ಚಿಕ್ಕಮಗಳೂರು: ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿ (Next CM) ಯಾರು ಆಗುತ್ತಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಯಾವುದೇ ಉತ್ತರವನ್ನು ನೀಡಿಲ್ಲ. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಬಗ್ಗೆ ಜನರಿಗೆ ಒಲವಿದೆ. ಬಿಜೆಪಿ ದುರಾಡಳಿತದ ವಿರುದ್ಧ ಜನ ಬೇಸತ್ತಿದ್ದಾರೆ. ಹೀಗಾಗಿ ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ ಎಂದು ಹೇಳಿದರು.
ಶೃಂಗೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ. ಜನರಿಗೋಸ್ಕರ ಬಿಜೆಪಿ ಸರ್ಕಾರ ಯಾವ ಕೆಲಸವನ್ನೂ ಮಾಡಿಲ್ಲ. ಬಿಜೆಪಿ ಸರ್ಕಾರದ ವೈಫಲ್ಯವನ್ನು ಕರ್ನಾಟಕದ ಜನ ಗುರುತಿಸಿದ್ದಾರೆ. ನನ್ನ ಪ್ರಕಾರ ಕರ್ನಾಟಕದ ಜನ ಬದಲಾವಣೆಯನ್ನು ಬಯಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಇದನ್ನೂ ಓದಿ: Yogi Adityanath: ಟೀಂ ಇಂಡಿಯಾದಲ್ಲಿ ಕರ್ನಾಟಕದ ಎಷ್ಟು ಆಟಗಾರರು ಇರಬೇಕು ನಿರ್ಧಾರ ಮಾಡಿ: ಮಂಡ್ಯದಲ್ಲಿ ಯೋಗಿ ಆದಿತ್ಯನಾಥ
ಬಿಜೆಪಿಯವರು ಯಾವ ಕೆಲಸವನ್ನೂ ಮಾಡಿಲ್ಲ. ಜನರಿಗೂ ನೋಡಿ ನೋಡಿ ಸಾಕಾಗಿದೆ. ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ. ಜನ ನಮ್ಮ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ ಎಂದು ನಾನು ಯಾವಾಗಲೂ ಹೇಳುತ್ತೇನೆ. ಬಿಜೆಪಿ ಸರ್ಕಾರ ಏನು ಮಾಡಿದೆ? ಏನು ಮಾಡಿಲ್ಲ ಎಂಬುದೂ ಜನರಿಗೆ ತಿಳಿದಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ನೀವು ನೋಡಿದ್ದೀರ. ಜನರ ಒಳಿತಿಗಾಗಿ ನಾವು ಏನು ಮಾಡಿದ್ದೇವೆ ಎಂಬುದು ಸಹ ಚೆನ್ನಾಗಿ ಗೊತ್ತು. ಜನರ ಅನುಭವ ಹಾಗೂ ವಿವೇಕದಲ್ಲಿ ಅವರೇ ಚೆನ್ನಾಗಿ ಅರಿತುಕೊಂಡಿದ್ದಾರೆ ಎಂದು ಪ್ರಿಯಾಂಕಾ ಉತ್ತರಿಸಿದ್ದಾರೆ.
ಅಜ್ಜಿ ಇಂದಿರಾ ಗಾಂಧಿ ಭೇಟಿ ನೀಡಿ 45 ವರ್ಷಗಳ ಬಳಿಕ ಶೃಂಗೇರಿಗೆ ಬಂದ ಪ್ರಿಯಾಂಕಾ ಗಾಂಧಿ
ಚಿಕ್ಕಮಗಳೂರು: ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ರಾಜ್ಯ ಪ್ರವಾಸದಲ್ಲಿ ನಿರತರಾಗಿದ್ದಾರೆ. ಮಂಗಳವಾರ ಮೈಸೂರು ಜಿಲ್ಲೆಯ ಹಲವು ಕಡೆ ಸಮಾವೇಶ ನಡೆಸಿದ್ದ ಅವರು, ಬುಧವಾರ (ಏಪ್ರಿಲ್ 26) ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಶೃಂಗೇರಿ ಮಠಕ್ಕೆ ಪ್ರಿಯಾಂಕಾ ಗಾಂಧಿ (Priyanka Gandhi) ಆಗಮಿಸಿದ್ದು, ಅಜ್ಜಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು (Indira Gandhi) ಆಗಮಿಸಿ 45 ವರ್ಷಗಳ ಬಳಿಕ ಇವರು ಬಂದಂತಾಗಿದೆ.
