Site icon Vistara News

BJP Padayatra: ಬಿಜೆಪಿ ಪಾದಯಾತ್ರೆಗೆ ಎಚ್‌ಡಿಕೆ ಸಾಥ್;‌ ಪ್ರೀತಂ ಗೌಡ ಭಾಗಿ ಆಗ್ತಾರಾ? ವಿಜಯೇಂದ್ರ ಹೇಳಿದ್ದಿಷ್ಟು

BJP Padayatra

ನವದೆಹಲಿ: ಮುಡಾ ಹಗರಣ ಸೇರಿ ರಾಜ್ಯ ಸರ್ಕಾರದ (Karnataka Government) ಹಲವು ಭ್ರಷ್ಟಾಚಾರ ಖಂಡಿಸಿ ಆಗಸ್ಟ್‌ 3ರಿಂದ ಬಿಜೆಪಿಯು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ (BJP Padayatra) ಕೈಗೊಳ್ಳಲು ತೀರ್ಮಾನಿಸಿದೆ. ಆದರೆ, ಎಚ್‌.ಡಿ.ಕುಮಾರಸ್ವಾಮಿ ಅವರು ಪಾದಯಾತ್ರೆಗೆ ನೀಡಿದ್ದ ಬೆಂಬಲ ವಾಪಸ್‌ ಪಡೆದ ಬೆನ್ನಲ್ಲೇ ದೆಹಲಿಯಲ್ಲಿ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಜತೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್‌ ದಾಸ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸಭೆ ನಡೆಸಿದ್ದು, ಕುಮಾರಸ್ವಾಮಿ ಅವರ ಮನವೊಲಿಸಿದ್ದಾರೆ. ಜಂಟಿ ಸುದ್ದಿಗೋಷ್ಠಿ ನಡೆಸಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇದೇ ವೇಳೆ, ಪಾದಯಾತ್ರೆಯಲ್ಲಿ ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ (Preetham Gowda) ಭಾಗಿಯಾಗುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಬಿ.ವೈ.ವಿಜಯೇಂದ್ರ, “ಇದೆಲ್ಲ ಶನಿವಾರವೇ ಗೊತ್ತಾಗುತ್ತದೆ” ಎಂದಷ್ಟೇ ಹೇಳಿದರು.

“ಶನಿವಾರ ಬೆಳಗ್ಗೆ 8.30ಕ್ಕೆ ನೈಸ್ ರೋಡ್ ಜಂಕ್ಷನ್‌ನಿಂದ ಪಾದಯಾತ್ರೆ ಪ್ರಾರಂಭ ಆಗುತ್ತದೆ. ರಾಜ್ಯದ ಎಲ್ಲ ಬಿಜೆಪಿ ಹಾಗೂ ಜೆಡಿಎಸ್ ಸಂಸದರು, ಶಾಸಕರು ಇರುತ್ತಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಕುಮಾರಸ್ವಾಮಿ ಅವರು ಕೂಡ ಬಂದು ಕಾರ್ಯಕ್ರಮ ಉದ್ಘಾಟನೆ ಮಾಡುತ್ತಾರೆ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಂದೋಲನ ಮಾಡುತ್ತಿದ್ದೇವೆ. ಇದನ್ನು ಯಶಸ್ವಿಗೊಳಿಸುತ್ತೇವೆ” ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

“ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಅಹಿಂದ ಹೆಸರು ಹೇಳಿಕೊಂಡು ಅಧಿಕಾರ ಹಿಡಿದಿದ್ದು, ಈಗ ಈಗ ಭ್ರಷ್ಟಾಚಾರದಲ್ಲಿ ಮುಳುಗಿದೆ. ಈ ಬಗ್ಗೆ ರಾಜ್ಯದಲ್ಲಿ ಅಲ್ಲ, ದೇಶದಲ್ಲೇ ಚರ್ಚೆ ಆಗುತ್ತಿದೆ. ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಇಟ್ಟಿದ್ದ ಹಣ ದೋಚಿದ್ದಾರೆ. ಸಿದ್ದರಾಮಯ್ಯ ನವರೇ ಒಪ್ಪಿಕೊಂಡಿದ್ದಾರೆ ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಆಗಿದೆ ಅಂತ. ಇನ್ನು ಮೂಡಾದಲ್ಲೂ 4,000 ಕೋಟಿ ರೂ.ಗಿಂತ ಹೆಚ್ಚು ಬೆಲೆ ಬಾಳುವ ನಿವೇಶನಗಳನ್ನು ಬೇರೆಯವರಿಗೆ ಕೊಟ್ಟಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ಖಂಡಿಸಿ ಬೆಂಗಳೂರಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಾದ ಮೈಸೂರಿಗೆ ಪಾದಯಾತ್ರೆ ಕೈಗೊಳ್ಳಲು ಬಿಜೆಪಿ ತೀರ್ಮಾನಿಸಿದೆ. ಆಗಸ್ಟ್‌ 3ರಿಂದ ಪಾದಯಾತ್ರೆ ಆರಂಭವಾಗಲಿದೆ. ಆದರೆ, ಪಾದಯಾತ್ರೆಗೆ ನಾನು ಬೆಂಬಲ ನೀಡುವುದಿಲ್ಲ ಎಂಬುದಾಗಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದರು. ಪಾದಯಾತ್ರೆ ಕುರಿತ ಚರ್ಚೆ ಸಭೆಗೆ ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಅವರನ್ನು ಕರೆಸಿದ್ದರಿಂದ ಕುಮಾರಸ್ವಾಮಿ ಬೇಸರಗೊಂಡು ಬೆಂಬಲ ವಾಪಸ್‌ ಪಡೆದಿದ್ದರು. “ಎಚ್‌.ಡಿ.ದೇವೇಗೌಡರ ಕುಟುಂಬವನ್ನು ನಾಶಪಡಿಸಲು ಪ್ರಯತ್ನಿಸಿದ ಪ್ರೀತಂ ಗೌಡ ಜತೆ ನಾನು ವೇದಿಕೆ ಹಂಚಿಕೊಳ್ಳಲಾ” ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಬಿಜೆಪಿ ನಾಯಕರ ಸಭೆಯ ಬಳಿಕ ಎಚ್‌.ಡಿ.ಕುಮಾರಸ್ವಾಮಿ ಅವರು ಪಾದಯಾತ್ರೆಗೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: BJP Padayatra: ಕುಮಾರಸ್ವಾಮಿ ಮುನಿಸು ಶಮನ, ಬಿಜೆಪಿ, ಜೆಡಿಎಸ್‌ ಒಗ್ಗೂಡಿ ಪಾದಯಾತ್ರೆ; ಪ್ರಲ್ಹಾದ್‌ ಜೋಶಿ ಘೋಷಣೆ

Exit mobile version