ಬೆಂಗಳೂರು: ಕರ್ನಾಟಕದಲ್ಲಿ ಯಾರಾಗಬಹುದು ಮುಂದಿನ ಮುಖ್ಯಮಂತ್ರಿ (Next CM) ಎಂಬ ಬಗ್ಗೆ ಕಾಂಗ್ರೆಸ್ ಪಾಳಯದಲ್ಲಿ ಬಿರುಸಿನ ಚಟುವಟಿಕೆ ನಡೆದಿವೆ. ಈ ಚುನಾವಣೆಯಲ್ಲಿ (Karnataka Election 2023) ಮುಖ್ಯ ಪಾತ್ರ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ಮಾತ್ರವೇ ಸಿಎಂ ಗಾದಿಗೆ ನೇರ ಪೈಪೋಟಿ ಇರುವುದರಿಂದ ಯಾವುದೇ ಗೊಂದಲಕ್ಕೆ ಎಡೆ ಮಾಡಿಕೊಡದಂತೆ ಆಯ್ಕೆ ನಿರ್ಧಾರವನ್ನು ಕೈಗೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ರಾಜಕೀಯ ಚಟುವಟಿಕೆ ನಡೆದಿವೆ. 50:50 ಫಾರ್ಮುಲಾ, ಮುಂದಿನ ಲೋಕಸಭಾ ಚುನಾವಣೆ ಲೆಕ್ಕಾಚಾರ, ಪಕ್ಷ ನಿಷ್ಠೆ ಸೇರಿದಂತೆ ಹಲವು ವಿಚಾರಗಳು ಚರ್ಚೆ ನಡೆದಿದ್ದು, ಅಂತಿಮವಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ. ಇನ್ನು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಗೂ ಒತ್ತಡಗಳು ಕೇಳಿಬಂದಿವೆ.
ದೆಹಲಿ ಅಂಗಳಕ್ಕೆ ಕರ್ನಾಟಕ ಸಿಎಂ ಆಯ್ಕೆ ವಿಚಾರ
ಕರ್ನಾಟಕ ಮುಖ್ಯಮಂತ್ರಿ ಆಯ್ಕೆ ವಿಚಾರ ದೆಹಲಿ ಹೈಕಮಾಂಡ್ ಅಂಗಳಕ್ಕೆ ರವಾನೆಯಾಗಿದೆ. ಇಂದು (ಭಾನುವಾರ) ನಡೆಯುವ ಕಾಂಗ್ರೆಸ್ ಶಾಸಕಾಂಗದ ಸಭೆ ಔಪಚಾರಿಕವಷ್ಟೇ ಆಗಿದೆ. ಇಲ್ಲಿ ಶಾಸಕರ ವೈಯಕ್ತಿಕ ಅಭಿಪ್ರಾಯವನ್ನು ಕಾಂಗ್ರೆಸ್ ವೀಕ್ಷಕರು ಪಡೆಯಲಿದ್ದು, ಅಂತಿಮ ವರದಿಯನ್ನು ಹೈಕಮಾಂಡ್‌ಗೆ ರವಾನೆ ಮಾಡಲಿದ್ದಾರೆ.
