ಚಿಕ್ಕಮಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಕಣ ರಂಗೇರುತ್ತಿದೆ. ವಿವಿಧ ಪಕ್ಷಗಳ ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಅಲ್ಲದೆ, ವಾಕ್ಸಮರಗಳು ಹೆಚ್ಚುತ್ತಿವೆ. ಈ ನಡುವೆ ಆಶ್ವಾಸನೆಗಳ ಸುರಿಮಳೆಯನ್ನೇ ಗಯ್ಯಲಾಗುತ್ತಿದೆ. ಇತ್ತ ಮೂಡಿಗೆರೆ ವಿಧಾನಸಭಾ ಕ್ಷೇತ್ರದ (Mudigere Assembly Constituency) ಕಾಂಗ್ರೆಸ್ ಅಭ್ಯರ್ಥಿ ನಯನ ಮೋಟಮ್ಮ (Nayana Motamma) ಅವರು ಮಾತನಾಡಿರುವ ವಿಡಿಯೊವೊಂದು ವೈರಲ್ ಆಗಿದ್ದು, ನೆಟ್ಟಿಗರಿಂದ ತೀವ್ರ ಚರ್ಚೆಗೆ ಗುರಿಯಾಗಿದೆ. ತಾವು ಗೆದ್ದು ಬಂದರೆ ಅನುದಾನಕ್ಕಾಗಿ ಬಾಂಬೆ, ನವ ದೆಹಲಿಗೆ ಹೋಗುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸುವ ವೇಳೆ ಮಾತನಾಡಿದ್ದ ನಯನ ಮೋಟಮ್ಮ, ಗೆಲ್ಲುವ ಮೊದಲೇ ಬಾಂಬೆ, ಡೆಲ್ಲಿಯ ಮಾತುಗಳನ್ನು ಆಡಿದ್ದಾರೆ. ತಮ್ಮ ಗೆಲುವು ನಿಶ್ಚಿತ ಎಂದು ಅವರು ಪ್ರಚಾರ ಭಾಷಣದ ವೇಳೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Karnataka Election 2023: ಸಿದ್ದರಾಮಯ್ಯಗೆ ಸನ್‌ಸ್ಟ್ರೋಕ್; ಕಾರಲ್ಲಿ ನಿಂತು ಕೈಬೀಸುವಾಗಲೇ ಕುಸಿದುಬಿದ್ದರು
ವಿಡಿಯೊದಲ್ಲಿ ಏನಿದೆ?
ನಾನು ಮೂಡಿಗೆರೆ ಕ್ಷೇತ್ರದಿಂದ ಆರಿಸಿ ಬಂದರೆ, ಅನುದಾನ ತರಲು ಬಾಂಬೆ, ಡೆಲ್ಲಿಗೆ ಹೋಗುತ್ತೇನೆ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ. ಈ ಕ್ಷೇತ್ರದಲ್ಲಿ ಕಳೆದ 20 ವರ್ಷದಲ್ಲಿ ಆಗದ ಕೆಲಸವನ್ನು ನಾನು 5 ವರ್ಷದಲ್ಲಿಯೇ ಮಾಡುತ್ತೇನೆ. ಅನುದಾನ ತರಲು ನಾನು ಎಲ್ಲಿಗೆ ಬೇಕಾದರೂ ಹೋಗುತ್ತೇನೆ. ನವ ದೆಹಲಿಗೆ ಬೇಕಿದ್ದರೂ ಹೋಗುತ್ತೇನೆ ಎಂದು ನಯನ ಮೋಟಮ್ಮ ಹೇಳಿದ್ದಾರೆ.
ನಾನು ಬಾಂಬೆ, ನವ ದೆಹಲಿ, ಬೆಂಗಳೂರಿನಿಂದ ಈಗ ಮೂಡಿಗೆರೆಗೆ ಬಂದು ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ನನಗೆ ಒಂದು ಅವಕಾಶ ಕೊಡಿ, ನಾನು ನಿಮ್ಮ ಎಲ್ಲ ಕಷ್ಟಗಳಿಗೆ ಸ್ಪಂದಿಸಿ, ಕ್ಷೇತ್ರವನ್ನು ಅಭಿವೃದ್ಧಿ ಮಾಡಿ ಮಾದರಿ ಕ್ಷೇತ್ರವನ್ನಾಗಿಸುತ್ತೇನೆ ಎಂದು ಮನವಿ ಮಾಡಿದ್ದಾರೆ.
ನೆಟ್ಟಿಗರಿಂದ ಟೀಕೆ
ಪ್ರಚಾರದ ವೇಳೆ ಮಾತನಾಡುವ ಭರದಲ್ಲಿ ನಯನ ಮೋಟಮ್ಮ ಅವರು, ತಾವು ಅಭಿವೃದ್ಧಿ ಮಾಡಲು ಬೇಕಿರುವ ಅನುದಾನ ತರಲು ಬಾಂಬೆ, ನವ ದೆಹಲಿಗೆ ಬೇಕಿದ್ದರೂ ಹೋಗಿ ಬರುತ್ತೇನೆ ಎಂದು ನೀಡಿರುವ ಹೇಳಿಕೆಯನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದು, ಈ ಹೇಳಿಕೆಯು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡಾ ಆಗಿದೆ.
ಇದನ್ನೂ ಓದಿ: Karnataka Election 2023: ನಾನು 1 ವರ್ಷದಲ್ಲಿ ಮಾಡಿದ್ದನ್ನು ಮೋದಿಗೆ 10 ವರ್ಷದಲ್ಲಿ ಮಾಡಲಾಗಿಲ್ಲ: ಎಚ್.ಡಿ. ಕುಮಾರಸ್ವಾಮಿ
ಕರ್ನಾಟಕ ರಾಜ್ಯದಲ್ಲಿ ಮೂಡಿಗೆರೆ ವಿಧಾನಸಭಾ ಕ್ಷೇತ್ರಕ್ಕೆ ಅನುದಾನವನ್ನು ತರಲು ಬಾಂಬೆ, ನವ ದೆಹಲಿಗೆ ಹೋಗಬೇಕಾ ಎಂದು ಕಾಲೆಳೆಯುತ್ತಿದಾರೆ.