Site icon Vistara News

ಮೀಸಲಾತಿಯೇ ಬೇಡ ಎನ್ನುತ್ತಿದ್ದವರಿಗೆ 10% ಮೀಸಲು ಕೊಟ್ರು ಮೋದಿ, ಯಾರೂ ಪ್ರಶ್ನಿಸಿಲ್ಲ ಯಾಕೆ: ಸಿದ್ದು ಪ್ರಶ್ನೆ

Havasur smarane

ಬೆಂಗಳೂರು: ದೇಶದಲ್ಲಿ ಇನ್ನೆಷ್ಟು ದಿನ ಮೀಸಲಾತಿ? ಅದನ್ನು ನಿಲ್ಲಿಸಬೇಕು ಎಂದು ಹೇಳುತ್ತಿದ್ದವರಿಗೇ ಪ್ರಧಾನಿ ನರೇಂದ್ರ ಮೋದಿ ಅವರು ಶೇಕಡಾ ೧೦ ಮೀಸಲಾತಿ ಕೊಟ್ಟರು. ಆಗ ಯಾರೂ ಮಾತನಾಡಲಿಲ್ಲ ಯಾಕೆ? ಮೀಸಲಾತಿ ಪ್ರಮಾಣ ಹೆಚ್ಚಾಯಿತು ಎಂದು ಸುಪ್ರೀಂಕೋರ್ಟ್‌ ಕೂಡಾ ದನಿ ಎತ್ತಲಿಲ್ಲವಲ್ಲ.. ಯಾಕೆ?
– ಹೀಗೆಂದು ಪ್ರಶ್ನಿಸಿದ್ದಾರೆ ಕಾಂಗ್ರೆಸ್‌ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.

ಸೋಮವಾರ ನಗರದ ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಏರ್ಪಡಿಸಿದ್ದ ಹಾವನೂರು ಆಯೋಗದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

೧೯೭೨ರ ಆಗಸ್ಟ್‌ ೮ರಂದು ಸಾಮಾಜಿಕ ನ್ಯಾಯಕ್ಕಾಗಿ ಮೀಸಲಾತಿ ನೀಡುವ ವಿಚಾರದಲ್ಲಿ ಹಾವನೂರು ಆಯೋಗ ರಚನೆಯಾಗಿತ್ತು. ಅದಕ್ಕೀಗ ಸುವರ್ಣ ಸಂಭ್ರಮ. ಸಾಮಾಜಿಕ ನ್ಯಾಯದ ಹೋರಾಟಕ್ಕೆ ದೀರ್ಘ ಇತಿಹಾಸವಿದೆ. ಮೈಸೂರು ಮಹಾರಾಜರ ಕಾಲದಲ್ಲೇ ಮೀಸಲಾತಿ ಇತ್ತು. ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಕೆಲವು ಹಿಂದುಳಿ ನಾಯಕರು ಮಹಾರಾಜರನ್ನು ಭೇಟಿ ಮಾಡಿ ಬಹುತೇಕ ಎಲ್ಲ ಹುದ್ದೆಗಳಲ್ಲಿ ಶೇಕಡಾ ೯೦ರಷ್ಟನ್ನು ಒಂದೇ ಜಾತಿಯವರು ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದರು. ಸಾಮಾಜಿಕ ನ್ಯಾಯದ ಪರವಾಗಿದ್ದ ಮಹಾರಾಜರು ಆಗ ನ್ಯಾಯಾಧೀಶರಾಗಿದ್ದ ಮಿಲ್ಲರ್‌ ಅವರ ನೇತೃತ್ವದಲ್ಲಿ ಒಂದು ಆಯೋಗ ರಚಿಸಿದರು. ಮೀಸಲಾತಿ ಜಾರಿಗೆ ತಂದರು ಎಂದು ವಿವರಿಸಿದರು ಸಿದ್ದರಾಮಯ್ಯ.