ಇದನ್ನೂ ಓದಿ: DK Shivakumar: ನೊಣವಿನಕೆರೆ ಅಜ್ಜಯ್ಯನ ಭೇಟಿ ಮಾಡಿದ ಡಿ.ಕೆ.ಶಿವಕುಮಾರ್; ಸಿಎಂ ಎಂದು ಜೈಕಾರ ಹಾಕಿದವರಿಗೆ ಬೈಗುಳ
ಸೋನಿಯಾ ಗಾಂಧಿ ನಿರ್ಧಾರವೇ ಅಂತಿಮ
ಕರ್ನಾಟಕ ಮುಖ್ಯಮಂತ್ರಿ ಆಯ್ಕೆಯ ಸಂಪೂರ್ಣ ಜವಾಬ್ದಾರಿಯನ್ನು ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಲ್ಲಿಯ ರಾಜಕೀಯ ವಿಚಾರವನ್ನು ಮುಂದಿಡಲಿದ್ದಾರೆ. ಅಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಸೋನಿಯಾ ಗಾಂಧಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
ಪಕ್ಷಪಾತ ಸಂಕಟದಿಂದ ದೂರಾಗಲು ಖರ್ಗೆ ತಂತ್ರ
ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದರೂ ರಾಜ್ಯದವರೇ ಆಗಿದ್ದಾರೆ. ಈಗ ಮುಖ್ಯಮಂತ್ರಿ ಯಾರು ಆಗಬೇಕು ಎಂದು ಅವರೇ ತೀರ್ಮಾನ ಕೈಗೊಂಡರೆ ಪಕ್ಷಪಾತದ ಆರೋಪ ಎದುರಾಗಲಿದೆ. ಹೀಗಾಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಸಿಎಂ ಆಯ್ಕೆಯ ಹೊಣೆಯನ್ನು ಖರ್ಗೆ ಬಿಟ್ಟುಬಿಟ್ಟಿದ್ದಾರೆನ್ನಲಾಗಿದೆ. ಅಲ್ಲಿನ ನಿರ್ಧಾರದಂತೆ ನೂತನ ಸಿಎಂ ಹೆಸರನ್ನು ಲಕೋಟೆಯಲ್ಲಿ ತಂದು ಎಐಸಿಸಿ ವೀಕ್ಷಕರು ಘೋಷಣೆ ಮಾಡಲಿದ್ದಾರೆ. ಈ ಹಿಂದೆ ಕಾಂಗ್ರೆಸ್ ಬಂಗಾರಪ್ಪ, ವೀರಪ್ಪ ಮೊಯ್ಲಿ ಅವರ ಆಯ್ಕೆಗೆ ಇದೇ “ಲಕೋಟೆ” ತಂತ್ರವನ್ನು ಎಐಸಿಸಿ ಅನುಸರಿಸಿತ್ತು.
ಪವರ್ ಸೆಂಟರ್ ಆದ ಮಲ್ಲಿಕಾರ್ಜುನ್ ಖರ್ಗೆ ನಿವಾಸ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸ ಈಗ ಅಕ್ಷರಶಃ ಪವರ್ ಸೆಂಟರ್ ಆಗಿದೆ. ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆದುಕೊಂಡಿರುವುದರಿಂದ ಈಗ ಮುಂದಿರುವ ಮೊದಲ ಸವಾಲು ಮುಖ್ಯಮಂತ್ರಿಯ ಆಯ್ಕೆಯಾಗಿದೆ. ಇದಕ್ಕೆ ಪ್ರಬಲ ಪೈಪೋಟಿ ಒಡ್ಡುತ್ತಿರುವುದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಾಗಿದ್ದಾರೆ. ಈಗ ಈ ಇಬ್ಬರೂ ನಾಯಕರು ತಮ್ಮ ತಮ್ಮ ಬೆಂಬಲಿಗರೊಂದಿಗೆ ಖರ್ಗೆ ನಿವಾಸಕ್ಕೆ ಎಡತಾಕುತ್ತಿದ್ದಾರೆ.
ಖರ್ಗೆ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ
ಈ ವೇಳೆ ಭಾನುವಾರ ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರ ಜತೆಗೂಡಿ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಖರ್ಗೆ ಜತೆ ಕೆಲವು ಕಾಲ ಚರ್ಚೆ ನಡೆಸಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲ ಆಗದಂತೆ ನೋಡಿಕೊಳ್ಳಬೇಕೆಂಬ ಸಲಹೆಯನ್ನು ಖರ್ಗೆ ಅವರ ಮುಂದೆ ಸಿದ್ದರಾಮಯ್ಯ ಇಟ್ಟಿದ್ದಾರೆಂದು ಮೂಲಗಳು ತಿಳಿಸಿವೆ. ಅಲ್ಲದೆ, ತಮ್ಮನ್ನೇ ಸಿಎಂ ಮಾಡಬೇಕೆಂಬ ಬಗ್ಗೆ ತಮ್ಮ ಬೆಂಬಲಿಗರ ಮೂಲಕ ಹೇಳಿಸಿದ್ದಾರೆಂದೂ ಹೇಳಲಾಗುತ್ತಿದೆ. ಈ ವೇಳೆ ಖರ್ಗೆ ಅವರು, ಅಂತಿಮ ನಿರ್ಧಾರ ಹೈಕಮಾಂಡ್‌ನದ್ದು ಎಂದೂ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ವೇಳೆ ಎಂ.ಬಿ. ಪಾಟೀಲ್, ಆರ್.ವಿ. ದೇಶಪಾಂಡೆ, ಬೈರತಿ ಸುರೇಶ್, ಜಮೀರ್ ಅಹ್ಮದ್ ಸೇರಿದಂತೆ ಇನ್ನಿತರರು ಇದ್ದರು.
