Site icon Vistara News

Karnataka Politics : ಬೊಮ್ಮಾಯಿಗಿಲ್ಲ ವಿಪಕ್ಷ ನಾಯಕ ಸ್ಥಾನ? ಒಂಟಿ ಮಾಡಿದ ಜಂಟಿ ಪ್ರೆಸ್‌ಮೀಟ್‌!

Basavaraj Bommai and vidhanasoudha

ಬೆಂಗಳೂರು: ವಿಧಾನಸಭಾ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ (Karnataka Politics) ಹಲವಾರು ಬೆಳವಣಿಗೆಗಳು ನಡೆಯುತ್ತಿವೆ. ಕಾಂಗ್ರೆಸ್‌ ಸರ್ಕಾರದಲ್ಲಿ ಒಳಜಗಳ, ಲೋಕಸಭಾ ಚುನಾವಣೆಗೆ ಕಾರ್ಯತಂತ್ರ, ಇನ್ನೂ ನಿರ್ಧಾರವಾಗದ ವಿಪಕ್ಷ ನಾಯಕ (Leader of Opposition) ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ (BJP Precedent) ಸ್ಥಾನಮಾನ, ಬಿಜೆಪಿ- ಜೆಡಿಎಸ್‌ ಮೈತ್ರಿ (BJP and JDS alliance) ಮಾತುಕತೆ ಹೀಗೆ ಹಲವಾರು ಸಂಗತಿಗಳು ನಡೆಯುತ್ತಿವೆ. ಈ ಮಧ್ಯೆ ವಿಪಕ್ಷ ನಾಯಕನ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಈಗ ಆ ಸ್ಥಾನ ಕೈತಪ್ಪುವ ಸಾಧ್ಯತೆ ಇದೆ. ಅವರಿಗೆ ಈ ಸ್ಥಾನದಲ್ಲಿ ಕೂರುವ ಎಲ್ಲ ಅರ್ಹತೆ ಇದ್ದರೂ ಆ ಒಂದು ನಿರ್ಧಾರ ಅವರ ಕನಸಿಗೆ ಕುತ್ತು ತಂದಿತಾ ಎಂಬ ಪ್ರಶ್ನೆ ಎದುರಾಗಿದೆ. ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.‌ಡಿ. ಕುಮಾರಸ್ವಾಮಿ (HD Kumaraswamy) ಜತೆ ಜಂಟಿ ಪ್ರೆಸ್‌ಮೀಟ್‌ನಲ್ಲಿ ಪಾಲ್ಗೊಂಡಿದ್ದೇ ಈಗ ಅವರಿಗೆ ಮುಳುವಾಗಿದೆ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಂದುಕೊಂಡಂತೆ ಗೆಲುವು ಸಾಧಿಸಿದ್ದರೆ ಮತ್ತೊಮ್ಮೆ ಸಿಎಂ ಆಗುವ ಆಸೆಯನ್ನು ಬಸವರಾಜ ಬೊಮ್ಮಾಯಿ ಇಟ್ಟುಕೊಂಡಿದ್ದರು. ಆದರೆ, ನಿರೀಕ್ಷೆ ತಲೆಕೆಳಗೆ ಆಯಿತು. ಈ ನಡುವೆ ಮುಖ್ಯಮಂತ್ರಿ ಸ್ಥಾನದಷ್ಟೇ ಘನತೆಯನ್ನು ಹೊಂದಿರುವ ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನವನ್ನಾದರೂ ಪಡೆಯಬೇಕೆಂಬ ನಿರೀಕ್ಷೆಯಲ್ಲಿದ್ದರು. ಆದರೆ, ಈಗ ಅವರ ಲೆಕ್ಕಾಚಾರ ಉಲ್ಟಾ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: Gold Rate Today: ಚಿನ್ನದ ಬೆಲೆ ನಿನ್ನೆಗಿಂತ ತುಸು ಏರಿಕೆ, ಕಾರಣಗಳು ಇಲ್ಲಿವೆ

ಬೊಮ್ಮಾಯಿಗೆ ಇರುವ ಪ್ಲಸ್‌ ಏನು?

ಬಸವರಾಜ ಬೊಮ್ಮಾಯಿ‌ ಅವರಿಗೆ ಹಲವಾರು ಪ್ಲಸ್ ಪಾಯಿಂಟ್‌ಗಳಿವೆ. ಅವರು ಅಪಾರ ಅನುಭವವನ್ನು ಹೊಂದಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌, ಸಚಿವ ಎಚ್.ಕೆ. ಪಾಟೀಲ್‌ ಅವರಂಥ ಘಟಾನುಘಟಿಗಳನ್ನು ಎದುರಿಸುವ ತಾಕತ್ತು ಅವರಿಗಿದೆ.

ಸರ್ಕಾರಿ ಇಲಾಖೆಗಳ ದಾಖಲೆ ತೆಗೆಸುವ ಚಾಕಚಕ್ಯತೆ ಸಹಿತ ಸದನದಲ್ಲಿ ಚರ್ಚೆ ಎಂದು ಬಂದರೆ ಸರ್ಕಾರವನ್ನು ತಿವಿಯುವ ಬುದ್ಧಿವಂತಿಕೆಯೂ ಅವರಿಗೆ ಇದೆ. ಈ ಲೆಕ್ಕದಲ್ಲಿ ಪ್ರತಿಪಕ್ಷ‌ ನಾಯಕನಾಗುವ ಅರ್ಹತೆಯನ್ನು ಅವರು ಹೊಂದಿದ್ದಾರೆ.

