| ಪರಶುರಾಮ ತಹಶೀಲ್ದಾರ್, ವಿಸ್ತಾರ ನ್ಯೂಸ್, ಹುಬ್ಬಳ್ಳಿ
ಧಾರವಾಡ ಜಿಲ್ಲೆಯಲ್ಲಿ ಈ ಬಾರಿಯ ರಾಜಕೀಯ ಸಮೀಕರಣಗಳು ಬಹಳಷ್ಟು ಬದಲಾಗಿವೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಡೈರೆಕ್ಟ್ ಫೈಟ್ ಇದೆ. ಆದರೆ, ಕಾಂಗ್ರೆಸ್ ಉರುಳಿಸಿರುವ ಶೆಟ್ಟರ್ ದಾಳ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹುಬ್ಬಳ್ಳಿಯ ಬೆಳವಣಿಗೆಗಳು ಸದ್ಯಕ್ಕೆ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದ ಗಮನ ಸೆಳೆಯುತ್ತಿವೆ. ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದು ಜಿಲ್ಲೆ ಮಾತ್ರವಲ್ಲ ಉತ್ತರ ಕರ್ನಾಟಕದ ರಾಜಕೀಯ ಚಿತ್ರಣ ಬದಲಿಸಿದೆ. ಇದೇ ಕಾರಣಗಳಿಂದಾಗಿ ಬಿಜೆಪಿಯ ಭದ್ರಕೋಟೆಯಾಗಿದ್ದ ಧಾರವಾಡ ಜಿಲ್ಲೆಯಲ್ಲಿ ಈ ಬಾರಿಯ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಶೆಟ್ಟರ್ ರಾಜೀನಾಮೆ, ಬಿಜೆಪಿ ಕಾರ್ಯಕರ್ತರಲ್ಲಿ ಮೂಡಿದ ಗೊಂದಲದಿಂದ ಬಿಜೆಪಿಗೆ ಹಿನ್ನಡೆಯಾಗುತ್ತದೆ ಎಂದು ಹೇಳಿದರೂ, ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ಅಬ್ಬರದ ಪ್ರಚಾರವು ಬಿಜೆಪಿಗೆ ವರದಾನವಾಗಿದೆ. ಶೆಟ್ಟರ್ ಅವರನ್ನು ಪಕ್ಷಕ್ಕೆ ಸೆಳೆದುಕೊಂಡರೂ ಕಾಂಗ್ರೆಸ್ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತದೆಯೇ ಎಂಬ ಪ್ರಶ್ನೆ ಮೂಡಿದಿದೆ. ಹಾಗಾದರೆ, ಧಾರವಾಡ ಜಿಲ್ಲೆಯಲ್ಲಿ ರಾಜಕೀಯ ವಸ್ತುಸ್ಥಿತಿ ಹೇಗಿದೆ? ಯಾವ ಪಕ್ಷದ ಪರ ಜನರ ಒಲವಿದೆ? ಅಭ್ಯರ್ಥಿಗಳ ಲೆಕ್ಕಾಚಾರ ಏನಿದೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಕಳೆದ ಚುನಾವಣೆ ಫಲಿತಾಂಶ
ಒಟ್ಟು ಕ್ಷೇತ್ರ: 7
