Site icon Vistara News

Karnataka Politics : ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಒಲಿಯಿತಾ ವಿಪಕ್ಷ ನಾಯಕ ಸ್ಥಾನ?

former CM Basavaraj Bommai

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣ (Karnataka Politics) ದಿನೇ ದಿನೆ ರಂಗು ಪಡೆದುಕೊಳ್ಳುತ್ತಿದೆ. ಈ ನಡುವೆ ಕೆಲವು ವಿಚಾರದಲ್ಲಿ ಬಿಜೆಪಿ ಹಿಂದೆ ಬಿದ್ದಿತ್ತು. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾಗಿ 2 ತಿಂಗಳು ಕಳೆದು ಮೂರನೇ ತಿಂಗಳಿಗೆ ಕಾಲಿಟ್ಟಿದ್ದರೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿರಲಿಲ್ಲ. ಯಾರನ್ನು ಈ ಸ್ಥಾನದಲ್ಲಿ ಕೂರಿಸಬೇಕೆಂಬ ಬಗ್ಗೆ ವರಿಷ್ಠರು ಲೆಕ್ಕಾಚಾರದಲ್ಲಿ ತೊಡಗಿದ್ದರು. ಈಗ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ವಿಪಕ್ಷ ನಾಯಕ ಸ್ಥಾನ ಒಲಿಯಿತಾ ಎಂಬ ಚರ್ಚೆ ಹುಟ್ಟಿಕೊಂಡಿದ್ದು, ಬಿಜೆಪಿ ಹೈಕಮಾಂಡ್‌ ನಡೆ ಇದಕ್ಕೆ ಮತ್ತಷ್ಟು ಪುಷ್ಟೀಕರಣ ನೀಡಿದೆ.

ಬಿಜೆಪಿ ಹೈಕಮಾಂಡ್‌ ಬುಲಾವ್‌ ಮೇರೆಗೆ ದೆಹಲಿಗೆ ತೆರಳಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೋಮವಾರ ವರಿಷ್ಠರ ಜತೆ ಮಾತುಕತೆ ನಡೆಸಲಿದ್ದಾರೆ. ಈ ಮೂಲಕ ವಿಪಕ್ಷ ನಾಯಕನಾಗಿ ತಮ್ಮನ್ನು ಆಯ್ಕೆ ಮಾಡುವ ಚಿಂತನೆಯಲ್ಲಿದ್ದ ಬೊಮ್ಮಾಯಿಗೆ ನಿರೀಕ್ಷೆ ಹೆಚ್ಚಾಗಿದೆ.

ಕಳೆದ ಎರಡೂವರೆ ತಿಂಗಳಿನಿಂದ ಭೇಟಿ ಮಾಡದೆ ಸುಮ್ಮನಿದ್ದ ಹೈಕಮಾಂಡ್‌, ಈಗ ದಿಢೀರನೆ ನವದೆಹಲಿಗೆ ಕರೆಸಿಕೊಂಡಿದ್ದಾರೆ. ಪ್ರತಿಪಕ್ಷ ನಾಯಕನ ಆಯ್ಕೆ ಕುರಿತು ಬೊಮ್ಮಾಯಿ ಜತೆ ವರಿಷ್ಠರಿಂದ ಚರ್ಚೆ ನಡೆಯುವ ಸಾಧ್ಯತೆ ಇದೆ.

ಶಾ ಜತೆ ಮೊದಲ ಭೇಟಿ

ಸೋಮವಾರ (ಆಗಸ್ಟ್‌ 07) ಗೃಹ ಸಚಿವ ಅಮಿತ್‌ ಶಾ ಅವರನ್ನು ಮೊದಲಿಗೆ ಭೇಟಿ ಮಾಡಲಿರುವ ಬಸವರಾಜ ಬೊಮ್ಮಾಯಿ, ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಜತೆ ಮಾತುಕತೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದೆರಡು ದಿನದಲ್ಲಿ ವಿಪಕ್ಷ ನಾಯಕ ಸ್ಥಾನದ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಬೊಮ್ಮಾಯಿ ಅವರನ್ನೇ ಘೋಷಣೆ ಮಾಡಲಾಗುತ್ತದೆಯೇ ಎಂಬ ಕುತೂಹಲ ಈಗ ಬಿಜೆಪಿ ವಲಯದಲ್ಲಿ ಮೂಡಿದೆ.

