Site icon Vistara News

Cauvery Water Dispute: ಕಾವೇರಿ ವಿಚಾರವಾಗಿ ಸೆ.13ರಂದು ದೆಹಲಿಗೆ ತೆರಳಿ ಕೇಂದ್ರಕ್ಕೆ ಮನವಿ: ಡಿಕೆಶಿ

DCM DK Shivakumar

ಬೆಂಗಳೂರು: ಕಾವೇರಿ ವಿಚಾರವಾಗಿ (Cauvery Water Dispute) ಚರ್ಚೆ ಮಾಡಲು ಸೆ.13ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ತುರ್ತು ಸರ್ವಪಕ್ಷ ಸಭೆ ನಡೆಸಲಾಗುತ್ತದೆ. ನಂತರ ನವ ದೆಹಲಿಗೆ ತೆರಳಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಸಚಿವರು, ಅಡ್ವೊಕೇಟ್ ಜನರಲ್ ಹಾಗೂ ಅಧಿಕಾರಿಗಳ ಜತೆ ಸಭೆ ಬಳಿಕ ಮಂಗಳವಾರ ರಾತ್ರಿ ಮಾತನಾಡಿದ ಅವರು, ಕಾವೇರಿ ವಿಚಾರವಾಗಿ ಚರ್ಚೆ ಮಾಡಲು ಸರ್ವಪಕ್ಷ ಸಭೆ ಕರೆಯಲಾಗಿದೆ. ಹಿರಿಯ ನಾಯಕರು, ಸಂಸದರು, ಸಚಿವರನ್ನು ಸಭೆಗೆ ಆಹ್ವಾನಿಸಲಾಗಿದೆ. ಹಾಗೆಯೇ ಬುಧವಾರ ದೆಹಲಿಗೆ ತೆರಳುತ್ತಿದ್ದು, ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಸಂಕಷ್ಟ ಪರಿಸ್ಥಿತಿ ಬಗ್ಗೆ ಮನವಿ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ನಮ್ಮಲ್ಲಿ ನೀರಿದ್ದರೆ ಅದನ್ನು ಬಿಡಲು ಯಾವುದೇ ಅಭ್ಯಂತರವಿರಲಿಲ್ಲ. ಆದರೆ ನಮಗೆ ನೀರಿನ ಹೆಚ್ಚಿನ ತೊಂದರೆ ಎದುರಾಗಿದೆ. ನಮ್ಮಲ್ಲಿ ಮಳೆ ಕೊರತೆ ಎದುರಾಗಿದ್ದು, ನೀರು ಇಲ್ಲವಾಗಿದೆ. ಕುಡಿಯುವ ನೀರು ಶೇಖರಣೆ ನಮ್ಮ ಮೊದಲ ಆದ್ಯತೆಯಾಗಿದೆ. ನಮ್ಮ ಪರಿಸ್ಥಿತಿ ಕುರಿತಾಗಿ ಅಡ್ವೊಕೇಟ್ ಜನರಲ್ ಹಾಗೂ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ | Cauvery Water Dispute: ಕಾವೇರಿ ನೀರು ಬಿಡುಗಡೆ ಬಗ್ಗೆ ಚರ್ಚಿಸಲು ಬುಧವಾರ ತುರ್ತು ಸಭೆ ಕರೆದ ಸಿಎಂ

ಸಿಎಂ ನೇತೃತ್ವದಲ್ಲಿ ತುರ್ತು ಸಭೆ

ತಮಿಳುನಾಡಿಗೆ ಇನ್ನೂ 15 ದಿನಗಳ ಕಾಲ ನಿತ್ಯ 5 ಸಾವಿರ ಕ್ಯೂಸೆಕ್‌ ನೀರನ್ನು ಬಿಡುವಂತೆ ಕಾವೇರಿ ನದಿ ನೀರು ಪ್ರಾಧಿಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಅನುಸರಿಸಬೇಕಾದ ಮುಂದಿನ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ತುರ್ತು ಸಭೆ ಕರೆಯಲಾಗಿದೆ.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯ ಸಚಿವರು, ಎಲ್ಲಾ ಪಕ್ಷಗಳ ಮಾಜಿ ಮುಖ್ಯಮಂತ್ರಿಗಳು, ರಾಜ್ಯ ಸಚಿವ ಸಂಪುಟದ ಹಿರಿಯ ಸಚಿವರು, ಲೋಕಸಭೆ ಮತ್ತು ರಾಜ್ಯ ಸಭಾ ಸದಸ್ಯರುಗಳು ತುರ್ತು ಸಭೆಯಲ್ಲಿ ಭಾವಹಿಸಲಿದ್ದಾರೆ.

Exit mobile version