ಬಿಜೆಪಿ: 5 (ಹುಬ್ಬಳ್ಳಿ- ಧಾರವಾಡ ಕೇಂದ್ರ, ಹುಬ್ಬಳ್ಳಿ- ಧಾರವಾಡ ಪಶ್ಚಿಮ, ಧಾರವಾಡ ಗ್ರಾಮೀಣ, ಕಲಘಟಗಿ, ನವಲಗುಂದ)
ಕಾಂಗ್ರೆಸ್: 2 (ಹುಬ್ಬಳ್ಳಿ- ಧಾರವಾಡ ಪೂರ್ವ ಮೀಸಲು ಕ್ಷೇತ್ರ, ಕುಂದಗೋಳ)
ಹುಬ್ಬಳ್ಳಿ- ಧಾರವಾಡ ಕೇಂದ್ರ: ಪ್ರತಿಷ್ಠೆಯ ಕಣ, ಶೆಟ್ಟರ್ VS ಬಿಜೆಪಿ ರಣಾಂಗಣ
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನಿರಾಕರಿಸುತ್ತಿದ್ದಂತೆಯೇ ಬಿಜೆಪಿ ತೊರೆದಿದ್ದಾರೆ. ಕಾಂಗ್ರೆಸ್ ಸೇರಿ ಹುಬ್ಬಳ್ಳಿ- ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಕಳೆದ ಆರು ಬಾರಿ ಬಿಜೆಪಿಯಿಂದ ಗೆದ್ದು ಸೋಲಿಲ್ಲದ ಸರದಾರ ಎನ್ನಿಸಿಕೊಂಡಿರುವ ಜಗದೀಶ್ ಶೆಟ್ಟರ್, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ. ಹೀಗಾಗಿ ಕ್ಷೇತ್ರದಲ್ಲಿ ಯಾರು ಗೆದ್ದರೂ ದಾಖಲೆ ನಿರ್ಮಾಣವಾಗಲಿದೆ. ಶೆಟ್ಟರ್ ಗೆದ್ದರೆ ಬಿಜೆಪಿ ಭದ್ರಕೋಟೆ ಛಿದ್ರವಾಗಿ ಮೊದಲ ಬಾರಿ ಕೈಪಡೆ ಗೆಲುವಿನ ಮಾಲೆ ಧರಿಸಲಿದೆ. ಶೆಟ್ಟರ್ ಸೋತರೆ ಬಿಜೆಪಿಯ ನಿರಂತರ ಗೆಲುವಿನ ದಾಖಲೆ ಮುಂದುವರಿಯಲಿದೆ. ಮಹೇಶ್ ಟೆಂಗಿನಕಾಯಿ ಅವರು ಇತಿಹಾಸ ಸೃಷ್ಟಿಸಲಿದ್ದಾರೆ. ಹೀಗಾಗಿ ಎರಡೂ ಪಕ್ಷಗಳ ಘಟಾನುಘಟಿ ನಾಯಕರು ಹುಬ್ಬಳ್ಳಿಗೆ ದೌಡಾಯಿಸುತ್ತಿದ್ದಾರೆ. ಬಿಜೆಪಿಯಿಂದ ಲಿಂಗಾಯತರಿಗೆ ಅನ್ಯಾಯ ಎಂದು ಶೆಟ್ಟರ್ ಬಣ ಆರೋಪಿಸುತ್ತಿದೆ. ಶೆಟ್ಟರ್ ಪಕ್ಷದ್ರೋಹಿ ಎಂದು ಬಿಜೆಪಿ ಪಾಳಯ ಟೀಕಿಸುತ್ತಿದೆ. ಶೆಟ್ಟರ್ ವರ್ಸಸ್ ಬಿಜೆಪಿ ಅನ್ನುವ ರೀತಿ ಕ್ಷೇತ್ರದಲ್ಲಿ ಹೋರಾಟ ನಡೆಯುತ್ತಿದೆ. ಶೆಟ್ಟರ್ ಅವರು ಬಿಜೆಪಿಯ ಸಾಂಪ್ರದಾಯಿಕ ಮತದಾರರಾದ ಸಾವಜಿ, ಮರಾಠಾ ಮತ್ತು ಲಿಂಗಾಯತರ ಎಷ್ಟು ಮತಗಳನ್ನು ಸೆಳೆಯುತ್ತಾರೆ ಎನ್ನುವುದರ ಮೇಲೆ ಕ್ಷೇತ್ರದ ಫಲಿತಾಂಶ ನಿರ್ಧಾರವಾಗಲಿದೆ. ಒಟ್ಟಿನಲ್ಲಿ ಇದು ಪ್ರತಿಷ್ಠೆಯ ಕಣವಾಗಿದೆ.
