವಾಗುತ್ತಾ ಹೋಗುತ್ತದೆ. ಅಲ್ಲದೆ, ಈಗ ನೋಂದಣಿ ಪ್ರಕ್ರಿಯೆಯನ್ನು ಸಹ ಸರಳಗೊಳಿಸಲಾಗಿದೆ.
ಇದನ್ನೂ ಓದಿ: Job News : ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಉಪನ್ಯಾಸಕರ ಹುದ್ದೆ; 21 ವಿಭಾಗಗಳಿಗೆ ಅರ್ಜಿ ಆಹ್ವಾನ
ಎಲ್ಲಿ ನೋಂದಣಿ ಮಾಡಲಾಗುತ್ತದೆ? ಮೊಬೈಲ್‌ನಲ್ಲಿ ಮಾಡಬಹುದೇ?
ಈ ಯೋಜನೆ ಬಗ್ಗೆ ಕೆಲವರಿಗೆ ಇನ್ನೂ ಸಮರ್ಪಕ ಮಾಹಿತಿ ಸಿಕ್ಕಿಲ್ಲ. ಗೃಹ ಜ್ಯೋತಿಯಂತೆ ಮೊಬೈಲ್‌ನಲ್ಲೇ ತಾವೇ ಸ್ವತಃ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ ಎಂದು ಭಾವಿಸಿದವರು ಸಹ ಇದ್ದಾರೆ. ಆದರೆ, ಖಂಡಿತವಾಗಿಯೂ ನಿಮ್ಮ ಮೊಬೈಲ್‌ನಲ್ಲಿ ನೋಂದಣಿ ಸಾಧ್ಯವಿಲ್ಲ. ಇದಕ್ಕಾಗಿ ನೀವು ಸಮೀಪದ ಗಾಮ ಒನ್, ಬಾಪೂಜಿ ಕೇಂದ್ರ, ಬೆಂಗಳೂರು ಒನ್, ಕರ್ನಾಟಕ ಒನ್ ಈ ಕೇಂದ್ರಗಳಿಗೆ ಹೋಗಬೇಕು. ಈ ಮೊದಲು ಮೊಬೈಲ್ ಸಂಖ್ಯೆ ಮೂಲಕ ನೋಂದಾಯಿಸಿಕೊಳ್ಳಬೇಕಿತ್ತು. ಅದರಲ್ಲಿ ಬರುವ ಸಮಯ, ದಿನಾಂಕ ಹಾಗೂ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕಿತ್ತು. ಆದರೆ, ಈಗ ಇದನ್ನು ಸರಳೀಕರಿಸಲಾಗಿದೆ.
ಸರಳೀಕೃತ ವಿಧಾನ ಹೇಗಿದೆ?
ಹೊಸ ವಿಧಾನದಡಿ ನೀವು ಅರ್ಜಿ ಸಲ್ಲಿಕೆ ಕೇಂದ್ರಕ್ಕೆ ಹೋಗುವ ಮೊದಲು ಸಹಾಯವಾಣಿಗೆ ಮೆಸೇಜ್ ಮಾಡಬೇಕಾಗಿಲ್ಲ. ಸ್ಲಾಟ್ ಬುಕ್ ಮಾಡಬೇಕಾಗಿಲ್ಲ. ನೇರವಾಗಿ ಸಂಬಂಧಿತ ದಾಖಲೆಗಳನ್ನು ಹಿಡಿದುಕೊಂಡು ನೋಂದಣಿ ಕೇಂದ್ರಕ್ಕೆ ಹೋದರೆ ಅಲ್ಲೇ ದಾಖಲಾತಿ ನೋಂದಣಿ ಮಾಡಿಕೊಳ್ಳಲಾಗುತ್ತದೆ.
ಏನು ದಾಖಲಾತಿ ಬೇಕು?
