ಹಾವೇರಿ: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಪ್ರಕರಣಕ್ಕೆ (Pro Pak Slogan) ವ್ಯಾಪಕ ಆಕ್ರೋಶ ಕೇಳಿಬರುತ್ತಿರುವುದರಿಂದ ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ (Sedition Case) ಬಗ್ಗೆ ಸತ್ಯಾಸತ್ಯತೆ ಪರಿಶೀಲಿಸಲು ವಿಡಿಯೊವನ್ನು ಈಗಾಗಲೇ ಎಫ್‌ಎಸ್‌ಎಲ್‌ಗೆ ರವಾನಿಸಲಾಗಿದೆ. ಮತ್ತೊಂದೆಡೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಘೋಷಣೆ ಕೂಗಿದ ಆರೋಪಿಯ ಸೆರೆಗೆ ಬಲೆ ಬೀಸಿದ್ದಾರೆ. ಆದರೆ, ಇದೀಗ ಹಾವೇರಿ ಜಿಲ್ಲೆಯ ಬ್ಯಾಡಗಿ ಮೂಲದ ವ್ಯಕ್ತಿಯ ಮೇಲೆ ಪೊಲೀಸರಿಗೆ ಅನುಮಾನ ಮೂಡಿದೆ.
ಬ್ಯಾಡಗಿಯ ಮೆಣಸಿನಕಾಯಿ ವ್ಯಾಪಾರಿ ಮೊಹಮ್ಮದ್ ಶಫಿ ನಾಶಿಪುಡಿ ಮೇಲೆ ಪೊಲೀಸರಿಗೆ ಅನುಮಾನ ಮೂಡಿದ್ದು, ಅವರಿಂದ ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ. ಮಂಗಳವಾರ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದಾಗ ನಾಶಿಪುಡಿ, ವಿಧಾನ ಸೌಧದಲ್ಲಿಯೇ ಇದ್ದರು. ಹೀಗಾಗಿ ಶಫಿ ನಾಶಿಪುಡಿ ವಿರುದ್ಧ ಬ್ಯಾಡಗಿ ಪೊಲೀಸರಿಗೆ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ದೂರು ನೀಡಿ, ಕ್ರಮಕ್ಕೆ ಆಗ್ರಹಿಸಿದ್ದರು. ಹೀಗಾಗಿ ವ್ಯಾಪಾರಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ನನ್ನ ಮೇಲಿನ ಆರೋಪ ಸುಳ್ಳು ಎಂದ ವ್ಯಾಪಾರಿ
ಆರೋಪದ ಬಗ್ಗೆ ಹಾವೇರಿ ಜಿಲ್ಲೆಯ ಮೊಟೇಬೆನ್ನೂರಿನಲ್ಲಿ ಮೊಹಮ್ಮದ್ ಶಫಿ ನಾಶಿಪುಡಿ ಪ್ರತಿಕ್ರಿಯಿಸಿ, ಮಂಗಳವಾರ ವಿಧಾನಸೌಧದಲ್ಲಿ ನಾನಿದ್ದದ್ದು ನಿಜ. ಎಲ್ಲರೂ ಜೈಕಾರ ಹಾಕಿದರು, ನಾನು ಸಹ ಜೈಕಾರ ಹಾಕಿದೆ. ಆದರೆ, ನನ್ನ ಮೇಲೆ ಬರುತ್ತಿರುವ ಆರೋಪ ಸುಳ್ಳು. ಪಾಕ್ ಪರ ಜೈಕಾರ ಹಾಕಿದ್ದು ಯಾರೆಂಬ ಬಗ್ಗೆ ಸೂಕ್ತ ತನಿಖೆ ಮಾಡಿ, ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಿ ಎಂದು ಹೇಳಿದರು.
ಇದನ್ನೂ ಓದಿ | Sedition Case: ಪಾಕ್ ಪರ ಘೋಷಣೆ ವಿವಾದ; FSL ವರದಿಯೇ ಅಂತಿಮ, ಬಳಿಕವೇ ಕ್ರಮೆವೆಂದ ಪರಮೇಶ್ವರ್
ಪಾಕಿಸ್ತಾನ ಜಿಂದಾಬಾದ್ ಅಂತ ನಾನು ಹೇಳಿಲ್ಲ, ನಾಸೀರ್ ಸಾಬ್ ಜಿಂದಾಬಾದ್ ಎಂದು ಕೂಗಿದ್ದೇನೆ. ನಾನು ನಾಸೀರ್ ಸರ್ ಅವರ ಬೆಂಬಲಿಗ. ಯಾರು ಪಾಕ್ ಪರ ಘೋಷಣೆ ಕೂಗಿದ್ದಾರೋ, ಅವರ ಮೇಲೆ ಕ್ರಮ ಕೈಗೊಳ್ಳಲಿ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕೇಳಿದರು, ಮಾಹಿತಿ ನೀಡಿದ್ದೇನೆ. ನನ್ನ ಮೇಲೆ ಬಂದಿರುವ ಆರೋಪ ಸುಳ್ಳು. ಪಾಕಿಸ್ತಾನ ಜಿಂದಾಬಾದ್ ಅಂತ ಹೇಳಿದ್ದು ನಾನಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ
ಕೂಗಿದ್ದು ಸಾಬೀತಾದರೆ ಕಠಿಣ ಕ್ರಮವೆಂದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದಾರೋ ಇಲ್ಲವೋ ಎಂಬುದನ್ನು ಮೊದಲು ತಿಳಿದುಕೊಳ್ಳುತ್ತೇವೆ. ಒಂದು ವೇಳೆ ಘೋಷಣೆ ಕೂಗಿದ್ದರೆ ಗಂಭೀರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ವಿಧಾನಸೌಧದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಲಾಗಿದೆ ಎನ್ನಲಾದ ವಿಡಿಯೊವನ್ನು ಈಗಾಗಲೇ ಎಫ್‌ಎಸ್ಎಲ್‌ಗೆ ಕಳುಹಿಸಲಾಗಿದೆ. ಪಾಕಿಸ್ತಾನ ಅಂತ ಕೂಗಿದ್ದಾನಾ? ಇಲ್ಲವಾ? ಎಂದು ವರದಿ ಕೊಡಿ ಎಂದು ಹೇಳಿದ್ದೇವೆ. ಒಂದು ವೇಳೆ ಕೂಗಿದ್ದರೆ, ಯಾರೇ ಆದರೂ ಅವರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ | Budget session : ಉಭಯ ಸದನಗಳಲ್ಲಿ ಜಿಂದಾಬಾದ್ ಕೋಲಾಹಲ ; ಭಾರತ್ ಮಾತಾಕಿ ಜೈ ಘೋಷಣೆ
ಯಾರೇ ಆದರೂ ರಾಷ್ಟ್ರ ವಿರೋಧ ಕೆಲಸ ಮಾಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ. ಕೂಗುವವರಿಗೆ ಇಲ್ಲಿ ಆದರೇನು, ಎಲ್ಲಿ ಆದರೇನು? ಇವತ್ತು ವರದಿ ಬಂದ ಮೇಲೆ ಗಂಭೀರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.