Site icon Vistara News

ಬೀಡಾ, ಬೀಡಿ, ಶೇಂದಿ, ಬ್ರಾಂಡಿಪ್ರಿಯ ಈ ಪವಾಡಪುರುಷ ಕೊರಗಜ್ಜ ಯಾರು?

ಕೊರಗಜ್ಜ ಯಾರು

ಉಡುಪಿ: ಕರಾವಳಿ ಭೂಮಿಯ ಒಂದು ಕಾರ್ಣಿಕ ಶಕ್ತಿ ಕೊರಗಜ್ಜ ಎನ್ನಲಾಗುತ್ತದೆ. ಶತಶತಮಾನಗಳಿಂದಲೂ ತುಳುನಾಡಿನಲ್ಲಿ ದೈವೀ ಶಕ್ತಿಯ ದರ್ಶನ ಮಾಡಿಸುತ್ತಿರುವ ಆ ನಂಬಿಕೆಯ ದೈವವೇ ಸ್ವಾಮಿ ಕೊರಗಜ್ಜ. ತುಳುನಾಡಿನ ಜನ ಇಂದಿಗೂ ತಮ್ಮ ವಸ್ತುಗಳು ಕಾಣೆಯಾದರೆ ಮೊದಲು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವುದಿಲ್ಲ. ಬದಲಾಗಿ ತಾವಿದ್ದ ಜಾಗದಲ್ಲೇ ಕಾರ್ಣಿಕ ಪುರುಷ ಕೊರಗಜ್ಜನ ನೆನೆದು ಭಕ್ತಿಯಿಂದ ಪ್ರಾರ್ಥಿಸಿಕೊಳ್ಳುತ್ತಾರೆ. ಇಷ್ಟಾದರೆ ಸಾಕು ತಾವು ಕಳೆದುಕೊಂಡ ವಸ್ತುಗಳು ಮತ್ತೆ ಕೈ ಸೇರುವುದು ಸತ್ಯ ಎನ್ನುವುದು ಕೊರಗಜ್ಜನ ಭಕ್ತರ ನಂಬಿಕೆಯ ನುಡಿ.

ಇನ್ನು ಕಷ್ಟಗಳು ಎದುರಾದಾಗಲೂ ಭಕ್ತರು ಕೊರಗಜ್ಜನ ಹೆಸರು ಕೂಗಿದರೆ ಸಾಕು ಕಷ್ಟಗಳೆಲ್ಲ ಕಣ್ಣು ಮುಚ್ಚಿ ತೆಗೆಯುವುದರೊಳಗೆ ಮಾಯವಾಗುತ್ತದೆ ಎನ್ನುವ ಅಚಲ ನಂಬಿಕೆ ಹೊಂದಿದ್ದಾರೆ. ಇದೇ ಕಾರಣಕ್ಕೆ ತುಳುನಾಡಿನ ಆರಾಧ್ಯ ದೈವವಾಗಿ ʼಕೊರಗಜ್ಜʼ ಎಂದು ಕರೆಯಲ್ಪಡುವ ಕೊರಗ ತನಿಯನನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸಲಾಗುತ್ತಿದೆ.

ಕೊರಗಜ್ಜ ಯಾರು

ಧರ್ಮ ಮತ್ತು ಸತ್ಯದ ಪ್ರತೀಕವಾಗಿ ನಂಬಿದವರಿಗೆ ಇಂಬು ಕೊಡುವ ಧರ್ಮದೈವವಾಗಿ ಕೊರಗಜ್ಜ ತುಳುನಾಡಿನಲ್ಲಿ ನೆಲೆ ನಿಂತಿದ್ದಾನೆ. ತುಳುನಾಡಿನಲ್ಲಿ ದೈವಗಳನ್ನು ಪ್ರೀತಿಯಿಂದ ಏಕವಚನದಲ್ಲಿ ಕರೆಯುವುದಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೊರಗಜ್ಜನ ಪವಾಡಗಳು ಇಂದಿಗೂ ನಡೆಯುತ್ತಿದ್ದು, ಅನೇಕ ಉದಾಹರಣೆಗಳು ಕಾಣಸಿಗುತ್ತವೆ.