ಮಹಿಳೆಯರು ತಮ್ಮ ಪಡಿತರ ಚೀಟಿ, ಆಧಾರ್ ಕಾರ್ಡ್‌ನಲ್ಲಿ ಲಿಂಕ್ ಆಗಿರುವ ಮೊಬೈಲ್, ಆಧಾರ್ ಕಾರ್ಡ್ ಅನ್ನು ಹಿಡಿದುಕೊಂಡು ನೇರವಾಗಿ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಿಗೆ ಹೋಗಬಹುದು. ಅಲ್ಲಿ ಯಾವುದೇ ಒತ್ತಡಕ್ಕೆ ಅವಕಾಶವಿಲ್ಲದಂತೆ ನೋಂದಣಿ ಮಾಡಿಕೊಳ್ಳಬಹುದು.
ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ ಲಿಂಕ್ ಆಗದಿದ್ದರೆ?
ಈ ಆತಂಕ ಬಹಳಷ್ಟು ಮಂದಿಗೆ ಕಾಡಿದ್ದಿದೆ. ನಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ ಲಿಂಕ್ ಆಗದೆ ಇದ್ದರೆ ಏನು ಮಾಡುವುದು ಎಂಬ ಪ್ರಶ್ನೆ ಕಾಡಿದ್ದಿದೆ. ಅಥವಾ ಆಗಿದ್ದರೂ ಅ ಅಕೌಂಟ್‌ಗೆ ಬೇಡ ಬೇರೆ ಖಾತೆಗೆ ಹಣ ಬರಲಿ ಎಂದೇನಾದರೂ ಇದ್ದರೆ ಏನು ಮಾಡಬೇಕು? ಅದಕ್ಕೆ ಇಲಾಖೆಗೆ ಅಲೆಯಬೇಕೇ ಎಂದು ಕೇಳುವವರೂ ಇದ್ದಾರೆ. ಹೀಗಾಗಿ ಕೊನೆಗೆ ನೋಡಿಕೊಂಡರಾಯಿತು ಎಂದು ಸುಮ್ಮನಾದವರೂ ಇದ್ದಾರೆ. ಆದರೆ, ಇದಕ್ಕೆ ಹೆಚ್ಚಿಗೆ ತಲೆಕೆಡಿಸಿಕೊಳ್ಳುವುದು ಬೇಡ. ಬದಲಿ ಅಕೌಂಟ್‌ಗೆ ಸಂಬಂಧಿಸಿದ ಪಾಸ್ ಬುಕ್ ದಾಖಲೆಯನ್ನು ಹಿಡಿದುಕೊಂಡೇ ಕೇಂದ್ರಕ್ಕೆ ಹೋದರೆ ಸಾಕು. ಅಲ್ಲಿ ನಿಮ್ಮ ಖಾತೆಗೆ ಲಿಂಕ್ ಮಾಡಿ ನೋಂದಣಿ ಮಾಡಿ ಕೊಡಲಾಗುತ್ತದೆ.
ಪ್ರಜಾಪ್ರತಿನಿಧಿಗಳು ಸಹ ಇದ್ದಾರೆ!
ಇನ್ನು ಕೆಲವು ಮಹಿಳೆಯರು ಮೇಲೆ ಸೂಚಿಸಲಾದ ಕೇಂದ್ರಗಳಿಗೆ ನೋಂದಣಿ ಮಾಡಿಸಿಕೊಳ್ಳಲು ಹೋಗಲಾಗದ ಪರಿಸ್ಥಿತಿಯಲ್ಲಿ ಇರುತ್ತದೆ. ಅಂಥವರಿಗಾಗಿ ಸರ್ಕಾರ ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡಿದೆ. ಪ್ರತಿ ಸಾವಿರ ಜನಸಂಖ್ಯೆಗೆ ಇಬ್ಬರು ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡಲಾಗಿದೆ. ಇವರು ಪ್ರತಿ ಮನೆಗಳಿಗೆ ಭೇಟಿ ನೀಡಿ ಗೃಹಲಕ್ಷ್ಮಿಗೆ ನೋಂದಣಿ ಮಾಡಿಕೊಡಲಿದ್ದಾರೆ.