ಮೀಸಲಾತಿಗೆ ಆವತ್ತೂ ವಿರೋಧವಿತ್ತು. ಇತ್ತೀಚಿನವರೆಗೂ ವಿರೋಧವಿತ್ತು. ಈಗ ಮೋದಿ ಅವರು ಮೇಲ್ವರ್ಗದ ಬಡವರಿಗೆ ಶೇ. ೧೦ ಮೀಸಲಾತಿ ಕೊಟ್ಟಿದ್ದರಿಂದ ಅವರ ಧ್ವನಿ ಕಡಿಮೆಯಾಗಿದೆ. ಇನ್ನೂ ಎಷ್ಟು ದಿನ ಮೀಸಲಾತಿ ಎಂದು ಕೇಳುತ್ತಿದ್ದವರು ಯಾರೂ ನಮಗೆ ಮೀಸಲಾತಿ ಬೇಡ ಎಂದು ಹೇಳಲಿಲ್ಲ. ವಿರೋಧ ಮಾಡಲಿಲ್ಲ. ನಿಜವೆಂದರೆ ಪ್ರತಿಬಾರಿಯೂ ಮೀಸಲಾತಿ ಪ್ರಮಾಣ ಹೆಚ್ಚಾಯಿತು ಎಂದು ತಕರಾರು ತೆಗೆಯುವ ಸುಪ್ರೀಂಕೋರ್ಟ್‌ ಕೂಡಾ ಕೇಳಲಿಲ್ಲ. ಎಲ್ಲವೂ ಮೌನವಾಗಿಯೇ ನಡೆದು ಹೋಯಿತು ಎಂದು ಹೇಳಿದ ಸಿದ್ದರಾಮಯ್ಯ, ನಾವು ಕೂಡಾ ಇದನ್ನು ವಿರೋಧ ಮಾಡಲೇ ಇಲ್ಲ. ಇದು ದಡ್ಡತನವೋ, ದಡ್ಡತನವೋ ಅಥವಾ ತಿಳುವಳಿಕೆ ಇಲ್ಲದ ಸಮಸ್ಯೆ ಅನ್ನುತ್ತೀರಾ.. ನಗಗೂ ಗೊತ್ತಿಲ್ಲ ಎಂದು ಹೇಳಿದರು.

ಹೇಳಿದ್ರೆ ಬಿಜೆಪಿ, ಆರೆಸ್ಸೆಸ್‌ ವಿರೋಧಿ ಅಂತೀರಾ?
ನ್ಯಾಯಮೂರ್ತಿಗಳೂ ಆಗಿದ್ದ ರಾಮಾ ಜೋಯಿಸರು ಮೀಸಲಾತಿ ವಿರುದ್ಧ ಕೋರ್ಟ್‌ಗೆ ಹೋಗಿದ್ದರು. ಅದನ್ನು ಸುಪ್ರೀಂಕೋರ್ಟ್‌ ತಳ್ಳಿ ಹಾಕಿತು ಎನ್ನುವುದು ಬೇರೆ ಮಾತು. ಆದರೆ, ಜೋಯಿಸರನ್ನು ಯಾರಾದರೂ ಬಿಜೆಪಿಯವರು ತಡೆದರಾ? ಯಾಕೆ ಹೀಗೆ ಮಾಡಿದ್ರಿ ಎಂದು ಯಡಿಯೂರಪ್ಪ ಕೇಳಿದ್ರಾ? ಈಶ್ವರಪ್ಪ ತಡೆದರಾ? ನಳಿನ್‌ ಕುಮಾರ್‌ ಕಟೀಲ್‌ ತಡೆದರಾ? ತಡೆಯಲಿಲ್ಲ ಅಂದ ಮೇಲೆ ಇವರೆಲ್ಲ ಮೀಸಲಾತಿ ವಿರೋಧಿಗಳು ಎಂದಾಗಲಿಲ್ವಾ? ಈಗ ನಮ್ಮವರೇ ಹೋಗಿ ಹೋಗಿ ಬಿಜೆಪಿ ಸೇರಿಕೊಳ್ಳುತ್ತಿದ್ದಾರೆ. ಇದನ್ನು ಪ್ರಶ್ನೆ ಮಾಡಿದರೆ ಸಿದ್ದರಾಮಯ್ಯ ಆರೆಸ್ಸೆಸ್‌ ವಿರೋಧಿ ಅಂತಾರೆ, ಬಿಜೆಪಿ ವಿರೋಧಿ ಅಂತಾರೆ ಕೊನೆಗೆ ದಲಿತ ವಿರೋಧಿ ಅಂತಾರೆ ಎಂದು ಗುಡುಗಿದರು ಸಿದ್ದರಾಮಯ್ಯ.

ʻʻಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಬಿಜೆಪಿ ಸರಕಾರ ಕಾಂತರಾಜು ವರದಿ ಸ್ವೀಕಾರ ಮಾಡುತ್ತಿಲ್ಲ. ಸಿದ್ದರಾಮಯ್ಯ ಅವರ ಕಾಲದಲ್ಲಿ ತಗೊಂಡಿಲ್ಲ. ಹಾಗಾಗಿ ನಾವು ತೆಗೆದುಕೊಂಡಿಲ್ಲ ಎನ್ನುತ್ತಾರೆ ಪೆದ್ದ ಈಶ್ವರಪ್ಪ ಎಂದು ಗೇಲಿ ಮಾಡಿದರು ಸಿದ್ದರಾಮಯ್ಯ.

ಸ್ಥಳೀಯ ಸಂಸ್ಥೆಗಳ ಮೀಸಲಾತಿ ವಿಚಾರದಲ್ಲಿ ಇನ್ನೂ ಒಂದು ತೀರ್ಮಾನಕ್ಕೆ ಬರಲಾಗಲೇ ಇಲ್ಲ. ಮಹಾರಾಷ್ಟ್ರದಲ್ಲಿ, ಮಧ್ಯಪ್ರದೇಶದಲ್ಲಿ ಸ್ಥಳೀಯ ಮೀಸಲಾತಿಯನ್ನೇ ರದ್ದು ಮಾಡಿದರು. ಮೀಸಲಾತಿ ಇದ್ದ ಕಡೆ ಜನರಲ್‌ ಕೆಟಗರಿ ಮಾಡಿದರು. ನಮ್ಮ ತಾಲೂಕು, ಜಿಲ್ಲಾ ಪಂಚಾಯಿತಿಯ ಮೀಸಲಾತಿ ಏನಾಗುತ್ತದೋ ಗೊತ್ತಿಲ್ಲ. ಮೀಸಲಾತಿ ಇಲ್ಲದಿದ್ದರೂ ಯಾರೂ ಧ್ವನಿ ಎತ್ತುತ್ತಿಲ್ಲ ಎಂದು ಜನರನ್ನು ಬಡಿದೆಬ್ಬಿಸುವಂತೆ ಮಾತಾಡಿದರು ಸಿದ್ದರಾಮಯ್ಯ.

ಸಮೀಕ್ಷೆಯನ್ನೇ ನಡೆಸಲಿಲ್ಲ ಭಕ್ತವತ್ಸಲ!
ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳ ಜನರಿಗೆ ನಿಖರವಾದ ಅಂಕಿ ಅಂಶಗಳ ಸಹಿತ ಪರಿಶೀಲನೆ ನಡೆಸಿ ಮೀಸಲಾತಿ ನಿಗದಿಪಡಿಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ. ಭಕ್ತವತ್ಸಲ ನೇತೃತ್ವದಲ್ಲಿ ಆಯೋಗ ನೇಮಕ ಮಾಡಲಾಗಿತ್ತು. ಆದರೆ, ಅವರು ಸಮೀಕ್ಷೆಯನ್ನೇ ನಡೆಸಲಿಲ್ಲ. ಆದರೂ ವರದಿ ಸಲ್ಲಿಸಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ತಮಿಳು ನಾಡು ದ್ರಾವಿಡ ಕಳಗಂನ ಅಧ್ಯಕ್ಷ ಡಾ. ಕೆ. ವೀರಮಣಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಪ್ರೊ. ರವಿವರ್ಮ ಕುಮಾರ್‌, ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಇದನ್ನೂ ಓದಿ| BBMP ಮೀಸಲಾತಿ ಎಡವಟ್ಟು: ಕಾಂಗ್ರೆಸ್‌ ಕ್ಷೇತ್ರದಲ್ಲಿ 72%, BJP ಕ್ಷೇತ್ರದಲ್ಲಿ 34% ಮಹಿಳಾ ಮೀಸಲು

Exit mobile version