| ಮಾರುತಿ ಪಾವಗಡ, ಬೆಂಗಳೂರು
ಕಲ್ಲು ಉಳಿಯ ಪೆಟ್ಟು ತಿಂದು ಶಿಲೆ ಆಗುವಂತೆ ರಾಹುಲ್ ಗಾಂಧಿ ಸಹ ಒಂದೊಂದು ಹೆಜ್ಜೆ ಹಾಕುವುದರ ಮೂಲಕ ಒಂದೊಂದು ಪಾಠ ಕಲಿಯುತ್ತಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ ಅವರು ಕಂಡ ಸತತ ಸೋಲುಗಳಿಂದ ಕಲಿತ ರಾಜಕೀಯ ಪಾಠಕ್ಕಿಂತಲೂ ಪಾದಯಾತ್ರೆಯ (Bharat Jodo) ವೇಳೆ ಅವರು ಕಲಿಯುತ್ತಿರುವ ಪಾಠ ದೊಡ್ಡದು ಮತ್ತು ಅಮೂಲ್ಯ. ಪ್ರತಿ ಬಾರಿಯೂ ರಾಹುಲ್ ಮಾಡುತ್ತಿದ್ದ ಎಡವಟ್ಟುಗಳನ್ನು ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದ್ದ ಬಿಜೆಪಿ ಈ ಬಾರಿ ಅಂಥ ಅಸ್ತ್ರಗಳು ಸಿಗದೆ ಸಣ್ಣಪುಟ್ಟ ಟ್ವೀಟ್‌ಗಳಿಗೆ ತೃಪ್ತಿಪಡುವಂತಾಗಿದೆ. ಹಾಗಂತ ರಾಹುಲ್ ಗಾಂಧಿ ನೂರಕ್ಕೆ ನೂರರಷ್ಟು ಪ್ರಬುದ್ಧರಾಗಿದ್ದಾರೆ ಎಂದಲ್ಲ. ಆದರೆ ಶ್ರದ್ಧೆಯಿಂದ ಕಲಿಯುವ ಮನಸ್ಸನ್ನು ರಾಹುಲ್ ಗಾಂಧಿಯವರು ಈ ಬಾರಿ ಮಾಡಿದ್ದಾರೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುವುದೆಂದರೆ ಸುಲಭದ ಮಾತಲ್ಲ. ಪಾದಯಾತ್ರೆಯ ಹೆಸರು ಭಾರತ್ ಜೋಡೋ ಆಗಿದ್ದರೂ, ಅದರ ಹಿಂದೆ ಇರುವ ಉದ್ದೇಶ ಕಾಂಗ್ರೆಸ್ ಸಂಘಟನೆ ಬಲಪಡಿಸುವುದು ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಧೈರ್ಯ ತುಂಬುವುದು. ಇದು ಕರ್ನಾಟಕದಲ್ಲಿ ಹೇಗೆ ಪರಿಣಾಮ ಬೀರುತ್ತದೆ, ರಾಹುಲ್ ಗಾಂಧಿ ಮೂಡಿಸಿದ ಕಾಂಗ್ರೆಸ್ ಪರ ಒಲವನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಹೇಗೆ ಉಳಿಸಿಕೊಂಡು ಹೋಗಲಿದ್ದಾರೆ ಎಂಬುದು ಸದ್ಯದ ಪ್ರಶ್ನೆಯಾಗಿದೆ.
ರಾಜ್ಯ ವಿಧಾನಸಭೆ ಚುನಾವಣೆ ಮೇಲೆ ಏನು ಪರಿಣಾಮ?
