Site icon Vistara News

Siddaramaiah | ಸಿದ್ದರಾಮಯ್ಯಗೆ 2 ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಸೂಚನೆ ನೀಡಿದ್ರಾ ಮನೆ ದೇವರು?

Siddaramaiah

ಮಂಡ್ಯ: ಮಾಜಿ ಸಿಎಂ ಸಿದ್ದರಾಮಯ್ಯಗೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಮನೆ ದೇವರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಆದಿನಾಡು ಚಿಕ್ಕಮ್ಮ ತಾಯಿಯಿಂದ ಸಿದ್ದರಾಮಯ್ಯ (Siddaramaiah) ಪುತ್ರ ಡಾ.ಯತೀಂದ್ರಗೆ ಇಂತಹದೊಂದು ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಜಿಲ್ಲೆಯ ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿಯ ಆದಿ ನಾಡು ಚಿಕ್ಕಮ್ಮತಾಯಿ, ಸಿದ್ದರಾಮಯ್ಯ ಕುಟುಂಬದ ಮೂಲ ದೇವತೆ. ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ದೇವಾಲಯಕ್ಕೆ ಭೇಟಿ ನೀಡಿದಾಗ, ಅರ್ಚಕನ ಮೈಮೇಲೆ ದೇವರು ಬಂದು ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿ ಎಂಬ ಸಲಹೆ ನೀಡಿರುವುದು ಕಂಡುಬಂದಿದೆ.

ಇದನ್ನೂ ಓದಿ | Modi Road Show | ಎಂಟಾದರೂ ಮಾಡ್ಲಿ, ಹತ್ತಾದರೂ ಮಾಡ್ಲಿ: ಮೋದಿ ರೋಡ್‌ ಶೋ ಬಗ್ಗೆ ಡಿ.ಕೆ. ಶಿವಕುಮಾರ್‌ ವ್ಯಂಗ್ಯ

ನಿಮಗೆ ಪ್ರಬಲ ಶಕ್ತಿಗಳ ವಿರೋಧ ಇದೆ. ಒಂದು ಕಡೆ ಬಾಹುಬಲ‌ ಚಾಚಿದರೆ ಆಗಲ್ಲ. ಅರ್ಥ ಆಯ್ತೇನಪ್ಪ. ಬಾಹುಬಲ ಎರಡೂ ಕಡೆ ಚಾಚಬೇಕು. ಒಂದು ಕಡೆ ಚಾಚಿದರೆ ತಪ್ಪಾಗುತ್ತದೆ. ಎರಡು ಕಡೆ ಚಾಚಿದರೆ ನಾನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ನುಡಿದ ಮನೆ ದೇವತೆ, ನಾನು ನಿಮ್ಮ ಮನೆ ದೇವತೆ ಗೊತ್ತಾ? ನಾನು ಮೂಲದೇವರು. ಬೇಕಾದರೆ ಅವಕಾಶ ಸಿಕ್ಕಿದರೆ ಯಾವಾಗಾದರೂ ಬಂದು ನನ್ನ ಆಶೀರ್ವಾದ ತೆಗೆದುಕೊಂಡು ಹೋಗಲು ಹೇಳು ಎಂದು ಯತೀಂದ್ರಗೆ ಸೂಚಿಸಲಾಗಿದೆ.

ಇದನ್ನೂ ಓದಿ | National Youth Festival | ಡಿಜಿಟಲ್‌ ಪೇಮೆಂಟ್‌ ಅಸಾಧ್ಯ ಎಂದರು; ಈಗ ನಾವೇ ನಂ.1: ಎದುರಾಳಿಗಳಿಗೆ ಮೋದಿ ತಿರುಗೇಟು

ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುವ ವೇಳೆ, ದೇವಾಲಯದ ಅರ್ಚಕ ಡಾ. ಲಿಂಗಣ್ಣ ಮೈ ಮೇಲೆ ಶಕ್ತಿ ದೇವತೆ ಬಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಮೂಲ ಮನೆ ದೇವರ ಸೂಚನೆಯಂತೆ ಎರಡು‌ ಕ್ಷೇತ್ರದಲ್ಲಿ ಸಿದ್ದರಾಮಯ್ಯ ನಿಲ್ಲುತ್ತಾರಾ? ಚುನಾವಣೆಗೆ ಮೊದಲು ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುತ್ತಾರಾ? ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಹಾಗೂ ಬಾದಾಮಿ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸಿದ್ದರು. ಚಾಮುಂಡೇಶ್ವರಿಯಲ್ಲಿ ಸೋಲಾಗಿ, ಬಾದಾಮಿಯಲ್ಲಿ ಗೆದ್ದ ಹಿನ್ನೆಲೆಯಲ್ಲಿ ವಿಧಾನಸಭೆಗೆ ಆಯ್ಕೆಯಾದರು. ಎರಡೂ ಕ್ಷೇತ್ರಗಳಲ್ಲಿ ಸೋತಿದ್ದರೆ ಅವರ ರಾಜಕೀಯ ಭವಿಷ್ಯಕ್ಕೆ ಅಡಚಣೆಯಾಗುವ ಸಾಧ್ಯತೆ ಇತ್ತು. ಈಗಾಗಲೇ ಕೋಲಾರ ಕ್ಷೇತ್ರದಿಂದ ಈ ಬಾರಿ ಸ್ಪರ್ಧಿಸುವುದಾಗಿ ಮಾಜಿ ಸಿಎಂ ಘೋಷಿಸಿದ್ದಾರೆ. ಹೀಗಾಗಿ ಮುನ್ನೆಚ್ಚರಿಕೆಯಾಗಿ ಮತ್ತೊಮ್ಮೆ ಎರಡು ಕ್ಷೇತ್ರಗಳಿಂದ ಸಿದ್ದರಾಮಯ್ಯ ಸ್ಪರ್ಧಿಸುತ್ತಾರಾ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ.

ಇದನ್ನೂ ಓದಿ | National Youth Festival | ಮೋದಿ ನೇತೃತ್ವದಲ್ಲಿ ಭಾರತ ಸಶಕ್ತ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

Exit mobile version