ಇದನ್ನೂ ಓದಿ: Karnataka Election 2023: ನಾನು ನಿವೃತ್ತಿಯಾಗವುದಿಲ್ಲ, ಸಾಯೋತನಕ ಸಕ್ರಿಯ ಎಂದ ವಿ ಸೋಮಣ್ಣ
ಖರ್ಗೆ ನಿವಾಸಕ್ಕೆ ಘಟಾನುಘಟಿ ನಾಯಕರ ಭೇಟಿ
ಸದಾಶಿವನಗರದಲ್ಲಿ ಖರ್ಗೆ ನಿವಾಸಕ್ಕೆ ಕಾಂಗ್ರೆಸ್‌ನ ಹಿರಿಯ ನಾಯಕರು ಭೇಟಿ ನೀಡಿ ಚರ್ಚೆ ನಡೆಸುತ್ತಿದ್ದಾರೆ. ಆರ್.ವಿ. ದೇಶಪಾಂಡೆ, ಎಂ.ಬಿ. ಪಾಟೀಲ್, ಎಚ್.ಕೆ. ಪಾಟೀಲ್ ಸೇರಿದಂತೆ ಹಲವು ನಾಯಕರು ಭೇಟಿ ನೀಡಿ ಮಲ್ಲಿಕಾರ್ಜುನ ಖರ್ಗೆ ಜತೆಗೆ ಚರ್ಚೆ ನಡೆಸಿದ್ದಾರೆ. ಅಲ್ಲದೆ, ಈ ವೇಳೆ ಮುಂದಿನ ಸಿಎಂ ಯಾರನ್ನು ಮಾಡಬಹುದು ಎಂಬ ವಿಚಾರದ ಬಗ್ಗೆಯೂ ಈ ನಾಯಕರು ಅಭಿಪ್ರಾಯ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಜತೆಗೆ ಹೈಕಮಾಂಡ್ ಮಟ್ಟದಲ್ಲಿ ಒಂದು ಸೂತ್ರ ರಚಿಸುವಂತೆಯೂ ಸಲಹೆ ನೀಡಿದ್ದಾರೆ.
ಲೋಕಸಭಾ ಚುನಾವಣೆ ಲೆಕ್ಕಾಚಾರ
ಇನ್ನು ಲೋಕಸಭಾ ಚುನಾವಣೆ ಮುಂದಿನ ವರ್ಷ ಎದುರಾಗಲಿರುವ ಹಿನ್ನೆಲೆಯಲ್ಲಿ ಯಾರನ್ನು ಮುಖ್ಯಮಂತ್ರಿ ಮಾಡಿದರೆ ಹೆಚ್ಚು ಸೂಕ್ತ ಎಂಬ ವಿಚಾರದ ಬಗ್ಗೆಯೂ ನಡೆದಿದೆ. ಅಲ್ಲದೆ, ಯಾವ ಸಮುದಾಯ ಇಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಹೀಗಾಗಿ ಲೋಕಸಭಾ ಚುನಾವಣೆ ಮುಗಿಯುವವರೆಗೆ ಯಾರನ್ನು ಮಾಡಿದರೆ ಸೂಕ್ತ ಎಂಬ ಬಗ್ಗೆಯೂ ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.