ಕಳೆದ ಚುನಾವಣೆ ಫಲಿತಾಂಶ
ಜಗದೀಶ್ ಶೆಟ್ಟರ್- ಬಿಜೆಪಿ- 75,794
ಮಹೇಶ್ ನಾಲವಾಡ್- ಕಾಂಗ್ರೆಸ್- 54,488
ಗೆಲುವಿನ ಅಂತರ- 21,306
ಹುಬ್ಬಳ್ಳಿ- ಧಾರವಾಡ ಪೂರ್ವ (ಎಸ್‌ಸಿ ಮೀಸಲು): ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್, ಎಐಎಂಐಎಂ ಸವಾಲು
ಹುಬ್ಬಳ್ಳಿ- ಧಾರವಾಡ ಪೂರ್ವ ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ಕಳೆದ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಪ್ರಸಾದ್ ಅಬ್ಬಯ್ಯ ಗೆಲುವು ಸಾಧಿಸಿದ್ದಾರೆ. ಬಿಜೆಪಿಯಿಂದ ಡಾ. ಕ್ರಾಂತಿಕಿರಣ ಅವರನ್ನು ಕಣಕ್ಕೆ ಇಳಿಸಲಾಗಿದೆ. ಇವರು ಅತ್ಯಂತ ಚುರುಕಿನಿಂದ ಮತ್ತು ವ್ಯವಸ್ಥಿತವಾಗಿ ಪ್ರಚಾರ ನಡೆಸುತ್ತಿದ್ದಾರೆ. ಇನ್ನೊಂದೆಡೆ ಬಿಜೆಪಿ ಟಿಕೆಟ್ ಕೈತಪ್ಪುವ ಸೂಚನೆ ಸಿಗುತ್ತಿದ್ದಂತೆ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಜೆಡಿಎಸ್ ಸೇರಿದ್ದಾರೆ. ಸದ್ಯ ಜೆಡಿಎಸ್ ಅಭ್ಯರ್ಥಿಯಾಗಿ ಅವರು ಕಣದಲ್ಲಿದ್ದು ಬಿಜೆಪಿ ವೋಟ್‌ಬ್ಯಾಂಕ್‌ಗೆ ಕುತ್ತು ತಂದಿದ್ದಾರೆ. ಇನ್ನೊಂದೆಡೆ ಎಐಎಂಐಎಂ ಪಕ್ಷದ ಅಭ್ಯರ್ಥಿ ದುರ್ಗಪ್ಪ ಬಿಜವಾಡ ಮುಸ್ಲಿಂ ವೋಟ್ ಬ್ಯಾಂಕ್‌ಗೆ ಕೈಹಾಕಿದ್ದಾರೆ. ಓವೈಸಿ ಕ್ಯಾಂಪೇನ್‌ನೊಂದಿಗೆ ಕಾಂಗ್ರೆಸ್ ಅಭ್ಯರ್ಥಿಗೆ ಭಯ ಹುಟ್ಟಿಸಿದ್ದಾರೆ. ಜೆಡಿಎಸ್ ಕೂಡ ಭಾರಿ ಪೈಪೋಟಿ ಒಡ್ಡುತ್ತಿದೆ. ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಸಾಂಪ್ರದಾಯಿಕ ಮತಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿವೆ. ಎಸ್‌ಸಿ ಹಾಗೂ ಮುಸ್ಲಿಂ ಮತಗಳನ್ನು ಗಟ್ಟಿಯಾಗಿ ಉಳಿಸಿಕೊಂಡರೆ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಹ್ಯಾಟ್ರಿಕ್ ಸಾಧಿಸಬಹುದು. ಏಕೆಂದರೆ, ಬಿಜೆಪಿ ಇಲ್ಲಿ ಪ್ರಬಲ ಪೈಪೋಟಿ ನೀಡುತ್ತಿದೆ.
ಕಳೆದ ಚುನಾವಣೆ ಫಲಿತಾಂಶ
ಪ್ರಸಾದ್ ಅಬ್ಬಯ್ಯ- ಕಾಂಗ್ರೆಸ್- 77,080,
ಚಂದ್ರಶೇಖರ ಗೋಕಾಕ- ಬಿಜೆಪಿ- 55,613
ಗೆಲುವಿನ ಅಂತರ: 21,467
ಕಲಘಟಗಿ: ಯಾರ ಪ್ರಾಬಲ್ಯ ಬಿಗಿ?
