Site icon Vistara News

ಬರ ಪರಿಹಾರ: ಒಕ್ಕೂಟ ವ್ಯವಸ್ಥೆ ತತ್ವ ಪಾಲಿಸಿ, ರಾಜ್ಯಗಳಿಗೆ ಸ್ಪಂದಿಸಿ; ಕೇಂದ್ರಕ್ಕೆ ಸುಪ್ರೀಂ ಸಲಹೆ!

School Jobs

Supreme Court stays Calcutta HC order cancelling over 25,000 school jobs, slams Bengal govt

ನವದೆಹಲಿ: ಕರ್ನಾಟಕದಲ್ಲಿ ಬರಗಾಲದ (Drought In Karnataka) ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ನಿಧಿಯಲ್ಲಿ ಕರ್ನಾಟಕಕ್ಕೆ ಕೂಡಲೇ ಪರಿಹಾರ (Drought Relief) ನೀಡುವಂತೆ ಕೇಂದ್ರ ಸರ್ಕಾರಕ್ಕೆ (Central Government) ಆದೇಶಿಸಬೇಕು ಎಂಬ ಕುರಿತು ರಾಜ್ಯ ಸರ್ಕಾರ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌ (Supreme Court), ಕೇಂದ್ರ ಸರ್ಕಾರವು ಎರಡು ವಾರಗಳಲ್ಲಿ ಉತ್ತರ ನೀಡಬೇಕು ಎಂದು ಸೂಚಿಸಿದೆ. ಅಷ್ಟೇ ಅಲ್ಲ, ಕೇಂದ್ರ ಸರ್ಕಾರವು ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ಪಾಲಿಸಬೇಕು ಹಾಗೂ ದೇಶದ ಯಾವುದೇ ರಾಜ್ಯಗಳ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಕೂಡ ಸೂಚಿಸಿದೆ.

ಕೂಡಲೇ ಬರ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ರಾಜ್ಯ ಸರ್ಕಾರ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಹಾಗೂ ಸಂದೀಪ್‌ ಮೆಹ್ತಾ ವಿಚಾರಣೆ ನಡೆಸಿದರು. “ಕೇಂದ್ರ ಸರ್ಕಾರವು ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ಪಾಲಿಸಬೇಕು. ಎರಡು ವಾರಗಳಲ್ಲಿ ಬರ ಪರಿಹಾರದ ಕುರಿತು ಉತ್ತರ ನೀಡಬೇಕು. ಸುದ್ದಿಯಾಗುತ್ತದೆ ಎಂಬ ಕಾರಣಕ್ಕಾಗಿ ಅಧಿಕೃತವಾಗಿ ನೋಟಿಸ್‌ ನೀಡುತ್ತಿಲ್ಲ” ಎಂದು ತಿಳಿಸಿತು. ಹಾಗೆಯೇ, ಎರಡು ವಾರಗಳವರೆಗೆ ವಿಚಾರಣೆಯನ್ನು ಮುಂದೂಡಲಾಯಿತು.

ಹೀಗಿತ್ತು ವಾದ-ಪ್ರತಿವಾದ

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್ ತುಷಾರ್‌ ಮೆಹ್ತಾ, “ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಬದಲು ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆಸಬಹುದಿತ್ತು. ಮಾತುಕತೆ ಮೂಲಕವೇ ಪರಿಹಾರ ಪಡೆಯಬಹುದಿತ್ತು” ಎಂದರು.

ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್‌, “ಕೇಂದ್ರ ಸರ್ಕಾರವು ಎನ್‌ಡಿಆರ್‌ಎಫ್‌ ನಿಧಿ ಬಿಡುಗಡೆಯ ಕುರಿತು ಒಂದು ತಿಂಗಳಲ್ಲೇ ನಿರ್ಧಾರ ತೆಗೆದುಕೊಳ್ಳಬೇಕಿತ್ತು. 2023ರ ಡಿಸೆಂಬರ್‌ನಲ್ಲಿಯೇ ಈ ಅವಧಿ ಮುಗಿದಿದೆ. ಆದರೆ, ಇದುವರೆಗೆ ತೀರ್ಮಾನ ತೆಗೆದುಕೊಂಡಿಲ್ಲ” ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್‌ ಹೇಳಿದ್ದಿಷ್ಟು…

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು, “ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಧ್ಯೆ ಎಂದಿಗೂ ಸ್ಪರ್ಧೆ ಇರಬಾರದು. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರಗಳ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಬೇಕು. ಇತ್ತೀಚೆಗೆ ಹಲವು ರಾಜ್ಯ ಸರ್ಕಾರಗಳು ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗುತ್ತಿವೆ. ಇಂತಹ ಬೆಳವಣಿಗೆಗಳು ಸರಿಯಲ್ಲ” ಎಂದು ತಿಳಿಸಿತು.