ತುಳುನಾಡಿನ ದೈವರಾಧನೆಯ ಒಂದು ಭಾಗವಾಗಿ ಕೊರಗಜ್ಜನ ಆರಾಧನೆಯನ್ನು ಮಾಡಲಾಗುತ್ತದೆ. ಕೊರಗಜ್ಜನ ಮೂಲಸ್ಥಾನ ಕುತ್ತಾರಿನಲ್ಲಿದ್ದರೂ ಅವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ನಂಬಲಾಗುತ್ತಿದೆ. ಮಾನವನ ರೂಪದಲ್ಲಿ ಇದ್ದ ಕೊರಗತನಿಯ ಮಾಯಾ ರೂಪವನ್ನು ಪಡೆದು ದೈವೀ ಪುರುಷನಾಗುತ್ತಾನೆ ಎಂಬ ಪ್ರತೀತಿ ಇದೆ.

ಹಾಗಾಗಿ ಮನುಷ್ಯರು ತಿನ್ನುವ ವಸ್ತುಗಳನ್ನೇ ಹರಕೆಯ ರೂಪದಲ್ಲಿ ಅಜ್ಜನಿಗೆ ನೀಡಲಾಗುತ್ತದೆ. ಉದಾಹರಣೆಗೆ ವೀಳ್ಯದೆಲೆ, ಅಡಿಕೆ ಸುಣ್ಣ, ತಂಬಾಕು, ಬೀಡಿ, ಶೇಂದಿ, ಚಕ್ಕುಲಿ, ಮದ್ಯ ಹೆಚ್ಚಾಗಿ ಹರಕೆಯಾಗಿ ನೀಡಲಾಗುತ್ತದೆ. ಅಮೂಲ್ಯವಾದ ಅಥವಾ ಯಾವುದೇ ಸಣ್ಣ ವಸ್ತು ಕಳೆದು ಹೋದರೂ ಅಜ್ಜನನ್ನು ಮನಸ್ಸಿನಲ್ಲಿ ನೆನೆದು ಹರಕೆಯನ್ನು ಹೇಳಿದರೆ ಸಾಕು ಆ ವಸ್ತು ಮತ್ತೆ ಕೈ ಸೇರಿದ ಅನೇಕ ಉದಾಹರಣೆಗಳು ಇದೆ ಎಂಬ ಬಲವಾದ ನಂಬಿಕೆ ಇಂದಿಗೂ ಕೂಡ ತುಳುನಾಡಿನ ಜನರಲ್ಲಿ ಇದೆ.

ಯಾವುದರಲ್ಲೂ ಭಕ್ತಿ ಮುಖ್ಯವಾಗಿ ಬೇಕಾಗುತ್ತದೆ. ಯಾವುದೇ ಜಾಗದಲ್ಲಿ ನಿಂತು ಮನಸಾರೆ ಅಜ್ಜ ಎಂದು ಕರೆದರೆ ನಾವಿದ್ದ ಜಾಗಕ್ಕೆ ಅಜ್ಜ ಬರುತ್ತಾನೆ ಎಂಬುವುದು ಭಕ್ತರ ನಂಬಿಕೆ. ಕೊರಗಜ್ಜ ಅಥವಾ ಕೊರಗತನಿಯ ಎಂದು ಪ್ರೀತಿಯಿಂದ ಆರಾಧಿಸುವ ಅಜ್ಜನ ಮೇಲೆ ತುಳುನಾಡಿನ ಜನರಿಗೆ ಎಲ್ಲಿಲ್ಲದ ನಂಬಿಕೆ.

ಯಾರೂ ಕೈ ಬಿಟ್ಟರೂ ಅಜ್ಜ ನಂಬಿದವರನ್ನು ಕೈ ಬಿಡುವುದಿಲ್ಲ ಎಂಬ ಮಾತು ಈ ಭಾಗದಲ್ಲಿ ಭಕ್ತರ ಬಾಯಿಯಲ್ಲಿ ಕೇಳಿ ಬರುತ್ತದೆ. ಯಾವುದೇ ಶುಭ ಸಮಾರಂಭದ ಸಂದರ್ಭದಲ್ಲಿ, ಹಟ್ಟಿಯಲ್ಲಿ ದನ ಕರು ಹಾಕುವ ಸಂದರ್ಭ, ಮಗು ಹುಟ್ಟಿದ ಸಂದರ್ಭದಲ್ಲಿ ಅಜ್ಜನಿಗೆ ವಿಶೇಷವಾಗಿ ಮದ್ಯ, ಶೇಂದಿ ಅಥವಾ ಅಜ್ಜನಿಗೆ ಪ್ರಿಯವಾದ ಪದಾರ್ಥಗಳನ್ನು ಭಕ್ತಿಯಿಂದ ನೀಡಲಾಗುತ್ತದೆ.