ಕಲಘಟಗಿ ಕ್ಷೇತ್ರದಲ್ಲಿ ಬಿಜೆಪಿ ಹೊಸ ಪ್ರಯೋಗಕ್ಕೆ ಕೈಹಾಕಿದೆ. ಹಾಲಿ ಶಾಸಕ ಸಿ.ಎಂ. ನಿಂಬಣ್ಣವರ್‌ಗೆ ಟಿಕೆಟ್ ಮಿಸ್ ಆಗಿದೆ. ಕಾಂಗ್ರೆಸ್‌ನಲ್ಲಿ ಸಂತೋಷ್ ಲಾಡ್ ವಿರುದ್ಧ ಟಿಕೆಟ್‌ಗಾಗಿ ಪೈಪೋಟಿಗೆ ಇಳಿದಿದ್ದ ನಾಗರಾಜ್ ಛಬ್ಬಿಗೆ ಬಿಜೆಪಿ ಟಿಕೆಟ್ ಕೊಟ್ಟಿದೆ. ಕಳೆದ ಬಾರಿಯ ಸೋಲಿನಿಂದ ಸಾಕಷ್ಟು ಪಾಠ ಕಲಿತಿರುವ ಸಂತೋಷ್ ಲಾಡ್ ಈ ಬಾರಿ ಸಂಪೂರ್ಣ ತಯಾರಿಯೊಂದಿಗೆ ಕಣಕ್ಕೆ ಇಳಿದಿದ್ದಾರೆ. ಸ್ಟಾರ್ ಪ್ರಚಾರಕರನ್ನು ಕರೆಸದೆ ತಾವೇ ಮನೆಮನೆ ಸುತ್ತುತ್ತಿದ್ದಾರೆ. ಮತದಾರರ ಬಳಿ ತೆರಳಿ, ತಮ್ಮ ಮೇಲೆ ಸಿಟ್ಟಿದ್ದರೆ ಕ್ಷಮಿಸಿ ಈ ಬಾರಿ ಆಶಿರ್ವದಿಸಿ ಎಂದು ಮನವಿ ಮಾಡುತ್ತಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ತೊರೆದು ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿರುವ ನಾಗರಾಜ್ ಛಬ್ಬಿ ಮೂಲ ಬಿಜೆಪಿಗರ ಮನವೊಲಿಸಲು ಹರಸಾಹಸ ಪಡಬೇಕಾಗಿದೆ. ಬಿಜೆಪಿ ಟಿಕೆಟ್ ಮಿಸ್ ಆಗಿರುವ ಸಿ.ಎಮ್. ನಿಂಬಣ್ಣವರ್ ಕೂಡ ಕ್ಷೇತ್ರದಲ್ಲಿ ಅಷ್ಟೊಂದು ಚುರುಕಾಗಿ ಕೆಲಸ ಮಾಡುತ್ತಿಲ್ಲ ಎಂದು ಪಕ್ಷದ ಕಾರ್ಯಕರ್ತರೆ ಮಾತಾಡಿಕೊಳ್ಳುತ್ತಿದ್ದಾರೆ. ವಿಶಾಲವಾಗಿರುವ ಕಲಘಟಗಿ- ಅಳ್ನಾವರ ಕ್ಷೇತ್ರದಲ್ಲಿ ಸುಮಾರು 148 ಗ್ರಾಮಗಳಿವೆ. ಹೀಗಾಗಿ ಬಿಜೆಪಿ ಅಭ್ಯರ್ಥಿಗೆ ಜನರನ್ನು ಮುಖತಃ ತಲುಪುವುದೇ ಸವಾಲಾಗಿ ಪರಿಣಮಿಸಿದೆ. ಕ್ಷೇತ್ರದಲ್ಲಿ ಲಿಂಗಾಯತ ಮತ್ತು ಮರಾಠಾ ಮತದಾರರು ನಿರ್ಣಾಯಕರಾಗಿದ್ದಾರೆ. ಮರಾಠಾ ಸಮುದಾಯದ ಸಂತೋಷ್ ಲಾಡ್ ಮತ್ತು ಲಿಂಗಾಯತ ಸಮುದಾಯದ ನಾಗರಾಜ್ ಛಬ್ಬಿ ನಡುವೆ ತುರುಸಿನ ಸ್ಪರ್ಧೆಯಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಹಿಂದೆ ಲಾಡ್ ಮಾಡಿರುವ ಅಭಿವೃದ್ಧಿ ಕೆಲಸಗಳು ಜನಮಾನಸದಲ್ಲಿದ್ದು, ಕಾಂಗ್ರೆಸ್ ಇದನ್ನು ನೆಚ್ಚಿಕೊಂಡಿದೆ.
