Site icon Vistara News

Hanuman Flag: ಹನುಮಧ್ವಜ ಸಂಬಂಧ ನೋಟಿಸ್‌ ಕೊಡಲಿಲ್ಲವೇಕೆ? ನಿಯಮ ಮೀರಿ ರಾಷ್ಟ್ರಧ್ವಜ ಹಾರಿಸಿದ್ದು ಸರಿಯಾ?: ಅಶ್ವತ್ಥನಾರಾಯಣ

Dr CN Ashwathnarayan Pressmeet

ಬೆಂಗಳೂರು: ‌ಈ ಸರ್ಕಾರದವರು ಸಂವಿಧಾನ ಜಾಗೃತಿ ಸಪ್ತಾಹ (Constitution Awareness Week) ಮಾಡುತ್ತಾರೆ. ಆದರೆ, ಇವರು ಸಂವಿಧಾನ (Indian Constitution) ಗೌರವಿಸುತ್ತಾರಾ? ಇವರಿಗೇ ಮೊದಲು ಜಾಗೃತಿ ಮೂಡಿಸಬೇಕಿದೆ. ಕೆರಗೋಡಿನಲ್ಲಿ ಕಾನೂನು ಪ್ರಕಾರ ಅನುಮತಿ ಪಡೆದುಕೊಂಡೇ ಹನುಮ ಧ್ವಜವನ್ನು (Hanuman Flag) ಹಾರಿಸಿದ್ದಾರೆ. ಕಾನೂನು ಪ್ರಕಾರ ತಪ್ಪಾಗಿದ್ದರೆ ನೋಟಿಸ್ ಕೊಡಬೇಕಿತ್ತು ತಾನೇ? ಈಗಲಾದರೂ ಸರ್ಕಾರ ಗ್ರಾಮಸ್ಥರ ಭಾವನೆಗೆ ಗೌರವ ಕೊಡುವ ಕೆಲಸವನ್ನು ಮಾಡಲಿ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ (Dr CN Ashwathnarayan) ತಿಳಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಾ. ಸಿ.ಎನ್. ಅಶ್ವತ್ಥನಾರಾಯಣ, ಇವರಿಗೆ ಸಂವಿಧಾನ ಕುರಿತ ಪರಿಜ್ಞಾನ ಇಲ್ಲ. ಇವರು ಜನರ ಭಾವನೆ ಅರ್ಥ ಮಾಡಿಕೊಂಡಿಲ್ಲ. ಅಗೌರವದಿಂದ ನಡೆದುಕೊಂಡಿದ್ದಾರೆ ಎಂದು ಆಕ್ಷೇಪಿಸಿದರು.

ನಿಯಮ ಮೀರಿ ರಾಷ್ಟ್ರಧ್ವಜವನ್ನು ಹಾರಿಸಿದ್ದು ಸರಿಯೇ?

ಕೆರಗೋಡಿನಲ್ಲಿ ಏಕಾಏಕಿ ಮುಂಜಾನೆ ಹೋಗಿ ಭಗವಾಧ್ವಜ ಇಳಿಸಿದ್ದು ಸರಿಯೇ? ನಿಯಮ ಮೀರಿ ರಾಷ್ಟ್ರಧ್ವಜವನ್ನು ಹಾರಿಸಿದ್ದು ಸರಿಯೇ? ಸ್ಥಳೀಯರು ಕೆರಗೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇನ್ನೂ ಯಾಕೆ ಎಫ್‍ಐಆರ್ ಮಾಡಿಲ್ಲ ಎಂದು ಡಾ. ಸಿ.ಎನ್. ಅಶ್ವತ್ಥನಾರಾಯಣ ಪ್ರಶ್ನೆ ಮಾಡಿದರು.

