Site icon Vistara News

Karnataka Election 2023: ಕಾಂಗ್ರೆಸ್‌ ಟಿಕೆಟ್ ಪಡೆದಾಗ ನಿಮ್ಮ ಗಂಡಸ್ತನ ಎಲ್ಲಿತ್ತು?; ಆನಂದ್‌ ಸಿಂಗ್‌ಗೆ ಶೈಲಜಾ ಹಿರೇಮಠ ಪ್ರಶ್ನೆ

Where was your manhood when you got congress ticket Shailaja Hiremath questions Anand Singh Karnataka Election 2023 updates

ಗಂಗಾವತಿ (ಕೊಪ್ಪಳ): ವಿಧಾನಸಭೆ ಚುನಾವಣೆ (Karnataka Election 2023) ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ನಾಯಕರ ವಾಕ್ಸಮರಗಳು ತಾರಕಕ್ಕೇರಿವೆ. ಪಕ್ಷವಾರು, ವ್ಯಕ್ತಿವಾರು ತೀವ್ರ ವಾಗ್ದಾಳಿಗಳು ನಡೆಯುತ್ತಿವೆ. ಈ ಮಧ್ಯೆ ಕಾಂಗ್ರೆಸ್‌ ವಿರುದ್ಧ ಸಚಿವ ಆನಂದ್‌ ಸಿಂಗ್‌ (Anand singh) ನೀಡಿದ್ದ ಹೇಳಿಕೆಗೆ ಕೆಪಿಸಿಸಿ ವಕ್ತಾರೆ ಶೈಲಜಾ ಹಿರೇಮಠ ತಿರುಗೇಟು ನೀಡಿದ್ದು, “ನೀವು ಕಾಂಗ್ರೆಸ್‌ ಟಿಕೆಟ್ ಪಡೆದಾಗ ನಿಮ್ಮ ಗಂಡಸ್ತನ ಎಲ್ಲಿತ್ತು? ಎಂದು ಪ್ರಶ್ನಿಸಿದ್ದಾರೆ.

ಗಂಗಾವತಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶೈಲಜಾ ಹಿರೇಮಠ, ವೈಯಕ್ತಿಕ ನಿಂದನೆಯ ಬದಲಿಗೆ ಅಭಿವೃದ್ಧಿ ವಿಚಾರಗಳನ್ನು ಜನರ ಮುಂದಕ್ಕೆ ಕೊಂಡೊಯ್ಯಬೇಕು ಎಂದು ಸಚಿವ ಆನಂದ್ ಸಿಂಗ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಬಿಜೆಪಿಯ ಸ್ಥಳೀಯ ಮುಖಂಡರಿಂದ ಹಿಡಿದು ರಾಜ್ಯ, ರಾಷ್ಟ್ರಮಟ್ಟದ ನಾಯಕರು ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಜನರ ಬಳಿಗೆ ಹೋಗುತ್ತಿಲ್ಲ. ಬದಲಿಗೆ ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪ ಮಾಡುವ ಮೂಲಕ ಮತ್ತು ಅಸಂವಿಧಾನಿಕ ಪದಗಳನ್ನು ಬಳಸುವ ತೇಜೋವಧೆ ಮಾಡುವ ಕೀಳುಮಟ್ಟಕ್ಕೆ ಇಳಿದಿದ್ದಾರೆ. ಗಂಡಸ್ತನ ಎಂಬ ಪದ ಬಳಕೆಯೇ ಆಕ್ಷೇಪಾರ್ಹವಾಗಿದೆ. ಮಹಿಳೆ ಮತ್ತು ಪುರುಷರನ್ನು ಮಾನ ಕಳೆಯುವ ಕೆಲಸ ಬಿಜೆಪಿಯಿಂದ ನಡೆಯುತ್ತಿದೆ ಎಂದು ಆರೋಪಿಸಿದರು.

ಎರಡು ಬಾರಿ ರಾಜ್ಯದಲ್ಲಿ ಅಧಿಕಾರ ಮಾಡಿರುವ ಬಿಜೆಪಿ ನೇರವಾಗಿ ಜನಬೆಂಬಲದಿಂದ ಅಧಿಕಾರ ನಡೆಸಿಲ್ಲ. ಬದಲಿಗೆ ಆಪರೇಷನ್ ಕಮಲ ಮತ್ತು ಬೇರೆ ಪಕ್ಷದ ಸಹಯೋಗದೊಂದಿಗೆ ರಾಜ್ಯಭಾರ ಮಾಡಿದ್ದಾರೆ. ಕಳೆದ ಬಾರಿ 17 ಜನ ಜೆಡಿಎಸ್-ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋಗಿ ಅಧಿಕಾರ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಅನೈತಿಕವಾಗಿ ಅಧಿಕಾರಕ್ಕೆ ಬಂದು 40ರಷ್ಟು ಪರ್ಸೆಂಟೇಜ್ ಮೂಲಕ ಇಡೀ ರಾಜ್ಯದ ಮಾನವನ್ನು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಮಾಡಿದೆ. ಇಂತಹ ಪಕ್ಷದ ನಾಯಕರು ಜನರಿಗೆ ಏನು ಸಂದೇಶ ನೀಡುತ್ತಿದ್ದಾರೆ ಎಂದು ಶೈಲಜಾ ಪ್ರಶ್ನಿಸಿದರು.

