ಬೆಂಗಳೂರು: ನನಗೆ ನನ್ನದೇ ಆದ ಬದ್ಧತೆ ಇದೆ. ಸೋಮಣ್ಣ ನಿಂತ ನೀರಲ್ಲ. ಹರಿಯುವ ನೀರು. ಯಾರೋ ಏನಾದರೂ ಮಾಟ ಮಂತ್ರ (Black Magic) ಮಾಡಿಸಿದ್ದಾರೋ ಏನೋ? ನನಗೆ ಹೀಗಾಯ್ತು. ನನಗಾದ ನೋವು ಇನ್ಯಾರಿಗಾದರೂ ಆಗಿದ್ದರೆ ಮತ್ತೆ ವಾಪಸ್ ಬರುತ್ತಿರಲಿಲ್ಲ. ನಾನು ಕಾಂಗ್ರೆಸ್‌ನವರಿಂದ ಸೋತಿಲ್ಲ ಎಂದು ಮಾಜಿ ಸಚಿವ ವಿ. ಸೋಮಣ್ಣ (V Somanna) ಹೇಳಿದರು.
ವಿ.ಸೋಮಣ್ಣ ಪ್ರತಿಷ್ಠಾನದಿಂದ ಕುವೆಂಪು ಜಯಂತಿ ಆಚರಣೆಯ ಪ್ರಯುಕ್ತ ವಿಜಯನಗರದ ತಮ್ಮ ಕಚೇರಿಯಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಮಾಜಿ ಸಚಿವ ವಿ. ಸೋಮಣ್ಣ, ಸೋಮಣ್ಣ ಕಾಂಗ್ರೆಸ್ ಸೇರ್ತಾರೆ ಅಂತಾ ಪತ್ರಿಕೆಯಲ್ಲಿ ಬರೆದಿದ್ದಾರೆ. ನಾನು ಯಾರ ಬಳಿಯೂ ಹೋಗಿ ಕೇಳಿಲ್ಲ. ಹೈಕಮಾಂಡ್ ನಾಯಕರು ಎರಡು ಬಾರಿ ಕರೆದರೂ ನಾನೇ ಹೋಗಿಲ್ಲ. ಕೆಲವರ ಸಮ್ಮುಖದಲ್ಲಿ ಚರ್ಚೆ ನಡೆಸುವಂತೆ ಕೇಳಿದ್ದೇನೆ. ನಾನು ಕಾಂಗ್ರೆಸ್ ಅಭ್ಯರ್ಥಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ಅನ್ಯಾಯದ ಬಗ್ಗೆ ವರಿಷ್ಠರಿಗೆ ಹೇಳುತ್ತೇನೆ
ನನಗೆ ಅನ್ಯಾಯ ಆಗಿದೆ, ನಾನೇ ಹೋಗಿ ನಾಲ್ಕೂವರೆ ಅಡಿ ಗುಂಡಿಗೆ ಬಿದ್ದೆ. ನಾನು ಗೋವಿಂದರಾಜನಗರ ಕ್ಷೇತ್ರವನ್ನು ಬಿಡಬಾರದಿತ್ತು. ಆಗ ಯಾರು ನನಗೆ ಮಾಟ ಮಂತ್ರ ಮಾಡಿಸಿದ್ದರೋ ಏನೋ. ಕ್ಷೇತ್ರ ಬಿಟ್ಟು ತಪ್ಪು ಮಾಡಿದೆ. ನನಗೆ ಆದ ಅನ್ಯಾಯ ಯಾರಿಗೂ ಆಗಬಾರದು. ಜನವರಿ 9ಕ್ಕೆ ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಆಗುತ್ತೇನೆ. ನನಗೆ ಆದ ಅನ್ಯಾಯವನ್ನು ವರಿಷ್ಠರ ಬಳಿ ಹೇಳುತ್ತೇನೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ವಿ. ಸೋಮಣ್ಣ ಹೇಳಿದರು.
