Site icon Vistara News

DP Manu: ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್ಸ್‌ನಲ್ಲಿ ಮಿಂಚಿದ ಕನ್ನಡಿಗ ಮನು; ಯಾರಿವರು? ಇವರ ಹಿನ್ನೆಲೆ, ಸಾಧನೆ ಏನೇನು?

DP Manu

Who is DP Manu, the Javelin Thrower Who got 6th place in World Athletics Championships 2023

ಬೆಂಗಳೂರು: ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್ಸ್‌ನಲ್ಲಿ (World Athletics Championships) ಕನ್ನಡಿಗ ದೇವರಕೇಶವಿ ಪ್ರಕಾಶ ಮನು (ಡಿ.ಪಿ. ಮನು ಎಂದೇ ಖ್ಯಾತಿ) ಅವರು ಫೈನಲ್‌ ತಲುಪುವ ಜತೆಗೆ ಫೈನಲ್‌ನಲ್ಲಿ ಆರನೇ ಸ್ಥಾನ ಪಡೆದಿದ್ದಾರೆ. ಆ ಮೂಲಕ ನೀರಜ್‌ ಚೋಪ್ರಾ, ಕಿಶೋರ್‌ ಜೇನಾ (Kishore Jena) ಅವರಂತೆ ಜಾವೆಲಿನ್‌ ಥ್ರೋನಲ್ಲಿ ಡಿ.ಪಿ. ಮನು (DP Manu) ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭರವಸೆಯ ಅಥ್ಲೀಟ್‌ ಎನಿಸಿದ್ದಾರೆ. ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆಗೈದಿರುವ ಮನು ಅವರು ಇದೇ ರೀತಿಯ ಪ್ರದರ್ಶನ ತೋರಿದರೆ ಜಾಗತಿಕ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುವುದರಲ್ಲಿ ಎರಡು ಮಾತಿಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ.

ಹಾಗಾದರೆ, ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್ಸ್‌ನಲ್ಲಿ 84.14 ಮೀಟರ್‌ ಭರ್ಜಿ ಎಸೆದು ಭರವಸೆ ಮೂಡಿಸಿರುವ 23 ವರ್ಷದ ಡಿ.ಪಿ. ಮನು ಅವರ ಹಿನ್ನೆಲೆ ಏನು? ಇವರಿಗೆ ತರಬೇತಿ ನೀಡಿದ್ದು ಯಾರು? ಇದುವರೆಗೆ ಅವರು ಮಾಡಿರುವ ಸಾಧನೆಗಳೇನು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಡಿ.ಪಿ. ಮನು ಹಿನ್ನೆಲೆ

ಡಿ.ಪಿ. ಮನು ಅವರು ಹಾಸನ ಜಿಲ್ಲೆ ಬೇಲೂರು ತಾಲೂಕು ಕುಪ್ಪಗೋಡು ಗ್ರಾಮದವರು. ತಂದೆ ಪ್ರಕಾಶ ಹಾಗೂ ತಾಯಿ ಸುಜಾತಾ. ಹೊಯ್ಸಳ ಶಾಲೆಯಲ್ಲಿ ಓದುವಾಗಲೇ ಭರ್ಜಿಯತ್ತ ಆಕರ್ಷಣೆ ಬೆಳೆಸಿಕೊಂಡ ಮನು ಮೂಡುಬಿದಿರೆಯ ಆಳ್ವಾಸ್‌ ಕಾಲೇಜಿನಲ್ಲಿ ಕಠಿಣ ತರಬೇತಿ ಪಡೆದರು. ಇದೇ ವೇಳೆ ಮನು ಅವರು ಅಂತಾರಾಜ್ಯ, ಜೂನಿಯರ್‌ ರಾಷ್ಟ್ರೀಯ ಕೂಟಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡರು. ಆಳ್ವಾಸ್‌ ಕಾಲೇಜಿನಲ್ಲಿ ಅವರು ಪಡೆದ ತರಬೇತಿ, ನೀಡಿದ ಪ್ರದರ್ಶನವು ಚಿಗುರು ಮೀಸೆ ಹುಡುಗನನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದೆ.

ಕಾಶಿನಾಥ ನಾಯಕ್‌ ತರಬೇತಿ

2020ರಲ್ಲಿ ಡಿ.ಪಿ.ಮನು ಅವರಿಗೆ ಮಹತ್ವದ ತಿರುವು ಸಿಕ್ಕಿತು. ಅವರು ಪುಣೆಯಲ್ಲಿರುವ ಆರ್ಮಿ ಸ್ಪೋರ್ಟ್ಸ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಹವಾಲ್ದಾರ್‌ ಕೆಲಸಕ್ಕೆ ಸೇರಿದರು. ಇದೇ ವೇಳೆ ಕಾಶಿನಾಥ ನಾಯಕ್‌ ಎಂಬ ಜಾವೆಲಿನ್‌ ತರಬೇತುದಾರರ ಪರಿಚಯವೂ ಆಯಿತು. ಕಾಶಿನಾಥ ನಾಯಕ್‌ ಅವರ ಬಳಿ ಸತತ ತರಬೇತಿ ಪಡೆದ ಡಿ.ಪಿ. ಮನು, ಮೊದಲಿಗೆ 65 ಮೀಟರ್‌ ದೂರ ಭರ್ಜಿ ಎಸೆಯುತ್ತಿದ್ದವರು 80 ಮೀಟರ್‌ ದಾಟಿದ್ದಾರೆ.