ಕಳೆದ ಚುನಾವಣೆ ಫಲಿತಾಂಶ
ಸಿ.ಎಂ. ನಿಂಬಣ್ಣವರ್- ಬಿಜೆಪಿ- 83,267
ಸಂತೋಷ್ ಲಾಡ್- ಕಾಂಗ್ರೆಸ್- 57,270
ಗೆಲುವಿನ ಅಂತರ- 25,997
ಕುಂದಗೋಳ: ತಂತ್ರ-ಪ್ರತಿತಂತ್ರದ ಕ್ಷೇತ್ರದಲ್ಲಿ ಯಾರಿಗೆ ಗೆಲುವಿನ ಮಂತ್ರ?
ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕಿ ಕುಸುಮಾವತಿ ಶಿವಳ್ಳಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸಚಿವರಾಗಿದ್ದ ಪತಿ ಸಿ.ಎಸ್. ಶಿವಳ್ಳಿ ನಿಧನದ ಅನುಕಂಪದ ಅಲೆಯಲ್ಲಿ ಉಪಚುನಾವಣೆಯಲ್ಲಿ ಕುಸುಮಾವತಿ ಗೆದ್ದಿದ್ದರು. ಈಗ ಕ್ಷೇತ್ರದ ಚಿತ್ರಣ ಬದಲಾಗಿದೆ. ಕಾಂಗ್ರೆಸ್‌ನಲ್ಲಿ ಹದಿನಾರು ಜನ ಟಿಕೆಟ್ ಆಕಾಂಕ್ಷಿಗಳಿದ್ದು ಕುಸುಮಾವತಿಗೆ ಟಿಕೆಟ್ ಕೊಡದಂತೆ ವರಿಷ್ಠರಿಗೆ ದಂಬಾಲು ಬಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಕುಸುಮಾವತಿ ಪರವಾಗಿ ಟಿಕೆಟ್ ವಂಚಿತರು ಮನಪೂರ್ವಕವಾಗಿ ಕೆಲಸ ಮಾಡುತ್ತಿಲ್ಲ. ಬದಲಾಗಿ ಒಳಪೆಟ್ಟು ಕೊಡಲು ಕಾಂಗ್ರೆಸ್‌ನ ಒಂದು ಬಣ ಎಲ್ಲ ರಣತಂತ್ರ ಮಾಡಿದೆ ಎನ್ನಲಾಗುತ್ತಿದೆ. ಬಿಜೆಪಿ ಅಭ್ಯರ್ಥಿ ಎಂ.ಆರ್. ಪಾಟೀಲ್ ಕಳೆದ ಮೂರು ವರ್ಷಗಳಿಂದ ಚುನಾವಣೆಗೆ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಸಂಬಂಧಿಯಾದ ಸಿ.ಸಿ. ಪಾಟೀಲರ ಸಹಕಾರದೊಂದಿಗೆ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಸಾಕಷ್ಟು ಕೆಲಸ ಮಾಡಿಸಿದ್ದಾರೆ. ಜನರ ಕಷ್ಟಸುಖಗಳಿಗೆ ಸ್ಪಂದಿಸಿದ್ದಾರೆ. ಇದು ಬಿಜೆಪಿ ಅಭ್ಯರ್ಥಿಗೆ ವರವಾಗುವ ಸಾಧ್ಯತೆಗಳಿವೆ. ಬಿಜೆಪಿ ಟಿಕೆಟ್ ಕೈತಪ್ಪಿದ ಕಾರಣ ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡರ್ ಪಕ್ಷೇತರವಾಗಿ ಕಣದಲ್ಲಿದ್ದಾರೆ. ತಾನು ಸೋತರೂ ಪರವಾಗಿಲ್ಲ ಬಿಜೆಪಿ ಅಭ್ಯರ್ಥಿ ಗೆಲ್ಲಬಾರದು ಎನ್ನುವ ಧೋರಣೆಯಲ್ಲಿ ಇದ್ದಂತೆ ಕಾಣಿಸುತ್ತಿದೆ. ಜೆಡಿಎಸ್ ಅಭ್ಯರ್ಥಿ ಹಜರತ್‌ಅಲಿ ಜೋಡಮನಿ ಕಾಂಗ್ರೆಸ್ ವೋಟ್‌ಬ್ಯಾಂಕ್‌ಗೆ ಕೈಹಾಕಿದ್ದು, ಮತ ವಿಭಜನೆಯಾಗಲಿವೆ. ಕ್ಷೇತ್ರದಲ್ಲಿ ಲಿಂಗಾಯತ, ಕುರುಬ, ಮುಸ್ಲಿಂ ಮತದಾರರು ನಿರ್ಣಾಯಕರಾಗಿದ್ದು ಈ ಬಾರಿ ಮತದಾರರು ಯಾರಿಗೆ ಮಣೆ ಹಾಕ್ತಾರೆ ಅನ್ನೋದು ಕುತೂಹಲ ಕೆರಳಿಸಿದೆ.