ಕೆಂಡವಾದ ದಿನೇಶ್‌ ಗುಂಡೂರಾವ್‌

ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯದ ಅರ್ಜಿ ವಿಚಾರಣೆ ನಡೆದ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ತಡವಾಗಿ ಬಂದಿದ್ದಕ್ಕೆ ಅನುದಾನ ಸಿಕ್ಕಿಲ್ಲ ಎಂಬುದಾಗಿ ಅಮಿತ್‌ ಶಾ ಹೇಳಿದ್ದಾರೆ. ಈ ವಾದವನ್ನು ಕೋರ್ಟ್‌ನಲ್ಲಿ ಮಂಡಿಸಬೇಕು. ಅಮಿತ್‌ ಶಾ ಅವರು ಕರ್ನಾಟಕಕ್ಕೆ ಬಂದು ಭಾಷಣ ಮಾಡೋದಲ್ಲ, ಅಫಿಡವಿಟ್‌ ನೀಡಲಿ. ಅಮಿತ್‌ ಶಾ ಹಾಗೂ ನಿರ್ಮಲಾ ಸೀತಾರಾಮನ್‌ ಅವರು ಮಹಾ ಸುಳ್ಳುಗಾರರು. ಹಾರಿಕೆಯ ಉತ್ತರ ನೀಡುವ ಬದಲು ತಪ್ಪೊಪ್ಪಿಕೊಂಡರೆ ಜನ ಕ್ಷಮಿಸುತ್ತಾರೆ. ಆದರೆ, ಇವರು ಸುಳ್ಳು ಹೇಳುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ” ಎಂದರು.

ಕೇಂದ್ರಕ್ಕೆ ಭಯ ಎಂದ ಸಚಿವ ಕೃಷ್ಣ ಭೈರೇಗೌಡ

“ಕೇಂದ್ರ ಸರ್ಕಾರದ ಪರವಾಗಿ ಅಟಾರ್ನಿ ಜನರಲ್‌ ಹಾಗೂ ಸಾಲಿಸಿಟರ್‌ ಜನರಲ್‌ ಹಾಜರಾಗಿದ್ದರು. ಎರಡು ವಾರದಲ್ಲಿ ಪ್ರತಿಕ್ರಿಯೆ ನೀಡುತ್ತೇವೆ ಎಂದಿದ್ದಾರೆ. ಆದರೆ, ರಾಜ್ಯಗಳು ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತಿರುವುದನ್ನು ನ್ಯಾಯಾಲಯವು ಪ್ರಶ್ನಿಸಿದೆ. ಸಮಸ್ಯೆ ಬಗೆಹರಿಸುತ್ತೇವೆ, ನೋಟಿಸ್‌ ಕೊಡಬೇಡಿ ಎಂದು ಕೇಂದ್ರ ಸರ್ಕಾರ ಕೋರ್ಟ್‌ಗೆ ಮನವಿ ಮಾಡಿದೆ. ಕೇಂದ್ರ ಸರ್ಕಾರಕ್ಕೆ ಮುಜುಗರದ ಭೀತಿ ಇದೆ” ಎಂದು ಸಚಿವ ಕೃಷ್ಣ ಭೈರೇಗೌಡ ಚಾಟಿ ಬೀಸಿದರು.

ಇದನ್ನೂ ಓದಿ: Karnataka Drought: ಬರ ಪರಿಹಾರದಲ್ಲಿ ಸಿಎಂ ಸಿದ್ದರಾಮಯ್ಯ ಮಾಡಿದ ತಪ್ಪುಗಳ ಪಟ್ಟಿಯನ್ನೇ ಇಟ್ಟ ಆರ್.‌ ಅಶೋಕ್!

Exit mobile version