ಹೊಸ ವಾಹನವನ್ನು ಖರೀದಿಸುವರು ಅಜ್ಜನ ಹೆಸರನ್ನು ತಮ್ಮ ವಾಹನದಲ್ಲಿ ಸ್ವಾಮಿ ಕೊರಗಜ್ಜ ಎಂದು ಹಾಕುತ್ತಾರೆ. ಈ ಮೂಲಕ ಅಜ್ಜನನ್ನು ತುಳುನಾಡಿನ ಪ್ರತಿಯೊಬ್ಬರು ಭಕ್ತಿಯಿಂದ ಆರಾಧಿಸುವುದನ್ನು ಕಾಣಬಹುದು. ನಂಬಿದವರನ್ನು ಕೈಬಿಡುವುದಿಲ್ಲ. ಅಪಚಾರ ಮಾಡಿದರೆ ಸುಮ್ಮನೆ ಬಿಡುವುದಿಲ್ಲ ಎಂಬ ಕೊರಗಜ್ಜನ ಮಾತಿಗೆ ಉದಾಹರಣೆ ಎಂಬಂತೆ ಇತ್ತೀಚೆಗೆ ನಡೆದ ಘಟನೆಯೇ ಸಾಕ್ಷಿಯಾಗಿದೆ.


ಹುಂಡಿಗೆ ಅಪಚಾರ ಬಗೆದವರಿಗೆ ತಕ್ಕ ಶಾಸ್ತಿ!
ಪಡುಬಿದ್ರೆಯ ಕಟಪಾಡಿ ಪೇಟೆಬೆಟ್ಟುವಿನ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಕೊರಗಜ್ಜನ ಆರಾಧನೆಯೂ ನಡೆಯುತ್ತದೆ. ಅನ್ಯಕೋಮಿನ ಯುವಕರು ಕ್ಷೇತ್ರದ ಕಾಣಿಕೆ ಹುಂಡಿಯ ಹಣ ಕದ್ದು ಮೂತ್ರ ವಿಸರ್ಜನೆ ಮಾಡುತ್ತಾರೆ. ಅಷ್ಟೇ ಅಲ್ಲದೇ ಅದೇ ಹುಂಡಿಗೆ ಕಾಂಡೋಮ್ ಹಾಕುತ್ತಾರೆ. ಈ ಘಟನೆ ನಡೆದು ಕೆಲವೇ ದಿನಗಳಲ್ಲಿ ಅವರಲ್ಲಿ ಒಬ್ಬನಿಗೆ ಕಿಡ್ನಿ ಸಂಬಂಧಿ ಕಾಯಿಲೆ ಹಾಗೂ ಮತ್ತೊಬ್ಬನಿಗೆ ಎರಡೂ ಕಾಲು ಬಲಹೀನವಾಗುತ್ತದೆ.

ತಜ್ಞರನ್ನು ಕಂಡು ಪರೀಕ್ಷಿಸಿದರೂ ಪ್ರಯೋಜನವಾಗದೇ ಜ್ಯೋತಿಷಿಯ ಬಳಿ ಕೇಳಿದಾಗ ಅಸಲಿ ಸಂಗತಿಯ ಬಗ್ಗೆ ತಿಳಿದು ಬರುತ್ತದೆ. ನಂತರ ಅವರು ಈ ಕ್ಷೇತ್ರಕ್ಕೆ ಕುಟುಂಬ ಸಮೇತರಾಗಿ ಬಂದು ದೈವಗಳ ಮುಂದೆ ಕ್ಷಮೆಯಾಚಿಸಿದ ಘಟನೆಯನ್ನು ಈ ಸಂದರ್ಭದಲ್ಲಿ ನೆಪಿಸಿಕೊಳ್ಳಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಕೊರಗಜ್ಜನ ಬಗ್ಗೆ ಅಪಹಾಸ್ಯ ಮಾಡಿದ್ದ ಮನೋಜ್ ಪಂಡಿತ್ ಎಂಬಾತನ ವಿರುದ್ಧ ಕೇಸು ದಾಖಲಾಗಿತ್ತು.