ಮತ್ತೊಮ್ಮೆ ಮೋದಿ ಜನರ ನಿರ್ಧಾರ

ರಾಷ್ಟ್ರಧ್ವಜವನ್ನು ಪೂರ್ತಿ ಏರಿಸಿಲ್ಲ. ಇದೇನು ಸರ್ಕಾರವೇ? ಯಾವ ರೀತಿ ನಡವಳಿಕೆ ಇದು ಎಂದು ಕೇಳಿದರು. ಬಿಜೆಪಿ- ಜೆಡಿಎಸ್ ನಡುವೆ ವೈಮನಸ್ಸು ಏನಿಲ್ಲ. ಮತ್ತೊಮ್ಮೆ ಮೋದಿ, ಮತ್ತೊಮ್ಮೆ ಬಿಜೆಪಿ ಎಂಬುದೇ ನಮ್ಮೆಲ್ಲರ ಗುರಿ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು. ಮಾಜಿ ಪ್ರಧಾನಿ‌ ಎಚ್.ಡಿ. ದೇವೇಗೌಡರು ಕೂಡ ಅಭಿಮಾನದಿಂದ ಮೋದಿಯವರು ಮತ್ತೊಮ್ಮೆ ಪ್ರಧಾನಮಂತ್ರಿ ಆಗಲಿ ಎನ್ನುತ್ತಿದ್ದಾರೆ. ಮತ್ತೊಮ್ಮೆ ಬಿಜೆಪಿ, ಮತ್ತೊಮ್ಮೆ ಮೋದಿ ಬೇಕೆಂದು ಜನರು ಈಗಾಗಲೇ ನಿರ್ಧರಿಸಿದ್ದಾರೆ ಎಂದು ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.‌

ಇದನ್ನೂ ಓದಿ: CM Siddaramaiah: ರಾಮಭಕ್ತ ಗಾಂಧೀಜಿ ಕೊಂದ ಗೋಡ್ಸೆಯನ್ನು ಪೂಜಿಸುವವರಿದ್ದಾರೆ: ಸಿಎಂ ಸಿದ್ದರಾಮಯ್ಯ

ಇದೊಂದು ತುಘಲಕ್ ಸರ್ಕಾರ. ಕಾನೂನನ್ನು ಇವರು ಗೌರವಿಸುವುದಿಲ್ಲ ಎಂದು ಟೀಕಿಸಿದರು. ಅದು ಗ್ರಾಮಸ್ಥರೇ ಹಣ ಸೇರಿಸಿ ನಿಲ್ಲಿಸಿದ ಧ್ವಜಸ್ತಂಭ. ಪಂಚಾಯತ್ ಕೂಡ ರಾಷ್ಟ್ರಧ್ವಜ, ನಾಡಧ್ವಜ, ಭಗವಾಧ್ವಜ ಹಾರಿಸಲು ಅನುಮತಿ ಕೊಟ್ಟಿದೆ ಎಂದು ಡಾ. ಸಿ.ಎನ್. ಅಶ್ವತ್ಥನಾರಾಯಣ ಗಮನ ಸೆಳೆದರು. ಮಾಜಿ ಸಚಿವ ಗೋಪಾಲಯ್ಯ, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ.ರಾಮಮೂರ್ತಿ ಅವರು ಇದ್ದರು.

ಏನಿದು ಮಂಡ್ಯದ ಹನುಮಧ್ವಜ ಕೇಸ್?‌

ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಗ್ರಾಮಸ್ಥರು ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರು ಗ್ರಾಮದ 108 ಅಡಿ ಧ್ವಜಸ್ತಂಭದಲ್ಲಿ ಹನುಮ ಧ್ವಜವನ್ನು ಹಾರಿಸಿದ್ದರು. ಜನವರಿ 22 ರಂದು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿತು. ಇದರ ನೆನೆಪಾಗಿ ಕೆರಗೋಡು ಗ್ರಾಮದಲ್ಲಿ 108 ಅಡಿ ಎತ್ತರ ಧ್ವಜಸ್ತಂಭದ ಮೇಲೆ ಹನುಮ ಧ್ವಜ ಹಾರಿಸಲು ಗ್ರಾಮಸ್ಥರು ನಿರ್ಧರಿಸಿದ್ದರು. ಧ್ವಜ ಹಾರಿಸಲು ನಿಶ್ಚಯಿಸಿದ ಜಾಗ ಗ್ರಾಮ ಪಂಚಾಯಿತಿಗೆ ಸೇರಿದ್ದರಿಂದ ಅನುಮತಿ ಕೋರಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರು. ಆದರೆ, ಗ್ರಾಮ ಪಂಚಾಯಿತಿ “ರಾಷ್ಟ್ರ ಧ್ವಜ ಮತ್ತು ನಾಡಧ್ವಜ” ಹೊರತುಪಡಿಸಿ ಯಾವುದೇ ಧಾರ್ಮಿಕ/ ರಾಜಕೀಯ ಧ್ವಜವನ್ನು ಹಾರಿಸುವಂತಿಲ್ಲವೆಂದು ಅನುಮತಿಯನ್ನು ನಿರಾಕರಣೆ ಮಾಡಿತ್ತು.