1978ರಲ್ಲಿ ಇಂದಿರಾ ಗಾಂಧಿ ಅವರು ಶೃಂಗೇರಿ ಮಠಕ್ಕೆ ಭೇಟಿ ನೀಡಿದ್ದರು. ಈಗ 2023ರಲ್ಲಿ ಪ್ರಿಯಾಂಕಾ ಗಾಂಧಿಯವರು ಆಗಮಿಸಿದ್ದಾರೆ. ಶ್ರೀಮಠದಲ್ಲಿ ಶಾರದಾಂಬೆಯ ದರ್ಶನ ಪಡೆದು ಹಾಗೂ ಗುರುಗಳ ದರ್ಶನವನ್ನು ಪ್ರಿಯಾಂಕಾ ಪಡೆದಿದ್ದಾರೆ.
1978ರಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಗೆ ಇಂದಿರಾ ಗಾಂಧಿ ಅವರು ಸ್ಪರ್ಧೆ ಮಾಡಿದ್ದರು. ಈ ವೇಳೆ ಅವರು ಶೃಂಗೇರಿ ಮಠಕ್ಕೆ ಭೇಟಿ ನೀಡಿದ್ದರು. ಅಲ್ಲದೆ, ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ್ದರು. 2018ರಲ್ಲಿ ರಾಹುಲ್ ಗಾಂಧಿ ಸಹ ಇಲ್ಲಿಗೆ ಭೇಟಿ ನೀಡಿದ್ದರು.
ಶಾರದಾಂಬೆಗೆ ವಿಶೇಷ ಪೂಜೆ
ಶೃಂಗೇರಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ ಪ್ರಿಯಾಂಕಾ ಗಾಂಧಿ ಕೆಲ ಹೊತ್ತು ಪ್ರಾರ್ಥಿಸಿದರು. ಅಲ್ಲಿಂದ ಶೃಂಗೇರಿ ನರಸಿಂಹವನದಲ್ಲಿರುವ ಹಿರಿಯ ಸ್ವಾಮೀಜಿಯವರಾದ ಭಾರತೀ ತೀರ್ಥ ಶ್ರೀಗಳು ಹಾಗೂ ವಿಧುಶೇಖರ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಇದನ್ನೂ ಓದಿ: Karnataka Election 2023: ಯಡಿಯೂರಪ್ಪ ಹೆಗಲ ಮೇಲೆ ಬಂದೂಕು ಇಟ್ಟು ಹೊಡೆಯುತ್ತಿರುವ ಬಿ.ಎಲ್. ಸಂತೋಷ್: ಶೆಟ್ಟರ್ ಕಿಡಿ
ಮಠದ ಆನೆಗೆ ಬಾಳೆಹಣ್ಣು, ಸೇಬು ತಿನ್ನಿಸಿದ ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ ಅವರು ಶೃಂಗೇರಿ ಮಠಕ್ಕೆ ಭೇಟಿ ನೀಡಿದ ವೇಳೆ ಮಠದ ಆನೆ ಬಳಿಗೆ ಬಂದು ಅವರು, ಬಾಳೆಹಣ್ಣು ಹಾಗೂ ಸೇಬನ್ನು ಕೊಟ್ಟರು. ಆದರೆ, ಆನೆ ಸೇಬನ್ನು ಮಾವುತನಿಗೆ ಕೊಟ್ಟಿದೆ. ಈ ವೇಳೆ ಪ್ರಿಯಾಂಕಾ ಆನೆಯೊಂದಿಗೆ ಕೆಲಕಾಲ ಸಮಯ ಕಳೆದರು. ಆನೆ ಸೊಂಡಿಲನ್ನು ಸವರಿ ಮುದ್ದು ಮಾಡಿದರು. ಬಳಿಕ ಆನೆ ಸಹ ಪ್ರಿಯಾಂಕಾ ಅವರಿಗೆ ಆಶೀರ್ವಾದ ಮಾಡಿದೆ. ಲಕ್ಷ್ಮಿ, ಜಯಲಕ್ಷ್ಮಿ ಎಂಬ ಎರಡು ಆನೆಗಳೊಂದಿಗೆ ಸಮಯ ಕಳೆದರು.