ತುಮಕೂರು: “ನಮಗೆ ಜೆಡಿಎಸ್ ಸಪೋರ್ಟ್ ಬೇಡ” ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೀಡಿದ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ತುಮಕೂರಿನಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ (Karnataka Election 2023) ಅವರು, ಇದೇ ವೇಳೆ ಜೋಶಿ ವಿರುದ್ಧ ವಾಗ್ದಾಳಿ ನಡೆಸಿದರು. “ಬಿಜೆಪಿಗೆ ನಾವು ಸಪೋರ್ಟ್ ಮಾಡುತ್ತೇವೆ ಎಂದು ಹೇಳಿದ್ದು ಯಾರು” ಎಂದು ಪ್ರಶ್ನಿಸಿದರು.
“ಬಿಜೆಪಿಗೆ ಬೆಂಬಲ ನೀಡುತ್ತೇವೆ ಎಂದು ನಾವು ಹೇಳಿದ್ದೇವಾ? ಅರ್ಜಿ ಹಾಕಿಕೊಂಡು ಹೋಗಿದ್ದೇವಾ? ನಾವು ಅವರಿಗೆ ಬೆಂಬಲ ನೀಡುತ್ತೇವೆ ಎಂದು ಎಲ್ಲೂ ಹೇಳಿಲ್ಲ. ರಾಜ್ಯದಲ್ಲಿ ನಾವು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುತ್ತೇವೆ. ಒಟ್ಟು 123 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ. ಆ ನಿಟ್ಟಿನಲ್ಲಿ ನಾವು ಶ್ರಮಿಸುತ್ತಿದ್ದೇವೆ. ಬಿಜೆಪಿಯವರಿಗೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರವ ಭರವಸೆ ಇಲ್ಲ. ಹಾಗಾಗಿ, ಜೋಶಿ ಅವರು ಸಪೋರ್ಟ್ ಬಗ್ಗೆ ಮಾತನಾಡಿದ್ದಾರೆ” ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್‌ಗೆ ಬೆಂಬಲಿಸಿ ಎಂದು ಎಂಎಲ್‌ಸಿ ಬೋಜೇಗೌಡ ನೀಡಿದ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, “ವೈಯಕ್ತಿಕವಾಗಿ ಚಿಕ್ಕಮಗಳೂರು ರಾಜಕಾರಣದಲ್ಲಿ ಸೆಕ್ಯುಲರ್ ವೋಟುಗಳು ಡಿವೈಡ್ ಆಗಿದ್ದವು. ಈಗ ಸೆಕ್ಯುಲರ್ ಮತಗಳು ಒಂದಾಗಲಿ ಎಂಬ ಅರ್ಥದಲ್ಲಿ ಹೇಳಿದ್ದಾರೆ. ಅವರಿಗೆ ನೋಟಿಸ್ ನೀಡಲು ಹೇಳಲಾಗಿದೆ” ಎಂದು ಸ್ಪಷ್ಟಪಡಿಸಿದರು.
ಪಿತೂರಿ ಮಾಡಿದವರೆಲ್ಲ ಸತ್ಯ ಹರಿಶ್ಚಂದ್ರರೆ?
ತುಮಕೂರು ನಗರ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಅಶ್ಲೀಲ ವಿಡಿಯೊ ವೈರಲ್ ಆದ ಕುರಿತು ಮಾತನಾಡಿದ ಎಚ್‌ಡಿಕೆ, ಇದೊಂದು ಷಡ್ಯಂತ್ರ ಎಂದು ಹೇಳಿದರು. “ಪಿತೂರಿ ಮಾಡಿದವರು ಏನು ಸಾಚಾಗಳಾ? ಬಿಜೆಪಿಯವರು ಕೋರ್ಟ್‌ನಲ್ಲಿ ಸ್ಟೇ ತೆಗೆದುಕೊಂಡಿದ್ದಾರೆ. ಆದರೆ, ನಾವು ಸ್ಟೇ ತಂದಿಲ್ಲ. ಈ ರೀತಿ ಪಿತೂರಿ ಮಾಡಿದವರೆಲ್ಲ ಸತ್ಯ ಹರಿಶ್ಚಂದ್ರರಾ? ಮನುಷ್ಯನಲ್ಲಿ ಕೆಲವು ಸಹಜ ಗುಣಗಳು ಇರುತ್ತವೆ. ಹಾಗಾಗಿ, ನಾವು ಎಚ್ಚರದಿಂದ ಇರಬೇಕು” ಎಂದರು.
ಕಾಂಗ್ರೆಸ್ ಮೇಲೆ ಸಾಫ್ಟ್ ಕಾರ್ನರ್ ಇಲ್ಲ
ಕಾಂಗ್ರೆಸ್ ಮೇಲೆ ಎಚ್‌ಡಿಕೆ ಸಾಫ್ಟ್ ಕಾರ್ನರ್ ಹೊಂದಿದ್ದಾರೆ ಎಂಬ ಮಾತುಗಳು ಕೇಳಿಬಂದ ಕುರಿತು ಪ್ರತಿಕ್ರಿಯಿಸಿದ ಅವರು, “ನನಗೆ ಯಾವುದೇ ಪಕ್ಷದ ಮೇಲೂ ಸಾಫ್ಟ್ ಕಾರ್ನರ್ ಇಲ್ಲ” ಎಂದು ಸ್ಪಷ್ಟಪಡಿಸಿದರು. “ವರುಣದಲ್ಲಿ ಬಿಜೆಪಿ ಜತೆ ನಾನು ಏಕೆ ಒಪ್ಪಂದ ಮಾಡಿಕೊಳ್ಳಲಿ? ಮಾಜಿ ಶಾಸಕನನ್ನು ನಿಲ್ಲಿಸಿದ್ದೇನೆ. ಗೆಲ್ಲಿಸಿಕೊಂಡು ಬರುತ್ತೇವೆ. ನಮಗೆ ನಮ್ಮ ಅಭ್ಯರ್ಥಿ ಮುಖ್ಯವೇ ಹೊರತು, ಬೇರೆ ಪಕ್ಷದ ಅಭ್ಯರ್ಥಿ ಅಲ್ಲ” ಎಂದರು. ತುಮಕೂರಿನಲ್ಲಿ ದೇವೇಗೌಡರು ಸೋಲಲು ಕಾಂಗ್ರೆಸ್ ಕಾರಣ. ಆದರೆ, ಯಾರು ಎಂಬುದಾಗಿ ಹೇಳುವುದಿಲ್ಲ ಎಂದು ಕಳೆದ ಲೋಕಸಭೆಯಲ್ಲಿದೇವೇಗೌಡರು ಸೋಲನುಭವಿಸಿದ ಕುರಿತು ಪ್ರತಿಕ್ರಿಯಿಸಿದರು. ಎಂದಷ್ಟೇ ಹೇಳಿದರು.
ಇದನ್ನೂ ಓದಿ: Karnataka Election 2023: ನನ್ನನ್ನು ಸೋಲಿಸಲು ಬಿಜೆಪಿ-ಕಾಂಗ್ರೆಸ್ ಒಗ್ಗಟ್ಟು; ನಿಖಿಲ್ ಕುಮಾರಸ್ವಾಮಿ ಆರೋಪ