ಪಾದಯಾತ್ರೆಗಳು ಈ ಹಿಂದೆ ಹಲವು ಬಾರಿ ಚುನಾವಣಾ ಫಲಿತಾಂಶದ ಮೇಲೆ ಪಾಸಿಟಿವ್ ಫಲಿತಾಂಶ ನೀಡಿವೆ. ಆಂಧ್ರಪ್ರದೇಶದಲ್ಲಿ ರಾಜಶೇಖರ್ ರೆಡ್ಡಿ ಪಾದಯಾತ್ರೆ, ಬಳಿಕ ಜಗನ್ ಮೋಹನ್ ರೆಡ್ಡಿ ಮಾಡಿದ ಓದರ್ಪು ಯಾತ್ರೆ ಹಾಗೂ ರಾಜ್ಯದಲ್ಲಿ 2013ಕ್ಕೂ ಮೊದಲು ನಡೆದ “ಕಾಂಗ್ರೆಸ್ ನಡಿಗೆ ಬಳ್ಳಾರಿ ಕಡೆಗೆʼ ಯಾತ್ರೆ ಭಾರಿ ಲಾಭ ತಂದುಕೊಟ್ಟಿದ್ದವು. ಈ ಪಾದಯಾತ್ರೆ ಸಹ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ರಾಹುಲ್ ಗಾಂಧಿಯವರ ಮುಂದೆ ಜೋಡೆತ್ತುಗಳಂತೆ ಹೆಜ್ಜೆ ಹಾಕುತ್ತಿರುವ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಚುನಾವಣೆ ಮುಗಿಯುವವರೆಗೂ ರಾಜ್ಯ ಕಾಂಗ್ರೆಸ್ ರಥವನ್ನು ಸಹಮತದಿಂದ ಎಳೆದರೆ ಮಾತ್ರ ಕಾಂಗ್ರೆಸ್ ಅಧಿಕಾರ ಹಿಡಿಯಬಹುದು. ಇಲ್ಲದಿದ್ದರೆ ಪಾದಯಾತ್ರೆಯ ಶ್ರಮ ವ್ಯರ್ಥವಾದೀತು.
ಡಿಕೆಶಿ ಬವಣೆ, ಸಿದ್ದುಗೆ ಮನ್ನಣೆ
ಇತ್ತೀಚೆಗೆ ಕಾಂಗ್ರೆಸ್ ಮಾಡಿದ ಮೇಕೆದಾಟು ಚಲೋ, ಆಗಸ್ಟ್ ೧೫ರಂದು ಬೆಂಗಳೂರಿನಲ್ಲಿ ಮಾಡಿದ ಪಾದಯಾತ್ರೆ ಮತ್ತು ಈಗಿನ ಭಾರತ್ ಜೋಡೋದ ಸಂಪೂರ್ಣ ಸಿದ್ಧತೆಯ ಜವಾಬ್ದಾರಿಯನ್ನು ಡಿಕೆಶಿ ಹೊತ್ತಿದ್ದಾರೆ. ತಾವು ನಿದ್ದೆ ಮಾಡದೆ, ಕಾಂಗ್ರೆಸ್ ನಾಯಕರನ್ನೂ ನಿದ್ದೆ ಮಾಡಲು ಬಿಡದೆ ಕೆಲಸ ಮಾಡಿಸುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಬಂದರೆ ಸಿಗುವ ಮನ್ನಣೆ ರಾಜ್ಯದ ಬೇರೆ ಯಾವ ಕಾಂಗ್ರೆಸ್ ನಾಯಕರಿಗೂ ಸಿಗುತ್ತಿಲ್ಲ. ಬಳ್ಳಾರಿ ಸಮಾವೇಶದಲ್ಲಿ ಸಿದ್ದರಾಮಯ್ಯ ಭಾಷಣಕ್ಕೆ ನಿಂತಾಗ ಜನರ ರೆಸ್ಪಾನ್ಸ್ ನೋಡಿ ರಾಹುಲ್ ಗಾಂಧಿ ಥ್ರಿಲ್ ಆಗಿದ್ದಾರೆ. ಇದೇ ಜೋಶ್‌ನಲ್ಲಿ ಸಿದ್ದರಾಮಯ್ಯ ಅವರು ರಾಮುಲು ವಿರುದ್ಧ ಇಡೀ ಬಳ್ಳಾರಿ ಕೇಳುವಂತೆ ಆರ್ಭಟಿಸಿದ್ದರು. ಜನ ಶಿಳ್ಳೆ ಹೊಡೆದು ಸಿದ್ದರಾಮಯ್ಯ ಅವರಿಗೆ ಜೈ ಎಂದಿದ್ದರು.
ನಿಜವಾಗುವುದೇ ರೈತ ನುಡಿದ ಭವಿಷ್ಯ?
ದೇವೇಗೌಡರು ಪ್ರಚಾರಕ್ಕೆ ಬಂದ್ರೆ ಜೆಡಿಎಸ್ ಕನಿಷ್ಠ 35 ಸ್ಥಾನ ಪಡೆಯುವುದು ಕಷ್ಟವಲ್ಲ. ತುಮಕೂರು, ಮಂಡ್ಯ, ಹಾಸನ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಗರಿಷ್ಠ ಸ್ಥಾನ ಗೆಲ್ಲಬಹುದು. ಇನ್ನು ರಾಹುಲ್ ಗಾಂಧಿಯವರ ಪಾದಯಾತ್ರೆಯಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ನೂರು ಆನೆಗಳ ಬಲ ಬಂದಿದೆ. ಚಿಕ್ಕ ಮಕ್ಕಳಿಗೆ ಕೋಲು ತೆಗೆದುಕೊಂಡು ಪಾಠ ಮಾಡುವಂತೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ಗೆ ರಾಹುಲ್ ದಿನವೂ ಒಗ್ಗಟ್ಟಿನ ಪಾಠ ಮಾಡುತ್ತಿದ್ದಾರೆ. ಇವರಿಬ್ಬರೂ ಒಂದಾಗಿ ಹೋದರೆ ಕಾಂಗ್ರೆಸ್ 120 ಸ್ಥಾನ ಗೆಲ್ಲೋದು ಕಷ್ಟವಲ್ಲ. ಆದರೆ ರಾಹುಲ್ ಮರೆಯಾದ ತಕ್ಷಣ ಇವರು ತಮ್ಮ ಹಳೆಯ ಚಾಳಿ ಮುಂದುವರಿಸುತ್ತಾರೆ. ಇದೇ ಕಾಂಗ್ರೆಸ್‌ನ ಪ್ರಾಬ್ಲಂ. ಇನ್ನು ಸಿಎಂ ಬಸವರಾಜ ಬೊಮ್ಮಾಯಿ ಕಾಮನ್ ಮ್ಯಾನ್ ಸಿಎಂ ಆಗಿ ಹೆಸರು ಪಡೆಯುತ್ತಿದ್ದಾರೆ. ಆದರೆ, ಯಡಿಯೂರಪ್ಪ ಇಲ್ಲದೆ ಇದ್ರೆ ಬಿಜೆಪಿ 100ರ ಗಡಿ ದಾಟುವುದೂ ಕಷ್ಟ. ಹೀಗಾಗಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಬೊಮ್ಮಾಯಿ ಜತೆ ಕಳಿಸುವ ಕೆಲಸ ಮಾಡುತ್ತಿದೆ. ಅಲ್ಲಿಗೆ 2023ರ ಚುನಾವಣೆ ಕುರುಕ್ಷೇತ್ರದಲ್ಲಿ ಯಡಿಯೂರಪ್ಪ ಶ್ರೀಕೃಷ್ಣನ ಪಾತ್ರ ನಿರ್ವಹಿಸುತ್ತಿದ್ದರೆ, ಬೊಮ್ಮಾಯಿ ಅರ್ಜುನನ ಪಾತ್ರ ವಹಿಸುತ್ತಿದ್ದಾರೆ. ಇದರಿಂದ ಬಿಜೆಪಿಗೆ ಅನುಕೂಲವಾದರೂ ಅಚ್ಚರಿ ಇಲ್ಲ ಎಂಬುದು ಭಾರತ್ ಜೋಡೋ ಪಾದಯಾತ್ರೆ ವೇಳೆ ಮಾತಿಗೆ ಸಿಕ್ಕ ರೈತರೊಬ್ಬರ ಅಭಿಪ್ರಾಯವಾಗಿದೆ.
ಒಟ್ಟಾರೆ ಆ ರೈತ ಹೇಳಿರುವುದರ ತಾತ್ಪರ್ಯ
2023ರ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ, ಸೋಲಿಸುವ ಶಕ್ತಿ ಇರುವುದು ಬರೀ ದೇವೇಗೌಡ, ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅವರಿಗೆ ಮಾತ್ರ!
ಇದನ್ನೂ ಓದಿ | Bharat Jodo | ಬಳ್ಳಾರಿ ಸಭೆಗೆ ಬೆವರು ಹರಿಸಿದ್ದು ಡಿಕೆಶಿ, ಚಪ್ಪಾಳೆ-ಶಿಳ್ಳೆ ಗಿಟ್ಟಿಸಿದ್ದು ಸಿದ್ದರಾಮಯ್ಯ !