2019ರ ವಿಧಾನಸಭೆ ಉಪ ಚುನಾವಣೆ ಫಲಿತಾಂಶ
ಕುಸುಮಾ ಶಿವಳ್ಳಿ- ಕಾಂಗ್ರೆಸ್- 77,587
ಎಸ್.ಐ ಚಿಕ್ಕನಗೌಡ-ಬಿಜೆಪಿ- 75,976
ಗೆಲುವಿನ ಅಂತರ- 1,611
ಧಾರವಾಡ ಗ್ರಾಮೀಣ: ಬದಲಾಗಬಹುದೇ ಕ್ಷೇತ್ರದ ಇತಿಹಾಸ?
ಧಾರವಾಡ ಗ್ರಾಮೀಣ ಕ್ಷೇತ್ರ ಇದೀಗ ರಾಜ್ಯದ ಗಮನ ಸೆಳೆದಿರುವ ಕ್ಷೇತ್ರವಾಗಿದೆ. ಮೊದಲ ಬಾರಿಗೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಯು ಜಿಲ್ಲೆಯ ಹೊರಗಿದ್ದುಕೊಂಡೇ ಚುನಾವಣೆ ಎದುರಿಸುವ ಸ್ಥಿತಿ ಎದುರಾಗಿದೆ. ಒಮ್ಮೆ ಗೆಲ್ಲಿಸಿದ ನಾಯಕನನ್ನು ಮತ್ತೊಮ್ಮೆ ಗೆಲ್ಲಿಸಿದ್ದ ಇತಿಹಾಸವೇ ಇಲ್ಲದ ಈ ಕ್ಷೇತ್ರದಲ್ಲಿ ಈ ಬಾರಿ ಗೆಲುವು ಬಿಜೆಪಿಗೋ ಅಥವಾ ಕಾಂಗ್ರೆಸ್ ಗೋ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ಅದರಲ್ಲೂ ಮಾಜಿ ಸಚಿವ ವಿನಯ್ ಕುಲಕರ್ಣಿ ಕ್ಷೇತ್ರದಲ್ಲಿ ಇಲ್ಲದಿದ್ದರೂ ಜನ ಮಾತ್ರ ವಿನಯ್ ಬಿಟ್ಟುಕೊಡಲು ತಯಾರಿಲ್ಲ. ಇತ್ತ ಕೋಟ್ಯಂತರ ರೂ. ಅನುದಾನ ತಂದಿರುವ ಬಿಜೆಪಿ ಶಾಸಕ ಅಮೃತ್ ದೇಸಾಯಿ ಅಭಿವೃದ್ಧಿ ಇಟ್ಟುಕೊಂಡು ಮತದಾರರ ಬಳಿ ಮತಯಾಚನೆ ಮಾಡುತ್ತಿದ್ದಾರೆ. ಹೀಗಾಗಿ ಮತದಾರ ಪ್ರಭು ಇಬ್ಬರ ಮೇಲೂ ಹೆಚ್ಚು ಒಲವಿದೆ. ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ ಇದೀಗ ಬೇಲ್ ಮೇಲೆ ಹೊರಗಿರುವ ವಿನಯ್ ಕುಲಕರ್ಣಿಗೆ ಜಿಲ್ಲೆಗೆ ಪ್ರವೇಶ ಸಿಗುತ್ತಿಲ್ಲ. ಅದನ್ನೇ ಬಂಡವಾಳವಾಗಿಸಿಕೊಂಡಿರುವ ಅವರು ಮತ್ತು ಅವರ ಬೆಂಬಲಿಗರು ಪ್ರಚಾರದ ಕಾರ್ಯದಲ್ಲಿ ಅನುಕಂಪದ ಅಲೆಯನ್ನು ಎಬ್ಬಿಸಿ ಮತ ಬೇಟೆ ಶುರು ಮಾಡಿದ್ದಾರೆ. ಹಾಗಾಗಿ, ಫಲಿತಾಂಶ ಕುತೂಹಲ ಕೆರಳಿಸಿದೆ.