ಸಮಸ್ಯೆಯಾದರೆ, ಹಣ ಬಾರದಿದ್ದರೆ ಇಲ್ಲಿ ದೂರು ಕೊಡಿ
ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲಾಗಿದೆ. ಯೋಜನೆ ಜಾರಿಯಾಗುತ್ತಿದ್ದಂತೆ ನಿಮಗೆ ಪರಿಚಯದವರ ಖಾತೆಗೆ ಹಣ ಜಮಾವಣೆ ಆಗಿದೆ. ಆದರೆ, ನಿಮ್ಮ ಖಾತೆಗೆ ಹಣ ಬಂದಿಲ್ಲ ಎಂದಾದರೆ ಮೊದಲು ನೋಂದಣಿ ಸರಿಯಾಗಿದೆಯೇ ಎಂಬುದನ್ನು ನೋಡಿಕೊಳ್ಳಬೇಕು. ಇಲ್ಲವೇ ನಿಮ್ಮ ಪತಿ ಜಿಎಸ್‌ಟಿ ಇಲ್ಲವೇ ಆದಾಯ ತೆರಿಗೆ ಕಟ್ಟಿದ್ದಾರೆಯೇ ಎಂದು ನೋಡಬೇಕು. ಎಲ್ಲವೂ ಸರಿಯಾಗಿದ್ದರೆ ದೂರು ನೀಡಬಹುದು. ಇದಲ್ಲದೆ, ನೋಂದಣಿ ವೇಳೆ ಯಾರಾದರೂ ದುಡ್ಡು ಕೇಳಿದರೆ, ಅನಗತ್ಯ ಕಿರಿಕಿರಿ ಮಾಡಿದರೆ ಸಹ 1902 ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದಾಗಿದೆ.
ನಿಮ್ಮ ಖಾತೆಗೆ ಹಣ ಬರುವುದು ಯಾವಾಗ?
ಮನೆಯ ಯಜಮಾನಿಗೆ ಮಾಸಿಕವಾಗಿ 2 ಸಾವಿರ ರೂಪಾಯಿಯನ್ನು ಕೊಡುವ ಯೋಜನೆ ಇದಾಗಿದೆ. ಈ ಮೂಲಕ ಸತತ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಕುಟುಂಬಗಳಿಗೆ ಆರ್ಥಿಕ ಧೈರ್ಯ ಹೇಳುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಒಟ್ಟು 94,64,914 ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ. ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ಪ್ರಕಾರ, ಆಗಸ್ಟ್ 15 ಅಥವಾ 16 ರಂದು ಮಹಿಳೆಯರ ಖಾತೆಗೆ ಹಣ ಜಮೆಯಾಗಲಿದೆ.
ಇದನ್ನೂ ಓದಿ: Gruha jyothi Scheme : ಗೃಹಜ್ಯೋತಿ ಬಿಲ್ ಬಂತಾ? ಅಪ್ಲೈ ಮಾಡಿಲ್ವಾ? ಫ್ರೀ ಬೇಕಿದ್ದರೆ ಹೀಗೆ ಮಾಡಿ!
ಈ ವರ್ಷ ಸರ್ಕಾರಕ್ಕೆ ಎಷ್ಟು ಖರ್ಚು?
ಆಗಸ್ಟ್‌ನಿಂದಲೇ ಮನೆ ಯಜಮಾನಿ ಖಾತೆಗೆ ಹಣ ಹಾಕುವುದರಿಂದ ಈ ವರ್ಷ ಗೃಹಲಕ್ಷ್ಮಿ ಯೋಜನೆಯಿಂದ ಸರ್ಕಾರಕ್ಕೆ 17,500 ಕೋಟಿ ರೂಪಾಯಿ ಖರ್ಚು ಬರುತ್ತದೆ. ಮುಂದಿನ ವರ್ಷದಿಂದ ಇದು 30 ಸಾವಿರ ಕೋಟಿ ರೂಪಾಯಿ ಮೇಲ್ಪಟ್ಟು ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ.