ಹುಬ್ಬಳ್ಳಿ: ಸೆಪ್ಟೆಂಬರ್ 18ರಂದು ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ (Special session of Parliament) ದೇಶದ ಹೆಸರನ್ನು ರಿಪಬ್ಲಿಕ್ ಆಫ್ ಇಂಡಿಯಾ (Republic of India) ಬದಲಿಗೆ ರಿಪಬ್ಲಿಕ್ ಆಫ್ ಭಾರತ (Republic of Bharath) ಎಂದು ಮಾಡಲಾಗುತ್ತದೆ ಎಂಬ ಸುದ್ದಿ ಹರಡಿದೆ. ಅದರಲ್ಲೂ ಜಿ20 ಸಮಾವೇಶದಲ್ಲಿ (G20 Summit) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕುಳಿತುಕೊಳ್ಳುವ ಜಾಗದಲ್ಲಿ ಇಟ್ಟ ನಾಮಫಲಕದಲ್ಲಿ ಇಂಡಿಯಾ ಬದಲು ಭಾರತ್ ಎಂದು ಬರೆದಿದ್ದು ಈ ಚರ್ಚೆಗೆ ಇನ್ನಷ್ಟು ಪುಷ್ಟಿಕೊಟ್ಟಿತ್ತು. ಅದಕ್ಕಿಂತ ಮೊದಲು ಈ ಒಟ್ಟಾರೆ ಚರ್ಚೆಯನ್ನು ಹುಟ್ಟುಹಾಕಿದ್ದು ಜಿ20 ದೇಶಗಳ ನಾಯಕರಿಗೆ ರಾಷ್ಟ್ರಪತಿಗಳು ನೀಡುವ ಔತಣದ ಆಹ್ವಾನ ಪತ್ರಿಕೆ. ಅದರಲ್ಲಿ President of India ಬದಲು President of Bharath ಎಂದು ಬರೆದಿದ್ದೇ ಚರ್ಚೆಗೆ ಗ್ರಾಸವಾಗಿದ್ದು. ಹಾಗಿದ್ದರೆ ವಿಶೇಷ ಅಧಿವೇಶನದಲ್ಲಿ ಈ ವಿಚಾರದ ಚರ್ಚೆಗೆ ಬರುವುದು ನಿಜವೇ ಎಂಬ ಪ್ರಶ್ನೆಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಉತ್ತರ ನೀಡಿದ್ದಾರೆ.
ದೇಶದ ಹೆಸರು ಬದಲಾವಣೆ ಮಾಡುತ್ತೇವೆ ಎಂಬುದಾಗಿ ನಾವು ಎಲ್ಲೂ ಹೇಳಿಲ್ಲ. ಭಯ ಇದ್ದವರು ಹೀಗೆ ಮಾತನಾಡುತ್ತಿದ್ದಾರೆ. ನಾವು ಭಾರತ ಎಂದು ಕರೆಯುತ್ತೇವೆ. ನಿಮಗೆ ಹೇಗೆ ಬೇಕೋ ಹಾಗೆ ನೀವು ಕರೆಯಬಹುದು ಎಂದು ಎನ್ನುವುದು ಪ್ರಲ್ಹಾದ್ ಜೋಶಿ ಅವರ ಮಾತು.
ಹುಬ್ಬಳ್ಳಿಯಲ್ಲಿ ಹೊಸದಿಗಂತ ಪತ್ರಿಕೆಯ ನೂತನ ಕಚೇರಿ ಉದ್ಘಾಟನೆಗಾಗಿ ಅವರು ಆಗಮಿಸಿದ್ದರು. ಆರ್‌ಎಸ್‌ಎಸ್ ಸಹಸಂಘ ಚಾಲಕ ಅರವಿಂದ ರಾವ್ ದೇಶಪಾಂಡೆ, ಜ್ಞಾನಭಾರತಿ ಪ್ರಕಾಶನದ ನಿರ್ದೇಶಕ ನಿರ್ಮಲಕುಮಾರ ಸುರಾನಾ, ಮಾಜಿ ಸಿಎಮ್ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದರು. ಈ ವೇಳೆ ಮಾಧ್ಯಮಗಳ ಜತೆಗೆ ಜೋಶಿ ಮಾತನಾಡಿದರು.
ಬಿಜೆಪಿ – ಜೆಡಿಎಸ್ ಮೈತ್ರಿ ಇನ್ನೂ ಫೈನಲ್ ಆಗಿಲ್ಲ
ರಾಜ್ಯದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಬಗ್ಗೆ ತನಗೆ ಸಂಪೂರ್ಣ ಮಾಹಿತಿ ಇಲ್ಲ ಎಂದು ಜೋಶಿ ಹೇಳಿದರು.
ʻʻನನಗೆ ಇದರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಮೈತ್ರಿ ಅನಿವಾರ್ಯ ಅಂತಾ ಬೊಮ್ಮಾಯಿ ಅವರು ಸ್ಥಳೀಯವಾಗಿ ಹೇಳಿರಬಹುದು. ಕೇಂದ್ರ ಮಂತ್ರಿಯಾಗಿ ನಮ್ಮ ಪಕ್ಷದ ವರಿಷ್ಠರು ಹೇಳುವವರೆಗೆ ಕಮೆಂಟ್ ಮಾಡೋದಿಲ್ಲʼʼ ಎಂದರು.
ಭಾರತದ ಸಲಹೆಗಳನ್ನು ಮಾನ್ಯ ಮಾಡಿದ ಜಿ20 ನಾಯಕರು
ʻʻG-20 ಸಮಾವೇಶ ಭಾರತದ 75 ವರ್ಷದ ಇತಿಹಾಸದಲ್ಲಿ ಭಾರಿ ದೊಡ್ಡ ಮೈಲುಗಲ್ಲು. ಅದರಲ್ಲೂ ಯಾವುದೇ ಭಿನ್ನಾಭಿಪ್ರಾಯ ಬರದಂತೆ ಡಿಕ್ಲರೇಷನ್ ಮಾಡಿದ್ದೇ ಬಹುದೊಡ್ಡ ಸಾಧನೆ. ಭಾರತದ ನೇತೃತ್ವವನ್ನು ವಿಶ್ವ ಒಪ್ಪುತ್ತಿದೆ ಅನ್ನೋದರ ಸ್ಪಷ್ಟ ಸಂಕೇತ ಇದುʼʼ ಎಂದು ಜೋಶಿ ಹೇಳಿದರು.
ಶೃಂಗ ಸಭೆ ಇಷ್ಟು ಅಚ್ಚುಕಟ್ಟಾಗಿ ನಡೆದರೂ ಕಾಂಗ್ರೆಸ್ ಪಕ್ಷದ ನಾಯಕರು ಮಾತ್ರ ಮಳೆ ನೀರು ನಿಂತಿರೋದನ್ನೇ ಟ್ವೀಟ್ ಮಾಡುವಷ್ಟೇ ದಾರಿದ್ರ್ಯತೆ ಮೆರೆಯುತ್ತಾರೆ. ಇಡೀ ಜಗತ್ತು ಭಾರತವನ್ನು ಹೊಗಳುತ್ತಿದೆ. ಆದರೆ ಕಾಂಗ್ರೆಸ್ ಮಾತ್ರ ತೆಗಳುತ್ತಿದೆ. ಇದು ಮಾನಸಿಕ ರೋಗ. ದೇಶಕ್ಕೆ ಒಳ್ಳೆಯದಾದ್ರೆ ಅದನ್ನು ಸಹಿಸಲಿಕ್ಕೂ ಆಗದ ಸ್ಥಿತಿಗೆ ಕಾಂಗ್ರೆಸ್ ನವರು ಬಂದು ತಲುಪಿದ್ದಾರೆ. ಮೋದಿ ವಿರೋಧ ಮಾಡುವ ಭರದಲ್ಲಿ ದೇಶವನ್ನೇ ವಿರೋಧ ಮಾಡ್ತಾ ಇದ್ದಾರೆ ಎಂದು ಜೋಶಿ ಹರಿಹಾಯ್ದರು.