Site icon Vistara News

Wild animal Menace : ಆನೆ ದಾಳಿಗೆ ವ್ಯಕ್ತಿ ಬಲಿ, ಡಿಆರ್‌ಡಿಒ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷ

Elephant leopard

ಚಾಮರಾಜನಗರ/ಚಿತ್ರದುರ್ಗ: ರಾಜ್ಯದಲ್ಲಿ ವನ್ಯಜೀವಿಗಳ ದಾಳಿ (Wild animal Menace) ಜೋರಾಗಿದೆ. ನಿತ್ಯ ಎನ್ನುವಂತೆ ಆನೆ, ಚಿರತೆ, ಕರಡಿಗಳು ಜನರ ಮೇಲೆ ಮುಗಿಬೀಳುತ್ತಿವೆ. ಅದರಲ್ಲೂ ಮಲೆನಾಡಿನಲ್ಲಿ ಆನೆ ದಾಳಿಯ (Elephant attack) ಅಬ್ಬರ ಜೋರಾಗಿದೆ. ಇದೀಗ ಚಾಮರಾಜ ನಗರದಲ್ಲಿ ಆನೆ ದಾಳಿಗೆ ವ್ಯಕ್ತಿಯೊಬ್ಬರು ಬಲಿ (Elephant kills one) ಯಾಗಿದ್ದಾರೆ, ಇತ್ತ ಚಿತ್ರದುರ್ಗದ ಚಳ್ಳಕೆರೆಯ ಡಿಆರ್‌ಡಿಒ (Challakere DRDO Area) ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿ ಆತಂಕ ಮೂಡಿಸಿದೆ.

ಮಲೆಮಹದೇಶ್ವರ ಬೆಟ್ಟದಲ್ಲಿ ಆನೆ ದಾಳಿಗೆ ವ್ಯಕ್ತಿ ಬಲಿ

ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ಧಾಮದ ಪಿಜಿ ಪಾಳ್ಯ ಅರಣ್ಯ ವಲಯಕ್ಕೆ ಸೇರಿದ ಆಲದ ಕೆರೆ ಅರಣ್ಯ ಪ್ರದೇಶದಲ್ಲಿ ಆನೆ ದಾಳಿಗೆ ಒಬ್ಬ ವ್ಯಕ್ತಿ ಬಲಿಯಾಗಿದ್ದಾರೆ.

ಭಾನುವಾರ ಸಂಜೆ 5ರ ಹೊತ್ತಿಗೆ ನಡೆದ ದಾಳಿಯಲ್ಲಿ ಮೃತಪಟ್ಟವರನ್ನು ಪಿ ಜಿ ಪಾಳ್ಯ ಗ್ರಾಮದ ಪ್ರಭುಸ್ವಾಮಿ (55) ಎಂದು ಗುರುತಿಸಲಾಗಿದೆ. ಪ್ರಭುಸ್ವಾಮಿ ಅವರು ತಮ್ಮ ಮಗ ಚಂದ್ರುನೊಂದಿಗೆ ಅರಣ್ಯ ಪ್ರದೇಶಕ್ಕೆ ಪೊರಕೆ ಕಡ್ಡಿಗಳನ್ನು ಸಂಗ್ರಹಿಸಿ ಹೋಗಿದ್ದರು.

ಈ ವೇಳೆ ಮರೆಯಲ್ಲಿ ನಿಂತಿದ್ದ ಆನೆ ಒಮ್ಮಿಂದೊಮ್ಮೆಗೇ ನುಗ್ಗಿ ಬಂದಿದೆ. ಇದನ್ನು ಕಂಡು ಪ್ರಭುಸ್ವಾಮಿ ಮತ್ತು ಚಂದ್ರು ಓಡಲು ಪ್ರಯತ್ನಿಸಿದ್ದಾರೆ. ಆದರೆ, ಪ್ರಭುಸ್ವಾಮಿ ಅವರಿಗೆ ಮುಳ್ಳುಗಂಟಿಗಳ ನಡುವೆ ಹೆಚ್ಚು ದೂರ ಓಡಲು ಸಾಧ್ಯವಾಗಿಲ್ಲ. ಹೀಗಾಗಿ ಅವರು ಅಲ್ಲೇ ಕುಸಿದುಬಿದ್ದಾಗ ಆನೆ ಅವರನ್ನು ಸಾಯಿಸಿದೆ. ಇತ್ತ ಚಂದ್ರು ಸ್ವಲ್ಪ ದೂರ ಓಡಿ ಹೋಗಿ ಪರಾರಿಯಾಗಿದ್ದಾರೆ.

