ಮಂಡ್ಯ/ರಾಮನಗರ: ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ರಾಯಸಮುದ್ರ ಗ್ರಾಮದಲ್ಲಿ ಜಮೀನಿನಲ್ಲಿ ಕಬ್ಬು ಕಟಾವು ಮಾಡುತ್ತಿದ್ದ ಕೂಲಿ ಕಾರ್ಮಿಕನ ಮೇಲೆ ಚಿರತೆಯೊಂದು (Wild Animals attack) ದಾಳಿ ಮಾಡಿದೆ.
ಕೆಲಸ ಮಾಡುತ್ತಿದ್ದಾಗ ಏಕಾಏಕಿ ಚಿರತೆ ಕೂಲಿ ಕಾರ್ಮಿಕ ಮುನ್ನಸ್ವಾಮಿ (65) ಮೇಲೆ ಎರಗಿದೆ. ಮುನ್ನಸ್ವಾಮಿ ಅವರು ಭಯದಿಂದ ಕೂಗಿಕೊಂಡರು. ಆಗ ಚಿರತೆ ಅಲ್ಲಿಂದ ಪರಾರಿ ಆಗಿದೆ.
ಮುನ್ನಸ್ವಾಮಿ ಕೂಲಿ ಕೆಲಸಕ್ಕಾಗಿ ಭದ್ರಾವತಿಯಿಂದ ಮಂಡ್ಯಕ್ಕೆ ಬಂದಿದ್ದರು. ಚಿರತೆ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಅವರನ್ನು ಸ್ಥಳೀಯರ ಸಹಾಯದಿಂದ ಕೆ.ಆರ್ ಪೇಟೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆ.ಆರ್ ಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಮನಗರದಲ್ಲಿ ಕಾಡಾನೆಗಳ ಉಪಟಳ
ಮಂಡ್ಯದಲ್ಲಿ ಚಿರತೆ ಚಿಂತೆಯಾದರೆ ಇತ್ತ ರಾಮನಗರದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದೆ. ಹಿಂಡು ಹಿಂಡಾಗಿ ಗ್ರಾಮಗಳಿಗೆ ಕಾಡಾನೆ ನುಗ್ಗುತ್ತಿದ್ದು ಆತಂಕ ಮನೆ ಮಾಡಿದೆ. ರಾಮನಗರದ ಹೊಸದೊಡ್ಡಿ ಗ್ರಾಮದಲ್ಲಿ 5ಕ್ಕೂ ಹೆಚ್ಚು ರೈತರ ಜಮೀನಿನ ಮೇಲೆ ಕಾಡಾನೆ ದಾಳಿ ಮಾಡಿದ್ದು, ತೆಂಗು, ಮಾವಿನ ಮರಗಳನ್ನು ದ್ವಂಸ ಮಾಡಿವೆ.
ಕಳೆದ ಎರಡು ತಿಂಗಳಿನಿಂದಲೂ ಕಾಡಾನೆ ನಿರಂತರ ದಾಳಿಯಿಂದಾಗಿ ರೈತರು ಕಂಗಾಲಾಗಿದ್ದಾರೆ. ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಗ್ರಾಮದ ಮೋಹನ್ ಕುಮಾರ್, ಶಿವರಾಮಣ್ಣ, ಮಹೇಶ್, ಪುಟ್ಟಸ್ವಾಮಿ, ಯಶೋದಮ್ಮ ಸೇರಿ ಹಲವು ರೈತರಿಗೆ ಸೇರಿದ ಜಮೀನಿನಲ್ಲಿ ಬೆಳೆ ನಾಶ ಮಾಡಿವೆ.