Site icon Vistara News

Lok Sabha Election 2024: ಮತ್ತೆ ಬಿಜೆಪಿಗೆ ಹೋಗ್ತಾರಾ ಜಗದೀಶ್‌ ಶೆಟ್ಟರ್;‌ ಅಮಿತ್‌ ಶಾ ಕರೆ ಬಗ್ಗೆ ಹೇಳಿದ್ದೇನು?

jagadish shettar and Amit Shah

ಹುಬ್ಬಳ್ಳಿ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು, ನಾಯಕರನ್ನು ಸೆಳೆಯಲು ಕೈ ನಾಯಕರು ಆಪರೇಷನ್‌ ಹಸ್ತ ಆರಂಭಿಸಿದ್ದಾರೆ. ಈ ನಡುವೆ ಕಾಂಗ್ರೆಸ್‌ಗೆ ಹೋಗಿರುವ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರನ್ನು ಪುನಃ ಮಾತೃ ಪಕ್ಷಕ್ಕೆ ಕರೆತರುವ ಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ. ಈ ನಡುವೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ಜಗದೀಶ್‌ ಶೆಟ್ಟರ್‌ ಅವರಿಗೆ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವಿಧಾನಸಭಾ ಚುನಾವಣೆ ವೇಳೆ ಹುಬ್ಬಳ್ಳಿ -ಧಾರವಾಡ ಸೆಂಟ್ರಲ್‌ ಕ್ಷೇತ್ರದ ಬಿಜೆಪಿ ಟಿಕೆಟ್‌ ಸಿಗದ ಕಾರಣ ಅಸಮಾಧಾನಗೊಂಡಿದ್ದ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರು ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು. ಇದೀಗ ಆಪರೇಷನ್ ಕಾಂಗ್ರೆಸ್ ಬೆನ್ನಲ್ಲೇ ಶೆಟ್ಟರ್​ಗೆ, ಅಮಿತ್ ಶಾ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ ಎನ್ನಲಾಗಿದೆ. ಆದರೆ, ಇದನ್ನು ಮಾಜಿ ಸಿಎಂ ಜಗದೀಶ್‌ ಶೆಟ್ಟರ್ ತಳ್ಳಿ ಹಾಕಿದ್ದು, ನನಗೆ ಯಾವುದೇ ಕರೆಗಳು ಬಂದಿಲ್ಲ. ಅಮಿತ್ ಶಾ, ಮತ್ತೊಬ್ಬರು ಯಾರೂ ಈವರೆಗೆ ಕರೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ನನಗೆ ಯಾವುದೇ ಕರೆಗಳು ಬಂದಿಲ್ಲ ಎಂದ ಶೆಟ್ಟರ್

‌ಅಮಿತ್‌ ಶಾ ಕರೆ ಬಗ್ಗೆ ಉಡುಪಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್​​ ಪ್ರತಿಕ್ರಿಯಿಸಿ, ನನಗೆ ಯಾವುದೇ ಕರೆಗಳು ಬಂದಿಲ್ಲ. ಅಮಿತ್ ಶಾ, ಮತ್ತೊಬ್ಬರು ಯಾರೂ ಈವರೆಗೆ ಕರೆ ಮಾಡಿಲ್ಲ. ಕರ್ನಾಟಕ ಬಿಜೆಪಿ ಲೀಡರ್ ಲೆಸ್ ಆಗಿದೆ. ರಾಜ್ಯಾಧ್ಯಕ್ಷರನ್ನು ಇನ್ನೂ ಬದಲಿಸಲು ಸಾಧ್ಯವಾಗಿಲ್ಲ. ಬಿಜೆಪಿಗೆ ಒಬ್ಬ ನಾಯಕ ಎಂಬುವರು ಇಲ್ಲ. ಬೇರೆ ಬೇರೆ ಕಡೆ ಕಾಂಗ್ರೆಸ್ ನಾಯಕರನ್ನು ಬಿಜೆಪಿಯವರು ಭೇಟಿಯಾಗುತ್ತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಇನ್ನೂ ದಯನೀಯ ಪರಿಸ್ಥಿತಿಗೆ ಹೋಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | PM Narendra Modi : ಸಾಮಾನ್ಯ ಕಾರ್ಯಕರ್ತರಂತೆ ಬ್ಯಾರಿಕೇಡ್‌ ಬಳಿ ನಿಂತ ಬಿಜೆಪಿ ನಾಯಕರು