ಕಳೆದ ಚುನಾವಣೆ ಫಲಿತಾಂಶ
ಅಮೃತ್ ದೇಸಾಯಿ- ಬಿಜೆಪಿ- 85,123
ವಿನಯ್ ಕುಲಕರ್ಣಿ- ಕಾಂಗ್ರೆಸ್- 64,783
ಗೆಲುವಿನ ಅಂತರ: 10,340
ನವಲಗುಂದ: ಬಿಜೆಪಿ ಪರ ಅಲೆ, ಕಾಂಗ್ರೆಸ್ ಒಡೆದ ಮನೆ
ಬಂಡಾಯದ ನಾಡು ಅಂತಲೇ ಗುರುತಿಸಿಕೊಂಡಿರುವ ನವಲಗುಂದ ವಿಧಾನಸಭಾ ಕ್ಷೇತ್ರ ರೈತ ಹೋರಾಟದ ಮೂಲಕ ನಾಡಿಗೆ ರೈತರ ಶಕ್ತಿ ತೋರಿಸಿದೆ. ಮಹದಾಯಿ ಹೋರಾಟದ ಕಿಚ್ಚು ಈ ನೆಲದಲ್ಲಿ ಆರಂಭವಾಗಿದ್ದು, ಕಳಸಾ ಬಂಡೂರಿ ನಾಲಾ ಯೋಜನೆಯನ್ನು ಯಾರು ತರುತ್ತಾರೋ ಅವರಿಗೆ ನಮ್ಮ ಮತ ಅಂತ ಈ ಹಿಂದೆಯೇ ರೈತರು ಹೇಳಿದ್ದರು. ಅದರಂತೆ ಇದೀಗ ಮಹದಾಯಿ ಡಿಪಿಆರ್ ಸಿದ್ಧವಾಗಿದ್ದು ಟೆಂಡರ್ ಪ್ರಕ್ರಿಯೆ ಸಹ ನಡೆದಿದೆ ಎನ್ನುತ್ತಾರೆ ಬಿಜೆಪಿ ನಾಯಕರು. ಹೀಗಾಗಿ ಬಿಜೆಪಿ ಹಾಲಿ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಪರ ಸದ್ಯಕ್ಕೆ ಜನರ ಒಲವಿದ್ದು, ಕಾಂಗ್ರೆಸ್ ಸೇರ್ಪಡೆಯಾಗಿ ಟಿಕೆಟ್ ಗಿಟ್ಟಿಸಿಕೊಂಡಿರೋ ಕೋನರೆಡ್ಡಿ ಅವರಿಗೆ ಒಳಗೊಳಗೇ ಶತ್ರುಗಳ ಕಾಟವೂ ಹೆಚ್ಚಿದೆ. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಮೇಲೆ ಮೂಲ ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಕೋನರೆಡ್ಡಿ ಗೆಲುವಿಗೆ ಮೂಲ ಕಾಂಗ್ರೆಸ್ಸಿಗರು ಶ್ರಮಿಸುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ಸದ್ಯಕ್ಕೆ ಸಮಬಲ ಹೋರಾಟ ಜೋರಾಗಿದ್ದು, ಬಿಜೆಪಿ ಒಂದು ಕೈ ಮೇಲೆಯೇ ಇದೆ ಅಂತ ಹೇಳಬಹುದಾಗಿದೆ.
