Site icon Vistara News

Ram Mandir : ಮೈಸೂರಿನ ಅರುಣ್​ ಕೆತ್ತಿದ ರಾಮನ ಮೂರ್ತಿಯೇ ಆಯ್ಕೆಯಾಗಿದ್ದು ಯಾಕೆ? ಇಲ್ಲಿದೆ ವಿವರ

Vistara Editorial, Ayodhya's Ram Mandir is the glory of Karnataka!

ಬೆಂಗಳೂರು: ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್​​ (Arun Yogiraj) ಅವರು ಕೆತ್ತಿರುವ ಬಾಲರಾಮನ (Ram lalla Statue) ವಿಗ್ರಹ ಜನವರಿ 22ರಂದು ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ (Ayodhya Ramajanmabhumi) ಪ್ರತಿಷ್ಠಾಪನೆಗೊಳ್ಳಲಿರುವುದು ಕರುನಾಡಿನ ಪಾಲಿಗೆ ಅತ್ಯಂತ ಸಂಭ್ರಮದ ಸುದ್ದಿಯಾಗಿದೆ. ಈ ವಿಗ್ರಹ ಆಯ್ಕೆಯಾಗಿರುವುದರ ಹಿಂದೆ ಕನ್ನಡಿಗ ಶಿಲ್ಪಿ ಅರುಣ್​ ಅವರ ಅಪಾರ ಪರಿಶ್ರಮ. ಭಕ್ತಿ, ಶ್ರದ್ಧೆಯಿದೆ. ಅದೇ ಕಾರಣಕ್ಕೆ ಕೋಟ್ಯಂತರ ರಾಮಭಕ್ತರ ಕನಸಿನ ರಾಮಮಂದಿರದಲ್ಲಿ ಅವರು ಕೆತ್ತಿರುವ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠೆ ಆಗಲಿದೆ. ಆದರೆ, ಈ ವಿಗ್ರಹ ಆಯ್ಕೆಯಾಗುವುದಕ್ಕೆ ಅವಷ್ಟೇ ಕಾರಣವಲ್ಲ. ತೀರ್ಪುಗಾರರು ಅಂತಿಮಗೊಳಿಸುವ ಮೊದಲು ಇನ್ನಷ್ಟು ಸಂಗತಿಗಳನ್ನು ನೋಡಿ ಮೆಚ್ಚಿದ್ದಾರೆ. ಅವುಗಳೇನೆಂಬುದನ್ನು ನೋಡೋಣ.

ರಾಮಲಲ್ಲಾನ ಮೂರ್ತಿ ಕೆತ್ತನೆಗಾಗಿ ಸಹಸ್ರ​ ಸಂಖ್ಯೆಯ ಶಿಲ್ಪಿಗಳ ನಡುವಿನ ತುರುಸಿನ ಸ್ಪರ್ಧೆ ನಡೆದಿತ್ತು. ಇದು ಒಂದು ವರ್ಷದ ಹಿಂದಿನ ಪ್ರಕ್ರಿಯೆ. ಇಲ್ಲಿ ಆಯ್ಕೆಗೊಂಡ ಅಂತಿಮ ಮೂವರಲ್ಲಿ ಒಬ್ಬರಾಗಿದ್ದಾರೆ ಅರುಣ್​. ಆ ಮೂವರಲ್ಲಿಯೂ ಅರುಣ್​ ಅವರ ಭಾವಕ್ಕೆ ಹಾಗೂ ಕಲ್ಪನೆಗೆ ಮನ್ನಣೆ ದೊರಕಿದೆ ಎಂಬುದೇ ವಿಶೇಷ. ಬೆಂಗಳೂರಿನ ಜಿ.ಎಲ್.ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಆಯ್ಕೆಯಾಗಿದ್ದ ಇನ್ನಿಬ್ಬರು ಮಹಾನ್ ಶಿಲ್ಪಿಗಳು. ಎಲ್ಲರೂ ಒಬ್ಬರಿಗಿಂತ ಒಬ್ಬರು ಮಹಾನ್​ ಶಿಲ್ಪಿಗಳು. ಆದರೆ ಉಳಿದಿಬ್ಬರು ರಚಿಸಿದ ಮೂರ್ತಿಗಿಂತಲೂ ಅರುಣ್ ಅವರ ಕೆತ್ತನೆಗೆ ಪ್ರಾಶಸ್ತ್ಯ ಸಿಕ್ಕಿದೆ.

ಅರುಣ್ ಅವರು ರಚನೆ ಆಯ್ಕೆಯಾಗಲು ಮೊದಲ ಕಾರಣವೇ ವಿಗ್ರಹ ಮುಖದಲ್ಲಿನ ತೇಜಸ್ಸು. ಅದರಲ್ಲಿ ಹೆಚ್ಚು ದೈವಿಕ ಭಾವವಿದೆ ಎಂಬುದನ್ನು ತೀರ್ಪುಗಾರರು ಮನಗಂಡಿದ್ದಾರೆ. ಪ್ರಾಣಪ್ರತಿಷ್ಠೆ ಆಗಲಿರುವ ವಿಗ್ರಹವು ಬಾಲ ರಾಮನಾಗಿದೆ ಎಂಬುದು ಇಲ್ಲಿ ಗಮನಾರ್ಹ. ಅಂತೆಯೇ ಅರುಣ್ ಅವರ ಕೆತ್ತನೆಯ ವಿಗ್ರಹದಲ್ಲಿ ಮುಗ್ಧ ಮಗುವಿನ ಸುಂದರ ನೋಟವಿದೆ. ಬಾಲ ರಾಮದೇವರು ಸಾಕ್ಷಾತ್ ಮಂದೆ ನಿಂತಿರುವಂತೆ ಕಾಣುವ ಮೂರ್ತಿಯನ್ನು ಅವರು ಕೆತ್ತಿದ್ದಾರೆ. ಅಲ್ಲದೆ ಹೆಚ್ಚು ನೈಜತೆಯಿಂದ ಕೂಡಿದೆ.

ಅರುಣ್​ ಅವರು ಕೆತ್ತಿರುವ ಐದು ವರ್ಷದ ಬಾಲ ರಾಮನ ಮೂರ್ತಿಯ ಕೈಯಲ್ಲಿ ಧನಸ್ಸು ಹಾಗೂ ಬಾಣವಿದೆ. ರಾಮನ ಮೂರ್ತಿಯು 51 ಇಂಚು ಎತ್ತರವಿದ್ದರೆ ಪ್ರಭಾವಳಿ ಸೇರಿದಂತೆ ಒಟ್ಟು ವಿಗ್ರಹ 8 ಅಡಿ ಎತ್ತರ ಹಾಗೂ ಮೂರುವರೆ ಅಡಿ ಅಗಲವಿದೆ. ಇದು ತೇಜಸ್ಸಿನಿಂದ ಕಂಗೊಳಿಸುತ್ತಿದೆ. ಒಟ್ಟಾರೆಯಾಗಿ ಕೋಟ್ಯಂತರ ರಾಮಭಕ್ತರ ಪೂಜೆಗೆ ಅರ್ಹವಾಗಿದೆ ಎಂದು ತೀರ್ಪುಗಾರರು ಅದನ್ನೇ ಆಯ್ಕೆ ಮಾಡಿದ್ದಾರೆ.

ಕರುನಾಡಿನ ಕಲ್ಲು

ರಾಮಲಲ್ಲಾ ವಿಗ್ರಹಕ್ಕೆ ಚಾಮರಾಜನಗರ ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಬುಜ್ಜೆಗೌಡನಪುರ ಗ್ರಾಮದ ಕೃಷ್ಣ ಶಿಲೆ ಬಳಕೆ ಮಾಡಲಾಗಿದೆ. ಕೃಷ್ಣ ಶಿಲೆ ಅತ್ಯಂತ ಶಕ್ತಿಶಾಲಿಯಾಗಿದ್ದು ಆಸಿಡ್‌ ಹಾಕಿದರೂ ಏನೂ ಆಗುವುದಿಲ್ಲ. ಇದಕ್ಕೆ ಬೆಂಕಿ ತಗುಲುವುದಿಲ್ಲ, ತುಕ್ಕು ಹಿಡಿಯುವುದಿಲ್ಲ. ಮಳೆ, ಗಾಳಿ, ಬಿಸಿಲನ್ನೂ ತಡೆದುಕೊಳ್ಳುವ ಶಕ್ತಿಯ ಕಲ್ಲು ಇದು. ಹಿಂದೆ ಶಂಕರಾಚಾರ್ಯರ ಮೂರ್ತಿಯನ್ನು ಮಾಡಿದ ಎಚ್.ಡಿ.ಕೋಟೆಯ ಕೃಷ್ಣ ಶಿಲೆಯಲ್ಲೇ ಇದನ್ನು ರಚಿಸಲಾಗಿದೆ.

ಎಂಬಿಎ ಪದವೀಧರ ಅರುಣ್​

ಶಿಲ್ಪಿ ಅರುಣ್​ ಯೋಗಿರಾಜ್ ಅವರು ಎಂಬಿಎ ಪದವೀಧರ. ಶಿಲ್ಪಕಲೆಯೇ ಅವರ ಕುಲಕಸುಬು. ಅವರ ಕುಟುಂಬದ ಐದನೇ ತಲೆಮಾರಿನ ಶಿಲ್ಪಿ. ಅವರು 2008ರಿಂದ ಇಲ್ಲಿಯವರೆಗೆ 1000ಕ್ಕೂ ಹೆಚ್ಚು ವಿಗ್ರಹಗಳನ್ನು ಕೆತ್ತನೆ ಮಾಡಿದ್ದಾರೆ.

ಪತ್ನಿ ವಿಜೇತಾ ಸಂಭ್ರಮ

ಅರುಣ್ ಅವರ ವಿಗ್ರಹ ಆಯ್ಕೆಯಾಗಿರುವ ಕುರಿತು ಅವರ ಪತ್ನಿ ವಿಜೇತಾ ಅರುಣ್ ಅವರು ಸಂಭ್ರಮ ವ್ಯಕ್ತಪಡಿಸಿದ್ದಾರೆ. ವಿಸ್ತಾರ ನ್ಯೂಸ್​ ಜತೆ ನೇರ ಸಂಪರ್ಕದಲ್ಲಿ ಮಾತನಾಡಿದ ವಿಜೇತಾ. ಪತಿ ಅರುಣ್ ಅವರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಮಿಗಿಲಾಗಿ ಇದು ಬದುಕಿನ ಅತ್ಯಂತ ಸಾರ್ಥಕ ಕ್ಷಣ. ಇದಕ್ಕಿಂತ ಶ್ರೇಷ್ಠ ಸಾಧನೆ ಮಾಡುವಂಥದ್ದು ಇನ್ನೇನು ಇಲ್ಲ ಎಂದು ಹೇಳಿಕೊಂಡಿದ್ದಾರೆ.

ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯಿಂದ ಕಳೆದ ವರ್ಷ ಕರೆ ಬಂದಿತ್ತು. 2023ರ ಜನವರಿಯಲ್ಲಿ ದೇಶಾದ್ಯಂತದಿಂದ ಬಂದಿರುವ ಸಾವಿರಾರು ಶಿಲ್ಪಿಗಳ ನಡುವೆ ಅಂತಿಮವಾಗಿ ಅರುಣ್​ ಸೇರಿದಂತೆ ಮೂವರು ಮೂರ್ತಿ ಕೆತ್ತನೆಗೆ ಆಯ್ಕೆಯಾಗಿದ್ದಾಗಲೇ ನಮಗೆ ಖುಷಿಯಾಗಿತ್ತು ಎಂದು ವಿಜೇತಾ ಅವರು ಸಂಭ್ರಮದ ಕ್ಷಣಗಳನ್ನು ಸ್ಮರಿಸಿಕೊಂಡಿದ್ದಾರೆ.

ಮೂರ್ತಿ ತಯಾರಿಕೆಗೆ ಅರುಣ್​ ಆರು ತಿಂಗಳ ಹಿಂದೆ ಮನೆಯಿಂದ ತೆರಳಿದ್ದಾರೆ. ಅರುಣ್ ಅವರು ಸತತವಾಗಿ ಮೂರ್ತಿ ಕೆತ್ತನೆ ಮಾಡಿದ್ದಾರೆ. ಕೆಲವೊಂದು ಬಾರಿ ದಿನದ 24 ಗಂಟೆಗೆಯೂ ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ಯಾಕೆಂದರೆ ರಾಮಲಲ್ಲಾನ ಮೂರ್ತಿಗೆ ಮಾದರಿಯೇ ಇರಲಿಲ್ಲ. ಬೇರೆಲ್ಲ ದೇವರ ಪ್ರತಿಮೆಗೆ ಮಾದರಿಗಳಿರುತ್ತವೆ. ಆದರೆ, ಬಾಲರಾಮನಿಗೆ ಇಲ್ಲ. ಹೀಗಾಗಿ ಅದನ್ನು ಕಲ್ಪಿಸಿಕೊಂಡು ಮಾಡುವ ಜವಾಬ್ದಾರಿ ಅರುಣ್ ಅವರ ಮೇಲಿತ್ತು. ಅದನ್ನು ಅವರು ಸಾಧಿಸಿದ್ದಾರೆ ಎಂದು ವಿಜೇತ ಖುಷಿಯಿಂದ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : Ram Mandir: ರಾಮಮಂದಿರ ಉದ್ಘಾಟನೆ; ಜ. 22ಕ್ಕೆ ರಜೆ ಘೋಷಿಸಲು ಸಿಎಂಗೆ ಉಡುಪಿ ಶಾಸಕ ಪತ್ರ

ಅರುಣ್ ಅವರು ಆದಿ ಶಂಕರ ಅವರ ಮೂರ್ತಿಯನ್ನೂ ರಚಿಸಿದ್ದಾರೆ. ಅದು ಅಷ್ಟೇ ಸುಂದರವಾಗಿದೆ. ತುಂಬಾ ತೆಜಸ್ಸು ಹೊಂದಿದೆ. ಅದರ ಮುಂದೆ ಕುಳಿತು ಧ್ಯಾನ ಮಾಡಿದರೆ ವಿಶೇಷ ಅನುಭವ ಸಿಗುತ್ತದೆ. ಅರುಣ್ ಅವರ ತಂದೆ ಆ ಮೂರ್ತಿಯನ್ನು ನೋಡಿ ಆನಂದಬಾಷ್ಪ ಸುರಿಸಿದ್ದರು ಎಂಬ ಪ್ರಸಂಗವನ್ನು ವಿಜೇತಾ ಅವರು ಸ್ಮರಿಸಿಕೊಂಡಿದ್ದಾರೆ.

ಮೈಸೂರಿನ ಯೋಗಿ ಮನೆಯಲ್ಲಿ ಸಂಭ್ರಮ

ಶಿಲ್ಪಿ ಯೋಗಿರಾಜ್‌ ಅವರು ತಯಾರಿಸಿದ ಮೂರ್ತಿ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೆ ಆಯ್ಕೆಯಾಗಿರುವುದು ಕುಟುಂಬದಲ್ಲಿ ಭಾರಿ ಸಂಭ್ರಮಕ್ಕೆ ಕಾರಣವಾಗಿದೆ. ಶಿಲ್ಪಿ ಅರುಣ್ ಯೋಗಿರಾಜ್ ಹೆಂಡತಿ ವಿಜೇತ ಅವರಂತೂ ತುಂಬು ಖುಷಿಯಿಂದ ಮಾತನಾಡಿ, ನಮ್ಮ ಮೂರ್ತಿಯೇ ಆಯ್ಕೆ ಯಾಗುತ್ತದೆ ಎಂಬ ನಿರೀಕ್ಷೆ ಇತ್ತು. ನನ್ನ ಪತಿಯವರು ಕಳೆದ ಆರು ತಿಂಗಳಿನಿಂದ ಮನೆಗೆ ಬಂದಿಲ್ಲ. ಪುಟ್ಟ ಮಗುವಿದೆ ನಮಗೆ. ಆದರೆ ಅವರು ರಾಮಲಲ್ಲಾನ ಮೂರ್ತಿಯನ್ನೇ ಮಗುವೆಂದು ಭಾವಿಸಿ ಕೆಲಸ ಮಾಡಿದ್ದಾರೆ ಎಂದು ಸಂತಸದಿಂದ ಹೇಳಿಕೊಂಡರು.

ಮಗ ಕೆತ್ತನೆ ಮಾಡಿದ ಶಿಲ್ಪವೆ ಆಯ್ಕೆಯಾಗುತ್ತೆ ಎಂಬ ನಂಬಿಕೆ ಇತ್ತು. ನನಗಂತೂ ಬಹಳ ಖುಷಿಯಾಗಿದೆ. ಈ ಸಂದರ್ಭದಲ್ಲಿ ನನ್ನ ಪತಿ ಇಲ್ಲದಿರುವುದು ಬೇಸರ ತಂದಿದೆ. ಅವರು ಇದ್ದಿದ್ದರೆ ಮಗನ ಸಾಧನೆಗೆ ತುಂಬಾ ಖುಷಿ ಪಡುತ್ತಿದ್ದರು ಎಂದು ಅರುಣ್‌ ಯೋಗಿರಾಜ್‌ ಅವರ ತಾಯಿ ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಭಿನಂದನೆ

ಅರುಣ್ ಯೋಗಿರಾಜ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಅಭಿನಂದನೆ ಸಲ್ಲಿಸಿದ್ದಾರೆ ಟ್ವೀಟ್ ಮಾಡಿರುವ ಅವರು ಶ್ರೀರಾಮ ಮತ್ತು ಹನುಮನಿಗೂ ಇರುವ ಬಾಂಧವ್ಯಕ್ಕೆ ಕರುನಾಡಿನ ನಂಟು ಇತಿಹಾಸದಿಂದಲೂ ಇದೆ. ಇದೀಗ ಅಯೋಧ್ಯೆಯ ಶ್ರೀರಾಮಲಲಾ ಮೂರ್ತಿಯು ಕರುನಾಡಿನ ಶಿಲ್ಪಿಯಿಂದ ಕೆತ್ತಲ್ಪಟ್ಟಿರುವುದು ಭಾವನಾತ್ಮಕ ಸಂಬಂಧ ಮೂಡಿಸಿದೆ ಎಂದು ಹೇಳಿದ್ದಾರೆ.

ವಿಜಯೇಂದ್ರ ಅವರ ಅಭಿನಂದನೆಯ ವಿಡಿಯೊ ತುಣುಕು ಇಲ್ಲಿದೆ

ಮೈಸೂರಿನ ಅಪ್ರತಿಮ ಶಿಲ್ಪಿ, ಕಲಾ ಪ್ರತಿಭೆ ಅರುಣ್​ ಅವರ ಕೈಯಿಂದ ಪಡಿಮೂಡಿರುವ ರಾಮಲ್ಲಾ ಮೂರ್ತಿಯು ಜನವರಿ 22ರಂದು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಗೊಳ್ಳಲಿರುವುದು ನಮಗೆ ಹೆಮ್ಮೆಯ ವಿಚಾರವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.

Exit mobile version