ಚಿಕ್ಕಮಗಳೂರು/ರಾಮನಗರ: ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡ್ ಸಮೀಪ ಹಾವು ಕಚ್ಚಿ (Snake bite) ಉರಗ ತಜ್ಞ ಸ್ನೇಕ್ ನರೇಶ್ (51) ಮೃತಪಟ್ಟಿದ್ದಾರೆ. ನರೇಶ್ ತಾವೇ ಸೆರೆ ಹಿಡಿದ ಹಾವು ಕಡಿತಕ್ಕೆ ಒಳಗಾಗಿ (Wild animals Attack) ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸ್ನೇಕ್ ನರೇಶ್ ಎಂದೇ ಖ್ಯಾತಿ ಪಡೆದಿದ್ದು, ಸಾವಿರಾರು ಹಾವುಗಳನ್ನು ಸೆರೆ ಹಿಡಿದಿದ್ದಾರೆ. 2013ರಲ್ಲಿ ವಿಧಾನಸಭಾ ಚುನಾವಣೆಗೂ ನರೇಶ್ ಸ್ಪರ್ಧಿಸಿದ್ದರು. ಶಾಲಾ ಮಕ್ಕಳಿಗೆ ಹಾವಿಗಳ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದ್ದರು.
ಕಾಡಾನೆ ದಾಳಿಗೆ ವ್ಯಕ್ತಿ ಬಲಿ
ರಾಮನಗರದ ಕನಕಪುರ ತಾಲೂಕಿನ ಹೊಸ ಕಬ್ಬಾಳು ಗ್ರಾಮದಲ್ಲಿ ಕಾಡಾನೆಗೆ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ. ಮಾವಿನ ತೋಟ ಕಾಯುತ್ತಿದ್ದ ಕಾಳಯ್ಯ (60) ಎಂಬುವವರ ಮೇಲೆ ಕಾಡಾನೆ ದಾಳಿ ಮಾಡಿದೆ. ಆಗಾಗ ಕಾಡಾನೆಗಳ ದಾಳಿ ಪ್ರಕರಣ ನಡೆಯುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಕನಕಪುರ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ವಿದ್ಯುತ್ ತಂತಿ ತುಳಿದು ಜಾನುವಾರುಗಳ ದುರ್ಮರಣ
ಕೊಪ್ಪಳದ ಕುಷ್ಟಗಿ ತಾಲೂಕಿನ ಕಳ್ಳಮಳ್ಳಿ ತಾಂಡಾದಲ್ಲಿ ವಿದ್ಯುತ್ ತಂತಿ ತುಳಿದು 11 ಜಾನುವಾರುಗಳು ಮೃತಪಟ್ಟಿವೆ. ಸೋಮವಾರ ಸುರಿದ ಭಾರಿ ಗಾಳಿ ಮಳೆಯಿಂದಾಗಿ ವಿದ್ಯುತ್ ತಂತಿ ಮುರಿದು ಬಿದ್ದಿತ್ತು. ಮಂಗಳವಾರ ಬೆಳಗ್ಗೆ ಹುಲ್ಲು ಮೇಯಲು ಜಾನುವಾರುಗಳು ಬಂದಿದ್ದು, ಈ ವೇಳೆ ವಿದ್ಯುತ್ ಶಾಕ್‌ನಿಂದ ಮೃತಪಟ್ಟಿವೆ.
2 ಎತ್ತು, 7 ಆಕಳು ಹಾಗೂ ಎರಡು ಎಮ್ಮೆ ಸೇರಿ ಒಟ್ಟು 11 ಜಾನುವಾರುಗಳು ದಾರುಣವಾಗಿ ಮೃತಪಟ್ಟಿವೆ. ರಾಮಪ್ಪ ಪವಾರ್ ಎಂಬುವವರಿಗೆ ಸೇರಿದ 2 ಎತ್ತು ಹಾಗೂ 7 ಆಕಳು, ಭದ್ರಪ್ಪ ಪವಾರ್ ಎಂಬುವವರಿಗೆ ಸೇರಿದ ಎರಡು ಎಮ್ಮೆ ಮೃತಪಟ್ಟಿವೆ. ಸ್ಥಳಕ್ಕೆ ತಾವರಗೇರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈತರಿಗೆ ಪರಿಹಾರ ಕೊಡಿಸುವ ಭರವಸೆಯನ್ನು ನೀಡಿದ್ದಾರೆ.