50-50 ಫಾರ್ಮುಲಾ ಸಾಧ್ಯತೆ
ಮುಖ್ಯಮಂತ್ರಿ ಯಾರು ಆಗಬೇಕು ಎಂಬುದನ್ನು ಶಾಸಕಾಂಗವು ನಿರ್ಧಾರ ಮಾಡುತ್ತದೆ. ಶಾಸಕಾಂಗವನ್ನೂ ಗಣನೆಗೆ ತೆಗೆದುಕೊಂಡು, ವರಿಷ್ಠರ ನಿರ್ಣಯದ ಮೂಲಕ ನಿರ್ಧಾರವನ್ನು ಪ್ರಕಟ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಕಾಂಗ್ರೆಸ್ ಬಹುಮತಕ್ಕೆ ಬರಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರ ದೊಡ್ಡದಿರುವುದರಿಂದ ಇವರಿಬ್ಬರೂ ತಲಾ ಎರಡೂವರೆ ವರ್ಷ ಮುಖ್ಯಮಂತ್ರಿಯನ್ನಾಗಿ ಮಾಡುವ 50:50 ಫಾರ್ಮುಲಾವನ್ನು ಬಳಸುವ ಬಗ್ಗೆಯೂ ಪಕ್ಷದಲ್ಲಿ ಚರ್ಚೆಗಳು ನಡೆದಿವೆ ಎಂದು ಹೇಳಲಾಗಿದೆ.
ಡಿಸಿಎಂ ಹುದ್ದೆ ಇದ್ದರೆ ಉತ್ತಮ- ಎಚ್.ಕೆ. ಪಾಟೀಲ್
ಈ ಬಾರಿಯ ಸಚಿವ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ಇದ್ದರೆ ಉತ್ತಮ. ಸಿಎಂ ಯಾರು ಆಗಬೇಕು ಎಂಬುದರ ಬಗ್ಗೆ ಶಾಸಕಾಂಗ ಸಭೆಯಲ್ಲಿ ಚರ್ಚೆ ಮಾಡಿ ವರಿಷ್ಠರು ನಿರ್ಧಾರ ಮಾಡುತ್ತಾರೆ. ವರಿಷ್ಠರು ಯಾರನ್ನು ತೋರಿಸುತ್ತಾರೋ ಅವರೇ ಮುಖ್ಯಮಂತ್ರಿ ಆಗುತ್ತಾರೆ. ಸಿಎಂ ಮಾಡುವಾಗ ಶಾಸಕಾಂಗವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ. ವರಿಷ್ಠರು ಅಂತಿಮ ಮಾರ್ಗದರ್ಶನ ನೀಡುತ್ತಾರೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಲಕೋಟೆಯಲ್ಲಿ ಬರಲಿದೆ ನೂತನ ಸಿಎಂ ಹೆಸರು
ಮುಖ್ಯಮಂತ್ರಿ ಗಾದಿಗೆ ಡಿ.ಕೆ. ಶಿವಕುಮಾರ್ – ಸಿದ್ದರಾಮಯ್ಯ ಪೈಪೋಟಿ ಇರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ತಮ್ಮ ಹಳೇ ಸಂಪ್ರದಾಯಕ್ಕೆ ಕಾಂಗ್ರೆಸ್ ಮೊರೆ ಹೋಗಿದೆ. ಈ ಬಾರಿ ಮತ್ತೆ “ಲಕೋಟೆ ಸಿಎಂ” ಸಂಪ್ರದಾಯಕ್ಕೆ ಕಾಂಗ್ರೆಸ್ ಮೊರೆ ಹೋಗಿದೆ ಎನ್ನಲಾಗಿದೆ.
ಇದನ್ನೂ ಓದಿ: Weather Report: ಇಂದು ಬಿಸಿಲಿಗೆ ಸುಡಲಿದೆ ರಾಜ್ಯ; ಅಲ್ಲಲ್ಲಿ ಮಾತ್ರವೇ ಮಳೆ ಅಬ್ಬರ
ದೆಹಲಿಯಿಂದ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ನಿರ್ಧಾರ ಹೊರಬೀಳಲಿದ್ದು, ಆ ಹೆಸರು ಲಕೋಟೆಯಲ್ಲಿ ರಾಜ್ಯಕ್ಕೆ ಬರಲಿದೆ. ಈ ಹಿನ್ನೆಲೆಯಲ್ಲಿಯೇ ಭಾನುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಗೆ ತೆರಳಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ.