Site icon Vistara News

Voter data | ಸಸ್ಪೆಂಡ್‌ ಆದ ಐಎಎಸ್‌ ಅಧಿಕಾರಿಗಳ ವಿಚಾರಣೆಗೆ ಆದೇಶ, ಇನ್ನಷ್ಟು ಅಧಿಕಾರಿಗಳಿಗೆ ಶುರುವಾಯಿತು ನಡುಕ

voter-data-accused chilume ngo blacklisted by bbmp

ಬೆಂಗಳೂರು: ಮತದಾರರ ಮಾಹಿತಿ ಕದ್ದ ಆರೋಪ ಹೊತ್ತಿರುವ ಚಿಲುಮೆ ಸಂಸ್ಥೆ ಹಗರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಕೇಂದ್ರ ಚುನಾವಣಾ ಆಯೋಗದ ಆದೇಶದಂತೆ ಅಮಾನತುಗೊಂಡಿರುವ ಇಬ್ಬರು ಐಎಎಸ್ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದರ ಜತೆಗೆ ಈ ಬೆಳವಣಿಗೆ ಇನ್ನಷ್ಟು ಅಧಿಕಾರಿಗಳಿಗೆ ನಡುಕ ಉಂಟು ಮಾಡಿದ್ದು, ಹಲವರ ತಲೆದಂಡ ಆಗುವ ಸಾಧ್ಯತೆಗಳಿವೆ. ಪ್ರಕರಣದ ಹಿನ್ನೆಲೆಯಲ್ಲಿ ಅಮಾನತುಗೊಂಡಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಶ್ರೀನಿವಾಸ್ ಹಾಗೂ ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ಅವರನ್ನು ಇಲಾಖಾವಾರು ವಿಚಾರಣೆಗೊಳಪಡಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಆದೇಶ ನೀಡಿದ್ದಾರೆ.

ಚಿಲುಮೆ ಸಂಸ್ಥೆ ಹಗರಣದ ತನಿಖೆಯ ಮೇಲೆ ಕೇಂದ್ರ ಚುನಾವಣಾ ಆಯೋಗವೇ ನೇರ ನಿಗಾ ವಹಿಸಿರುವುದರಿಂದ ಸ್ಥಳೀಯವಾದ ಯಾವುದೇ ಪ್ರಭಾವಗಳು ಕೆಲಸ ಮಾಡುವುದಿಲ್ಲ. ಈಗಾಗಲೇ ಇಬ್ಬರು ಐಎಎಸ್ ಅಧಿಕಾರಿಗಳನ್ನು ಕೇಂದ್ರ ಚುನಾವಣೆ ಆಯೋಗ ಅಮಾನತು ಮಾಡಿದೆ. ಇನ್ನೂ ಹಲವರಿಗೆ ಗ್ರಹಚಾರ ಕಾದಿದೆ ಎಂದು ಹೇಳಲಾಗಿದೆ. ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಮುಖ್ಯ ಆಯುಕ್ತರನ್ನು ದಂಡಿಸುವಂತೆ ಒತ್ತಡಗಳು ಹೆಚ್ಚುತ್ತಿವೆ. ಮುಖ್ಯಆಯುಕ್ತರ ವರ್ಗಾವಣೆ ಅಥವಾ ಅಮಾನತು ಯಾವ ಸ್ವರೂಪದ ದಂಡನೆ ಎಂಬುದು ಖಚಿತವಾಗಿಲ್ಲ..‌

ಬೆಂಗಳೂರಿನಲ್ಲಿ ಮತದಾರರ ಪರಿಷ್ಕರಣೆ ವೇಳೆ ಖಾಸಗಿ ವ್ಯಕ್ತಿ ಅಂದರೆ ಚಿಲುಮೆ ಸಂಸ್ಥೆಯ ಸಿಬ್ಬಂದಿಗೆ ಚುನಾವಣಾ ಅಧಿಕಾರಿ, ಸಿಬ್ಬಂದಿ ಎಂದು ಗುರುತಿನ ಚೀಟಿ ನೀಡಿದ್ದು ಏಕೆ ಎನ್ನುವ ಕುರಿತು ತನಿಖೆ ನಡೆಸಲಾಗುತ್ತಿದೆ. ಕೆಳ ದರ್ಜೆಯ ಸಿಬ್ಬಂದಿ ಕಾರ್ಯವೈಖರಿ ಕುರಿತು ಗಮನ ನೀಡದ ಹಿನ್ನೆಲೆಯಲ್ಲಿ ಈ ಇಬ್ಬರು ಅಧಿಕಾರಿಗಳ ತಲೆದಂಡ ಆಗಿದೆ.

ಜನಜಾಗೃತಿ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಗಳೊಂದಿಗೆ ಕೈ ಜೋಡಿಸಬಹುದೇ ವಿನಃ ಅವರ ಕೈಯಿಂದಲೇ ಚುನಾವಣಾ ಪ್ರಕ್ರಿಯೆ, ಮತದಾರರ ಪಟ್ಟಿ ಸಂಬಂಧ ಕೆಲಸಗಳನ್ನು ಮಾಡುವಂತಿಲ್ಲ. ಆದರೂ, ಹಿರಿಯ ಅಧಿಕಾರಿಗಳು ಸೇರಿದಂತೆ ಅನೇಕರು ಮೈಮರೆತು ಮಾಡಿರುವ ಕೆಲಸದಿಂದ ಅನೇಕ ಅಧಿಕಾರಿಗಳಿಗೆ ಸಂಕಷ್ಟಕ್ಕೆ ಎದುರಾಗಿದೆ.…

ವಾ: ಇನ್ನೂ ಚುನಾವಣಾ ಪೂರ್ವ ತಯಾರಿ ಪ್ರಕ್ರಿಯೆಯ ಮುಂದಿನ ಕಾರ್ಯವನ್ನು ಕೈಗೊಳ್ಳಲು ಐಎಎಸ್ ಅಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರನ್ನು ಶಿವಾಜಿನಗರಕ್ಕೆ, ಡಾ.ಆರ್.ವಿಶಾಲ್ ಅವರನ್ನು ಚಿಕ್ಕಪೇಟೆಗೆ ಹಾಗೂ ಅಜಯ್ಆರ್ಗಭೂಷಣ ಅವರನ್ನು ಮಹದೇವಪುರಕ್ಕೆ ನೇಮಕ ಮಾಡಲಾಗಿದ್ದು. ಸೋಮವಾರ ಈ ತಂಡದ ಕಾರ್ಯ ಆರಂಭವಾಗಲಿದೆ. ಸದ್ಯ ಈಗ ಸಂಗ್ರಹಿಸಿರುವ ವಿಧಾನಸಭಾ ಕ್ಷೇತ್ರವಾರು ಮತದಾರರ ಯಾವುದೇ ಪಟ್ಟಿಯನ್ನೂ ಪ್ರಕಟಿಸಬಾರದು ಎಂದು ಸೂಚನೆ ನೀಡಲಾಗಿದ್ದು.‌ ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಮತ್ತೊಮ್ಮೆ ಸಂಪೂರ್ಣ ನೂರಕ್ಕೆ ನೂರಷ್ಟು ಮತದಾರರ ಪರಿಷ್ಕರಣೆ ನಡೆಯಬೇಕು ಎಂದು ಆಯೋಗ ಸೂಚನೆ ಕೊಟ್ಟಿದೆ.

ಮೂರು ಕ್ಷೇತ್ರದಲ್ಲಿ ೧.೬೯ ಲಕ್ಷ ವೋಟು ಮಾಯ!
ಚಿಕ್ಕಪೇಟೆ, ಶಿವಾಜಿನಗರ, ಮಹದೇವಪುರ ಮೂರು ಕ್ಷೇತ್ರದಲ್ಲೇ 1,69,000 ವೋಟ್‌ಗಳು ಡಿಲೀಟ್ ಆಗಿದೆ. ಅಚ್ಚರಿ ಎಂದರೆ ವೋಟರ್‌ ಲಿಸ್ಟ್‌ನಿಂದ ಹೆಸರು ತೆಗೆಯಲು ಬೇಕಾದ ಫಾರಂ ನಂಬರ್ 7 ಈ ಮೂರು ಕ್ಷೇತ್ರಗಳಲ್ಲಿ ನಾಪತ್ತೆಯಾಗಿದೆ. ಚಿಲುಮೆ ಸಂಸ್ಥೆ ಕೈಯಿಟ್ಟ ಮೇಲೆ 1 ಲಕ್ಷದ 69 ಸಾವಿರ ವೋಟ್‌ಗಳು ಡಿಲೀಟ್ ಆಗಿವೆ. ಆರ್.ಓ ಹಾಗೂ ಅಸಿಸ್ಟೆಂಟ್ ಆರ್.ಓಗಳು ಹೇಳಿದ ವೋಟ್‌ಗಳನ್ನು ಚಿಲುಮೆ ಸಂಸ್ಥೆ ಆ್ಯಪ್ ಬಳಸಿ ಡಿಲೀಟ್ ಮಾಡಿರೋದು ಪತ್ತೆಯಾಗಿದೆ. ಕೇಂದ್ರ ಚುನಾವಣೆ ಆಯೋಗ ಚಿಲುಮೆ ಹಗರಣವನ್ನು ಗಂಭೀರವಾಗಿ ಪರಿಗಣಿಸಿ ವಿಚಾರಣೆ ತೀವ್ರಗೊಳಿಸಿರುವುದರಿಂದ ಮತ್ತಷ್ಟು ಐಎಎಸ್ ಅಧಿಕಾರಿಗಳು ಸೇರಿದಂತೆ ಬಿಬಿಎಂಪಿಯ ಕೆಲ ಆರ್ ಓ ಮತ್ತು ಎಆರ್‌ಒಗಳ ತಲೆದಂಡವಾದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ | Voter data | ಯಾವುದೇ ಸಂಸ್ಥೆ, ಅಧಿಕಾರಿಗಳು ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲೇಬೇಕು ಎಂದ ಬೊಮ್ಮಾಯಿ

Exit mobile version