ನಾಯಕರೇ ಇಲ್ಲದಂತಾಗಿರುವ ಬಿಜೆಪಿ!

ಬಿಜೆಪಿಯಲ್ಲಿ ಈಗ ನಾಯಕರೇ ಇಲ್ಲದಂತಾಗಿದೆ. ಪ್ರಧಾನ ಕಾರ್ಯದರ್ಶಿಗಳಿಗೆ ಹಿರಿಯ ನಾಯಕರು ಕೇರ್‌ ಮಾಡುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಅಧ್ಯಕ್ಷರ ಆಯ್ಕೆ ಆಗಿಲ್ಲದ ಕಾರಣಕ್ಕೆ ಪಕ್ಷದ ಆಗುಹೋಗುಗಳನ್ನು ಪ್ರಧಾನ ಕಾರ್ಯದರ್ಶಿಗಳು ನೋಡಿಕೊಳ್ಳುತ್ತಿದ್ದಾರೆ. ಬರ ಹಾಗೂ ನೆರೆಗೆ 7 ತಂಡಗಳನ್ನು ರಚಿಸಿದ್ದಕ್ಕೆ ಸ್ಪಂದನೆಯೇ ಇಲ್ಲದಂತಾಗಿದೆ. ಮಾಡೋಣ ಮಾಡೋಣ ಎನ್ನುತ್ತಲ್ಲೇ ಹಿರಿಯ ನಾಯಕರು ಕ್ಯಾರೆ ಎನ್ನುತ್ತಿಲ್ಲ.

ಇದನ್ನೂ ಓದಿ: Power point with HPK : ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ವಿಶೇಷ ಟಾಸ್ಕ್‌ಫೋರ್ಸ್‌: ಕೃಷ್ಣ ಬೈರೇಗೌಡ

ಈಗ ಎಲ್ಲರೂ ಯಾರು ಅಧ್ಯಕ್ಷರಾಗುತ್ತಾರೆ ಹಾಗೂ ಪ್ರತಿಪಕ್ಷ ನಾಯಕ ಯಾರಾಗುತ್ತಾರೆ ಎಂದು ನೋಡುತ್ತಿದ್ದಾರೆ. ಯಾರು ಆಯ್ಕೆ ಆಗುತ್ತಾರೆ ಎನ್ನುವುದರ ಮೇಲೆ ಆ್ಯಕ್ಟಿವ್‌ ಆಗುವ ಆಲೋಚನೆಯನ್ನು ಹೊಂದಿದ್ದಾರೆ ಎನ್ನಲಾಗಿದೆ. ಈಗಲೇ ಪಕ್ಷದ ಚಟುವಟಿಕೆಯಲ್ಲಿ ಗುರುತಿಸಿಕೊಂಡರೆ ಒಂದು ಗುಂಪಿನ ಪರ ಆಗಬಹುದು ಎಂಬ ಆಲೋಚನೆ ಇವರದ್ದಾಗಿದೆ. ಇನ್ನು ಪಕ್ಷದ ಕಚೇರಿ ಕಡೆಗೂ ಅನೇಕರು ಆಗಮಿಸುತ್ತಿಲ್ಲ. ಅಲ್ಲದೆ, ವಲಸೆ ಹಕ್ಕಿಗಳು ಸೇರಿ ಅನೇಕರು ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ನವದೆಹಲಿ ಭೇಟಿ ನಿರೀಕ್ಷೆ ಮೂಡಿಸಿದೆ. ಇದೇ ವಾರದಲ್ಲಿ ವಿಪಕ್ಷ ನಾಯಕ ಹಾಗೂ ರಾಜ್ಯ ಅಧ್ಯಕ್ಷ ಸ್ಥಾನದ ಕುರಿತು ನಿರ್ಧಾರ ಆಗುವ ಸಾಧ್ಯತೆ ಇದೆ.

Exit mobile version