ಬೆಳಗಾವಿ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ (Lok Sabha Election 2024) ಬೆಳಗಾವಿ ಕ್ಷೇತ್ರದಿಂದ (Belagavi Lok Sabha constituency) ಸ್ಪರ್ಧೆ ಮಾಡುತ್ತೇನೆ. ಆದರೆ, ಅದಕ್ಕೆ ಹೈಕಮಾಂಡ್ ಹೇಳಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ (satish jarkiholi) ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಸಂಸತ್ ಚುನಾವಣೆಗೆ ಸ್ಪರ್ಧೆ ಮಾಡಿ ಎಂದು ಪಕ್ಷ ಸೂಚನೆ ನೀಡದರೆ ಖಂಡಿತವಾಗಿಯೂ ನಿಲ್ತೇನೆ. ರಾಜಕೀಯದಲ್ಲಿ ಯಾವುದನ್ನೂ ಹೇಳಲಿಕ್ಕೆ ಆಗೋದಿಲ್ಲ. ಕೊನೇ ಗಳಿಗೆಯಲ್ಲಿ ಏನು ಬೇಕಾದರೂ ಆಗಬಹುದು ಎಂದು ಹೇಳಿದರು.
ಇದನ್ನೂ ಓದಿ: Gruha Lakshmi Scheme : ಜು. 19ಕ್ಕೆ ಗೃಹಲಕ್ಷ್ಮಿಗೆ ಸಿಎಂ ಸಿದ್ದರಾಮಯ್ಯ ಚಾಲನೆ; ಬರಲ್ಲ ಹೈಕಮಾಂಡ್
ಬುಡಾ, ಸ್ಮಾರ್ಟ್ ಸಿಟಿ ಯೋಜನೆ (Smart City Scheme) ಸಂಬಂಧ ಮಹಾನಗರ ಪಾಲಿಕೆಯಲ್ಲಿ (Belagavi Municipal Corporation) ಹಗರಣಗಳ ತನಿಖೆ ನಡೆಸುವ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಇದು ಅಧಿಕಾರಿಗಳ ಮಟ್ಟದಲ್ಲಿ ತನಿಖೆಗೆ ಈಗಾಗಲೇ ಸರ್ಕಾರ ಆದೇಶ ಮಾಡಿದೆ. ಈ ತನಿಖೆಯಲ್ಲಿ ಮೇಲ್ನೋಟಕ್ಕೆ ಸಾಬೀತಾಗಲಿ. ಇದಕ್ಕಾಗಿ ಬೆಂಗಳೂರಿನಿಂದ ಸಿವಿಲ್ ಎಕ್ಸ್‌ಪರ್ಟ್ ಹಾಗೂ ಫೈನಾನ್ಶಿಯಲ್ ಎಕ್ಸ್‌ಪರ್ಟ್ ಬರುತ್ತಾರೆ. ಅವರು ನೀಡುವ ವರದಿಯ ಮೇಲೆ ತನಿಖೆ ಯಾರಿಗೆ ನೀಡಬೇಕು ಎಂದು ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.
ಅಕ್ರಮ ನಡೆದಿಲ್ಲ ಎಂದು ಈ ಹಿಂದೆ ಕ್ಲೀನ್ ಚಿಟ್ ನೀಡುತ್ತಿರುವ ಬಗ್ಗೆ ಮಾಧ್ಯಮದವರು ಮಾಡಿದ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ, ಈಗ ಬರುತ್ತಿರುವ ಅಧಿಕಾರಿಗಳು ಥರ್ಡ್ ಪಾರ್ಟಿಯಾಗಿದ್ದಾರೆ. ಅವರು ಬಂದು ತನಿಖೆ ಮಾಡಿ ವರದಿ ನೀಡಲಿ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಕಾವ ಕಟ್ಟಾದಲ್ಲಿ ಜಾಗ ಒಬ್ಬರ ಹೆಸರ ಮೇಲಿದೆ. ಆದರೆ, ಹರಾಜು ಹಾಕಿದವರು ಮತ್ತೊಬ್ಬರು. ತರಾತುರಿಯಲ್ಲಿ 30 ವರ್ಷ ಲೀಸ್‌ಗೆ ಕೊಟ್ಟಿದ್ದಾರೆ. ಮೊದಲು 5 ವರ್ಷ ಇತ್ತು. ಈಗ 30 ವರ್ಷ ಲೀಸ್‌ಗೆ ಹೇಗೆ ಕೊಟ್ಟರು ಎಂಬುದು ತನಿಖೆ ಆಗಬೇಕು. ಬಾಡಿಗೆ ಬಹಳ ಕಡಿಮೆ ಇದೆ. ಅಕ್ರಮವಾಗಿ ಬಾಡಿಗೆ ಹಣ ವರ್ಗಾವಣೆ ಆಗುತ್ತಿದೆ. 15 ಸಾವಿರ ರೂಪಾಯಿ ಬಾಡಿಗೆ ಕೊಡುವ ಜಾಗದಲ್ಲಿ ಮನಬಂದಂತೆ ಬಾಡಿಗೆ ನೀಡಲಾಗಿದೆ. ಇದನ್ನು ಅಧಿಕಾರಿಗಳಿಂದ ತನಿಖೆ ಆಗಿ ಅಧಿಕಾರಿಗಳು ವರದಿ ಕೊಡಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ: Shadow CM: ಕಾಂಗ್ರೆಸ್‌ನ ಪೇಸಿಎಂ ಅಭಿಯಾನಕ್ಕೆ ಬಿಜೆಪಿಯಿಂದ ಶ್ಯಾಡೊ ಸಿಎಂ ಪೋಸ್ಟರ್ ವಾರ್
ಬಸ್ ಕಥೆ ಹೇಳಿದ ಸತೀಶ ಜಾರಕಿಹೊಳಿ
ಕಾರ್ಪೊರೇಶನ್‌ನಲ್ಲಿ ಹತ್ತತ್ತು ವರ್ಷಗಳಿಂದ ಅಧಿಕಾರಿಗಳು ಒಂದೇ ಕಡೆ ಇರುವ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಸಚಿವ ಸತೀಶ್ ಜಾರಕಿಹೊಳಿ, ನಾವು ಅವರನ್ನು ವರ್ಗಾವಣೆ ಮಾಡಿದರೆ, ಇನ್ನೊಂದು ಇಲಾಖೆಗೆ ಬರುತ್ತಾರೆ. ಕಾರ್ಪೊರೇಶನ್‌ನಿಂದ ಓಡಿಸಿದರೆ, ಬೂಡಾದಲ್ಲಿ ಬರುತ್ತಾರೆ. ಇದೊಂಥರ ಬಸ್ ಪ್ರಯಾಣ ಇದ್ದ ಹಾಗೆ. ಬಸ್‌ನ ಮುಂಬದಿ ಡೋರ್‌ನಿಂದ ಇಳಿಸುತ್ತೇವೆ. ಅವರು ಹಿಂದಿನ ಬಾಗಿನಿಲಿನಿಂದ ಒಳ ಬಂದಿದ್ದು ಗೊತ್ತೇ ಆಗಲ್ಲ. ಇನ್ನು ಕೆಲವೊಮ್ಮೆ ಬಸ್ ಖಾಲಿ ಇದೆ ಅಂತ ನಾವು ತಿಳಿದುಕೊಳ್ಳುತ್ತೇವೆ. ಆದರೆ, ಅವರು ಎರಡನೇ ಬಸ್‌ನಲ್ಲಿ ಬರುತ್ತಾರೆ. ಜಾತಿ, ಧರ್ಮ, ಎಲ್ಲವೂ ಸೇರಿ ಒತ್ತಡ ಹಾಕಿ ಮತ್ತೆ ಬರುತ್ತಾರೆ. ಬೆಳಗಾವಿಯಲ್ಲಿ ಕಂಡಕ್ಟರ್ ಇಬ್ಬರಾಗಿಲ್ಲ. ಬಸ್‌ಗಳು ಎರಡಾಗಿವೆ. ಜಿದ್ದಿಗೆ ಬಿದ್ದು ಏನೂ ಮಾಡುತ್ತಿಲ್ಲ. ವಸೂಲಿ ಹಚ್ಚಿ ಏನೇನೊ ಮಾಡುತ್ತಾರೆ. ಬಹಳ ದಿನಗಳಿಂದ ಇದ್ದಾರೆ ಎನ್ನುವುದಕ್ಕಿಂತ ಜನರಿಗೆ ತೊಂದರೆ ಕೊಟ್ಟರೆ ನಾವು ಬದಲಾಯಿಸುತ್ತೇವೆ ಎಂದು ಹೇಳಿದರು.