ಬಳಿಕ ಈತನ ತಾಯಿಗೆ ತೀವ್ರ ಅನಾರೋಗ್ಯವಾಗಿ ತನ್ನ ತಪ್ಪಿನಿಂದ ಹಾಗೂ ದೈವನಿಂದನೆಯಿಂದ ಹೀಗಾಗಿದೆ ಎಂದು ತಿಳಿದ ನಂತರ, ತಾನು ವಿಚಾರವಾದಿ ಎಂದುಕೊಳ್ಳುತ್ತಿದ್ದ ಈತನೂ ಕೊರಗಜ್ಜನ ಕ್ಷೇತ್ರಕ್ಕೆ ಬಂದು ಹರಕೆ ಒಪ್ಪಿಸಿ ಕ್ಷೆಮೆಯಾಚಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.


ಕೊರಗ ತನಿಯ ಕೊರಗಜ್ಜನಾದ ಕಥೆ…
ಪಣಂಬೂರಿನ ಓಡಿ ಮತ್ತು ಅಚ್ಚು ಮೈರೆದಿ ಎಂಬ ಕೊರಗ ದಂಪತಿಗೆ ಒಂದು ಗಂಡು ಮಗು ಹುಟ್ಟುತ್ತದೆ. ಅವನಿಗೆ ತನಿಯ ಎಂಬ ಹೆಸರನ್ನು ಇಟ್ಟಿದ್ದರು. ತನಿಯಯನಿಗೆ ಕೇವಲ 30 ದಿವಸವಾಗುತ್ತಲೇ ಅವನ ತಂದೆ ಮತ್ತು ತಾಯಿ ವಿಧಿವಶವಾಗುತ್ತಾರೆ. ತನಿಯ ಅನಾಥನಾಗುತ್ತಾನೆ. ಅವನು ಅಳುತ್ತಿರುವಾಗ ಬೈದೆರೆ ಜಾತಿಗೆ ಸೇರಿದ ಮೈರಕ್ಕ ಬೈದೆದಿ ಮತ್ತು ಅವರ ಮಗ ಚೆನ್ನಯ್ಯನನ್ನು ತನಿಯ ನೋಡುತ್ತಾನೆ. ಮೈರಕ್ಕನ ಬಳಿ ಬಂದು ಅಮ್ಮಾ ನನಗೆ ಬಟ್ಟೆ ಕೊಡಿ ಎಂದು ಕೇಳುವಾಗ ಅವರು ತನ್ನ ತಲೆಯ ನೀರು ಹೀರಿಕೊಳ್ಳಲು ಕಟ್ಟಿದ ಬಟ್ಟೆಯನ್ನೇ ಆ ಮಗುವಿಗೆ ಕೊಟ್ಟು ಮಗುವನ್ನು ತನ್ನ ಜೊತೆ ಕರೆದುಕೊಂಡು ಹೋಗುತ್ತಾರೆ.


ಮೈರಕ್ಕ ಶೇಂದಿ ಮಾರುವವರಾಗಿದ್ದರು. ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದ ತನಿಯ ಎಷ್ಟೇ ದೊಡ್ಡ ಕೆಲಸವಾದರೂ ಅದನ್ನು ಮಾಡಿ ಮುಗಿಸುತ್ತಿದ್ದ. ಹೀಗಿರುವಾಗ ಒಂದು ದಿನ ತನಿಯನ ಬಳಿ ತಂದ ಶೇಂದಿಯನ್ನು ಹಂಡೆಗೆ ತುಂಬಿಸಲು ಹೇಳುತ್ತಾರೆ. ಅವನು ತುಂಬಿಸುತ್ತಾನೆ. ಆದರೆ ಇಲ್ಲಿ ವಿಚಿತ್ರ ಏನೆಂದರೆ ಏಳು ರಾತ್ರಿ ಏಳು ಹಗಲು ಕಳೆದರೂ ಶೇಂದಿ ಖಾಲಿಯೇ ಆಗುವುದಿಲ್ಲ! ಮುಂದೆ ತನಿಯ ದೊಡ್ಡವನಾಗುತ್ತ ಹೋದಂತೆ ಪವಾಡಗಳು ನಡೆಯುತ್ತ ಹೋಗುತ್ತವೆ ಎಂಬ ಪ್ರತೀತಿ ತುಳುನಾಡಿನಲ್ಲಿದೆ.

ಇದನ್ನೂ ಓದಿ| ಮಂಗಳೂರು | ಕೊರಗಜ್ಜನ ಪವಾಡ | ಮಗು ಬದುಕುಳಿಯುವುದು ಕಷ್ಟ ಎಂದಿದ್ದ ವೈದ್ಯರು; ಮತ್ತೆ ಕಿಲಕಿಲನೆ ನಗುವಂತೆ ಮಾಡಿದ ಕೊರಗಜ್ಜ!

Exit mobile version