ಈಗಿರುವ ಸಮಸ್ಯೆ ಏನು?

ಈಗ ಬಸವರಾಜ ಬೊಮ್ಮಾಯಿ ಅವರು ಪಕ್ಷದಲ್ಲಿ ಏಕಾಂಗಿಯಾಗಿದ್ದಾರೆಯೇ ಎಂಬ ಪ್ರಶ್ನೆಯೂ ಮೂಡಿದೆ. ಕಾರಣ ಅವರು ಜುಲೈ 21ರಂದು ತೆಗೆದುಕೊಂಡ ಏಕಪಕ್ಷೀಯ ನಿರ್ಧಾರ ಎಂದು ಹೇಳಲಾಗುತ್ತಿದೆ. ಅಂದು ಎಚ್‌.ಡಿ. ಕುಮಾರಸ್ವಾಮಿ ಜತೆಗೆ ಸುದ್ದಿಗೋಷ್ಠಿ ನಡೆಸಿದ್ದ ಬಸವರಾಜ ಬೊಮ್ಮಾಯಿ‌ ಅವರು, ನೈಸ್ ಹಗರಣದ ಕುರಿತು ಮಾತನಾಡಿದ್ದರು. ಸರ್ಕಾರವನ್ನು ಒಟ್ಟಿಗೆ ತರಾಟೆಗೆ ತೆಗೆದುಕೊಂಡಿದ್ದರು. ಇಷ್ಟೇ ಆಗಿದ್ದರೆ ಏನೂ ಸಮಸ್ಯೆ ಆಗುತ್ತಿರಲಿಲ್ಲ. ಇಲ್ಲಿ ಬಿಜೆಪಿ ನಾಯಕರಿಗೆ ಅರಗಿಸಿಕೊಳ್ಳಲು ಆಗದೇ ಇರುವುದು ಏನೆಂದರೆ, ಈ ಸುದ್ದಿಗೋಷ್ಠಿ ನಡೆದಿರುವುದು ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಎಂಬುದಾಗಿದೆ.

ಇನ್ನೂ ನಿಲ್ಲದ ಅಸಮಾಧಾನ

ಬಿಜೆಪಿ ಹಾಗೂ ಜೆಡಿಎಸ್ ಕಚೇರಿಗೆ ತೆರಳಿದ್ದರ ಹಿಂದೆ ಬಿಜೆಪಿಯಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. 10 ದಿನವಾದರೂ ಪಕ್ಷದಲ್ಲಿ ಈ ಬಗ್ಗೆ ಚರ್ಚೆ ನಿಂತಿಲ್ಲ. ರಾಷ್ಟ್ರೀಯ ಪಕ್ಷವಾಗಿ ಇದು ಅವಮಾನ ಎಂದು ಕಾರ್ಯಕರ್ತರು, ನಾಯಕರು ಹೇಳುತ್ತಿದ್ದಾರೆ. ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ಮಾಡಬಹುದಿತ್ತು. ಅಥವಾ ಯಾವುದೇ ನ್ಯೂಟ್ರಲ್ ಸ್ಥಳದಲ್ಲಿ ಮಾಡಬೇಕಿತ್ತು. ಇದಕ್ಕೆ ಪಕ್ಷದ ಅನುಮತಿಯನ್ನೂ ಪಡೆದಿಲ್ಲ. ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದ ಪಕ್ಷಕ್ಕೆ‌ ಮುಜುಗರವಾಗಿದೆ ಎಂದು ದೆಹಲಿ ವರಿಷ್ಠರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: Weather Report : ಗಳಿಗೆಗೊಂದು ವಾತಾವರಣ; ಮಳೆ ಜತೆಗೆ ಗುಡುಗು, ಸಿಡಿಲು, ಬೀಸಲಿದೆ ಬಿರುಗಾಳಿ

ಇವರನ್ನೇ ಪ್ರತಿಪಕ್ಷ ನಾಯಕನನ್ನಾಗಿ ಮಾಡಿದರೆ ಪಕ್ಷದ ಘನತೆಗೆ ತಕ್ಕುದಲ್ಲ ಎಂದು ದೂರನ್ನಿತ್ತಿದ್ದಾರೆ. ದೂರಿನ ಕುರಿತು ವರಿಷ್ಠರ ನಿಲುವು ಏನಾಗಲಿದೆ ಎಂಬ ಕುತೂಹಲ ಈಗ ಮೂಡಿದೆ. ಒಂದು ವೇಳೆ ಈ ವಿಷಯವನ್ನು ವರಿಷ್ಠರು ಗಂಭೀರವಾಗಿ ಪರಿಗಣಿಸಿದರೆ ಪ್ರತಿಪಕ್ಷ ಸ್ಥಾನಕ್ಕೆ ಕುತ್ತು ಬರಲಿದೆ.

Exit mobile version