Site icon Vistara News

Basavaraja Bommai: ಸಚಿವರು ರೇಟ್ ಫಿಕ್ಸ್ ಮಾಡ್ತಿದ್ದಾರೆ, ಈಗೆಲ್ಲಿದ್ದೀರಿ ಕೆಂಪಣ್ಣ; ಬಸವರಾಜ ಬೊಮ್ಮಾಯಿ ಪ್ರಶ್ನೆ

Basavaraja Bommai

#image_title

ಬೆಂಗಳೂರು: ʻʻಹಿಂದಿನ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಜೊತೆ ಸೇರಿಕೊಂಡು ಆರೋಪ ಮಾಡುತ್ತಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (Kempanna) ಈಗೆಲ್ಲಿದ್ದಾರೆ? ಸಚಿವರುಗಳು ಈಗ ರೇಟ್ ಫಿಕ್ಸ್ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಸರ್ಕಾರದ ಮೇಲೆ ಆರೋಪ ಮಾಡಿದವರು. ಈಗ ಎಲ್ಲಿದ್ದಾರೆʼʼ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಪ್ರಶ್ನಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕೆಂಪಣ್ಣ ಅವರು ಈಗಿನ ಸರ್ಕಾರದ ಯಾವ ವಿಚಾರವನ್ನೂ ಮಾತನಾಡುತ್ತಿಲ್ಲ ಎಂದರು. ಆದರೆ, ಯಾವ ಸಚಿವರು, ಎಷ್ಟು ರೇಟು ಎಂಬ ವಿವರವನ್ನು ಅವರು ನೀಡಲಿಲ್ಲ.

ರಾಜಕೀಯ ಪ್ರೇರಿತ ಪ್ರತಿಭಟನೆ ಎಂದ ಬೊಮ್ಮಾಯಿ

ʻʻಕಾಂಗ್ರೆಸ್ ಸರ್ಕಾರ ಅಕ್ಕಿ ನೀಡಲು ಪೂರ್ವ ಸಿದ್ದತೆ ಮಾಡಿಕೊಳ್ಳದೇ ಈಗ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ರಾಜ್ಯಸರ್ಕಾರ ಕೇಂದ್ರ ಸರ್ಕಾರದ ವಿರುದ್ದ ರಾಜಕೀಯ ಪ್ರೇರಿತ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ‌ ಬಂದ ದಿನದಿಂದ ಗೊಂದಲದ ಗೂಡಾಗಿದೆ. ಉಚಿತ ಬಸ್ ಪ್ರಯಾಣ ಗ್ಯಾರಂಟಿ ಯೋಜನೆ ಅದ್ವಾನ ಆಗಿದೆ. ಸರಿಯಾಗಿ‌ ಬಸ್ ಗಳ ವ್ಯವಸ್ಥೆ ಮಾಡದೇ ಫ್ರೀ ಬಸ್ ಯೋಜನೆ ಅಂದರೆ ಹೇಗೆ?
ಸರಿಯಾದ ಬಸ್ ಸೇವೆ ಒದಗಿಸದೇ ಇರುವುದರಿಂದ ಸಾರ್ವಜನಿಕರು ಬಾಯಿಗೆ ಬಂದಹಾಗೆ ಬೈತಾರಂತೆ, ಕೆಲಸ ಮಾಡಲು ಆಗುತ್ತಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ ಎಂದರು.

