ಮಡಿಕೇರಿ: ಇಲ್ಲಿನ ಕರಡಿಗೋಡು ಭಾಗದಲ್ಲಿ ಕಳೆದ ಹಲವು ಸಮಯದಿಂದ ಜನರಿಗೆ ಆತಂಕ ಮೂಡಿಸಿದ್ದ ಕಾಡಾನೆಯೊಂದು ಕೊನೆಗೂ ಸೆರೆಯಾಗಿದೆ (Elephant trapped). ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಅನುಮತಿ ನೀಡಿದ ಬಳಿಕ ಎರಡು ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿತ್ತು. ಬುಧವಾರ ಇದು ಯಶಸ್ವಿಯಾಗಿದ್ದು, ಐದು ಸಾಕಾನೆಗಳು ಸೇರಿ ಈ ಆನೆಯನ್ನು ಪಳಗಿಸಿ ಸೆರೆಗೆ ಸಹಕರಿಸಿವೆ.
ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದ ಕರಡಿಗೋಡು ಭಾಗದಲ್ಲಿ ಈ ಆನೆ ಕಾಫಿ ತೋಟದಲ್ಲಿ ಸಾಕಷ್ಟು ದಾಂಧಲೆ ಮಾಡುತ್ತಿತ್ತು. ಎಲ್ಲೆಂದರಲ್ಲಿ ಪ್ರತ್ಯಕ್ಷವಾಗಿ ಆತಂಕ ಮೂಡಿಸುತ್ತಿತ್ತು. ಬೆಳೆಗಾರರು ಮತ್ತು ಕಾರ್ಮಿಕರು ಇಬ್ಬರೂ ಇದರ ಉಪಟಳದಿಂದ ಭಯಗೊಂಡಿದ್ದರು. ಸಾಕಷ್ಟು ಮನವಿಗಳ ಬಳಿಕ ಕಾಡಾನೆ ಸೆರೆಗೆ ಸರಕಾರ ಅನುಮತಿ ನೀಡಿತ್ತು.
ಕಾಡಾನೆಯನ್ನು ಹಿಡಿಯಲು ದುಬಾರೆ ಮತ್ತಿಗೂಡು ಶಿಬಿರದ 5 ಸಾಕಾನೆಗಳೊಂದಿಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಅಂತಿಮವಾಗಿ ಕರಡಿಗೋಡು ಭುವನಹಳ್ಳಿ ಕಾಫಿ ತೋಟದಲ್ಲಿ ಪುಂಡಾನೆ ಪತ್ತೆಯಾಯಿತು. ಸಿಬ್ಬಂದಿ ಅರಿವಳಿಕೆ ನೀಡಿ ಅದನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.
ಇದು ಸುಮಾರು 22 ವರ್ಷ ಪ್ರಾಯದ ಗಂಡಾನೆ. ಗಾತ್ರದಲ್ಲಿ ಉಳಿದ ಆನೆಗಳಿಗೆ ಹೋಲಿಸಿದರೆ ಸಣ್ಣದು. ಆದರೆ, ಸಾಕಷ್ಟು ಶಕ್ತಿಶಾಲಿಯಾಗಿರುವಂತೆ ಕಂಡುಬರುತ್ತಿದೆ. ಕಾಡಾನೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರುಬಿಟ್ಟಿದ್ದಾರೆ. ಆದರೆ, ಕಾಫಿ ತೋಟದಲ್ಲಿ ಕಾರ್ಯಾಚರಣೆ ವೇಳೆ ಹತ್ತು ಹೆಚ್ಚು ಕಾಡಾನೆಗಳು ಪ್ರತ್ಯಕ್ಷವಾಗಿರುವುದು ಅವರಿಗೆ ಹೊಸ ಆತಂಕ ಸೃಷ್ಟಿಸಿದೆ. ಹೀಗಾಗಿ ಕಾಡಾನೆ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟಲು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ | Elephant attack | ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ರೈತ ಬಲಿ