ಮನು ಭರ್ಜಿ ಎಸೆತದ ವೈಖರಿ

ಇದನ್ನೂ ಓದಿ: Neeraj Chopra: ಚಿನ್ನ ಗೆದ್ದ ಬಳಿಕ ತಿರಂಗಾ ಬಳಿ ನಿಲ್ಲುವಂತೆ ಪಾಕ್‌ ಅಥ್ಲೀಟ್‌ಗೆ ಸೂಚಿಸಿದ ನೀರಜ್‌ ಚೋಪ್ರಾ; ಅರ್ಷದ್‌ ಮಾಡಿದ್ದೇನು?

ಮನು ಮಾಡಿದ ಸಾಧನೆಗಳು

  1. 2022ರ ಜೂನ್‌ನಲ್ಲಿ ನಡೆದ ರಾಷ್ಟ್ರೀಯ ಅಂತಾರಾಜ್ಯ ಹಿರಿಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್ಸ್‌ನಲ್ಲಿ ಚಿನ್ನದ ಪದಕ
  2. 2023ರ ಏಪ್ರಿಲ್‌ನಲ್ಲಿ ಬೆಂಗಳೂರಿನ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್‌ ಗ್ರ್ಯಾಂಡ್‌ ಪ್ರಿಕ್ಸ್‌ನಲ್ಲಿ ಚಿನ್ನ
  3. 2022ರ ಏಪ್ರಿಲ್‌ನಲ್ಲಿ ಕೇರಳದ ತಿರುವನಂಪುರಂನಲ್ಲಿ ನಡೆದ ಇಂಡಿಯನ್‌ ಗ್ರ್ಯಾಂಡ್‌ ಪ್ರಿಕ್ಸ್‌ನಲ್ಲಿ ಬಂಗಾರದ ಪದಕ
  4. 2022ರ ಆಗಸ್ಟ್‌ನಲ್ಲಿ ನಡೆದ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಐದನೇ ಸ್ಥಾನಕ್ಕೆ ತೃಪ್ತಿ
  5. 2023ರ ಜುಲೈನಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್ಸ್‌ನಲ್ಲಿ ಬೆಳ್ಳಿ
  6. 2022ರ ಅಕ್ಟೋಬರ್‌ನಲ್ಲಿ ಗುಜರಾತ್‌ನಲ್ಲಿ ನಡೆದ ಇಂಡಿಯನ್‌ ನ್ಯಾಷನಲ್‌ ಗೇಮ್ಸ್‌ನಲ್ಲಿ ಚಿನ್ನ

ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್ಸ್‌ನಲ್ಲಿ ಮನು

ಭರವಸೆ ಹೆಚ್ಚಿಸಿದ ಕನ್ನಡಿಗ

ಭಾರತದಲ್ಲಿ ಕ್ರಿಕೆಟ್‌ ಎಂದರೆ ಧರ್ಮವೇ ಆಗಿದ್ದು, ಸಚಿನ್‌ ತೆಂಡೂಲ್ಕರ್‌ ಎಂಬ ದೇವರೂ ಇದ್ದಾರೆ. ಅಷ್ಟರಮಟ್ಟಿಗೆ ದೇಶದಲ್ಲಿ ಕ್ರಿಕೆಟ್‌ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇಂತಹ ಪರಿಸ್ಥಿತಿಯ ಮಧ್ಯೆಯೇ ಕನ್ನಡಿಗ ಮನು ಅವರು ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್ಸ್‌ಗೆ ಆಯ್ಕೆಯಾಗುವ ಜತೆಗೆ ಫೈನಲ್‌ ತಲುಪಿ, ಆರನೇ ಸ್ಥಾನ ಪಡೆದಿರುವುದು ಸಣ್ಣ ಮಾತಲ್ಲ. ಮೊದಲ ಚಾಂಪಿಯನ್‌ಶಿಪ್ಸ್‌ನಲ್ಲಿಯೇ ಅವರು 84.14 ಮೀಟರ್‌ ದೂರ ಭರ್ಜಿ ಎಸೆದಿದ್ದು, ಹೆಚ್ಚಿನ ಭರವಸೆ ಮೂಡಿಸಿದ್ದಾರೆ. ಒಟ್ಟಿನಲ್ಲಿ ಕನ್ನಡಿಗರೊಬ್ಬರು ಜಾವೆಲಿನ್‌ ಥ್ರೋ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿದ್ದು, ಅವರು ಒಲಿಂಪಿಕ್ಸ್‌ಗೂ ಆಯ್ಕೆಯಾಗಲಿ, ಅಲ್ಲೂ ರಾಜ್ಯ, ದೇಶದ ಘನತೆ ಹೆಚ್ಚಿಸಲಿ ಎಂದು ಆಶಿಸೋಣ.

Exit mobile version