ಬೆಂಗಳೂರು/ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ (Multi specialty) ಹೋರಾಟ ತೀವ್ರಗೊಂಡಿದ್ದು ಅಭಿಯಾನದ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ, ಶಾಸಕಿ ರೂಪಾಲಿ ನಾಯ್ಕ್ ಹೇಳಿಕೆ ಚರ್ಚೆಯನ್ನು ಹುಟ್ಟುಹಾಕಿದೆ. ಜಿಲ್ಲೆಗೆ ಬರಲು ವೈದ್ಯರೇ ಒಪ್ಪುತ್ತಿಲ್ಲ. ಇದು ಸಮಸ್ಯೆಗೆ ಮೂಲ ಕಾರಣ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಮಾಜಿ ಮುಖ್ಯಮಂತ್ರಿದ್ವಯರಾದ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಸಹ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದರು. ಈಗ ಆರೋಗ್ಯ ಸಚಿವರು ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಭರವಸೆ ಮೂಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಆರಂಭಗೊಂಡಿರುವ ಅಭಿಯಾನಕ್ಕೆ ಹಲವು ರಾಜಕಾರಣಿಗಳು ಸಹ ತಮ್ಮ ಬೆಂಬಲವನ್ನು ಸೂಚಿಸುತ್ತಿವೆ. ಈಗ ಆರೋಗ್ಯ ಸಚಿವರೂ ಸಹ ಟ್ವೀಟ್ ಮಾಡುವ ಮೂಲಕ ಸಮಸ್ಯೆಯನ್ನು ಪರಿಹರಿಸುವ ಭರವಸೆಯನ್ನು ನೀಡಿದ್ದಾರೆ.
ಕಾರವಾರದ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಟ್ರಾಮಾ ಸೆಂಟರ್ ಸ್ಥಾಪನೆ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವಿಚಾರವಾಗಿ ಮುಖ್ಯಮಂತ್ರಿಯವರ ಜತೆ ಚರ್ಚೆ ನಡೆಸಿ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು. ಅಲ್ಲದೆ, ಆಸ್ಪತ್ರೆ ವಿಚಾರವಾಗಿ ಉ.ಕ. ಜಿಲ್ಲೆಯ ಜನಪ್ರತಿನಿಧಿಗಳೊಂದಿಗೂ ಸಭೆ ನಡೆಸಿ ಯೋಜನೆ ರೂಪಿಸುವುದಾಗಿ ಸಚಿವರಾದ ಡಾ.ಕೆ.ಸುಧಾಕರ್ ಟ್ವೀಟ್ ಮೂಲಕ ಭರವಸೆ ನೀಡಿದ್ದಾರೆ.
ವೈದ್ಯರೇ ಬರಲೊಪ್ಪುತ್ತಿಲ್ಲ ಎಂದ ಶಾಸಕಿ!
ಉತ್ತರ ಕನ್ನಡ ಜಿಲ್ಲೆಗೆ ಬಹಳಷ್ಟು ತಜ್ಞ ವೈದ್ಯರು ಬರಲು ಒಪ್ಪುತ್ತಿಲ್ಲ. ಈ ಕಾರಣದಿಂದ ಜಿಲ್ಲೆಯಲ್ಲಿ ವೈದ್ಯರ ಕೊರತೆ ಎದ್ದು ಕಾಣುತ್ತಿದೆ ಎಂದು ಕಾರವಾರದಲ್ಲಿ ಮಾಧ್ಯಮಗಳಿಗೆ ಶಾಸಕಿ ರೂಪಾಲಿ ನಾಯ್ಕ್ ಪ್ರತಿಕ್ರಿಯೆ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರ ವೈದ್ಯರು ಇಲ್ಲಿ ಕೆಲಸ ಮಾಡಲು ಒಪ್ಪುತ್ತಿಲ್ಲ. ಮುಂದಿನ ತಿಂಗಳು ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸುತ್ತಿದ್ದು, ಆಗ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಿಯ ಘೋಷಣೆ ಮಾಡಲಿದ್ದಾರೆ ಎಂದೂ ಸಹ ವಿಶ್ವಾಸ ವ್ಯಕ್ತಪಡಿಸಿದರು.
ಈ ಹಿಂದಿನಿಂದಲೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ನಾನು ಮುಖ್ಯಮಂತ್ರಿಯವರ ಬಳಿ ಮನವಿ ಮಾಡಿದ್ದೆ. ಯಡಿಯೂರಪ್ಪ ಅವರ ಸರ್ಕಾರ ಇದ್ದಾಗ ಮಂಜೂರಾತಿ ಆಗಬೇಕಿತ್ತು. ಆದರೆ, ಕೋವಿಡ್ ಕಾರಣದಿಂದ ಈ ಪ್ರಕ್ರಿಯೆಗಳು ವಿಳಂಬವಾಯಿತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Multi specialty | ಆಸ್ಪತ್ರೆ ನಿರ್ಮಾಣಕ್ಕೆ ಸ್ಪೀಕರ್ ಕಾಗೇರಿ ಮನವಿಗೆ ಸ್ಪಂದಿಸಿದ ಸಚಿವ ಸುಧಾಕರ್