ಜನವರಿ 10ರೊಳಗೆ ಎಲ್ಲವೂ ಬಗೆಹರಿಲಿದೆ
ನನಗೆ ನೇರವಾಗಿ ತೊಂದರೆ ಆಗಿದೆ. ಇದಕ್ಕೆ ಯಾರು ಕಾರಣವೋ ಅವರನ್ನು ಕೂರಿಸಿ ಮಾತುಕತೆ ನಡೆಸಲಿ. ಇದನ್ನು ಸರಿಪಡಿಸಿ ಎಂದು ಹೈಕಮಾಂಡ್ ನಾಯಕರ ಬಳಿ ಕೇಳಿದ್ದೇನೆ. ಯಾರಿಂದ ತೊಂದರೆ ಆಗಿದೆಯೋ ಅವರನ್ನು ಕರೆಸಿ ಸೂಚನೆ ಕೊಡಿಸಬೇಕು. ಬಹುಶಃ ಜನವರಿ 10ರೊಳಗೆ ಎಲ್ಲವೂ ಬಗೆಹರಿಯಲಿದೆ ಎಂಬ ವಿಶ್ವಾಸ ಇದೆ ಎಂದು ವಿ. ಸೋಮಣ್ಣ ಹೇಳಿದರು.
ಲೋಕಸಭಾ ಚುನಾವಣೆ ಸ್ಪರ್ಧೆ; ವರಿಷ್ಠರ ಮಾತಿಗೆ ಬದ್ಧ
ಲೋಕಸಭಾ ಚುನಾವಣೆಗೆ ಸ್ಪರ್ಧೆ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವ ವಿ. ಸೋಮಣ್ಣ, ರಾಷ್ಟ್ರೀಯ ವರಿಷ್ಠರ ಮಾತಿಗೆ ಬದ್ಧನಾಗಿರುತ್ತೇನೆ. ನಮ್ಮ ಮೇಲೆ ಗದಾಪ್ರಹಾರ ಆಗದಂತೆ ಎಲ್ಲರಿಗೂ ಕಟ್ಟುನಿಟ್ಟಿನ ಸೂಚನೆ ಆಗಬೇಕು ಎಂದು ಹೇಳಿದರು.
ಇದನ್ನೂ ಓದಿ: MP Pratapsimha : ನನ್ನ ಅಮ್ಮ, ತಂಗೀನೂ ಅರೆಸ್ಟ್ ಮಾಡ್ಸಿ ಸರ್; ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಆಕ್ರೋಶ
ರಾಮ ಮಂದಿರ ಬೇಡ ಅಂದವರೇ ಇಂದು ಉದ್ಘಾಟನೆಗೆ ಬರುತ್ತಿದ್ದಾರೆ
500 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಾಮಮಂದಿರ ಯೋಜನೆ ಸಾಕಾರವಾಗಿದೆ. ನಿನ್ನೆ (ಶನಿವಾರ) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ವೈಯಕ್ತಿಕವಾಗಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಮಜನ್ಮಭೂಮಿ ಅನ್ನೋದು ಬರೀ ಹೇಳುವಂಥದ್ದಲ್ಲ, ಭಾರತಕ್ಕೆ ಭವಿಷ್ಯ ಇದೆ. ಯಾರು ಯಾರು ಎಲ್ಲೆಲ್ಲಿ ಜನಿಸುತ್ತಾರೋ ಗೊತ್ತಿಲ್ಲ. ಮೋದಿ ಬರುತ್ತಾರೆ, ರಾಮ ಮಂದಿರವನ್ನು ಮಾಡುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ. ರಾಮ ಮಂದಿರ ವಿರೋಧಿಸಿ ಅರ್ಜಿ ಕೊಟ್ಟವರೇ ಇಂದು ರಾಮ ಮಂದಿರ ಉದ್ಘಾಟನೆಗೆ ಬರುತ್ತಿದ್ದಾರೆ ಎಂದು ವಿ. ಸೋಮಣ್ಣ ಹೇಳಿದರು.