Site icon Vistara News

Karnataka Politics : ಸರ್ಕಾರದಲ್ಲಿ ಅನುದಾನ ಎಲ್ಲಿದೆ? ಕಾಂಗ್ರೆಸ್‌ ಶಾಸಕರಿಗೆ ಡಿಕೆಶಿ ತಿರುಗೇಟು!

DCM DK Shivakumar and CM Siddaramaiah

ಬೆಂಗಳೂರು: ಈಗ ರಾಜ್ಯ ರಾಜಕಾರಣದಲ್ಲಿ (Karnataka Politics) ಭಾರಿ ಚಟುವಟಿಕೆ ನಡೆಯುತ್ತಿದೆ. ಅಲ್ಲದೆ, ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆ ಪಕ್ಷದ ಶಾಸಕರೇ ವರ್ಗಾವಣೆ ಭ್ರಷ್ಟಾಚಾರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ದೂರು ನೀಡಿದ್ದಾರೆ. ಜತೆಗೆ ತಮಗೆ ಇಲಾಖೆಗಳಿಂದ ಅನುದಾನವನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ. ಈಗ ಇದಕ್ಕೆ ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DMC DK Shivakumar) ಪ್ರತಿಕ್ರಿಯೆ ನೀಡಿದ್ದು, ಅನುದಾನವನ್ನು ಬಿಡುಗಡೆ ಮಾಡಲು ಸರ್ಕಾರದಲ್ಲಿ ಎಲ್ಲಿದೆ? ಎಂದು ಪ್ರಶ್ನೆ ಮಾಡುವ ಮೂಲಕ ಆರೋಪ ಮಾಡಿರುವ ಸ್ವಪಕ್ಷೀಯ ಶಾಸಕರಿಗೆ ತಿರುಗೇಟು ನೀಡಿದ್ದಾರೆ.

ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ಐದು ಗ್ಯಾರಂಟಿಗಳ (Congress Guarantee Scheme) ಜಾರಿಯನ್ನು ಮಾಡುವ ಸವಾಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರು ಇತ್ತು. ಈ ಬಜೆಟ್‌ನಲ್ಲಿ‌ ಅನುದಾನ (Budgetary allocation) ಕಡಿಮೆಯಾಗಿದೆ. ಗ್ಯಾರಂಟಿಗಳ ಜಾರಿ ಮಾಡಬೇಕಿದೆ. ಇದಕ್ಕೆ ಅನುದಾನವನ್ನು ಹೊಂದಿಸಬೇಕಿದೆ ಎಂದು ತಿಳಿಸಿದರು.

ಯಾವ ಇಲಾಖೆಯಲ್ಲೂ ದುಡ್ಡಿಲ್ಲ

ನನ್ನ ಇಲಾಖೆಯಲ್ಲಿ ಸಣ್ಣ ಕೆಲಸ ಮಾಡಲೂ ಆಗುತ್ತಿಲ್ಲ. 1.25 ಲಕ್ಷ ಕೋಟಿ ರೂಪಾಯಿಯ ಕೆಲಸ ನಡೆಯುತ್ತಿದೆ. ಸಂಬಳ, ಸಾಲ ಎಲ್ಲವನ್ನೂ ಕೊಡಬೇಕು. ಕಾಮಗಾರಿಯನ್ನು ನಾವು ಮಂಜೂರಾತಿ ಮಾಡಬಹುದು. ಅದಕ್ಕೆ ಹಣ ಕೊಡಬೇಕಲ್ಲವೇ? 16 ಸಾವಿರ ಕೋಟಿ ರೂಪಾಯಿ ಬಿಲ್ ನನ್ನ ಹತ್ತಿರ ಇದೆ. ಆದರೆ 1200 ಕೋಟಿ ರೂಪಾಯಿ ಮಾತ್ರವೇ ಹಣ ಇದೆ. ಇದನ್ನು ಯಾರಿಗೆ ಕೊಡಲಿ? ಎಲ್ಲ ಸಚಿವರಿಗೆ ಇದೇ ರೀತಿಯ ಸಮಸ್ಯೆ ಇದೆ ಎಂದು ಡಿ.ಕೆ. ಶಿವಕುಮಾರ್‌ ಸಮಜಾಯಿಷಿ ನೀಡಿದರು.

ಆ ಪತ್ರವೇ ನಕಲಿ ಎಂದ ಡಿಕೆಶಿ

ಗ್ಯಾರಂಟಿ ಯೋಜನೆ ಅನುಷ್ಠಾನ ಬಳಿಕ ಸಭೆ ಕರೆಯುತ್ತೇವೆ ಎಂದು ಹೇಳಿದ್ದೆವು. ರಾಷ್ಟ್ರೀಯ ನಾಯಕರು ಸಹ ಆ ವೇಳೆ ಇದ್ದರು. ಈಗ ಹರಿದಾಡುತ್ತಿರುವ ಪತ್ರವು ನಕಲಿಯಾಗಿದೆ. ಅದರಲ್ಲಿ ಇರುವ ಅಂಶಗಳನ್ನು ಕಟ್ ಪೇಸ್ಟ್ ಮಾಡಲಾಗಿದೆ. ಅವರು ಕೇವಲ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ (Legislative Party Meeting) ಮಾಡಲು ಮಾತ್ರ ಪತ್ರ ಬರೆದಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಪತ್ರದ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಯಾರದ್ದೋ ಲೆಟರ್ ಪ್ಯಾಡ್‌ ತೆಗೆದು ಟೈಪ್‌ ಮಾಡಿದ್ದಾರೆ. ಅದು ಏನು ಮಾಡಿದ್ದಾರೆ ಎಂದು ಪರಿಶೀಲಿಸುತ್ತೇವೆ. ನಾನು ಶಾಸಕರಿಗೆ ಟೈಮ್ ಫಿಕ್ಸ್ ಮಾಡುತ್ತೇವೆ. ಪ್ರತ್ಯೇಕ ಸಭೆ ಕರೆದು ಚರ್ಚೆ ಮಾಡುತ್ತೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಇದನ್ನೂ ಓದಿ: Karnataka Politics : ಸರ್ಕಾರದ ವರ್ಗಾವಣೆ ದಂಧೆ! ಕೈ ಶಾಸಕರೇ ಗರಂ; ಪ್ರಿಯಾಂಕ್‌ ಖರ್ಗೆ ವಿರುದ್ಧ ಸಿಟ್ಟೇ?

ಪೊಲೀಸ್ ವರ್ಗಾವಣೆಯನ್ನು ನಾವು ಹೇಳಿದ ಹಾಗೆ ಮಾಡಲು ಆಗಲ್ಲ. ಅದಕ್ಕೆ ಕಾನೂನು ಇದೆ. ಬೇಕಾದಂತೆ ಮಾಡಿದರೆ ಕೋರ್ಟ್‌ಗೆ ಹೋಗುತ್ತಾರೆ. ನಾನು ವರ್ಗಾವಣೆಯನ್ನೇ ಮಾಡಿಲ್ಲ. ನಮ್ಮ ಇಲಾಖೆಯಲ್ಲಿ ದುಡ್ಡು ಇಲ್ಲ ಅಂತ ಬೇರೆ ಇಲಾಖೆಗೆ ಹೋಗುತ್ತಿದ್ದಾರೆ. ಕೆಲವು ರಾಜಕೀಯ ಇರುತ್ತವೆ. ಅದಕ್ಕೆಲ್ಲ ಮಧ್ಯಪ್ರವೇಶ ಮಾಡಲು ಆಗಲ್ಲ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

Exit mobile version