ಬಿಜೆಪಿ ಒಳಗೆ ಸಾಕಷ್ಟು ಜನ ನೊಂದಿದ್ದಾರೆ, ಸಂಕಟಪಡುತ್ತಿದ್ದಾರೆ. ಬಿಜೆಪಿಯನ್ನು ಬಿಟ್ಟು ಹೊರಗೆ ಬರಲು ಬಹಳಷ್ಟು ಜನ ತಯಾರಾಗಿದ್ದಾರೆ. ನನಗೆ ಬಿಜೆಪಿ ಹೈಕಮಾಂಡ್‌ನಿಂದ ಯಾವುದೇ ಕರೆ ಬಂದಿಲ್ಲ. ಕರೆ ಬಾರದೆ ಈ ಎಲ್ಲಾ ಚರ್ಚೆಗಳು ಯಾಕೆ ಎಂದು ಪ್ರಶ್ನಿಸಿದ ಅವರು, ಕರೆ ಮಾಡಿದರೆ ನಾನು ಮಾಧ್ಯಮಗಳಿಗೆ ತಿಳಿಸುತ್ತೇನೆ. ಕರೆ ಬರುವ ಮೊದಲು ಯಾಕೆ ಚರ್ಚೆ ಮಾಡಬೇಕು ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಕಾಂಗ್ರೆಸ್ 12 ರಿಂದ 15 ಸ್ಥಾನ ಗೆಲ್ಲುವುದು ನಿಶ್ಚಿತ. ಸದ್ಯದ ಪರಿಸ್ಥಿತಿ ನೋಡಿದರೆ 15ಕ್ಕಿಂತ ಹೆಚ್ಚು ಸ್ಥಾನ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ. ಕಾಂಗ್ರೆಸ್ ಸೇರಲು ರಾಜ್ಯದ ಎಲ್ಲಾ ತಾಲೂಕು, ಜಿಲ್ಲೆಯ ಜನ ಉತ್ಸುಕರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ಕಚೇರಿಗೆ ಭೇಟಿ ನೀಡಿದಾಗ ಬಿಜೆಪಿ ನಾಯಕರು ಬ್ಯಾರಿಕೇಡ್‌ ಹೊರಗೆ ನಿಂತಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯೊಳಗೆ ಏನಾಗುತ್ತದೆ ಎಂಬುವುದರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ರಾಷ್ಟ್ರೀಯ ಪಕ್ಷಕ್ಕೆ ವಿಪಕ್ಷ ನಾಯಕನ ಆಯ್ಕೆ ಮಾಡಲು ಇನ್ನು ಸಾಧ್ಯವಾಗಿಲ್ಲ. ಬಿಜೆಪಿ ಬಹಳ ದಯನೀಯ ಪರಿಸ್ಥಿತಿಯಲ್ಲಿದೆ. ಪ್ರಧಾನಿ ಬಂದಾಗ ರಾಜ್ಯ ಬಿಜೆಪಿ ನಾಯಕರು ಭೇಟಿ ಮಾಡಲು ಸಾಧ್ಯವಾಗದಿರುವುದು ಮತ್ತೊಂದು ಶೋಚನೀಯ ವಿಚಾರ ಎಂದು ಹೇಳಿದ್ದಾರೆ.

ಇದನ್ನೂ ಓದಿ | ST Somashekhar : ಜನಸ್ಪಂದನ ಕಾರ್ಯಕ್ರಮಕ್ಕೆ ಡಿಕೆಶಿಗೆ ಆಹ್ವಾನ; ಸೋಮಶೇಖರ್‌ ಕಾಂಗ್ರೆಸ್‌ ಸೇರ್ಪಡೆ ಫಿಕ್ಸಾ?

ಮೊದಲು 120 ಸ್ಥಾನ ಗೆದ್ದಿದ್ದ ಬಿಜೆಪಿ ದಯಾನೀಯ ಸ್ಥಿತಿಗೆ ಬಂದು ನಿಂತಿದೆ. ಬಿಜೆಪಿಯಲ್ಲಿ ಮಿಸ್ ಹ್ಯಾಂಡಲಿಂಗ್ ಮತ್ತು ಮಿಸ್ ಮ್ಯಾನೇಜ್ಮೆಂಟ್ ಇದೆ. ನಮ್ಮಂತಹ ನಾಯಕರನ್ನೇ ಪಕ್ಷದಿಂದ ಹೊರಗೆ ಹಾಕಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

Exit mobile version