ಆದರೂ ಗ್ರಾಮಸ್ಥರು ಮತ್ತು ಹಿಂದು ಕಾರ್ಯಕರ್ತರು ಹನುಮ ಧ್ವಜ ಹಾರಿಸಿದ್ದರು. ಇದ್ದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಕೊನೆಗೆ ಈ ವಿಚಾರ ಮತ್ತೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂದಿದೆ. ಅಲ್ಲಿ 22 ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ ಹನುಮ ಧ್ವಜ ಹಾರಾಟಕ್ಕೆ 20 ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಬಳಿಕ ಗ್ರಾಮ ಪಂಚಾಯತ್​ ಸದಸ್ಯರು ನಡಾವಳಿ ರಚಿಸಿ, ವಿವಾದವನ್ನು ಇತ್ಯರ್ಥ ಪಡಿಸಿದ್ದರು. ಆದರೆ, ಸರ್ಕಾರಿ ಜಾಗದಲ್ಲಿ ಹನುಮ ಧ್ವಜ ಹಾರಿಸಲಾಗಿದೆ ಇದನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತ ಮೌಖಿಕ ಆದೇಶವನ್ನು ಹೊರಡಿಸಿತ್ತು. ಹೀಗಾಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀಣಾ ಅವರು ತೆರವುಗೊಳಿಸಲು ಮುಂದಾದರು. ಇದಕ್ಕೆ ಗ್ರಾಮಸ್ಥರು ಅಡ್ಡಿ ಪಡಿಸಿ ಪ್ರತಿಭಟಿಸಿದ್ದರು. ಹೀಗಾಗಿ ಅಲ್ಲಿಂದ ನಿರ್ಗಮಿಸಿದ್ದ ಅಧಿಕಾರಿಗಳು ಶನಿವಾರ (ಜ.27) ರಾತ್ರಿ ಪುನಃ ಬಂದು ಹನುಮ ತೆರವಿಗೆ ಮುಂದಾದರು. ಮುಂಜಾನೆ 3 ಗಂಟೆ ಹೊತ್ತಿಗೆ ಮಂಡ್ಯ ಎಸಿ ಶಿವಮೂರ್ತಿ, ತಹಸೀಲ್ದಾರ್ ಶಿವಕುಮಾರ್ ಬಿರಾದರ್ ನೇತೃತ್ವದಲ್ಲಿ ತೆರವಿಗೆ ಮುಂದಾಗುತ್ತಿದ್ದಂತೆ ಗ್ರಾಮಸ್ಥರಿಗೆ ವಿಷಯ ತಿಳಿದು ಬಂದು ಗಲಾಟೆ ಮಾಡಿದ್ದಾರೆ. ಈ ವೇಳೆ ಪೊಲೀಸರು ಸಹ ಸ್ಥಳದಲ್ಲಿದ್ದರು. ಪ್ರತಿಭಟನೆಯನ್ನೂ ಮಾಡಲಾಯಿತು. ಹೀಗಾಗಿ ಪುನಃ ವಾಪಸ್‌ ತೆರಳಲಾಯಿತು.

ಇದನ್ನೂ ಓದಿ: Congress Karnataka: ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕರ್ತೆ-ಫೋಟೋಗ್ರಾಫರ್‌ ಮಧ್ಯೆ ಕುರ್ಚಿ ಗಲಾಟೆ!

ಕೊನೆಗೆ ಈಗ ಭಾನುವಾರ ಎಷ್ಟೇ ವಿರೋಧ ಹಾಗೂ ಪ್ರತಿಭಟನೆ ಇದ್ದರೂ ಅದರ ನಡುವೆ ಹನುಮಾನ್‌ ಧ್ವಜವನ್ನು ಇಳಿಸಿ, ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದರಿಂದ 144 ಸೆಕ್ಷನ್​ ಜಾರಿ ಮಾಡಲಾಗಿದೆ. ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಚಾರ್ಜ್​ ಅನ್ನು ಸಹ ಮಾಡಲಾಗಿದೆ.

Exit mobile version