ಗಡಿನಾಡಲ್ಲಿ ಮುಂದುವರಿದ ಕಾಡಾನೆ ಹಾವಳಿ
ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಹಾಗೂ ಹುಂಡೀಪುರ ಗ್ರಾಮಸ್ಥರ ನಿರಂತರ ಆನೆ ದಾಳಿಯಿಂದ ಬೇಸತ್ತು ಪ್ರತಿಭಟನೆ ನಡೆಸಿದ್ದಾರೆ. ಕಳೆದ ಒಂದು ವರ್ಷದಿಂದ ನಿರಂತರವಾಗಿ ಕಾಡಾನೆ ದಾಳಿಯಿಂದ ಅಪಾರ ಪ್ರಮಾಣದ ಕೃಷಿ ನಷ್ಟವನ್ನು ಅನುಭವಿಸುವಂತಾಗಿದೆ. ತೋಟ, ಹೊಲಗಳಿಗೆ ಭಯದಲ್ಲೇ ಹೋಗುವಂತಾಗಿದೆ ಎಂದು ಕಿಡಿಕಾರಿದರು.
ಚಿರತೆ ಮರಿಗಳು ಪ್ರತ್ಯಕ್ಷ
ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಮಾದಾಪಟ್ಟಣ ಗ್ರಾಮದಲ್ಲಿ ಚಿರತೆ ಮರಿಗಳು ಪತ್ತೆಯಾಗಿವೆ. ಆಗಷ್ಟೇ ಹುಟ್ಟಿದ ಚಿರತೆ ಮರಿಗಳನ್ನು ಬಿಟ್ಟು ತಾಯಿ ಚಿರತೆ ಹೋಗಿದೆ. ಗುಂಡ್ಲುಪೇಟೆ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಅಧಿಕಾರಿಗಳು ಬೋನು ಅಳವಡಿಸಿದ್ದು, ತಾಯಿ ಚಿರತೆ ಸಿಕ್ಕ ತಕ್ಷಣ ಮರಿಗಳನ್ನು ಒಟ್ಟಿಗೆ ಅರಣ್ಯಕ್ಕೆ ಬಿಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Rain News: ಬೆಂಗಳೂರಲ್ಲಿ ವರುಣಾರ್ಭಟ; ಹೊಳೆಯಂತಾದ ರಸ್ತೆಗಳು, ಮುಳುಗಿದ ವಾಹನಗಳು!
ಮಂಡ್ಯದಲ್ಲಿ ಚಿರತೆ ಹಾವಳಿ
ಮಂಡ್ಯದ ಕೆ.ಆರ್. ಪೇಟೆ ಪಟ್ಟಣದಲ್ಲಿ ಚಿರತೆ ಹಾವಳಿ ಹೆಚ್ಚಿದೆ. ಕೆ.ಆರ್.ಪೇಟೆ ಪಟ್ಟಣದ ಬಸ್ ಡಿಪೋ ಹಿಂಭಾಗದಲ್ಲಿರುವ ಶಿಕ್ಷಕಿ ರತ್ನ ರಾಜಶೇಖರ್ ಮನೆಯ ಬಳಿ ಚಿರತೆ ಕಾಣಿಸಿಕೊಂಡಿದೆ. ಮಧ್ಯರಾತ್ರಿ ಮನೆಯ ಮುಂದೆ ಚಿರತೆ ಓಡಾಟ ನಡೆಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಿರತೆ ಸುದ್ದಿ ಹರಿದಾಡುತ್ತಿದ್ದಂತೆ, ತಾಲೂಕು ಆಡಳಿತವು ಜನರು ಒಂಟಿಯಾಗಿ ಓಡಾಡದಂತೆ ಎಚ್ಚರಿಕೆ ನೀಡಿದೆ. ಚಿರತೆ ಸೆರೆಗೆ ಅರಣ್ಯಾಧಿಕಾರಿಗಳು ಬೋನು ಇಡಲು ಮುಂದಾಗಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