ಬೆಂಗಳೂರು: ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕು ಎನ್ನುವ ಬೇಡಿಕೆ ಹೆಚ್ಚುತ್ತಲೇ ಇದೆ. ಸ್ವಾತಂತ್ರ್ಯೋತ್ಸವವನ್ನು ಯಾವುದೇ ತಂಟೆ ತಕರಾರು ಇಲ್ಲದೆ ನಡೆಸಿ ನಿಟ್ಟುಸಿರು ಬಿಟ್ಟಿದ್ದ ಸರಕಾರಕ್ಕೆ ಈಗ ಇದು ಹೊಸ ತಲೆನೋವು ತಂದಿದೆ.
ಸ್ವಾತಂತ್ರ್ಯ ದಿನಾಚರಣೆ ವಿಷಯ ಬಂದಾಗ ಸರಕಾರವೇನೋ ತಾನೇ ಧ್ವಜಾರೋಹಣ ನಡೆಸಿ ಯಶಸ್ವಿಗೊಳಿಸಿತು. ಆದರೆ, ಗಣೇಶೋತ್ಸವವನ್ನು ಆ ರೀತಿ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆ ಎದುರಾಗಿದೆ. ಚಾಮರಾಜ ಪೇಟೆ ನಾಗರಿಕರ ಒಕ್ಕೂಟವಂತೂ ಆಕಾಶ ಭೂಮಿ ಒಂದಾದರೂ ಸರಿ ಗಣೇಶೋತ್ಸವ ನಡೆಯಬೇಕು ಎಂದು ಪಟ್ಟು ಹಿಡಿದಿದೆ. ನಾಗರಿಕರ ಒಕ್ಕೂಟದ ನಿಲುವು ಹೇಗಿದೆ ಎಂದರೆ, ಯಾರು ಬೇಕಾದರೂ ಗಣೇಶೋತ್ಸವ ಮಾಡಲಿ, ಆದರೆ, ನಡೆಯಬೇಕು ಅಷ್ಟೇ!
ಸರಕಾರ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಯಾರು ಬೇಕಾದರೂ ಮಾಡಲಿ, ಬೇಕಿದ್ದರೆ ಶಾಸಕ ಜಮೀರ್ ಅಹಮದ್ ಖಾನ್ ಅವರೇ ಮುಂದೆ ನಿಂತು ಮಾಡಿಸಲಿ ಅಡ್ಡಿ ಇಲ್ಲ. ಆದರೆ, ಈ ಬಾರಿಯೇ ಗಣೇಶೋತ್ಸವ ನಡೆಸಬೇಕು ಎನ್ನುವುದು ಅದರ ಬಿಗಿಪಟ್ಟು.
ಇದರ ಜತೆಗೆ ಬಿಜೆಪಿಯೊಳಗಿನ ಹಲವು ಹಿರಿಯ ನಾಯಕರು ಸರಕಾರ ಗಣೇಶೋತ್ಸವಕ್ಕೆ ಅವಕಾಶ ನೀಡಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಇದು ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ತಲೆಬಿಸಿ ತಂದಿದೆ.
ಈಗಾಗಲೇ ಹಲವು ಸಂಘಟನೆಗಳು ತಮಗೆ ಗಣೇಶೋತ್ಸವ ಆಚರಿಸಲು ಅವಕಾಶ ನೀಡಬೇಕು ಎಂದು ಕೋರಿವೆ. ಬೇಕಿದರೆ ಅವರು ಒಂದಾಗಿ ಸೇರಿ ಆಚರಿಸಲೂಬಹುದು. ಆದರೆ, ಇದರಿಂದ ಕಿರಿಕಿರಿ ಆಗಬಹುದಾ ಎನ್ನುವ ಒಂದು ಸಂಶಯ ಸರಕಾರವನ್ನು ಕಾಡುತ್ತಿದೆ. ಹೀಗಾಗಿ ಸರಕಾರದ ಕಂದಾಯ ಇಲಾಖೆಯಿಂದಲೇ ಗಣೇಶೋತ್ಸವ ಮಾಡಿದರೆ ಹೇಗೆ ಎಂಬ ಚಿಂತನೆಯೂ ನಡೆಯುತ್ತಿದೆ. ಶಾಸಕ ಜಮೀರ್ ಅಹಮದ್ ಖಾನ್ ಅವರಂತೂ ಸರಕಾರ ಹೇಗೆ ಹೇಳುತ್ತದೋ ಹಾಗೆ ಎಂದು ಬಿಟ್ಟಿದ್ದಾರೆ.
ಆದರೆ, ಕಂದಾಯ ಇಲಾಖೆ ಮೂಲಕ ಇಂಥ ಹಬ್ಬಗಳನ್ನು ನಡೆಸುವುದು ಸರಿಯೇ? ಮುಂದೆ ಇದೊಂದು ಪೂರ್ವ ನಿದರ್ಶನವಾಗುವುದಿಲ್ಲವೇ ಎನ್ನುವ ಪ್ರಶ್ನೆಯೂ ಅದನ್ನು ಕಾಡುತ್ತಿದೆ. ಒಟ್ಟಾರೆಯಾಗಿ ಏನು ಮಾಡಬೇಕು ಎನ್ನುವ ಗೊಂದಲ ಕಂದಾಯ ಇಲಾಖೆ ಮತ್ತು ಸರಕಾರದಲ್ಲಿದೆ. ಆದರೆ, ಇದರ ಬಗ್ಗೆ ತುಂಬ ಲೆಕ್ಕಾಚಾರ ಹಾಕಿಕೊಂಡು ಕುಳಿತುಕೊಳ್ಳುವಷ್ಟು ಸಮಯಾವಕಾಶವೂ ಇಲ್ಲ. ಯಾಕೆಂದರೆ, ಆಗಸ್ಟ್ ೩೧ಕ್ಕೇ ಗಣೇಶ ಚತುರ್ಥಿ!
ಇದನ್ನೂ ಓದಿ| ಚಾಮರಾಜಪೇಟೆ ಮೈದಾನದಲ್ಲಿ ಧಾರ್ಮಿಕ ಆಚರಣೆ: ಸರಕಾರ ನಿರ್ಧಾರ ಮಾಡಲಿ ಎಂದ ಶಾಸಕ ಜಮೀರ್ ಖಾನ್