ಕಳೆದ ಚುನಾವಣೆ ಫಲಿತಾಂಶ
ಶಂಕರ ಪಾಟೀಲ್ ಮುನೇನಕೊಪ್ಪ-ಬಿಜೆಪಿ- 65,718
ಎನ್.ಎಚ್. ಕೋನರೆಡ್ಡಿ-ಜೆಡಿಎಸ್-45,197
ಗೆಲುವಿನ ಅಂತರ: 20,521
ಹುಬ್ಬಳ್ಳಿ-ಧಾರವಾಡ ಪಶ್ಚಿಮ: ಸಮಬಲದ ಹೋರಾಟ, ಫಲಿತಾಂಶ ಕುತೂಹಲಕರ
ಅರವಿಂದ್ ಬೆಲ್ಲದ್ ಕುಟುಂಬಕ್ಕೆ ಹಲವು ವರ್ಷಗಳಿಂದ ಆಶೀರ್ವಾದ ಮಾಡುತ್ತ ಬಂದಿರುವ ಕ್ಷೇತ್ರ ಅಂದ್ರೆ ಅದು ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ. ಆದರೆ, ಈ ಬಾರಿ ಮಾತ್ರ ಕಾಂಗ್ರೆಸ್‌ನಲ್ಲಿ ಪ್ರಬಲ ಅಭ್ಯರ್ಥಿ ದೀಪಕ್ ಚಿಂಚೋರೆ ಇದ್ದು, ಕ್ಷೇತ್ರದಲ್ಲಿ ಎರಡು ವರ್ಷಗಳಿಂದ ಓಡಾಟ ಮಾಡುತ್ತಾ ಜನರ ನಂಬಿಕೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಅರವಿಂದ್ ಬೆಲ್ಲದ್ ಅವರಿಗೆ ನೇರಾನೇರ ಪೈಪೋಟಿ ನೀಡುವ ಪ್ರಬಲ ಅಭ್ಯರ್ಥಿ ಅಂತಲೇ ಚಿಂಚೋರೆ ಗುರುತಿಸಿಕೊಂಡಿದ್ದು, ಕೊನೆಯ ಕ್ಷಣದವರೆಗೂ ಈ ಪಶ್ಚಿಮ ಕ್ಷೇತ್ರದ ಕಾವು ಜೋರಾಗಿಯೇ ಇರಲಿದೆ. ಸದ್ಯಕ್ಕೆ ಟ್ರೆಂಡ್ ಬಿಜೆಪಿ ಅಭ್ಯರ್ಥಿ ಅರವಿಂದ್ ಬೆಲ್ಲದ್ ಪರವಿದ್ದು, ಯಾವಾಗ ಬೇಕಾದರೂ ಬದಲಾಗಬಹುದಾಗಿದೆ.
ಕಳೆದ ಚುನಾವಣೆ ಫಲಿತಾಂಶ
ಅರವಿಂದ್ ಬೆಲ್ಲದ್- ಬಿಜೆಪಿ- 96,462
ಇಸ್ಮಾಯಿಲ್ ತಮಟಗಾರ-ಕಾಂಗ್ರೆಸ್- 55,975
ಗೆಲುವಿನ ಅಂತರ: 40,487
ಇದನ್ನೂ ಓದಿ: ಕೊಪ್ಪಳ ಜಿಲ್ಲೆ ಕ್ಷೇತ್ರ ಸಮೀಕ್ಷೆ: ಕಾಂಗ್ರೆಸ್- ಬಿಜೆಪಿ ಮಧ್ಯೆ ಫೈಟ್, ಇದೆಯಾ ಗಾಲಿ ಜನಾರ್ದನ್ ರೆಡ್ಡಿ ಎಫೆಕ್ಟ್?