ಸ್ವಲ್ಪ ಹೊತ್ತಿನ ಬಳಿಕ ಬಂದು ನೋಡಿದರೆ ತಂದೆ ಮೃತಪಟ್ಟಿರುವುದು ತಿಳಿಯಿತು. ಕೂಡಲೇ ಅವರು ಸ್ಥಳೀಯರಿಗೆ ಮಾಹಿತಿ ನೀಡಿದರು. ಅರಣ್ಯಾಧಿಕಾರಿಗಳೂ ಆಗಮಿಸಿದರು. ಇದೀಗ ಮೃತದೇಹ ಹನೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನೆ ಮಾಡಲಾಗಿದೆ. ಈ ಭಾಗದಲ್ಲಿ ಆನೆಗಳ ಕಿರುಕುಳ ಜೋರಾಗಿದ್ದು, ಏನಾದರೂ ಪರ್ಯಾಯ ವ್ಯವಸ್ಥೆ ಮಾಡಿ ಎಂದು ಜನರು ಮನವಿ ಮಾಡಿದ್ದಾರೆ.

ಚಳ್ಳಕೆರೆ ಡಿಆರ್ ಡಿಓನಲ್ಲಿ ಚಿರತೆ ಪ್ರತ್ಯಕ್ಷ

ಚಿತ್ರದುರ್ಗ: ಜಿಲ್ಲೆ ಚಳ್ಳಕೆರೆಯಲ್ಲಿರುವ ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಗೆ ಸೇರಿದ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಈ ಪ್ರದೇಶದಲ್ಲಿ ಬಿಗಿಯಾರ ರಕ್ಷಣಾ ಕಾವಲು ಮತ್ತು ದೊಡ್ಡ ತಡೆಗೋಡೆಯೇ ಇದೆ. ಅದನ್ನು ದಾಟಿ ಈ ಚಿರತೆ ಬಂದಿದೆ.

ಡಿಆರ್‌ಡಿಒ ಆಗುವ ಮುನ್ನ ಈ ಪ್ರದೇಶ ಕಾವಲ್ ಪ್ರದೇಶವಾಗಿತ್ತು. ಡಿಆರ್‌ಡಿಒ ಆದ ಬಳಿಕ ಸುತ್ತಲೂ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಈ ಭಾಗದಲ್ಲಿ ಹಿಂದೆ ಚಿರತೆ ಮತ್ತು ಜಿಂಕೆಗಳು ಸೇರಿದಂತೆ ಅನೇಕ ವನ್ಯ ಜೀವಿ ವಾಸವಾಗಿದ್ದವು.

ಮೂರು ವರ್ಷಗಳ ಹಿಂದೆಯೂ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಮನುಷ್ಯರ ಮೇಲೆ ಅಟ್ಯಾಕ್ ಮಾಡಿ ಗೊಂದಲ ಸೃಷ್ಟಿಸಿತ್ತು, ಚಿಕ್ಕನಮ್ಮಹಳ್ಳಿ ಸುತ್ತಮುತ್ತಲಿನ ಜನರು ಚಿರತೆಯನ್ನು ಹೊಡೆದು ಸಾಯಿಸಿದ್ದರು.

ಈಗ ಮತ್ತೆ ಚಿರತೆ ಕಂಡು ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಡಿಆರ್ ಡಿಓ ಪ್ರದೇಶದಲ್ಲಿ ಕಂಡ ಚಿರತೆ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ; Elephant attack: ಆಪರೇಷನ್‌ ಎಲಿಫೆಂಟ್‌: ಆರು ಮಂದಿಯನ್ನು ಬಲಿ ಪಡೆದಿದ್ದ ಜೋಡಿ ಕಾಡಾನೆ ಕೊನೆಗೂ ಸೆರೆ

Exit mobile version