ಬೆಂಗಳೂರು: ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು. ನಾನ್ಯಾಕೆ ಕಾಂಗ್ರೆಸ್ ಮನೆ ಬಾಗಿಲು ತಟ್ಟಲಿ? ಎಂದು ಮಾಜಿ ಸಚಿವೆ ಮೋಟಮ್ಮ ಅವರಿಗೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್‌ಗೆ ಎಂ.ಪಿ.ಕುಮಾರಸ್ವಾಮಿ ಬರುವುದಕ್ಕೆ ತಮ್ಮ ವಿರೋಧವಿದೆ ಎಂದು ಮೋಟಮ್ಮ ಹೇಳಿದ್ದರು. ಕಾಂಗ್ರೆಸ್ ಪಕ್ಷದಿಂದ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಟಿಕೇಟ್ ನೀಡುವುದನ್ನು ವಿರೋಧಿಸುತ್ತೇನೆ. ಒಬ್ಬ ವ್ಯಕ್ತಿ ಕೈ, ಬಾಯಿ ಸರಿಯಿಲ್ಲದವರಿಗೆ ಟಿಕೆಟ್ ಕೊಡಬಾರದು, ಅವನಿಗೆ ಟಿಕೆಟ್ ಕೊಡುವ ಬದಲು ಕೂಲಿಕಾರ ಅಥವಾ ಕಾರ್ಯಕರ್ತನಿಗೆ ವರಿಷ್ಠರು ಟಿಕೇಟ್ ನೀಡಲಿ ಬುಧವಾರ ಮಾಜಿ ಸಚಿವೆ ಮೋಟಮ್ಮ ಹೇಳಿದ್ದರು.
ಇದನ್ನೂ ಓದಿ | ಸ್ತ್ರೀಶಕ್ತಿ ಕಟ್ಟಿದ ಶ್ರೇಯಸ್ಸು ಮೋಟಮ್ಮ ಅವರಿಗೆ ಸಲ್ಲಬೇಕು: ಎಸ್.ಎಂ. ಕೃಷ್ಣ
ಇದಕ್ಕೆ ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ನಾಯಕರು ಪಕ್ಷ ಸೇರುತ್ತೇನೆಂದು ನನ್ನ ಹೆಸರು ಜಪಿಸಿದರೆ ಅದಕ್ಕೆ ನಾನು ಹೊಣೆಗಾರನಲ್ಲ. ಭಾರತೀಯ ಜನತಾ ಪಾರ್ಟಿ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ. ಬಿಜೆಪಿಯಲ್ಲಿ ಮೂರು ಬಾರಿ ಶಾಸಕನಾಗಿದ್ದೇನೆ, ಇದು ನನಗೆ ಕೊಟ್ಟಿರುವ ಗೌರವ. ಇದನ್ನು ಅರ್ಥಮಾಡಿಕೊಳ್ಳದ ಮೋಟಮ್ಮ ಅರ್ಥಹೀನ ಹೇಳಿಕೆ ನೀಡಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ತಿಳಿಸಿದ್ದಾರೆ.
ಇನ್ನೇನು ಕೆಲ ದಿನಗಳಲ್ಲಿ ರಾಜ್ಯ ಸರ್ಕಾರದ ಮಂತ್ರಿಮಂಡಲ ರಚನೆಯಾಗಲಿದೆ. ನನ್ನನ್ನು ಕಂಡರೆ ಆಗದ ಕೆಲವರು ಈ ಸಂದರ್ಭದಲ್ಲಿ ಸಣ್ಣತನದ ಹೇಳಿಕೆಗಳಿಗೆ ಪ್ರಚೋದನೆ ನೀಡುವ ಮೂಲಕ ಸಚಿವ ಸ್ಥಾನ ತಪ್ಪಿಸುವ ಪ್ರಯತ್ನ ನಡೆಸಿದ್ದರೆ ಫಲ ನೀಡುವುದಿಲ್ಲ. ನೀವು ನಿಜವಾದ ಜನಪರ ನಾಯಕಿಯಾಗಿದ್ದರೆ ನನ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಿ, ಆಗ ಇದಕ್ಕೆಲ್ಲ ಉತ್ತರ ಸಿಕ್ಕಂತಾಗುತ್ತದೆ.
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಸಂಪೂರ್ಣ ಮತದಾರರು ಹಾಗೂ ನನ್ನೆಲ್ಲ ನಾಯಕರು, ಕಾರ್ಯಕರ್ತ ಮಿತ್ರರ ಆಶೀರ್ವಾದ ಸದಾ ನನ್ನ ಮೇಲೆ ಇರುವುದು ನಿಮಗೆ ಸಹಿಸಿಕೊಳ್ಳಲು ಆಗುತ್ತಿಲ್ಲ.
ಇದನ್ನೂ ಓದಿ | Agnipath | ಕೇಂದ್ರ ಸರ್ಕಾರದ ಯೋಜನೆ ಬೆಂಬಲಿಸಿದ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