ʻʻಹತ್ತು ಕೆಜಿ ಅಕ್ಕಿ ನೀಡುವ ವಿಚಾರದಲ್ಲೂ ಮುಂಚೆಯೇ ವ್ಯವಸ್ಥೆ ಮಾಡಿಕೊಳ್ಳದೇ ಈಗ ಕೇಂದ್ರದ ಮೇಲೆ‌ ಗೂಬೆ ಕೂರಿಸುತ್ತಿದ್ದಾರೆ. ಸರ್ಕಾರ‌ ನಡೆಸುವವರು ಕೊಟ್ಟ ಮಾತಿನಂತೆ‌ ನಡೆಸುಕೊಳ್ಳಲು ಆಗುತ್ತಿಲ್ಲ. ಅಕ್ಕಿಯನ್ನು ಕೇವಲ ಎಫ್ ಸಿ ಐ‌ನಿಂದಲೇ ತರಬೇಕು ಅಂತಾ ಇಲ್ಲ. ಬೇರೆ ಎಜೆನ್ಸಿಗಳು ಇವೆ. ಯಾವುದನ್ನು ಸಿದ್ಧತೆ ಮಾಡಿಕೊಳದೇ ಪ್ರತಿಭಟನೆ ‌ಮಾಡುತ್ತಿದಾರೆ. ಇವರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವ ಯೋಗ್ಯತೆ ಇಲ್ಲ ಎಂದು ಜನರು ಉಗಿಯುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಹಲವಾರು ಸಚಿವರು ಹಿಂದಿನ ಅವಧಿಯ‌ ಕಾಮಗಾರಿ, ಮನೆ ನಿರ್ಮಾಣ ಎಲ್ಲವನ್ನೂ‌ ನಿಲ್ಲಿಸಿದ್ದಾರೆ. ಸರ್ಕಾರ ಬಂದು ತಿಂಗಳು ಕಳೆದರೂ ಸಚಿವರು ತಮ್ಮ ಇಲಾಖೆಗಳ ಮಾತನಾಡುತ್ತಿಲ್ಲ. ಇನ್ನು ಮಳೆಗಾಲ ಆರಂಭವಾಗುತ್ತದೆ. ಯಾವುದೇ ಕಾಮಗಾರಿ ನಡೆಯುವುದಿಲ್ಲ. ಇಡೀ‌ ಒಂದು ವರ್ಷದ ಕಾರ್ಯಕ್ರಮಗಳನ್ನ ಅಲ್ಲೋಲ‌ಕಲ್ಲೋಲ ಮಾಡುತ್ತಿದ್ದಾರೆ.

ಐದು ವರ್ಷ ಅನುಮಾನ

ಸಚಿವ‌ ಸಂಪುಟದ ಸದಸ್ಯರಿಗೆ ‌ಈ ಸರ್ಕಾರ 5 ವರ್ಷ ಇರುವುದು ಅನುಮಾನವಿದೆ. ಸಚಿವರುಗಳೇ ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷ ಇರುತ್ತಾರೆ ಎಂದು ಅನುಮಾನದಿಂದ ಮಾತನಾಡುತ್ತಿದ್ದಾರೆ. ಹಲ್ಲು ನೋವು ಬಂದು ಅಲುಗಾಡುತ್ತಿದ್ದರೆ, ಅದನ್ನು ಮತ್ತಷ್ಟು ಅಲುಗಾಡಿಸಿ ಸಡಿಲು ಮಾಡಿ ಹಲ್ಲು ಕಿತ್ತು ಹೋಗುವಂತೆ ಆಂತರಿಕವಾಗಿ ಸರ್ಕಾರದ ಒಳಗಿರುವ ಬೇಗುದಿಯಿಂದ ಅವರಿಗೆ ಈ ಸರ್ಕಾರ ಐದು ವರ್ಷ ಪೂರೈಸುವುದಿಲ್ಲ ಎನ್ನುವುದು ಖಾತ್ರಿಯಾದಂತಿದೆ ಎಂದು ಹೇಳಿದರು.

ಇದನ್ನೂ ಓದಿ : Karnataka Politics : ಸಿದ್ದರಾಮಯ್ಯ ಟೀಮ್‌ ಡಿಕೆಶಿಯನ್ನು ಸನ್ಯಾಸಿ ಮಾಡಬಹುದೇ?: ಆರ್ ಅಶೋಕ್‌ ಗೇಲಿ

Exit mobile version