ನೀವು 2018ರಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿ ಫಾರಂ ಪಡೆದು ಗೆದ್ದಿದ್ದೀರಿ. ಹಾಗಾದರೆ ಅಂದು ನಿಮಗೂ ಗಂಡಸ್ತನ ಇರಲಿಲ್ಲವೇ? ಎಂದು ಆನಂದ್ ಸಿಂಗ್ ಅವರನ್ನು ಪ್ರಶ್ನಿಸಿದ ಶೈಲಜಾ, ನೀವು ವೇದಿಕೆಗಳಲ್ಲಿ ಮಾತನಾಡುವ ಮುನ್ನ ನಿಮ್ಮನ್ನು ನೀವು ಪ್ರಶ್ನೆ ಮಾಡಿಕೊಳ್ಳಿ ಎಂದರು.

ಆನಂದ್‌ ಸಿಂಗ್‌ ಹೇಳಿದ್ದೇನು?

ಗಂಗಾವತಿ ತಾಲೂಕಿನ ಮರಳಿ ಬಳಿಯ ಖಾಸಗಿ ಹೋಟೆಲ್‌ನಲ್ಲಿ ನಡೆದಿದ್ದ ಬಿಜೆಪಿ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನದಲ್ಲಿ ಮಾತನಾಡಿದ್ದ ಸಚಿವ ಆನಂದ್‌ ಸಿಂಗ್‌, ಕಾಂಗ್ರೆಸ್‌ಗೆ ಗುಂಡಿಗೆಯೇ ಇಲ್ಲ, ಇನ್ನು ಗಂಡಸ್ತನ ಎಲ್ಲಿ ಬರುತ್ತೆ? ಎಂದು ಪ್ರಶ್ನಿಸುವ ಮೂಲಕ ವಿವಾದಿತ ಹೇಳಿಕೆ ನೀಡಿದ್ದರು.

ದೇಶದ ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಕಥೆ ಮುಗಿದು ಹೋಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಂತ್ಯಗೊಳಿಸಬೇಕಾಗಿದೆ. ಇಡೀ ದಕ್ಷಿಣ ಭಾರತದಲ್ಲಿ ಬಿಜೆಪಿ ಬಾವುಟ ಹಾರಲಿದೆ. ನಮ್ಮ ನಾಯಕರದ್ದು ಕೇವಲ ಆಡಳಿತಕ್ಕಾಗಿ ಅಧಿಕಾರಕ್ಕೆ ಬರಬೇಕೆಂದೇನೂ ಇಲ್ಲ. ದೇಶದ ರಕ್ಷಣೆ, ಭಾರತ ವಿಶ್ವ ಗುರುವಾಗಲು ನಾವು ಯತ್ನಿಸಬೇಕಾಗಿದೆ ಎಂದು ಹೇಳಿದ್ದರು.

ರಾಜಾಹುಲಿ ಎಂದೇ ಖ್ಯಾತವಾಗಿರುವ ‌ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಾರಿಗೆ ತಂದಿರುವ ಯೋಜನೆಗಳನ್ನು ಪ್ರಚಾರ ಮಾಡಬೇಕು. ಇದು ಯುದ್ಧಕ್ಕೆ ಸಿದ್ಧವಾಗುವ ಸಮಾವೇಶವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಸೈನಿಕರಂತೆ ಎಲ್ಲರೂ ಕೆಲಸ ಮಾಡಬೇಕು. ಕಾಂಗ್ರೆಸ್ ಕುಟುಂಬ ರಾಜಕಾರಣ ಮಾಡುತ್ತಿದೆ. ದೇಶದ ಆರ್ಥಿಕತೆ ಹಿಂದೆ ಬೀಳುವ ನಿಟ್ಟಿನಲ್ಲಿ ಕಾಂಗ್ರೆಸ್ ಕೆಲಸ ಮಾಡಿದೆ. ಕಾರ್ಯಕರ್ತರು ನಾಯಕರಾಗಿ ಬೆಳೆಯಬೇಕೆಂದು ಮೋದಿ ಹೇಳಿದ್ದಾರೆ ಎಂದು ಆನಂದ್‌ ಸಿಂಗ್‌ ಹೇಳಿದ್ದರು.

Exit mobile version