ಬೆಂಗಳೂರು: ದೇಶಾದ್ಯಂತ ಸುದ್ದಿಯಾದ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣದಲ್ಲಿ ವಿದೇಶಕ್ಕೆ ಪರಾರಿಯಾಗಿದ್ದ ಪ್ರಜ್ವಲ್ ರೇವಣ್ಣ (Prajwal Revanna Case), 34 ದಿನಗಳ ಬಳಿಕ ಭಾರತಕ್ಕೆ ಆಗಮಿಸಿದ್ದಾರೆ. ಜರ್ಮನಿಯ ಮ್ಯೂನಿಕ್ ವಿಮಾನ ನಿಲ್ದಾಣದಿಂದ ಶುಕ್ರವಾರ ರಾತ್ರಿ (ಮೇ 31) ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ (Bengaluru Airport) ಆಗಮಿಸಿದ್ದು, ಎಸ್‌ಐಟಿ ಅಧಿಕಾರಿಗಳು (SIT Officials) ಅವರನ್ನು ಬಂಧಿಸಿದ್ದಾರೆ. ಕೋರ್ಟ್ ವಾರೆಂಟ್ ಇದ್ದ ಕಾರಣ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದು, ಮುಂದಿನ ಪ್ರಕ್ರಿಯೆ ಕೈಗೊಳ್ಳುತ್ತಿದ್ದಾರೆ. ಇನ್ನು, ಕಳೆದ 33 ದಿನಗಳಿಂದಲೂ ವಿದೇಶದಲ್ಲೇ ಇರುವ ಪ್ರಜ್ವಲ್ ರೇವಣ್ಣ ಮೇ 31ರಂದೇ ಭಾರತಕ್ಕೆ ಬಂದಿರುವುದು ಇಂಟರೆಸ್ಟಿಂಗ್ ಆಗಿದೆ.
ಹೌದು, ಮೇ 31ರಂದು ಪ್ರಜ್ವಲ್ ರೇವಣ್ಣ ಅವರ ಕಳೆದ ಬಾರಿಯ ಸಂಸದ ಸ್ಥಾನ ಅವಲಂಬಿಸಿ ನೀಡಲಾದ ರಾಜತಾಂತ್ರಿಕ ಪಾಸ್‌ಪೋರ್ಟ್‌ನ (Diplomatic passport) ಅವಧಿ ಅಂತ್ಯವಾಗಲಿದೆ. ಈ ಸಲ ಚುನಾಯಿತರಾದರೆ ಅವರು ಹೊಸದಾಗಿ ರಾಜತಾಂತ್ರಿಕ ಪಾಸ್‌ಪೋರ್ಟ್ ಮಾಡಿಸಿಕೊಳ್ಳಬೇಕಿದೆ. ಹೀಗಾಗಿ ಹಳೆಯ ಪಾಸ್‌ಪೋರ್ಟ್‌ನಲ್ಲಿ ಓಡಾಡಲು ಸಾಧ್ಯವಿಲ್ಲ. ಇದೇ ಕಾರಣಕ್ಕಾಗಿ ಪ್ರಜ್ವಲ್ ಮೇ 31ನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಈ ನಡುವೆ ಪ್ರಜ್ವಲ್ ರೇವಣ್ಣ ವಿರುದ್ಧದ ಎಸ್ಐಟಿ ತನಿಖೆ ಮಹತ್ವದ ಹಂತ ತಲುಪಿದೆ. ಅತ್ಯಾಚಾರ ಆರೋಪ ಪ್ರಕರಣದಲ್ಲಿ ಸಂತ್ರಸ್ತೆಯ ಹೇಳಿಕೆ ದಾಖಲಿಸಲಾಗಿದೆ. ಪ್ರಜ್ವಲ್ ರೇವಣ್ಣ ಬಂದ ಬಳಿಕ ತನಿಖೆ ಮಾಡಬೇಕಿದೆ. ಅಶ್ಲೀಲ ವಿಡಿಯೋಗಳನ್ನು ಮಾಡಲಾದ ಡಿವೈಸ್ ಅನ್ನು ಪತ್ತೆಹಚ್ಚಬೇಕಿದೆ. ಅಶ್ಲೀಲ ವಿಡಿಯೋಗಳ ಕುರಿತು ಫೊರೆನ್ಸಿಕ್ ರಿಪೋರ್ಟ್‌ಗಾಗಿ ಎಸ್ಐಟಿ ಕಾಯುತ್ತಿದೆ. FSL ರಿಪೋರ್ಟ್ ಎಸ್ಐಟಿ ಕೈ ಸೇರಿದ ಕೂಡಲೇ ಚಾರ್ಜ್‌ಶೀಟ್‌ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಪ್ರಜ್ವಲ್ ರೇವಣ್ಣ ಹೇಳಿಕೆ ದಾಖಲಿಸಿ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಬೇಕಿದೆ.
ಪ್ರಜ್ವಲ್ ರೇವಣ್ಣ ವಿಡಿಯೋ ಬಿಟ್ಟ ಬೆನ್ನಲ್ಲೇ ಎಸ್ಐಟಿ ಅಲರ್ಟ್ ಆಗಿತ್ತು. ವಿಡಿಯೋ ಬಿಟ್ಟಿದ್ದು ಎಲ್ಲಿಂದ, ಯಾವ ದೇಶದಿಂದ ಎಂಬುದರ ಬಗ್ಗೆ ಪರಿಶೀಲನೆ ನಡೆಸಿತ್ತು. ಆದರೆ ಕಳೆದ ಬಾರಿ ಕೂಡ ಪ್ರಜ್ವಲ್ ರೇವಣ್ಣ ಇದೇ ರೀತಿ ಕಾಲಾವಕಾಶ ಕೋರಿದ್ದರು. ಹೇಳಿದಂತೆ ವಿಚಾರಣೆಗೆ ಹಾಜರಾಗದೆ ದೂರ ಉಳಿದಿದ್ದರು. ಈ ಬಾರಿಯೂ ಹಾಗೆಯೇ ಮಾಡುವ ಸಾಧ್ಯತೆ ಕೂಡ ಇತ್ತು. ಆದರೆ, ಡಿಪ್ಲೋಮ್ಯಾಟಿಕ್ ಪಾಸ್‌ಪೋರ್ಟ್ ಅವಧಿ ಮುಗಿಯುವ ಹಿನ್ನೆಲೆಯಲ್ಲಿ ಭಾರತಕ್ಕೆ ಬರುವುದರಿಂದ ಪ್ರಜ್ವಲ್ ರೇವಣ್ಣ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Bhavani Revanna: ಭವಾನಿ ರೇವಣ್ಣ ‘ಜಾಮೀನು’ ತೀರ್ಪು ಕಾಯ್ದಿರಿಸಿದ ಕೋರ್ಟ್; ಮೇ 31 ಅಮ್ಮ-ಮಗನಿಗೆ ಬಿಗ್ ಡೇ!